ತುಮಕೂರು (ಜ. 31): ನಡೆದಾಡುವ ದೇವರು, ಕಾರುಣ್ಯ ಮೂರ್ತಿ, ಶತಮಾನದ ಶ್ರೇಷ್ಠ ಶರಣ, ಮಾನವತವಾದಿ ಹೀಗೆ ಬೇರೆ ಬೇರೆ ವಿಶೇಷಣಗಳಿಂದ ಕರೆಯಲ್ಪಡುವ ಶ್ರೀಗಳು ಮಠದ ಮಕ್ಕಳಿಗೆ ಅಪ್ಪಟ ತಾಯಿ. ಮಕ್ಕಳ ತುಂಟಾಟ ನೋಡಿ ಖುಷಿಪಡುತ್ತಿದ್ದರು, ಹಾದಿ ತಪ್ಪಿದಾಗ ಕಿವಿ ಹಿಂಡುತ್ತಿದ್ದರು. ಬೆಳೆದು ದೊಡ್ಡವರಾದಾಗ ಅವರ ಏಳಿಗೆ ಕಂಡು ಖುಷಿ ಪಟ್ಟರು. ಬೆವರಿನ ಮಹತ್ವ ಹೇಳುತ್ತಲೇ ಭವಿಷ್ಯದ ದಾರಿ ತೋರಿದರು. ಇಂಥಾ ಮಹಾಗುರುವಿನ ಜತೆ ಕಳೆದ ಕ್ಷಣಗಳ ನೆನಪು ಇದು. ಇಂದು ಶ್ರೀಗಳ ಪುಣ್ಯ ಸ್ಮರಣೆ.

ಅಂದು ರಾತ್ರಿ ಹೊತ್ತಿಗೆ ಶತಮಾನವಿಡೀ ಮಾತೃ ವಾತ್ಸಲ್ಯವನ್ನು ಸಮಾಜಕ್ಕೆ ಧಾರೆಯೆರೆದು ದಣಿದ ಗುರುಗಳು ಶಾಂತಚಿತ್ತರಾಗಿ ಪವಡಿಸಿದರು. ಕ್ರಿಯಾ ಸಮಾಧಿ ಕಾರ್ಯ ಮುಗಿಸಿ ಗದ್ದುಗೆಯಿಂದ ಹೊರ ಬಂದವನಿಗೆ ಮಠದಂಗಳದ ನಿಶ್ಶಬ್ದ ತಲ್ಲಣಗೊಳಿಸಿತು. ಮೊದಲ ಬಾರಿಗೆ ಗುರುವಿನ ನಿರ್ಗಮನ ಬಳಿಕ ಆವರಿಸಿದ ಶೂನ್ಯತೆಯ ಅನುಭವವಾಯಿತು.

ಇಹಲೋಹದ ಕಾಯಕ ಮುಗಿಸಿ ಹೊರಟ ಗುರುವಿಗೆ ವಿದಾಯ ಹೇಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆರೆದಿದ್ದ ಜನ, ಆರಾಧ್ಯ ದೈವ ಭುವಿಯೊಳಗೆ ಶಾಶ್ವತವಾಗಿ ನೆಲೆಗೊಳ್ಳುತ್ತಿದ್ದಂತೆ ಮಠದ ಆವರಣದಲ್ಲಿ ತುಪ್ಪದಂತೆ ಕರಗಿ ಹೋಗಿದ್ದರು. ರಾತ್ರಿ ನಿರ್ಜನ ಮೌನವು ತನ್ನ ಒಡಲೊಳಗೆ ಬಂದ ಶ್ರೀಗಳ ಕಂಡು ಭೂಮಿಯೇ ರೋಧಿಸಿದ ರೂಪಕದಂತೆ ವ್ಯಕ್ತವಾಯಿತು. ಶ್ರೀಗಳ ಉಪಸ್ಥಿ ಯಲ್ಲಿ ಯಾವತ್ತಿಗೂ ನಾವು ಮಠದಲ್ಲಿ ಅಂಥದ್ದೊಂದು ಅನಾಥ ಪ್ರಜ್ಞೆ ಕಂಡವರಲ್ಲ. ಇಂತಹದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದೇವೆ ಎಂಬ ಕಿಂಚಿತ್ತೂ ಅಲೋಚನೆ ಮೂಡಿದ್ದಿಲ್ಲ.

ಜಗತ್ತಿಗೆ ನಡೆದಾಡುವ ದೇವರು, ಕಾರುಣ್ಯ ಮೂರ್ತಿ, ಶತಮಾನದ ಶ್ರೇಷ್ಠ ಶರಣ, ಮಾನವತವಾದಿ ಹೀಗೆ ವಿಶೇಷಣಗಳಿಂದ ಕಂಡರು. ಆದರೆ ಮಠದ ಮಕ್ಕಳಿಗೆ ಶ್ರೀಗಳು ಅಪ್ಪಟ ತಾಯಿ ಮಾತ್ರ. ಮಕ್ಕಳ ತುಂಟಾಟ ನೋಡಿ ಖುಷಿಪಡುತ್ತಿದ್ದರು, ಹಾದಿ ತಪ್ಪಿದಾಗ ಕಿವಿ ಹಿಂಡುತ್ತಿದ್ದರು. ಬೆಳೆದು ದೊಡ್ಡವರಾದಾಗ ಏಳಿಗೆ ಕಂಡು ಸಂತಸ ಪಟ್ಟರು. ಬೆವರಿನ ಮಹತ್ವ ಹೇಳುತ್ತಲೇ ಭವಿಷ್ಯದ ದಾರಿ ತೋರುತ್ತ ದುಡಿಮೆ ಅಪಮೌಲ್ಯವಾಗದಂತೆ ಹಿತವಚನ ಬೋಧಿಸುತ್ತಿದ್ದರು. ಸಮಯದ ಹಂಗಿಲ್ಲದೆ ದುಡಿಯುತ್ತಿದ್ದ ಶ್ರೀಗಳು, ಮಕ್ಕಳ ಒಪ್ಪುತ್ತು ಹಸಿವು ಕಾಣದಂತೆ ಸಲುಹಿದರು. ತುಸು ಕಣ್ಣೀರು ಹಾಕಿದರೂ ಮಮ್ಮಲ ಮರುಗುತ್ತ ಪೋಷಿಸಿದರು.

ಮಠದಲ್ಲಿ ವಿದ್ಯಾರ್ಥಿಯಾಗಿ, ಹಳೆಯ ವಿದ್ಯಾರ್ಥಿಯಾಗಿ ಇಪ್ಪತ್ಮೂರು ವರ್ಷಗಳ ನಂಟು ನನ್ನದು. ಮಠ ಯಾವತ್ತಿಗೂ ನಮಗೆ ಕೇವಲ ಗುರುಕುಲವಾಗಿ ಉಳಿಯಲಿಲ್ಲ. ಅಲ್ಲಿ ನಮ್ಮ ಬಾಲ್ಯದ ನೆನಪುಗಳಿವೆ. ಎಂದಿಗೂ ಆ ಬಾಂಧವ್ಯ ಅಳಿಯಲಿಲ್ಲ. ಇದಕ್ಕೆ ವಾತ್ಸಲ್ಯ ತುಂಬಿದ ದೊಡ್ಡ ಬುದ್ಧಿ ಅವರೇ ಕಾರಣರು. ನಡುರಾತ್ರಿ ಬಳಿಕವೂ ಮಠಕ್ಕೆ ಹೋದರೆ ಹಸಿವು ನೀಗುತ್ತಿತ್ತು. ಬಹುಷಃ ನಮ್ಮ ಮನೆಗಳಲ್ಲಿ ಸಹ ನಾವು ಇಷ್ಟುಸ್ವತಂತ್ರವಾಗಿ ಬೆಳೆದವರಲ್ಲ. ಗುರುವಿಲ್ಲದ ಜೀವನ ಕ್ಷಣವು ಕಲ್ಪಿಸಿಕೊಳ್ಳಲು ಸಾಧ್ಯವಾಗಲ್ಲ.

ಪುಣ್ಯಕೋಟಿ ಕತೆ

ಬದುಕಿನ ಹಾದಿಯಲ್ಲಿ ಸೋತಾಗ ಆತ್ಮಸ್ಥೈರ್ಯ ತುಂಬುವ, ಗೆದ್ದಾಗ ಸಂಭ್ರಮಿಸುವ ಅಮೂರ್ತ ಶಕ್ತಿಯಾಗಿ ತನುಮನದಲ್ಲಿ ಹಾಸುಹೊಕ್ಕಿದ್ದಾರೆ. ಹಾಗೆ ನೈತಿಕತೆ ಪ್ರಜ್ಞೆಯಾಗಿ ಉಳಿಯಲಿದ್ದಾರೆ. ಶ್ರೀಗಳ ಆಶ್ರಯದಲ್ಲಿ ಅಕ್ಷರ ಕಲಿತವರಿಗೆ ಸಮಾಜದ ಮಾನ್ಯತೆ ವಿಶೇಷವಾದುದು. ಆದರಣೀಯ ಭಾವ ಅನುಭವಿಸಿದವನಿಗೆ ಗೊತ್ತು. ವೈಜ್ಞಾನಿಕತೆ ಬೆರಗಾಗುತ್ತಿದ್ದ ಬುದ್ಧಿ ಅವರು, ಶರವೇಗದಲ್ಲಿ ಓಡುತ್ತಿದ್ದ ಕಾಲ ಚಕ್ರದ ತಿರುಗೇಣಿಯಲ್ಲಿ ಭಾರತೀಯತೆಯ ಅಸ್ಮಿತೆಗೆ ಹಳಹಳಿಸುತ್ತಿದ್ದರು. ಗಾಂಧಿಯಂತೆ ಗ್ರಾಮೀಣ ಭಾರತದ ಕನಸು ಕಂಡವರು.

ದೊಡ್ಡ ಬುದ್ಧಿ ಅವರು, ಮೂರು ತಿಂಗಳು ತೀವ್ರ ಅನಾರೋಗ್ಯದಿಂದ ಬಳಲಿದ್ದಾಗ ಸ್ಮರಿಸಿಕೊಂಡಿದ್ದು ಪುಣ್ಯಕೋಟಿ ಕತೆಯನ್ನು. ಆ ಪುಣ್ಯಕೋಟಿ ಕತೆಯಂತೆ ಜವರಾಯನೇ ಗುರುಗಳಿಗೆ ಶರಣಾಗುತ್ತಾನೆ. ನಮ್ಮ ಗುರುಗಳನ್ನು ಮತ್ತೆ ಮಠಕ್ಕೆ ಕಳಹಿಸುತ್ತಾನೆ ಎಂಬ ಆಶಯವಿತ್ತು. ಕೊನೆಗೆ ಆ ‘ಪುಣ್ಯ’ ನಮ್ಮದಾಗಲಿಲ್ಲ. ಗುರುವಿನ ಇಹಲೋಕದ ಕಾಯಕವೂ ಮುಗಿಯಿತು.

ಗುರುಗಳ ಜೀವನವು ಒಂದು ಮಹಾಸಾಗರವಿದ್ದಂತೆ. ಮಠದ ಆಶ್ರಯದಲ್ಲೇ ಬೆಳೆದ, ಬೆಳೆಯುತ್ತಿರುವರಿಗೆ ಅವರು ಬೊಗಸೆಯಷ್ಟುದಕ್ಕಿರಬಹುದು. ಗುರು ಪರಿಪೂರ್ಣವಾಗಿ ಲಭಿಸಿದರೂ ಎಂಬ ಮಾತೇ ಅಪ್ರಸುತ್ತ. ದೇಶದ ಒಂದು ಶತಮಾನದ ಚರಿತ್ರೆಗೆ ಸಾಕ್ಷಿಯಾಗಿದ್ದ ಶ್ರೀಗಳು, ತಮ್ಮ ಜೀವನ ಹಾದಿಯುದ್ದಕ್ಕೂ ಸಾರಿದ್ದು ಬಸವತತ್ವ ಸಂದೇಶ ಹಾಗೂ ಮನಗಳಲ್ಲಿ ಬೆಳೆಗಿಸಿದ್ದು ಮನುಷ್ಯತ್ವದ ಪ್ರೇಮವನ್ನು.

‘ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ’ ಎಂಬ ಪೂರ್ಣಚಂದ್ರ ತೇಜಸ್ವಿ ಅವರ ಮಾತಿನಂತೆ ಶ್ರೀಗಳ ಬದುಕು. ಅವರು ಬಯಸಿದ್ದು ಹಸಿವು, ಅಜ್ಞಾನ, ನಿಗರ್ತಿಕ ಮುಕ್ತ ನಾಡನ್ನು ಮಾನವತೆಯ ಬೀಡನ್ನು.

ತಾವು ಬಯಸಿದ ಬದುಕನ್ನು ದಕ್ಕಿಸಿಕೊಳ್ಳಲು ಶ್ರೀಗಳು ಪಟ್ಟಶ್ರಮವೇ ಸ್ಫೂರ್ತಿದಾಯಕ ಕಥಾನಕ. ಸಮಾಜ ತಮ್ಮನ್ನು ದೇವರ ಸ್ಥಾನದಲ್ಲಿ ಕೂರಿಸಿದರೂ ಶ್ರೀಗಳು ಮನುಷ್ಯರಾಗಿಯೇ ಬದುಕಿದರು. ಬೆಳಗಿದರು.

ಜ್ಯೋತಿಷ್ಯ ನಂಬಲಿಲ್ಲ, ಅಂಧಾಚರಣೆ ಆಚರಿಸಲಿಲ್ಲ

1941ರಲ್ಲಿ ಶ್ರೀ ಸಿದ್ದಗಂಗಾ ಮಠದ ಪೂರ್ಣ ಅಧಿಕಾರ ಹೆಗಲಿಗೆ ಬಿದ್ದಾಗ ಅವರಿಗೆ ಅದೂ ಸುಖ ನೀಡುವ ಕಾರಂಜಿಯಾಗಿರಲಿಲ್ಲ. ಇವತ್ತಿನಂತೆ ದೇಶವೇ ಕಾಣುವಂತೆ ಮಠವಿರಲಿಲ್ಲ. ಶ್ರೀಗಳ ಬೆವರಿನ ಹನಿಗಳೂ ಮಠದ ಮಣ್ಣಿನಲ್ಲಿ ಹರುಳುಗಟ್ಟಿವೆ. ಎತ್ತಿನ ಬಂಡಿ, ಜಟಕಾ ಗಾಡಿಯಲ್ಲಿ ಊರೂರು ಸುತ್ತಾಡಿ ಜೋಳಿಗೆ ತುಂಬಿಸಿಕೊಂಡು ಬಂದು ಮಕ್ಕಳನ್ನು ಪೊರೆದ ಶ್ರೀಗಳಿಗೆ ಬೆಂಝ್‌ ಕಾರಿನ ಪಯಣ ಹಿತವೆನಿಸಲಿಲ್ಲ.

ದೇವರಾದರೂ ಮಣ್ಣಿನ ಜತೆ ಬಾಂಧವ್ಯ ಕಳೆದುಕೊಳ್ಳಲಿಲ್ಲ. ವಯಸ್ಸಿಗೆ ಅನುಗಣವಾಗಿ ದೇಹವು ಮಾಗಿದರೂ ದುಡಿಮೆ ಛಲದ ಕಾವು ತಗ್ಗಲಿಲ್ಲ. ಅವರ ಜೀವನೋತ್ಸಾಹವಕ್ಕೆ ಅವರೇ ಸಾಟಿಯಾಗಿದ್ದರು. ಮಕ್ಕಳ ತರ್ಲೆಗಳನ್ನು ಅನುಭವಿಸುತ್ತಿದ್ದ ಅವರು, ಆಹಾರ ಪ್ರಿಯರ ಕಂಡರೆ ಆದರಿಸುತ್ತಿದ್ದರು. ಶಿವಪೂಜೆ ನಿಷ್ಠರಾದರೂ ಅಂಧಾಚರಣೆಗಳಿಗೆ ಮಾನ್ಯ ಮಾಡಲಿಲ್ಲ. ಜ್ಯೋತಿಷ್ಯ ನಂಬಲಿಲ್ಲ, ಬಹುಸಂಖ್ಯಾತರ ನಂಬಿಕೆಗೆ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ವಿವಾದಗಳು ಎದುರಾದರೆ ಮೌನದ ಮೂಲಕವೇ ಮುಖಾಮುಖಿಯಾಗುತ್ತಿದ್ದರು.

ಮಹಾತ್ಮ ಗಾಂಧಿಯಂತೆ ಸ್ವರಾಜ್ಯ ಕಲ್ಪನೆ ಬಿತ್ತಿದ್ದರೂ, ಭಗತ್‌ ಸಿಂಗ್‌ನಂತೆ ಸಮಾಜವು ಎಲ್ಲಾರಿಗೂ ಎನ್ನುತ್ತಿದ್ದರು. ಬೆವರಿಗೆ ತಕ್ಕ ಬೆಲೆ ಸಿಗಬೇಕು ಎಂದೂ ಕಾಲ್‌ರ್‍ ಮಾರ್ಕ್ಸ್‌ನಂತೆ ಆಶಿಸುತ್ತಿದ್ದರು. ಹೀಗೆ ತಮ್ಮ ಕಾಲಘಟದಲ್ಲಿ ಸಿಕ್ಕಿದ ಎಲ್ಲಾ ಸಿದ್ಧಾಂತಗಳ ಸಾರವನ್ನು ಒಟ್ಟುಗೂಡಿಸಿದ್ದ ಶ್ರೀಗಳು, ಪ್ರತಿಯಾಗಿ ಸಮಾಜಕ್ಕೆ ಮಾನವೀಯತೆ ಪ್ರೇಮದ ‘ಶಿವಕುಮಾರಿಸಂ’ ನೀಡಿದರು. ಅವರ ನೆನಪು ಸದಾ ಕಾಲ. ಶ್ರೀಗಳ ಪಂಥವು ಚಿರಕಾಲ.

ಗೆಳೆಯನಿಗೆ ದೆವ್ವ ಬಿಡಿಸಿದ್ರು

ನಾನು ಓದುವಾಗ ನನ್ನಗಿಂತ ಒಂದು ತರಗತಿ ಮುಂದೆ ಇದ್ದ ಪ್ರೇಮ ಎಂಬ ಗೆಳೆಯನಿದ್ದ. ಶ್ರೀಗಳು ತಂಗುವ ಹಳೆ ಮಠದ ಪಕ್ಕದ ಪ್ರಭುನಿಲಯದಲ್ಲಿದ್ದ ಆತ, ಬಸವೇಶ್ವರ ನಾಟಕದಲ್ಲಿ ಮಧುವರಸನ ಮಗಳ ಪಾತ್ರಧಾರಿ. ಹೀಗಾಗಿ ಶ್ರೀಗಳಿಗೆ ಆತನ ಮೇಲೆ ವಿಶೇಷ ಅಕ್ಕರೆ ಇತ್ತು. ಒಮ್ಮೆ ಊರಿಗೆ ಹೋದ ಪ್ರೇಮ ದೆವ್ವದ ಚೇಷ್ಟೆಗೆ ತುತ್ತಾದ. ಸಂಜೆ ಪ್ರಾರ್ಥನೆ ಹೊತ್ತಿನಲ್ಲಿ ಮರವೇರಿ ಬಿಡುತ್ತಿದ್ದ. ನಡುರಾತ್ರಿ ಎಲ್ಲಿಲ್ಲೆಗೋ ಹೋಗಿ ಬಿಡೋಣ. ನಮಗೆ ಆತನನ್ನು ಕಂಡರೆ ನಡುಕ.

ಅಂದು ಮಠದಲ್ಲಿ ವೇದ-ಸಂಸ್ಕೃತ ಕಲಿಯುತ್ತಿದ್ದ ಹಂಗ್ರಾಪುರ ಮಠದ ಸ್ವಾಮೀಜಿ, ಭೂತ ಆವರಿಸಿದಾಗ ಪ್ರೇಮನ ರಕ್ಷಣೆಗೆ ನಿಲ್ಲುತ್ತಿದ್ದರು. ಕೊನೆಗೆ ದೆವ್ವದ ಕಾಟದ ಸಂಗತಿ ಶ್ರೀಗಳಿಗೆ ಗೊತ್ತಾಯಿತು. ಒಂದು ದಿನ ಹಳೆ ಮಠದಲ್ಲಿ ಪ್ರೇಮನನ್ನು ಕರೆಸಿದ ಶ್ರೀಗಳು, ಆತನ ಕಪಾಳಕ್ಕೆ ಬಿಗಿದರು. ಅವನನ್ನು ಆವಾಹಿಸಿಕೊಂಡಿದ್ದ ದೈಯ ಕಾಲ್ಕಿತ್ತಿತು. ಈ ಘಟನೆಗೆ ನಾನೇ ಸಾಕ್ಷಿಯಾಗಿದ್ದೆ. ದೆವ್ವ ಮತ್ತು ದೈವದ ನಂಬಿಕೆ ಅವರವರ ಭಾವ ಭಕುತಿಗೆ ಸೇರಿದ್ದು.

ಭೋಜನ ಪ್ರಿಯರ ಕಂಡೆ ಅಕ್ಕರೆ

ದೊಡ್ಡ ಬುದ್ಧಿ ಅವರಿಗೆ ಆಹಾರ ಪ್ರಿಯರ ಕಂಡರೆ ಭಾರಿ ಖುಷಿ. ಪೂಜೆ ಮುಗಿಸಿ ಪ್ರಸಾದಕ್ಕೆ ತಮ್ಮೊಂದಿಗೆ ಕುಳಿತವರಿಗೆ ಹೊಟ್ಟೆಬಿರಿಯುವಂತೆ ನೀಡಿಸುತ್ತಿದ್ದರು. ನಾನು ಓದುವ ದಿನಗಳಲ್ಲಿ ಹಳೇ ಮಠದಲ್ಲಿ ಮಾಗಡಿ ಜಡೆದೇವರ ಮಠದ ಶ್ರೀಗಳು ಸಹ ಇದ್ದರು. ಆಜಾನುಬಾಹು ದೇಹ ಅವರದ್ದು. ಅನಾಮತ್ತಾಗಿ ನಾಲ್ಕೈದು ವಿದ್ಯಾರ್ಥಿಗಳನ್ನು ಎತ್ತಿ ಆಕಾಶ ತೋರಿಸುತ್ತಿದ್ದರು.

ಮೂಲತಃ ಮದ್ದೂರಿನ ತಾಲೂಕಿನವರಾದ ಮಾಗಡಿ ಶ್ರೀಗಳದ್ದು ಪರಿಶುದ್ಧ ಮಂಡ್ಯದ ಸೊಗಡಿನ ಮಾತುಗಾರಿಕೆ. ಅವರ ಮುಗ್ಧ ಮಾತು, ಆಹಾರ ಪ್ರಿಯತೆ ಶ್ರೀಗಳಿಗೆ ಅಚ್ಚುಮೆಚ್ಚು. ಮುಂಜಾನೆ ಶಿವ ಪೂಜೆ ಮುಗಿಸಿದ ಬಳಿಕ ಅವರನ್ನು ಎದುರಿಗೆ ಕುರಿಸಿ ಕಣ್ಣೂರು ಶ್ರೀಗಳ ಮೂಲಕ 10-15 ಇಡ್ಲಿ ಬಡಿಸುತ್ತಿದ್ದರು. ಆಹಾರ ಸ್ವೀಕಾರ ಕಂಡು ಖುಷಿಪಡುತ್ತಿದ್ದರು.

ನೋವಿನಲ್ಲಿ ಇಳಿಯದ ಉತ್ಸಾಹ

ದೊಡ್ಡ ಬುದ್ಧಿ ಅವರ ದೇಹವು ತುಂಬಾ ಸೂಕ್ಷ್ಮ ಸ್ವಭಾವದ್ದಾಗಿತ್ತು. ಚಳಿಗಾಲದಲ್ಲಿ ವಿಪರೀತ ನೆಗಡಿ ಜ್ವರ, ಬೇಸಿಗೆಯಲ್ಲಿ ಬಿಸಿಲ ತಾಪಕ್ಕೆ ಬೆನ್ನಿನಲ್ಲಿ ಕುರವಾಗೋದು. ಅವಾಗಂತು ಶ್ರೀಗಳ ಅವ್ಯಕ್ತವಾದ ಹಿಂಸೆಯೂ ಮನಸ್ಸು ಹಿಂಡುವಂತೆ ಮಾಡುತ್ತಿತ್ತು. ಆ ಯಾತನೆಯಲ್ಲೇ ಭಕ್ತರ ಆಹ್ವಾನ ಮನ್ನಿಸಿ ನೂರಾರು ಕಿ.ಮೀ ಪ್ರಯಾಣಿಸುತ್ತಿದ್ದರು. ಆ ದಿನಗಳಲ್ಲಿ ಮಠದಲ್ಲಿ ಡಾ.ಮಂಜುನಾಥ್‌ ಅಂತ ವೈದ್ಯರಿದ್ದರು. ಬಹಳ ವರ್ಷಗಳು ಶ್ರೀಗಳನ್ನು ಅವರೇ ಆರೈಕೆ ಮಾಡುತ್ತಿದ್ದರು.

ಹಳೇ ಮಠದ ಶ್ರೀಗಳ ಮಲಗುವ ಕೋಣೆಯಲ್ಲೇ ಬೆನ್ನಿಗೆ ಆಗುತ್ತಿದ್ದ ಕುರ ತೆಗೆದು ವೈದ್ಯರು ಡ್ರೆಸಿಂಗ್‌ ಮಾಡಿ ಹೋಗುತ್ತಿದ್ದರು. ಮೊದಲಿನಿಂದಲೂ ಬುದ್ಧಿ ಅವರಿಗೆ ಚುಚ್ಚು ಮದ್ದು ತೆಗೆದುಕೊಳ್ಳಲು ಅಳುಕು. ಎಷ್ಟೇ ಸುಸ್ತಾದರೂ ಗ್ಲೂಕೋಸ್‌ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಚುಚ್ಚು ಮದ್ದು ನೀಡುವಾಗಲಂತು ಶಿವ ಶಿವ ಎನ್ನುತ್ತಿದ್ದ ಗುರುಗಳು, ಬದುಕಿನ ಕೊನೆ ದಿನಗಳಲ್ಲಿ ಚುಚ್ಚು ಮದ್ದು ನೀಡುವಾಗ ಭಾರಿ ನೋವು ಅನುಭವಿಸುತ್ತಿದ್ದರು.

- ಗಿರೀಶ್ ಮಾದೇನಹಳ್ಳಿ