Asianet Suvarna News Asianet Suvarna News

ಅಮೆರಿಕಾದಲ್ಲಿ ಮೈಸೂರು ಮಲ್ಲಿಗೆ ಘಮ; ಸುನೀತಾ ಅನಂತಸ್ವಾಮಿ ಅವರ ಬಾಳ ಭಾವಗೀತೆ

ಕಿರುನಗೆಯೊಂದಿಗೆ ಶೃತಿಗೆ ದನಿ ಸೇರಿಸಿ ತಲ್ಲೀನತೆಯೊಂದಿಗೆ ಕಣ್ಮುಚ್ಚಿದರೆ ಯಾವುದೋ ರಾಗದೊಂದಿಗೆ ಲೀನವಾದ ಹಾಗೆ.. ಇವರು ಗಾಯಕಿ ಸುನೀತಾ ಅನಂತಸ್ವಾಮಿ. ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ ಅವರ ಮಗಳು. ಅಮೆರಿಕಾದಲ್ಲಿ ವಾಸ. ಇವರ ಹಾಡುಗಳ ಜರ್ನಿ ಅಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.

About Mysore sunitha ananthaswamy Bhavageete
Author
Bangalore, First Published Apr 26, 2020, 9:48 AM IST

- ಪ್ರಿಯಾ ಕೆರ್ವಾಶೆ

ಫೇಸ್‌ಬುಕ್‌ನಲ್ಲಿ ‘ಭಾವಗೀತೆ’ ಅಂತ ಒಂದು ಪೇಜ್‌ ಇದೆ. ಮೊನ್ನೆ ಮೊನ್ನೆ ರಾತ್ರಿ ಎಂಟು ಗಂಟೆಗೆ ಆ ಪೇಜ್‌ನಲ್ಲಿ ಸುನೀತಾ ಅನಂತಸ್ವಾಮಿ ಫೇಸ್‌ಬುಕ್‌ ಲೈವ್‌ಗೆ ಬಂದರು. ನಮ್ಮ ಫೇವರೆಟ್‌ ಸಂಗೀತ ಟೀಚರ್‌ ಥರ ಬಂದು ಚೆಂದದ ಒಂದು ಭಾವಗೀತೆ ಹೇಳಿಕೊಟ್ರು. ಅದು ಎಚ್‌ ಎಸ್‌ ವಿ ಅವರ ‘ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ..’ ಅನ್ನುವ ಹಾಡು. ನೀವು ಭಾವಗೀತೆ ಕ್ಲಾಸ್‌ಗೆ ಹೋದರೆ ಯಾವ ರೀತಿ ಕಲಿಯಬಹುದೋ, ಹೆಚ್ಚು ಕಮ್ಮಿ ಅದೇ ರೀತಿ ಪಾಠ. ಮೊದಲಿಗೆ ಒಂದು ಪ್ಯಾರಾ ಹಾಡಿ, ಆಮೇಲೆ ಅಲ್ಲಿನ ಒಂದೊಂದೇ ಲೈನ್‌ ಹಾಡುತ್ತಾ, ಕಲಿಯುವವರು ಹಾಡಲು ಪೌಸ್‌ ಕೊಡುತ್ತಾ... ಸುಮಾರು ಅರ್ಧ ಗಂಟೆಯಲ್ಲಿ ಭಾವಗೀತೆ ಪ್ರಿಯರು ಒಂದಿಡೀ ಹಾಡು ಹಾಡಲು ಕಲಿಯುವಂತೆ ಮಾಡಿದರು. ಸ್ವಲ್ಪ ಸಂಗೀತ ಜ್ಞಾನವೂ ಇದ್ದರೆ ಇದೊಂದು ಉತ್ತಮ ತರಗತಿ. ಈ ಹಾಡು ಕೇಳಿ ಗೊತ್ತಿದ್ದವರು, ಬಾತ್‌ರೂಮ್‌ ಸಿಂಗಿಂಗ್‌ ಮಾತ್ರ ಮಾಡುತ್ತಿದ್ದವರೂ, ಒಂದಿಷ್ಟುಜನರ ಮುಂದೆ ಹಾಡುವಷ್ಟರ ಮಟ್ಟಿಗಿನ ಶಕ್ತಿ, ಹುರುಪು ತುಂಬಿದ ಪಾಠ. ಟೀಚರ್‌ಗೆ ನೀವು ಹಾಡ್ತಿರೋದು, ಪ್ರಾಕ್ಟೀಸ್‌ ಮಾಡ್ತಿರೋದು ಕಾಣದ ಕಾರಣ ತಪ್ಪಾದ್ರೆ ಬೈಯ್ಯೋ ಭಯ ಇಲ್ಲ. ಎನ್‌ಜಾಯ್‌ ಮಾಡುತ್ತಾ ನಮ್ಮಷ್ಟಕ್ಕೆ ನಾವು ಹಾಡುವ ಸುಖ.

ಅಂಥಾ ಅದ್ಭುತ ಧ್ವನಿಯ ಗಾಯಕಿಯಾದರೂ ಸಣ್ಣ ಹಮ್ಮು ಬಿಮ್ಮುಗಳೂ ಇಲ್ಲದೇ ತಾಳ್ಮೆಯಿಂದ ಕ್ಲಾಸ್‌ ಮಾಡಿದ ಸುನೀತಾ ಅವರು ಅಮೆರಿಕಾದಲ್ಲಿ ಅನೇಕರಿಗೆ ಹಾಡು ಕಲಿಸುತ್ತಿದ್ದಾರೆ. ದೂರದ ದೇಶದಲ್ಲಿ ಮೈಸೂರು ಮಲ್ಲಿಗೆಯ ಘಮ.

ರಾಜು ಅನಂತಸ್ವಾಮಿಯವರಿಗೆ 13 ಗಾಯಕರ ಗೀತ ನಮನ.. ಸಂಗೀತ ಲೋಕ ಅಂದ್ರೆ ಇದೆ ತಾನೆ

ಈ ಫೇಸ್‌ಬುಕ್‌ ಲೈವ್‌ ಗಾಯನ ತರಗತಿ ಮೂಲಕ ‘ರಾಗ ರಶ್ಮಿ ಫೌಂಡೇಶನ್‌ ಫಾರ್‌ ಆರ್ಟ್‌ ಆಂಡ್‌ ಕಲ್ಚರ್‌’ ಹಾಗೂ ‘ಶಾಂತಿ ವಲ್ಡ್‌ರ್‍ ಮ್ಯೂಸಿಕ್‌’ ಚಂದಾ ಸಂಗ್ರಹಿಸಿ ಬಡ ಕಲಾವಿದರಿಗೆ ಸಹಾಯ ಮಾಡುತ್ತಿದೆ, ಇದರಲ್ಲಿ ಸುನೀತಾ ಕೈ ಜೋಡಿಸಿದ್ದಾರೆ.

ಸಂಗೀತಕ್ಕೆ ಹೀಲ್‌ ಮಾಡುವ ಶಕ್ತಿ ಇದೆ!

ಸಂಗೀತಕ್ಕೆ ಹೀಲಿಂಗ್‌ ಪವರ್‌ ಇದೆ. ಖುಷಿಗೆ ಹೇಗೋ, ಹಾಗೇ ದುಃಖಕ್ಕೂ ಸಂಗೀತ ಒದಗಿಬರುತ್ತದೆ ಎಂಬ ಮಾತಿದೆ. ಇದು ಸುನೀತಾ ಅವರಿಗೂ ನಿಜ ಅನಿಸಿದೆ. ಅವರ ಬದುಕಿನ ಕಡು ಕಷ್ಟದ ಘಳಿಗೆಗಳಲ್ಲಿ, ನೋವಿನ ಸನ್ನಿವೇಶಗಳಲ್ಲಿ ಹಾಡುಗಳು ಕಣ್ಣೊರೆಸಿ ಸಂತೈಸಿವೆ. ಆ ಸಂದರ್ಭ ಯಾವುದಿತ್ತು, ಸಂತೈಸಿದ ಹಾಡು ಯಾವುದು ಅನ್ನುವುದನ್ನು ಸುನೀತಾ ಹೀಗೆ ವಿವರಿಸುತ್ತಾರೆ.

‘ನನ್ನ ತಮ್ಮ ರಾಜು ಅನಂತಸ್ವಾಮಿ ತೀರಿಕೊಂಡಾಗ ಅರಗಿಸಿಕೊಳ್ಳೋದೇ ಬಹಳ ಕಷ್ಟವಾಗಿತ್ತು. ತುಂಬ ತುಂಬಾ ದುಃಖದಲ್ಲಿದ್ದೆ. ಆಗ ನನ್ನ ಸಂತೈಸಿದ್ದು ‘ಮಬ್ಬು ಕವಿದರೇನು..ನಿನ್ನ ಹಬ್ಬದಿರುಳ ದಾರಿಗೆ.. ನಡೆ ಮುಂದಕೆ ಧೈರ್ಯದಿಂದ ಅರುಣೋದಯ ತೀರಕೆ..’ ಎಂಬ ಜಿ.ಎಸ್‌ ಶಿವರುದ್ರಪ್ಪ ಅವರ ಗೀತೆ. ಇದಕ್ಕೆ ತಮ್ಮ ರಾಜು ರಾಗ ಸಂಯೋಜನೆ ಇದೆ. ನಾನೇ ಹಾಡಿದ್ದೆ. ಈ ಹಾಡು, ಇದರ ಸಾಹಿತ್ಯ ನನ್ನನ್ನು ದುಃಖದಿಂದ ಮೇಲಕ್ಕೆತ್ತಿತು. ಆತ್ಮೀಯ ಮಿತ್ರನ ಹಾಗೆ ಹೆಗಲು ಸವರಿ ಸಂತೈಸಿತು.

ಲಾಕ್‌ಡೌನ್‌ನಲ್ಲಿ ಅಮೆರಿಕಾ ದಿನಗಳು

ನಿತ್ಯವೂ ಕೊರೋನಾ ಸಾವಿಗೆ, ಹೆಚ್ಚುತ್ತಿರುವ ಸೋಂಕಿಗೆ ಅಮೆರಿಕಾ ಸುದ್ದಿಯಾಗುತ್ತಲೇ ಇದೆ. ಅಲ್ಲೂ ಲಾಕ್‌ಡೌನ್‌ ಇದೆ. ಹಾಗಂತ ಸುನೀತಾ ಅವರ ದಿನಚರಿ ಬದಲಾಗಿಲ್ಲ. ಅವರ ಹಾಡುಗಳು, ಆನ್‌ಲೈನ್‌ ತರಗತಿಗಳು, ಕಾಲೇಜ್‌ ಗೆ ರಜೆಯಾದ ಕಾರಣ ಮನೆಯಲ್ಲಿರುವ ಮಗಳು, ಪತಿ, ಅಡುಗೆ, ಕ್ಲೀನಿಂಗ್‌ ಕೆಲಸಗಳು ಅವರನ್ನು ಬ್ಯುಸಿಯಾಗಿಟ್ಟಿವೆ.

ನಾಡಗೀತೆಗೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಅಧಿಕೃತಗೊಳಿಸಿ; ಹಕ್ಕೊತ್ತಾಯ

ಭಾವಗೀತೆ ಪೇಜ್‌ನಲ್ಲಿ ಲೈವ್‌ ಸಂಗೀತ ಟೀಚಿಂಗ್‌ ಸೆಷನ್‌ನಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ‘ಅಮೆರಿಕಾದಲ್ಲೂ ಲಾಕ್‌ಡೌನ್‌ನಿಂದ ಬಹಳ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರಿಗಾಗಿ ನಾವೆಲ್ಲ ಕಾರ್ಯಕ್ರಮ ನೀಡಿ, ಫಂಡ್‌ ರೈಸ್‌ ಮಾಡ್ತಿದ್ದೀವಿ. ಕೈಲಾದ ಸಹಾಯ ಮಾಡ್ತಿದ್ದೀವಿ. ಇದಲ್ಲದೇ ಜನಸಾಮಾನ್ಯರ ಬದುಕಲ್ಲೂ ಕಷ್ಟನಷ್ಟಗಳಾಗಿವೆ. ಆದರೆ ಜನಸಂಖ್ಯೆ ಕಡಿಮೆ ಇರುವ ಕಾರಣ ಬೆಳಗ್ಗೆದ್ದು ವಾಕಿಂಗ್‌ ಮಾಡೋದಕ್ಕೆ ಅವಕಾಶ ಇದೆ. ಆದರೆ ಎಲ್ಲಾ ಕಡೆ ಸೋಷಲ್‌ ಡಿಸ್ಟೆನ್ಸಿಂಗ್‌ ಕಾಪಾಡಿಕೊಳ್ಳೋದು ಕಡ್ಡಾಯ’ ಅಂತ ಅಲ್ಲಿಯ ಜನ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾರೆ.

‘ನಾವು ಸಂಗೀತವನ್ನೇ ಉಸಿರಾಗಿಸಿಕೊಂಡವರು. ದುಃಖಕ್ಕೂ ಹಾಡು, ಸುಖಕ್ಕೂ ಹಾಡು. ಹಾಡಿಲ್ಲದೇ ನಾವಿಲ್ಲ. ಅದೇ ಥರ ಕೇಳುಗನಿಗೂ ಖಂಡಿತಾ ಎಫೆಕ್ಟ್ ಆಗಿಯೇ ಆಗುತ್ತೆ’ ಎನ್ನುವ ಸುನೀತಾ ಅವರಿಗೆ ಲಾಕ್‌ಡೌನ್‌ ದಿನಗಳು ಬೇಗ ಮುಗಿದು ಮತ್ತೆ ಜನ ಸಾಮಾನ್ಯರ ಬದುಕು ಸುಗಮವಾಗಿ ಸಾಗಲಿ ಎಂಬ ತುಡಿತ.

ಸುನೀತಾ ಅನಂತಸ್ವಾಮಿ ಸಜೆಸ್ಟ್‌ ಮಾಡುವ ಆಲ್ಬಂಗಳು

ಲಾಕ್‌ಡೌನ್‌ ಟೈಮ್‌ನಲ್ಲಿ ಖಿನ್ನಗೊಂಡಿರುವ ಮನಸ್ಸಿಗೆ ಹಾಯೆನಿಸುವ ಆಲ್ಬಂಗಳನ್ನು ಸುನೀತಾ ಅವರಿಲ್ಲಿ ಸಜೆಸ್ಟ್‌ ಮಾಡಿದ್ದಾರೆ. ನೀವು ಪ್ರೇಮಿಯಾಗಿದ್ದರೆ ನಿಮ್ಮ ವಿರಹದುರಿ ಹೆಚ್ಚಿಸುವ, ತಗ್ಗಿಸುವ ಗೀತೆಗಳೂ ಈ ಲೀಸ್ಟ್‌ ನಲ್ಲಿವೆ.

1. ಕಲಿಸು ಗುರುವೇ ಕಲಿಸು

ರಂಗಾಯಣದ ಎಸ್‌ ರಾಮನಾಥ ಅವರು ರಚಿಸಿ ರಾಜು ಅನಂತಸ್ವಾಮಿ ಸಂಗೀತ ನೀಡಿರುವ ಹಾಡು. ಮಂಗಳಾ ರವಿ ಹಾಗೂ ನಿತಿನ್‌ ರಾಜಾರಾಮ್‌ ಶಾಸ್ತ್ರಿ ಇದನ್ನು ಹಾಡಿದ್ದಾರೆ.

ಲಿಂಕ್‌ :https://www.youtube.com/watch?v=7V1heflySDg&feature=youtu.be

2. ಅಕ್ಕ ನನ್ನ ದುಃಖವನ್ನು..

ಎಚ್‌ಎಸ್‌ ವೆಂಕಟೇಶಮೂರ್ತಿ ಅವರ ರಚನೆಯನ್ನು ಅನನ್ಯಾ ಭಟ್‌ ಮತ್ತು ಸುನೀತಾ ಅನಂತಸ್ವಾಮಿ ಹಾಡಿದ್ದಾರೆ. ಸಂಗೀತ ಸುನೀತಾ ಅವರದು.

ಲಿಂಕ್‌ : https://www.youtube.com/watch?v=bSMO-ESn_rw

3. ಕನ್ನ ದೃಶ್ಯಗೀತೆ

ಜಯಂತ ಕಾಯ್ಕಿಣಿ ಸಾಹಿತ್ಯ, ಶ್ರುತಿ ಮಹೇಶ್‌ ಗಾಯನ, ಸುನೀತಾ ಅನಂತಸ್ವಾಮಿ ಅವರ ಸಂಗೀತ,

ಲಿಂಕ್‌ :https://www.youtube.com/watch?v=zQy7V2RGDr8

Follow Us:
Download App:
  • android
  • ios