ಅಖಿಲ ಕರ್ನಾಟಕದ ಈ ಬೃಹದ್ ಕನ್ನಡ ಸಮುದಾಯ, ಕನ್ನಡ ತಾಯಿಯ ರೂಪದಲ್ಲಿ ಕಲಬುರ್ಗಿಯೆಂಬ ತನ್ನ ವರದ ಹಸ್ತದಿಂದ ನನ್ನನ್ನು ಆಶಿರ್ವದಿಸುತ್ತಿರುವ ಈ ಶುಭ ಸಂದರ್ಭವು, ನನ್ನ ಬಾಳಿನ ಅಮೃತ ಕ್ಷಣವೆನ್ನಲು ಅಭಿಮಾನ ಪಡುತ್ತೇನೆ. ನಾನು ಈ ಪವಿತ್ರ ವೇದಿಕೆಯಿಂದ ಆಡುವ ಮಾತನ್ನು ಕೇಳಬಲ್ಲ ತಿಳಿಯಬಲ್ಲ ಓದಬಲ್ಲ ಚಿಂತಿಸಬಲ್ಲ ದೊಡ್ಡ ಸಮುದಾಯವೊಂದು ಜೀವಂತ ಇರುವಾಗಲೇ ಈ ಅಧ್ಯಕ್ಷಪದವಿಯ ಗೌರವ ನನಗೆ ಪ್ರಾಪ್ತವಾಗಿದೆ. ಅಖಂಡ ಕರ್ನಾಟಕದ ಕರ್ನಾಟಕದ ಪ್ರತಿಮಾ ಸ್ವರೂಪಿಯಾದ ಕನ್ನಡ ತಾಯಿಯು ಕನ್ನಡ ಸಾಹಿತ್ಯ ಪರಿಷತ್ತೆಂಬ ನಮ್ಮ ನಾಡಿನ ಹೃದಯ ಸಂಸ್ಥೆಯ ಮೂಲಕ ಈ ಬಾರಿ ಈ ಭಾಗ್ಯವನ್ನು ನನಗೆ ಕರುಣಿಸಿದೆ. ಅದೂ ಇತ್ತೀಚಿಗಷ್ಟೆ ಕಲ್ಯಾಣ ಕರ್ನಾಟಕವೆಂದು ನವನಾಮಕರಣಗೊಂಡ ಈ ಪುಣ್ಯ ಸ್ಥಳದಲ್ಲಿ. ಪುಣ್ಯಸ್ಥಳ ಏಕೆಂದರೆ ಇದು ಅನೇಕ ಗಂಡಾಂತರಗಳ ನಡುವೆ ಕನ್ನಡ ನಂದಾದೀಪವನ್ನು ಎದೆಗೂಡಲ್ಲಿ ಆರದುಳಿಸಿಕೊಂಡು ಬಂದ ಕರಿಮಣ್ಣಿನ ಹಣತೆ. ಶ್ರೀ ಶರಣ ಬಸವೇಶ್ವರ, ಪೂಜ್ಯ ಬಂದೇ ನವಾಜ್ ಮಹಾತ್ಮ ಗಾಂಧಿಯವರ ಪರಮ ಆಶಯವನ್ನು ತಮ್ಮ ಬದುಕಿನ ಮೂಲಕವೇ ಅಭಿವ್ಯಕ್ತಿಸಿದ ಪವಾಡ ಭೂಮಿ. ಕನ್ನಡ ಸಾಹಿತ್ಯ ಎಂಬ ಅವಿರತ ಜೀವ ನದಿಯ ತಲಕಾವೇರಿ. ದಾಸಿಮಯ್ಯ, ದುಗ್ಗಲೆ, ನಾಗಚಂದ್ರ, ಕೇಶಿರಾಜ, ಲಕ್ಷ್ಮೀಶ, ಆವಿನಹಾಳ ಕಲ್ಲಯ್ಯ, ಕಡಕೋಳ ಮಡಿವಾಳಪ್ಪ, ಹಜರತ್ ಸಾಬರು, ಮೊದಲಾದ ಮಹಾಂತರು ಜನ್ಮವೆತ್ತಿದ ಪುಣ್ಯಭೂಮಿಯಿದು. ಭೀಮೆ ಕೃಷ್ಣೆಯರು ತಮ್ಮ ಆರ್ದ್ರ ಹೃದಯದ ಅಭಿವ್ಯಕ್ತಿಗಾಗಿ ನೀರ್ಗಣ್ಣು ತೆರೆದ ಪುಣ್ಯಸ್ಥಳ. 

ಮಲಖೇಡದ ಈ ಜಾಗರಣ ಸ್ಥಳದಲ್ಲೇ ನೃಪತುಂಗನ ಆಸ್ಥಾನ ಕವಿ ಸೈರಣೆಯ ಉದಾತ್ತ ಕಹಳೆ ಮೊಳಗಿಸಿದ್ದು.ಕಲ್ಯಾಣ ಕರ್ನಾಟಕದ ಕಡಕೋಳ ಮಡಿವಾಳಪ್ಪ, ಜಲಾಲ ಸಾಹೇಬ, ರಾಮದಾಸ ನಾಮಾಂಕಿತ ಪಿಂಜಾರ ಬಡಾಸಾಹೇಬ, ಮೊದಲಾದ ತತ್ವಪದಕಾರರ ಧರ್ಮಸಹಿಷ್ಣುತೆಯ ನಿಲುವು ಈ ಹೊತ್ತು ನಮ್ಮ ನಾಡಿಗೆ ಮಾರ್ಗದರ್ಶಕವಾದದ್ದು. ಪರಧರ್ಮ ಪರವಿಚಾರಗಳನ್ನು ಸೈರಿಸುವುದು ಮೊದಲ ನೆಲೆ; ಹಾಗೆ ಸೈರಿಸಿ ಪರಸ್ಪರ ಹೊಕ್ಕಾಡುತ್ತಾ ಒಗ್ಗೂಡಿ ಪ್ರವಹಿಸುವುದು ಮುಂಬರಿವ ನೆಲೆ. ನಾನು ದಶಕಗಳ ಹಿಂದೆ ಓದಿದ ಕೇರಳದ ಮಹಾನ್ ಲೇಖಕ ವೈಕಂ ಮಹಮದ್ ಬಷೀರರು ಒಂದಕ್ಕೆ ಒಂದು ಸೇರಿದರೆ ಆಗುವುದು ಎರಡಲ್ಲ, ಬಹುದೊಡ್ಡ ಒಂದು ಎಂದು ಬಾಲ್ಯದಲ್ಲೆ ಹೊಸ ಗಣಿತ ಬೋಧಿಸಿದ್ದು ನನ್ನನ್ನು ಹಗಲಿರುಳೂ ಕಾಡುವ ಜೀವ ತತ್ತ್ವ. ಅದೇ ನಾನು ಜೀವಿಸಲು ಮತ್ತು ಉಜ್ಜೀವಿಸಲು ಬಯಸುವ ಪರಮಾದರ್ಶ. 

ಒಂದು ದೇಶದ ಚಲನಶೀಲ ಜೀವನಕ್ಕೆ ಬಹು ಯೋಗ್ಯವಾದ ಪ್ರತೀಕ ಹರಿಯುವ ಜೀವ ನದಿ. ಅದು ಆದಿಯಲ್ಲಿ ಒಂದು. ಮುಂದೆ ಅದರೊಂದಿಗೆ ಬೆರೆತು ಒಂದಾಗುವ ಅದೆಷ್ಟು ತೊರೆ ಹಳ್ಳ ಕಿರುಝರಿಗಳೋ. ನಮ್ಮ ರಾಷ್ಟ್ರಪುರುಷರು ಕಂಡ ದಿವ್ಯವಾದ ಕನಸು ಅದೇ; ಆಚರಣೆಗೆ ತರಲು ಬಾಳುದ್ದಕ್ಕೂ ಸೆಣೆಸಿದ ಆದರ್ಶವೂ ಅದೇ. ರಾಷ್ಟ್ರವಾಹಿನಿ ಎಂಬ ಈ ಮಹಾನದಿಯು ಅಸಂಖ್ಯ ಧ್ವನಿಗಳಲ್ಲಿ ಮಾತಾಡುವ ಏಕಮುಖಿ. ಇದನ್ನೇ ನನ್ನ ಕವಿತೆಯೊಂದು ತಾಯಿ ಭಾರತಿಯು ಹಲವು ನುಡಿಗಳಿಂದ ಕಂದರನ್ನು ಮುದ್ದಿಸುವ ವಾಗ್ವಿದೆ ಎಂದು ಅಂದದ್ದು. ಭಾರತದ ಲಿಪಿಯುಳ್ಳ, ಇಲ್ಲದ, ಎಲ್ಲ ಭಾಷೆಗಳೂ ನಮ್ಮ ಅವ್ವನ ಆಡುನುಡಿಗಳೇ. ಹಾಗಾಗಿ ಅವೆಲ್ಲವೂ ನಮ್ಮ ರಾಷ್ಟ್ರ ಭಾಷೆಗಳೇ.  ಹಿಂದಿಯವರೂ ಮಂದಿಯವರೇ ಎಂಬ ಬೇಂದ್ರೆಯ ದರ್ಶನದೀಪ್ತ ನುಡಿ ನಮಗೆ ಸಮ್ಮತ. ಆದರೆ ಹಿಂದಿಗೆ ಸಮಾನತೆಯಲ್ಲೂ ಪ್ರಥಮ ಸ್ಥಾನ ಎಂಬ ಮಾತನ್ನು ನಾನು ಒಪ್ಪಲಾರೆ. ಭಾರತದ ಒಗ್ಗೂಡಿಕೆ ಮತ್ತು ಪ್ರಾಂತ್ಯ ಪ್ರಾಂತ್ಯಗಳ ನಡುವಣ ಸಲೀಸು ವ್ಯವಹರಣಕ್ಕಾಗಿ ಒಂದು ಭಾಷೆ ಅಗತ್ಯವೆನ್ನುವುದಾದರೆ ಅದು ಹಿಂದಿ ಆಗಬಾರದು. ಯಾವ ಭಾಷೆಯು ಯಾವುದೇ ಒಂದು ಪ್ರಾಂತ್ಯದ ಭಾಷೆಯಲ್ಲವೋ, ಯಾವ ಭಾಷೆ ಒಂದು ಕಾಲದಲ್ಲಿ ಭಾರತದ ವೈಚಾರಿಕ ಸಾಹಿತ್ಯಕ ಮತ್ತು ಚಿಂತನೆಯ ಭಾಷೆಯಾಗಿತ್ತೋ ಅಂಥ ಸಂಸ್ಕೃತವನ್ನೋ ಅಥವಾ ಜನಸಾಮಾನ್ಯರ ವ್ಯವಹರಣ ಭಾಷೆಯಾಗಿದ್ದ ಪ್ರಾಕೃತವನ್ನೋ ನಾವು ಸೇತುವೆಯ ಭಾಷೆಯಾಗಿ ಬಹುವಾರ್ಷಿಕ ಯೋಜನೆಯಾಗಿ ಸಂಕಲ್ಪಿಸಿ ರೂಢಿಸುವುದು ಅಗತ್ಯವೆಂದು ನನಗನ್ನಿಸುವುದು. ಯಹೂದಿಗಳು ಇದ್ದಿಷ್ ಭಾಷೆಯನ್ನು ರೂಢಿಸಿದಂತೆ. ಸದ್ಯಕ್ಕೆ ಇಂಗ್ಲಿಷ್ ಭಾಷೆಯನ್ನು ಭಾರತದ ಬೇರೆಬೇರೆ ಪ್ರಾಂತ್ಯಗಳ ನಡುವಿನ ಸಂಪರ್ಕ ಭಾಷೆಯಾಗಿ ಬಳಸಬಹುದು. ಅಂಥ ವ್ಯಾವಹಾರಿಕ ಇಂಗ್ಲಿಷನ್ನು ಎಲ್ಲ ಭಾಷಿಕರಿಗೂ ಕೆಲವೇ ತಿಂಗಳ ಭಾಷಾ ಶಿಬಿರಗಳಲ್ಲಿ ಕಲಿಸಬಹುದು. ಆ ಭಾಷೆ ವ್ಯವಹಾರಕ್ಕೆ ಅಗತ್ಯವಿರುವಷ್ಟು ಶಬ್ದ ಕೋಶದಿಂದ ರೂಪಿತವಾಗಬೇಕು. ಆ ಭಾಷೆಯಲ್ಲಿ ವ್ಯಾಕರಣಕ್ಕಿಂತ ವ್ಯವಹರಣ, ಪ್ರೌಢಿಮೆಗಿಂತ ಸಂವಹನ, ಪರಿಶುದ್ಧಿಗಿಂತ ಪ್ರಯೋಜನ ಮುಖ್ಯವಾಗಬೇಕು. 

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಯಡಿಯೂರಪ್ಪ

ಅಮೆರಿಕನ್ ಇಂಗ್ಲಿಷ್ ಎಂಬಂತೆ ಅದು ನಾವೇ ರೂಢಿಸುವ ಭಾರತೀಯರ ನಾಲಗೆಗೆ ಒಗ್ಗುವ ಇಂಡಿಯನಿಂಗ್ಲಿಷ್ ಆಗಬೇಕು. ಅಂಥ ಒಂದು ಇಂಗ್ಲಿಷ ಅನ್ನು ಯು.ಆರ್.ಅನಂತಮೂರ್ತಿಗಳು ಅಬ್ಯೂಜಿಂಗ್ ಇಂಗ್ಲಿಷ್ ಎಂದು ಕರೆಯಲು ಬಯಸುವರು. ನಾವದನ್ನು ಬೇಕಾದರೆ "ಅಗ್ಗದಾಂಗ್ಲ" ಎಂದು ಕರೆಯಬಹುದು. ನಮ್ಮ ದೇಶದ ಹಾಗೇ ವಸಾಹತು ನೆಲೆಯಾಗಿಯೇ ಪಾಡುಪಟ್ಟ ಸಿಂಗಪೂರಿಯನ್ನರ ನಿಲುವು ಬೇರೆಯೇ ಇದೆ. ನಮಗೆ ಇಂಗ್ಲಿಷ್  ಬೇಕು ಆದರೆ ಷೇಕ್ಸ್ಪಿಯರ್ ಬೇಡ ಎನ್ನುವುದು ಅವರ ಭಾಷಾಚಿಂತನೆ. ನಾವು ಹಾಗೆ ಭಾವಿಸಬೇಕಾಗಿಲ್ಲ. ನಮಗೆ ವ್ಯವಹಾರಕ್ಕೆ ಅಗತ್ಯವಿರುವಷ್ಟು ಇಂಗ್ಲಿಷ್ ಸಾಕು. ಷೇಕ್ಸ್ಪಿಯರ್ ಬೇಕು ಎನ್ನುವ ಸಾಹಿತ್ಯ ಜಿಜ್ಞಾಸುಗಳು ಆಳವಾಗಿ ಇಂಗ್ಲಿಷನ್ನು ಒಂದು ಐಚ್ಛಿಕ ಭಾಷೆಯಾಗಿ ಕಲಿಯಬಹುದು. ಹಾಗೆ ಕಲಿತು ಅವರಲ್ಲಿ ಸಮರ್ಥರಾದವರು ಇಂಗ್ಲಿಷ್ ಭಾಷೆಯ ಮಹತ್ವದ ಕೃತಿಗಳನ್ನು-ಸಾಹಿತ್ಯ ವೈಚಾರಿಕ ತಾತ್ವಿಕ ವೈಜ್ಞಾನಿಕ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಕೃತಿಗಳನ್ನು ಕನ್ನಡಕ್ಕೆ ತರಬೇಕು. ದಕ್ಕಬೇಕಾದ ಎಲ್ಲವೂ ನಮಗೆ ಕನ್ನಡದ ಮೂಲಕವೇ ದಕ್ಕಬೇಕು. ಬೆಂಗಾಳಿಯ, ಮರಾಠಿಉಯ, ರಷ್ಯನ್ ಭಾಷೆಯ ಮಹಾನ್ ಲೇಖಕರನ್ನು ನಾವು ಕನ್ನಡ ಅನುವಾದದ ಮೂಲಕವೇ ದಕ್ಕಿಸಿಕೊಂಡೆವಲ್ಲವೇ? ಕನ್ನಡ ಸಂದರ್ಭದಲ್ಲಿ ಅನುವಾದ ಸಂಸ್ಕೃತಿಯನ್ನು ನಾವು ವಿಭಿನ್ನ ನೆಲೆಯಲ್ಲಿ ಗ್ರಹಿಸಿದವರು ಎಂಬುದನ್ನೂ ನಾನಿಲ್ಲಿ ಸೂಚಿಸಬಯಸುತ್ತೇನೆ. ನಮಗೆ ಅನುವಾದವೆಂದರೆ ಮೂಲವನ್ನು ಸಮಕಾಲೀನ ಸಂದರ್ಭಕ್ಕೆ ಆವಾಹಿಸಿಕೊಂಡು ನಮ್ಮದೇ ಸ್ವಂತದ್ದಾಗಿಸಿಕೊಳ್ಳುವ ಕ್ರಿಯಾಶೀಲವೃತ್ತಿ. ಪಂಪ, ಕುಮಾರವ್ಯಾಸರ ಕೃತಿಗಳು ಅಂಥ ಪುನರವತರಣದ ಫಲಗಳಾಗಿವೆ. ಸಂಸ್ಕೃತ ಕನ್ನಡಕ್ಕೆ ಸಂಬಂಧಿಸಿ ಆದದ್ದು ಅದೇ. ಕನ್ನಡ ಇಂಗ್ಲಿಷ್ಗೆ ಸಂಬಂಧಿಸಿಯೂ ಆಗಬೇಕಾದದ್ದು ಅದೇ. ನಮ್ಮಲ್ಲಿ ಅನುವಾದವೆಂದರೆ ತತ್ಸಮವಲ್ಲ; ತದ್ಭವ. ಆಧುನಿಕ ಕನ್ನಡದಲ್ಲಿ ಬೇಂದ್ರೆಯವರ ಮೇಘದೂತ, ಕುವೆಂಪು ಅವರ ಶ್ರೀರಾಮಾಯಣದರ್ಶನಂ, ಪುತಿನ ಅವರ ಹರಿಚರಿತೆ ಆ ಪ್ರವೃತ್ತಿಗೆ ಸೂಕ್ತ ಉದಾಹರಣೆಗಳಾದಾವು. 

ಇದರ ಜೊತೆಜೊತೆಗೇ ಮೂಲವನ್ನು ಮೈಮನಗೆಡಿಸದೆ ಮ್ಮ ಭಾಷೆಗೆ ತಂದುಕೊಳ್ಳುವ ಮೂಲನಿಷ್ಠತೆಯ ತತ್ಸಮ ಅನುವಾದಗಳೂ ಅಕಡೆಮಿಕ್ ದೃಷ್ಟಿಯಿಂದ ತುಂಬ ಅಗತ್ಯ. ಬಂಗಾಳಿ, ಮರಾಠಿ, ರಷ್ಯನ್, ಫ್ರೆಂಚ್, ಚಿಲಿ , ಜೆರ್ಮನ್ ಭಾಷೆಗಳ ಕೃತಿಗಳು ಈ ಮಾದರಿಯಲ್ಲೇ ನಿಸಾರ್ ಅಹಮದ್, ಪಿ.ಲಂಕೇಶ್, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ರಾಮಚಂದ್ರಶರ್ಮ,ಎಸ್.ದಿವಾಕಎ, ಓ.ಎಲ್.ನಾಗಭೂಷಣಸ್ವಾಮಿ, ಜಿ.ಎನ್.ರಂಗನಾಥರಾವ್, ಎಂ.ಆರ್,ಕಮಲ, ಜನ ತೇಜಶ್ರಿ ಮೊದಲಾದ ಸಮರ್ಥ ಲೇಖಕರಿಂದ ಆಗಿರುವುದಲ್ಲವೆ? ಅದೇ ಮಾತು ಇಂಗ್ಲಿಷ್ ಭಾಷೆಯ ಮಹಾಕೃತಿಗಳಿಗೂ ಅನ್ವಯಿಸುವಂತಾಗಬೇಕು.  ಭಾರತದಿಂದ ಜಪಾನ್ ಜರ್ಮನಿ ಫ್ರಾನ್ಸ್ ಚೈನಾಕ್ಕೆ ಹೋಗುವ ಉದ್ಯೋಗಾರ್ಥಿಗಳಿಗೆ ಆಯಾ ದೇಶದ ಭಾಷೆಗಳನ್ನು ಕ್ಷಿಪ್ರವಾಗಿ ಕೆಲವೇ ತಿಂಗಳಲ್ಲಿ ಕಲಿಸ್ಯ್ವ ಶಿಬಿರಗಳಿವೆಯಲ್ಲವೆ? ಹಾಗೇ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಉದ್ಯೋಹಾರ್ಥವಾಗಿಯೋ ವಲಸೆಗಾರರಾಗಿಯೋ ವಲಸೆ ಹೋಗುವ ಮಂದಿಗೆ ಕ್ಷಿಪ್ರ ಇಂಗ್ಲಿಷ್ ಕಲಿಕೆ ಶಿಬಿರಗಳನ್ನು ರೂಪಿಸಬೇಕು. ಅದೇ ರೀತಿ ಭಾರತದ ಬೇರೆ ಬೇರೆ ಪ್ರಾಂತ್ಯಭಾಷೆಗಳನ್ನು ವ್ಯವಹಾರ ದೃಷ್ಟಿಯಿಂದ ಕಲಿಸುವ ಸಮಾನಾಂತರ ಕಲಿಕೆ ಶಿಬಿರಗಳ ವ್ಯವಸ್ಥೆಯೂ ಆಗಬೇಕು. 

ಕರ್ನಾಟಕಕ್ಕೆ ಬಂದು ವ್ಯವರಿಸುತ್ತಿರುವ ಅನ್ಯಭಾಷಿಕರು ಪಂಪ ಕುಮಾರವ್ಯಾಸರ ಬಸವೇಶ್ವರರನ್ನು ಓದುವಷ್ಟು ಭಾಷಾ ಪರಿಣತಿ ಪಡೆಯುವುದು ಅಪೇಕ್ಷಣೀಯವೇನೋ ಹೌದು. ಆದರೆ ಅದು ಕಡ್ಡಾಯವಾಗಬೇಕಾಗಿಲ್ಲ. ನಿತ್ಯ ಜೀವನದಲ್ಲಿ ನಮ್ಮ ಅಂಗಡಿ ಮುಂಗಟ್ಟು ಮಾಲು ಉದ್ಯೋಗ ಕ್ಷೇತ್ರಗಳಲ್ಲಿ ವ್ಯವಹರಿಸುವಷ್ಟು ಅವರು ಕನ್ನಡ ಕಲಿಯುವುದಂತೂ ಅತ್ಯಗತ್ಯ. ನಿತ್ಯ ವ್ಯವಹಾರವನ್ನು ಕರ್ನಾಟಕದಲ್ಲಿ ನೆಲೆಸಿರುವ ಕನ್ನಡೇತರರು ಕನ್ನಡದಲ್ಲೇ ನಿಭಾಯಿಸುವುದು ಈವತ್ತಿನ ತುರ್ತು ಅಗತ್ಯ. ಅವರೊಂದಿಗೆ ವ್ಯವಹರಿಸಲು ನಮ್ಮ ರೈತರು ಕಾರ್ಮಿಕರು ಬ್ಯಾಂಕು ಮಾಲುಗಳಲ್ಲಿ ಕೆಲಸ ಮಾಡುವ ಸ್ಥಳೀಯರು ಬಂದವರ ಭಾಷೆಗೆ ತಾವು ಹಾರುವುದಕ್ಕೆ ಬದಲು, ಅವರು ಕನ್ನಡದಲ್ಲೇ ವ್ಯವಹರಿಸುವುದು ಅನಿವಾರ್ಯವಾಗುವಂತೆ ಕನ್ನಡದಲ್ಲೇ ವ್ಯವಹರಿಸಬೇಕು. ಶಾಲೆಗಳಲ್ಲಿ ನಾವು ಮಕ್ಕಳಿಗೆ ಕಲಿಸುವ ಇಂಗ್ಲಿಷ್ ಭಾಷೆ ಈ ಉದ್ದೇಶಗಳಿಂದಲೇ ರೂಪಿತವಾಗಬೇಕು. ಸಾಹಿತ್ಯಕ ಸಾಂಸ್ಕೃತಿಕ ಚಿಂತನೆಯ ಭಾಷೆಯಾಗಿ ಇಂಗ್ಲಿಷನ್ನು ಭಾರತದ ಸಮಸ್ತರು ಕಲಿಯಬೇಕಾದ ಶಿರೋಭಾರವನ್ನು ಮೊದಲು ತಪ್ಪಿಸಬೇಕು. 

ಕರ್ನಾಟಕಕ್ಕೆ ಸಂಬಂಧಿಸಿ ಮಾತಾಡುವುದಾದರೆ, ಕನ್ನಡ, ತುಳು, ಕೊಂಕಣಿ, ಕೊಡವ, ಉರ್ದು, ಲಂಬಾಣಿ, ಅರೆಭಾಷೆ-ಎಲ್ಲವೂ ಕನ್ನಡಮ್ಮನ ನಲ್ನುಡಿಗಳೇ. ಈ ಎಲ್ಲ ದಿವ್ಯ ಮಣಿಗಳನ್ನೂ ಪೋಣಿಸಿ ಕನ್ನಡ ತಾಯಿ ಧರಿಸಿದ ದಿವಿನಾದ ಕಂಠೀಹಾರ ಕರ್ನಾಟಕದ ಈ ಭಾಷಾ ಸಮುಚ್ಚಯ. ಮನೆಯಲ್ಲಿ ಮನೆಮಾತು. ವ್ಯವಹಾರ ಸಂಪರ್ಕ ಸಂಸ್ಕೃತಿ ಚಿಂತನೆ ಸಾಹಿತ್ಯ ನಿರ್ಮಾಣ ಶಿಕ್ಷಣ ಮುಂತಾದ ಎಲ್ಲ ಜೀವನ ರಂಗದಲ್ಲೂ ನಮ್ಮ ಪರಿಸರ ಭಾಷೆಯಾದ ಕನ್ನಡದ ಹೂಡುವಿಕೆ. ಬೇರೆ ಬೇರೆ ಮನೆಮಾತಿನ ನಮ್ಮ ಮಹಾನ್-ಲೇಖಕ ಸಮುದಾಯವು ಬದುಕಿದ್ದೂ, ಬರೆದದ್ದೂ, ಕನ್ನಡದ ಅಹಂಗೋಲವನ್ನು ಅಸ್ಮಿತೆಯ ನಕ್ಷತ್ರರೂಪೀ ಪುಷ್ಪಗಳಿಂದ ಅಲಂಕರಿಸಿ ನಾಡಿನ ಅಸ್ಮಿತೆಯನ್ನೂ ಅಭಿಮಾನವನ್ನು ಹೆಚ್ಚಿಸಿದ್ದೂ ಈ ಉಪಕ್ರಮದಲ್ಲಿಯೇ ಅಲ್ಲವೆ? ಬೇಂದ್ರೆ ಮಾಸ್ತಿ ಕಸ್ತೂರಿಯವರ ಮನೆಮಾತು ಯಾವುದೇ ಇರಬಹುದು, ಅವರು ಬರೆದದ್ದೂ, ತಮ್ಮ ತಮ್ಮ ಸೃಷ್ಟಿ ಪ್ರತಿಭೆಯ ಮಹಾ ಪ್ರವಹಣಕ್ಕೆ ಬಳಸಿದ್ದೂ, ಬೆಳೆಸಿದ್ದೂ ಸಾವಿರ ವರ್ಷಗಳ ಅರ್ಥಪೋಷಣೆಯಿಂದ ಪುಷ್ಟವಾಗಿರುವ, ಎಂಥ ಸೂಕ್ಷ್ಮಗಳನ್ನೂ ನಿಭಾಯಿಸುವ ಶಕ್ತಿಯುಳ್ಳ ಸಿರಿಗನ್ನಡವನ್ನು. ಇದೇ ನಮ್ಮ ಆದರ್ಶವಾಗಬೇಕೆಂದು ನಿಶ್ಚಯಿಸುವುದರಲ್ಲಿ ಅಖಂಡಕರ್ನಾಟಕದ ಸರ್ವೋಚ್ಚ ಹಿತವಿದೆ.  ಕರ್ನಾಟಕ ಎಂಬ ಹೆಸರು ಮಾತ್ರವಲ್ಲ ಕನ್ನಡವೆಂಬ ಉಸಿರೂ ಹಿರಿಯರ ಆಶಯದಂತೆ ನಮ್ಮದಾಗಿ ಸಿದ್ಧಿಸುತ್ತದೆ. ಕರ್ನಾಟಕದಲ್ಲಿ ಜೀವಂತವಾಗಿರುವ ತುಳು ಕೊಂಕಣಿ ಮೊದಲಾದ ಉಳಿದ ಭಾಷೆಗಳಲ್ಲಿ ನಿರ್ಮಿತವಾದ ಸಾಹಿತ್ಯವು ವರ್ಷ ಕಳೆಯುವುದರಲ್ಲಿ ಕನ್ನಡ ಭಾಷೆಗೆ ತರ್ಜುಮೆಗೊಂಡು ಕರ್ನಾಟಕ ಸಾಹಿತ್ಯಕಲಾಭಿವ್ಯಕ್ತಿಯ ಸಮಗ್ರ ಚಿತ್ರಣ ನಮಗೆ ದೊರಕುವಂತಾಗಲು ಒಂದು ಅನುವಾದ ಯೋಜನೆಯನ್ನೇ ನಾವು ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಆಗ ಕರ್ನಾಟಕ ಸಾಹಿತ್ಯವಾಗುತ್ತದೆ. 

ಕಲಬುರಗಿಯಲ್ಲಿ ಕನ್ನಡ ಕಹಳೆ: ಅಕ್ಷರ ಜಾತ್ರೆಗೆ ವಿದ್ಯುಕ್ತ ಚಾಲನೆ

ಹೃದಯದ ಹಿಗ್ಗುವಿಕೆ ದೇಹಶಾಸ್ತ್ರದಲ್ಲಿ ದೋಷ. ಆದರೆ ಸಂಸ್ಕೃತಿಗೆ  ಸಂಬಂಧಿಸಿದಂತೆ ಅದು ಉಪಾಧೇಯ. ರಷ್ಯಾದಲ್ಲಿ ಹಾಗೆ ಆಗುತ್ತಿದೆ. ಕರ್ನಾಟಕದಲ್ಲಿ ಹಾಗೆ ಆಗುವುದು ಅಶಕ್ಯವೇನಲ್ಲ. ಮುಂದೆ ಈ ಸೂತ್ರ ಅಖಿಲ ಭಾರತಕ್ಕೂ ಅನ್ವಯಿಸಬೇಕು. ಕರ್ನಾಟಕದ ಮಹಾನ್ ಲೇಖಕರು ವರ್ಷೊಪ್ಪತ್ತಿನಲ್ಲಿ ಭಾರತದ ಹೆಚ್ಚಿನ ಭಾಷೆಗಳಲ್ಲಿ ಪುನರವತರಣಗೊಂಡು ನಮ್ಮ ಕುವೆಂಪು ಬೇಂದ್ರೆ ಕಾರಂತ ಮೊದಲಾದ ವಿಶ್ವ ಮಟ್ಟದ ಕನ್ನಡ ಲೇಖಕರ ಹೆಸರು ಇಡೀ ಭಾರತದ ಮೂಲೆ ಮೂಲೆಯಲ್ಲೂ ಅನುರಣಿಸುವಂತಾಗಬೇಕು. ಕನ್ನಡದ ಮಹದ್ಕೃತಿಗಳು ಇಂಗ್ಲಿಷ್ಗೆ ಬರುವುದು ವಿಶ್ವ ನೆಲೆಯಲ್ಲಿ ಕನ್ನಡ ಸಾಹಿತ್ಯವು ಸ್ಥಾಪಿತವಾಗಲು ಅತ್ಯಗತ್ಯ. ಕನ್ನಡ ಕೃತಿಗಳು ಹಿಂದಿ ಮೊದಲಾದ ಭಾರತದ ಇತರ ಭಾಷೆಗಳಿಗೆ ತರ್ಜುಮೆಗೊಳ್ಳುವುದು ಅದಕ್ಕಿಂತ ತುರ್ತು ಅಗತ್ಯ. ಇವು ಅಳಿವಿಲ್ಲದೆ ಹರಿಯ ಬೇಕು. ಬೆರೆಯಬೇಕು. ಒಂದರಿಂದ ಒಂದು ಪುಷ್ಟಗೊಳ್ಳಬೇಕು.  

ಕಲಬುರ್ಗಿ ನೆಲವು ಕನ್ನಡ ಮತ್ತು ಉರ್ದುವನ್ನು ಹೇಗೆ ಬೆರೆಸಿ ಬಳಸಿ ಹೊಸ ಜೀವ ಭಾಷೆಯನ್ನು ನಿರ್ಮಿಸಿ ಸಾರ್ಥಕ್ಯ ಪಡೆಯಿತು ಎಂಬುದನ್ನು ನಾವು ತತ್ವಪದಕಾರರ ಭಾಷಾ ನಿಯೋಗದಲ್ಲಿ ಬಲ್ಲವರಾಗಿರುವೆವು. ಭಾಷೆಗಳ ಬೆರೆಯುವಿಕೆ ಭಾವಗಳ ಬೆರೆಯುವಿಕೆಯೂ ಹೌದು. ಅರ್ಥ, ಪರಮಾರ್ಥ, ಪ್ರಯೋಗಾರ್ಥಗಳೆಲ್ಲಾ ಈ ಸಂಯುಕ್ತ ಸಂಗಮದಲ್ಲಿ ಒಡನಾಡಿ ಬೆರೆಯುವವು. ಬೆರೆತೂ ತಮ್ಮ ಮೂಲ ರೂಪವನ್ನು ಜತನವಾಗಿ ಕಾಯ್ದುಕೊಳ್ಳುವುದು.  ಮಾರ್ಗವು ದೇಸಿಯೊಂದಿಗೂ ದೇಸಿಯು ಮಾರ್ಗದೊಂದಿಗೂ ಹೊಕ್ಕಾಡುತ್ತಾ, ಪುಗುವ ಫಲಿಸುವ ನಿತ್ಯಾನುಸಂಧಾನವು ನಿರಂತರವಾಗಿ ನಡೆಯುವುದು.

ನಾವು ನಮ್ಮ ಮನೆಯ ಮಕ್ಕಳೊಂದಿಗೆ ಮಾತಾಡಬೇಕಾದದ್ದು ನಮ್ಮ ತಾಯ್ನುಡಿಯಲ್ಲಿ. ಅಂದರೆ ತಮಿಳು ಬಂಧುಗಳು ತಮ್ಮ ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ತಮಿಳನ್ನೇ ಆಡಲಿ. ಆದರೆ ಅವರು ಬೀದಿಗೆ ಬಂದಕೂಡಲೆ ವ್ಯವಹಾರದ ಭಾಷೆಯೂ ಬಹುಕಾಲದಿಂದ ಕರ್ನಾಟಕದಲ್ಲಿ ನೆಲೆಸಿದ ಕಾರಣಕ್ಕಾಗಿ ಮಾತೃಭಾಷೆಯೂ ಆಗಿರುವ ಕನ್ನಡದಲ್ಲೇ ವ್ಯವಹರಿಸಬೇಕು. ಇದು ಕರ್ನಾಟಕಕ್ಕೆ ವಲಸೆ ಬಂದು ನೆಲ್ಲೆಸಿರುವ ಎಲ್ಲ ಕನ್ನಡೇತರರಿಗೂ ಅನ್ವಯಿಸುವಂಥದ್ದು. ನಮ್ಮ ನಮ್ಮ ಮನೆ ಮಾತಲ್ಲಿ ಮಕ್ಕಳೊಂದಿಗೆ ಮಾತು. ಆದರೆ ಅವರು ಶಾಲೆಗಳಲ್ಲಿ ಬೀದಿ ಮುಂಗಟ್ಟುಗಳಲ್ಲಿ ವ್ಯವಹರಿಸಬೇಕಾದದ್ದು ಕನ್ನಡದಲ್ಲಿ. ಕಲಿಯಬೇಕಾದದು ಕನ್ನಡದಲ್ಲಿ. ಪ್ರಾಥಮಿಕ ಶಾಲಾ ಶಿಕ್ಷಣವಂತೂ ಕನ್ನಡ ಭಾಷೆಯ ಮೂಲಕವೇ ಆಗತಕ್ಕದ್ದು. ಮನೆ ಮಾತು , ಬೀದಿ ಮಾತು ಎಂಬ ಎರಡು ಕಲ್ಪನೆಗಳು ನಮ್ಮ ಅನೇಕ ದ್ವಂದ್ವವನ್ನು ನಿವಾರಿಸಬಲ್ಲವು. ಈ ಬೀದಿ ಮಾತು ಎಂಬುದನ್ನೇ ವ್ಯವಹಾರ ಭಾಷೆಯೆಂದೂ ರಾಜ್ಯಭಾಷೆಯೆಂದೂ ಪರಿಸರ ಭಾಷೆಯೆಂದೂ ನಾವು ಪರ್ಯಾಯ ನಾಮಗಳಲ್ಲಿ ಕರೆಯಬಹುದು. 

ಕನ್ನಡ ಪರಿಸರ ಭಾಷೆಯನ್ನೇ ಮಾತೃ ಭಾಷೆಯೆಂದು ವ್ಯಾಖ್ಯೆಯನ್ನು ಹಿಗ್ಗಿಸಿಕೊಂಡರೆ ನಮ್ಮ ಅನೇಕ ವ್ಯಾವಹಾರಿಕ ಸಮಸ್ಯೆಗಳು ಪರಿಹಾರವಾಗುವುವು. ಕಲಿಯುವ ಮತ್ತು ಕಲಿಸುವ ಭಾಷೆಯು ಈ ವ್ಯವಹಾರ ಭಾಷೆಯಾಗಬೇಕು ಎಂದು ಈ ವರೆಗಿನ ಎಲ್ಲ ಸಂಶೋಧನೆಗಳೂ ನಮಗೆ ಬೋಧಿಸಿವೆ. ಯುನೆಸ್ಕೋ ಸಿದ್ಧಾಂತವೂ ಅದೇ. ಬಿಡಿಗಳೆಲ್ಲಾ ಕೂಡಿ ಒಂದು ಅಖಂಡತ್ವದಲ್ಲಿ ತನ್ನತನ ಉಳಿಸಿಕೊಳ್ಳಲು ಕರ್ಮಣಿಸರದಲ್ಲಿ ಕೆಂಬವಳಗಳನ್ನು ಕೋದ ಈ ಕಂಠೀಹಾರ ನಮ್ಮ ಈವತ್ತಿನ ವ್ಯಾವಹಾರಿಕ ಅಗತ್ಯ. ನಮ್ಮ ಸೃಷ್ಟಿ ಶೀಲತೆಯನ್ನು ಈ ಅನುಸಂಧಾನವೂ ಈ ವರೆಗೂ ರಕ್ಷಿಸಿಕೊಂಡು ಬಂದಿದೆ. ಯಾವ ಧರ್ಮೀಯನೇ ಇರಲಿ, ಹೆಣ್ಣಾಗಿರಲಿ, ಗಂಡಾಗಿರಲಿ, ಬಡವನೋ ಬಲ್ಲಿದನೋ ಆಗಿರಲಿ, ಪರಿಸರದ ಭಾಷೆ ಅವನ ಆತ್ಮಾಭಿವ್ಯಕ್ತಿಗೆ ಫೂರಕವೂ ಪೋಷಕವೂ ಆಗಿ ಮೊದಲಿಂದಲೂ ಹೊಂದಿಕೊಂಡು ಬಂದಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳಾಗಿದ್ದರೂ ಅವರ ಸೃಷ್ಟಿಶೀಲತೆ ವಿಜೃಂಭಿಸಿದ್ದು ಪರಿಸರದ ಮಾತಾದ ಕನ್ನಡದಲ್ಲಿ. ತಮಿಳು ತನ್ನಷ್ಟಕ್ಕೆ ಶಕ್ತಿಶಾಲಿಯಾದ ಅಭಿವ್ಯಕ್ತಿ ಭಾಷೆಯಾಗಿದ್ದಾಗಲೂ. ಯಾಕೆಂದರೆ ಭಾಷೆಯೆಂಬುದು ತನ್ನೊಳಗೆ ತಾನು ಆಡಿಕೊಳ್ಳುವ ಸಂವೇದನೆಯ ಭಾಷೆ ಹೇಗೋ ಹಾಗೇ ಪಕ್ಕದವರೊಂದಿಗೆ ನಮ್ಮ ಅನುಭವ ದ್ರವ್ಯಗಳನ್ನು ಹಂಚಿಕೊಳ್ಳುವ ನಿವೇದನೆಯ ಭಾಷೆಯೂ ಆಗಿದೆ. 

ಭಾಷೆಯ ಪರಮ ಸಾರ್ಥಕ್ಯ ಆಡುವವರ ಆಲಿಸುವವರ ಅನ್ಯೋನ್ಯ ಅನುಬಂಧದಲ್ಲಿರುವುದು. ಹುಟ್ಟಿದ ಮಾತು ನಮ್ಮ ಕಿವಿಗೆ ಹಾಗೂ ನಮ್ಮ ಸಹಜೀವಿಗಳ ಕಿವಿಗೆ ಮುಟ್ಟಿದಾಗಲೇ ಅದಕ್ಕೆ ಭಾಷೆಯ ಅಂತಸ್ತು ಲಭ್ಯವಾಗುವುದು. ಅದಕ್ಕಾಗಿಯೇ ಮಾಸ್ತಿಯವರು ತಾವು ಕುರಿತು ಆಡಬೇಕಾದ ಸಮುದಾಯ ಕನ್ನಡ ಸಂದರ್ಭವಾದ ಕಾರಣ ಕನ್ನಡದಲ್ಲಿ ತಮ್ಮ ಸೃಷ್ಟಿಶೀಲತೆಯನ್ನು ರೂಢಿಸುವುದು ಅನಿವಾರ್ಯವಾಗಿತ್ತು. ಇದು ಬೇಂದ್ರೆ, ಪುತಿನ, ಗೋವಿಂದ ಪೈ, ಪಂಜೆ ಮಂಗೇಶರಾವ್, ಷರೀಫ ಸಾಹೇಬ, ಕಸ್ತೂರಿ, ಕೈಲಾಸಂ, ಗುಂಡಪ್ಪ, ಅಷ್ಟೇಕೆ ಕಲಬುರ್ಗಿ ಪ್ರಾಂತ್ಯದ ಮುಸ್ಲಿಮ್ ತತ್ವಪದಕಾರರಿಗೂ ಅನ್ವಯಿಸುವ ಮಾತು. ಒಟ್ಟಿನಲ್ಲಿ ನಾವು ನಿಸ್ಸಂದಿಗ್ಧವಾಗಿ ಗ್ರಹಿಸಬೇಕಾದದ್ದು- ನಮ್ಮ ಪರಿಸರ ನುಡಿಯಲ್ಲೇ ನಮ್ಮ ಸರೀಕರೊಂದಿಗೆ  ನಾವು ವ್ಯವಹರಿಸಬೇಕು. ಕರ್ನಾಟಕದ ಒಜ್ಜೀವನಶಕ್ತಿ ಕನ್ನಡದಲ್ಲಿರುವುದರಿಂದ ನಮ್ಮ ಒಕ್ಕೊರಲ ಹಾಡುಗಳು ಕನ್ನಡದಲ್ಲಿಯೇ ಅನುರಣಿಸಬೇಕು. ನಮ್ಮ ಪ್ರಾಥಮಿಕ ಕಲಿಕೆಯಂತೂ ನಮ್ಮ ಪರಿಸರದ ಭಾಷೆಯಾದ ಕನ್ನಡದಲ್ಲೇ ನಡೆಯಬೇಕು.

 ಕಲಿಕೆ ಎಂಬ ಮಾತು ಬಂದಕೂಡಲೇ ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ಕಣ್ಮುಂದೆ ಮೆರವಣಿಗೆ ನಡೆಸುತ್ತದೆ. ನಾವು ಕಲಿಯಬೇಕಾದದ್ದು ಕನ್ನಡದಲ್ಲಿ . ಜೊತೆಜೊತೆಯಲ್ಲೇ ಮಕ್ಕಳು ಇನ್ನೆರಡು ಭಾಷೆಗಳನ್ನೂ ಭಾಷೆಯಾಗಿ ಕಲಿಯಬಹುದು ಎಂಬ ತ್ರಿಭಾಷಾ ಸೂತ್ರವನ್ನು ನಾವು ಮಾನ್ಯ ಮಾಡುವುದಾದರೆ ಭಾರತದ ಎಲ್ಲ ಪ್ರಾಂತ್ಯಗಳಿಗೂ ಅದು ಸಮಾನವಾಗಿ ಅನ್ವಯಿಸಬೇಕು.  ದಕ್ಷಿಣದ ಮಕ್ಕಳಿಗೆ ಮೂರು ಭಾಷೆ, ಹಿಂದಿ ಮಾತೃ ಭಾಷೆಯಾಗಿರುವ ಉತ್ತರದ ಬಹುಪಾಲು ಪ್ರಾಂತ್ಯಗಳ ಮಕ್ಕಳಿಗೆ ಎರಡು ಭಾಷೆ ಎಂಬಂತಾಗಬಾರದು. ಹಿಂದಿ ಭಾಷೆಯನ್ನು ಆಡುವ ಮಕ್ಕಳು ಹಿಂದಿ ಇಂಗ್ಲಿಷ್-ಗಳ ಜೊತೆಗೆ ಇನ್ನೊಂದು ತಮ್ಮ ಆಯ್ಕೆಯ ಭಾರತದ ಭಾಷೆಯನ್ನು ಕಲಿಯುವಂತಾಗಬೇಕು. 

ಬೆಂಗಳೂರಲ್ಲಿ ಕನ್ನಡ ಹುಡುಕುವ ಪರಿಸ್ಥಿತಿ ಇದೆ: ಗೋವಿಂದ ಕಾರಜೋಳ

ಒಂದು ತನ್ನ ಪರಿಸರದ ನುಡಿ, ಮತ್ತೆರಡು ಆಯಾ ಮಗುವಿನ ಅಗತ್ಯಕ್ಕೆ ತಕ್ಕಂತೆ ಇನ್ನೆರಡು ಭಾಷೆಗಳು. ಆದರೆ ಕಲಿಯುವ ಭಾಷೆಗಿಂತ ಮಕ್ಕಳಿಗೆ ಕಲಿಸುವ ಭಾಷೆ ಯಾವುದಾಗಬೇಕೆಂಬುದೇ ಈವತ್ತಿನ ಜರೂರು ಸಮಸ್ಯೆ. ಬೇರೆ ಬೇರೆ ವಿಷಯಗಳನ್ನು ಮಕ್ಕಳು ಪರಿಸರದ ನುಡಿಯಲ್ಲೇ ಕಲಿಯುವುದು ಯುಕ್ತ ಎಂಬುದು ಭಾಷಾ ವಿಜ್ಞಾನಿಗಳ, ಶಿಕ್ಷಣ ಪರಿಣತರ, ಭವಿಷ್ಯದ ದೃಷ್ಟಿಯಿಂದ ಚಿಂತಿಸುವ ರಾಷ್ಟ್ರ ಪುರುಷರ ನಿಸ್ಸಂದಿಗ್ಧ ನಿಲುವು. ಗಾಂಧಿಯವರ ಪ್ರಕಾರ ಇಂಗ್ಲಿಷ್ ಭಾಷೆ ಮತ್ತು ವಿದ್ಯಾಭಾಷ ಕ್ರಮ ಭಾರತ ಅನುಭವಿಸುತ್ತಿರುವ ದೊಡ್ಡ ಪೀಡೆ; ಶಾಪ. ಅದರಿಂದ ಭಾರತದ ತರುಣರು ದುರ್ಬಲರೂ ನಿಷ್ಪ್ರಯೋಜಕರೂ ನಾಡಿಗೇ ಪರಕೀಯರೂ ಆಗುತ್ತಿರುವರು. ಇಂಗ್ಲಿಷ್ ವಿಶ್ವಭಾಷೆ -ಅದಕ್ಕಾಗಿ ನಾವು ಇಂಗ್ಲಿಷ್ ಕಲಿಯಬೇಕು ಎಂಬ ವಾದವಿದೆಯಲ್ಲ! ಲೋಹಿಯ ಹೇಳುತ್ತಾರೆ: ಇಂಗ್ಲಿಷ್ ಭಾಷೆ ಅಂತಾರಾಷ್ಟ್ರೀಯ ಮಾಧ್ಯಮವೆನ್ನುವುದು ಕೇವಲ ಕಟ್ಟು ಕತೆ. ಕುವೆಂಪು ಸ್ಪಷ್ಟವಾಗಿ ಹೇಳುತ್ತಾರೆ: ಇಂಗ್ಲಿಷ್ ಇನ್ನು ಮುಂದೆ ಎಲ್ಲರೂ ಅಲ್ಲ ಅಗತ್ಯವಿರುವ ಕೆಲವರು ಮಾತ್ರ ಕಲಿಯಬಹುದಾದ ಭಾಷೆ! ವ್ಯವಹಾರಕ್ಕೆ ಇಂಗ್ಲಿಷ್ ಬೇಕು ಎನ್ನುವವರಿಗೆ ಐದಾರು ತಿಂಗಳ ಕ್ಷಿಪ್ರ ಕಲಿಕೆ ಶಿಬಿರಗಳಲ್ಲಿ ಒಂದು ಭಾಷೆಯನ್ನು ಕಲಿಸುವುದು ಸಾಧ್ಯವಿರುವಾಗ ಭಾರತದ ಅಸಂಖ್ಯ ತರುಣರು ತಮ್ಮ ಶಿಕ್ಷಣಾವಧಿಯ ಉದ್ದಕ್ಕೂ ಇಂಗ್ಲಿಷ್ ಕಲಿಯುವ, ಇಂಗ್ಲಿಷ್ ಮೂಲಕ ಎಲ್ಲ ಪಠ್ಯ ವಿಷಗಳನ್ನು ಕಲಿಯುವ ಹೊರೆ ಯಾಕೆ? ಆರು ತಿಂಗಳಲ್ಲಿ ಕಲಿತು ಬಳಸಬಹುದಾದ ಒಂದು ಭಾಷೆಗಾಗಿ ಇಷ್ಟು ಶ್ರಮವೇಕೆ?-ಎಂದು ಪುತಿನ ಉದ್ಗಾರ ತೆಗೆದಿದ್ದಾರೆ.

 ಅಷ್ಟಕ್ಕೂ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಬೇಕೆಂಬ ನಿಲುವು ವ್ಯಕ್ತಪಡಿಸುತ್ತಿರುವವರು ಯಾರು? ಶಿಕ್ಷಣ ಸಂಸ್ಥೆಗಳನ್ನು ಹಣ ಸಂಪಾದನೆಯ ದಂಧೆ ಮಾಡಿಕೊಂಡಿರುವ ವ್ಯಾಪಾರಮುಖಿಗಳು. ಇಂಗ್ಲಿಷ್ ಮಾಧ್ಯಮದ ಬೃಹದ್ಗಾತ್ರದ ನಾಜೂಕು ಸಂಸ್ಥೆಗಳಿಗೆ ಹಣ ಹೂಡಿ, ದ್ವಿಗುಣ ತ್ರಿಗುಣವಾಗಿ ಹಣ ಬೆಳೆಯಬೇಕೆಂಬ ವ್ಯಾಪಾರೋದ್ದೇಶಿಗಳು. ಇದನ್ನು ಸಾಧಿಸಲು ಇವರು ನಾನಾ ಬಗೆಯ ವಕ್ರೋಪಾಯಗಳಲ್ಲಿ ತೊಡಗುವರು. ಮುಖವಾಡದ ಮಾತುಗಳನ್ನು ಆಡುವರು. ನಮ್ಮ ಮನೆಮಾತು ಬೇರೆ. ನಾವು ಬೇರೆ ಕಡೆಯಿಂದ ಕರ್ನಾಟಕಕ್ಕೆ ಬಂದು ಜೀವನೋಪಾಯಕ್ಕಾಗಿ ಇಲ್ಲಿ ನೆಲೆಸಿದವರು. ಹಾಗೆ ನೆಲೆಸುವುದಕ್ಕೆ ಭಾರತದ ಸಂವಿಧಾನದ ಸಮ್ಮತಿಯೂ ಇದೆ. ಪ್ರತಿಯೊಂದು ಮಗುವೂ ಮಾತೃ ಭಾಷೆಯಲ್ಲಿ ಕಲಿಯುವುದು ಅಗತ್ಯವೆಂದಾದಲ್ಲಿ ನೀವು ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಹೇರಿದಲ್ಲಿ ಕನ್ನಡೇತರ ಅನ್ಯಭಾಷಿಕರ ಮೂಲಭೂತ ಹಕ್ಕಿಗೆ, ಮಕ್ಕಳು ಅವರವರ ಮಾತೃ ಭಾಷೆಯಲ್ಲಿ ಕಲಿಯುವ ಹಕ್ಕಿಗೆ ಚ್ಯುತಿಯೊದಗುವುದು. ನಮ್ಮ ಮೂಲ ಭೂತ ಹಕ್ಕನ್ನು ನಾವು ಅನುಭವಿಸಲು ಬಿಡಿ ಎಂಬುದೊಂದು ಮುಖವಾಡದ ಮಾತು.  

ಯಾವುದು ಪರಿಸರ ಭಾಷೆಯೋ ಅದರಲ್ಲಿ ಮಾತ್ರ ಮಕ್ಕಳು ಲೋಕಾಕೃತಿಯನ್ನು ಚೆನ್ನಾಗಿ ಗ್ರಹಿಸಬಲ್ಲರು. ಆದ ಕಾರಣ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು ಎನ್ನುವವರು ನಾವು.  ಮಗುವೊಂದು ತನ್ನ ಪಂಚೇಂದ್ರಿಯಗಳಿಂದ ಸಹಜವಾಗಿ ಗ್ರಹಿಸಿದ ಲೋಕ ಗ್ರಹಿಕೆಯು ಪರಿಷ್ಕಾರಗೊಳ್ಳಬೇಕಾದದ್ದು ಪರಿಸರದ ಭಾಷೆಯಲ್ಲಿ. ಆಗ ಮಾತ್ರ ಅನುಭವ ಮತ್ತು ಅರಿವು ಒಂದಕ್ಕೊಂದು ಪೂರಕ-ಪೋಷಕವಾಗಿ ಮಗುವಿನ ಕಲಿಕೆ ಅನುಭವದ ನೆಲೆಗೆ ಏರುವುದು. ಹಾಗಾಗದೆ ಇಂಗ್ಲಿಷ್ ಭಾಷೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಮಕ್ಕಳಿಗೆ ಬೋಧಿಸಿದರೆ ಅದು ಮಾಹಿತಿಗಳ ಒದಗಣೆ ಆಗುವುದೇ ವಿನಾ ಲೋಕಾನುಭವವು ಭಾಷಾನುಭವವಾಗಿ ದಾಟಿಕೊಳ್ಳಲಾರದು.

ಪೋಷಕರು ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಆಗ್ರಹಿಸುವಾಗ ನಾವಾದರೂ ಏನು ಮಾಡಲಿಕ್ಕೆ ಸಾಧ್ಯ? ಬೇಡಿಕೆಯ ಅನುಸಾರ ಪೂರೈಕೆ ನಡೆಸಬೇಕಾದದ್ದು ನಮ್ಮ ಧರ್ಮ ಎನ್ನುತ್ತವೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಅಡಳಿತ ಮಂಡಲಿಗಳು. ಅದು ನಿಮ್ಮ ಧರ್ಮ ಹೌದು. ಆದರೆ ಅದು ವ್ಯಾಪಾರಿ ಧರ್ಮ. ಶಿಕ್ಷಣ ಒಂದು ವ್ಯಾಪಾರೀ ಉದ್ಯಮವಲ್ಲ. ಅನುಭವವನ್ನು ಮಾತಾಗಿಯೂ ಮಾತನ್ನು ಅನುಭವವಾಗಿಯೂ ಅಖಂಡತ್ವದಲ್ಲಿ ಸಿದ್ಧಿಸಿಕೊಳ್ಳುವ ವ್ಯಕ್ತಿರೂಪಣದ ಸೃಷ್ಟಿಶಾಲೆ. ಇಂಗ್ಲಿಷ್ ಅನ್ನವನ್ನು ಕೊಡುವ ಭಾಷೆ ಅನ್ನುವಿರೋ? ನಮ್ಮ ರೈತರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಅನ್ನ ಬೆಳೆಯುವ ಕೊಡುವ ನಿತ್ಯಾನುಷ್ಠಾನದಲ್ಲಿ  ತತ್ಪರರಾಗಿದ್ದಾರೆ. ರಾಜರು ಉದಿಸಲಿ ರಾಜರು ಅಳಿಯಲಿ ಬಿತ್ತುಳುವುದನವ ಬಿಡುವುದೆ ಇಲ್ಲ-ಎಂದು ಕುವೆಂಪು ನೇಗಿಲ ಯೋಗಿ ಕವಿತೆಯಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯೋಣ. ಆ ಕವಿತೆ ಈಗ ನಮ್ಮ ಸರ್ಕಾರ ಅಂಗೀಕರಿಸಿರುವ ರೈತ ಗೀತೆಯೂ ಹೌದು. 

ಲಕ್ಷಾಂತರ ಕೂಲಿ, ಕಾರ್ಮಿಕ, ನಿತ್ಯಸೇವಾ ಜನರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಸ್ವಾಭಿಮಾನಿ ಬದುಕು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಢಿಸುವುದೆಂದರೆ , ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಉದ್ಯೋಗ  ಮೀಸಲಾತಿಯನ್ನು ಜಾರಿಗೆ ತರುವುದು   ಬಹು ಮುಖ್ಯ ಅಗತ್ಯ. ಅನ್ನ ಸಂಪಾದನೆಯು ಕೈಂಕರ್ಯ ಮತ್ತು ದುಡಿಮೆಯ ಕಾಯಕಯೋಗವಲ್ಲದೆ ಭಾಷಾ ಪರಿಣತಿಯ ಫಲವಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದುವ ನಮ್ಮ ಮಕ್ಕಳು ಹೆಚ್ಚು ಜಾಣರಾಗುವರೋ?  ಕರ್ನಾಟಕದ ದೊಡ್ಡ ವಿಜ್ಞಾನಿಗಳು, ಉದ್ಯಮಿಗಳು, ಕವಿಸಾಹಿತಿಗಳು, ರಾಜಕೀಯ ಮುತ್ಸದ್ದಿ ಗಳು, ದೇಶಕ್ಕಾಗಿ ತಮ್ಮ ಬಾಳನ್ನೇ ಧಾರೆಯೆರೆದ ರಾಷ್ಟ್ರ ಪುರುಷರು ಕನ್ನಡ ಭಾಷೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಈಗ ಸಾಧನೆಯ ಉತ್ತುಂಗ ಶಿಖರವೇರಿರುವಂಥರು. ಐನ್ಸ್ಟಿನ್ ರಂಥ ಮಹಾ ವಿಜ್ಞಾನಿಗೂ ಜರ್ಮನ್ ಭಾಷೆಯೇ ಜ್ಞಾನದ ಮಾಧ್ಯಮವಾಗಿತ್ತು. 

ಇಂಗ್ಲಿಷ್ ಸಂವಹನದ ಭಾಷೆ ಮಾತ್ರ ಆಗಿತ್ತು. ಇಂಗ್ಲಿಷ್ ಭಾಷೆಯಲ್ಲಿ ಉಲುಹುವ ಅರಗಿಳಿಗಳೆಲ್ಲಾ ಕೋಹಂ ಧ್ಯಾನದಲ್ಲಿ ಮುಳುಗುವ ಹಂಸಗಳಾಗಲಾರರು.  ಅಸ್ಖಲಿತವಾಗಿ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡುವ ವಾಗ್ಮಿಗಳು ಸತ್ಯವಾಚಿಗಳೆಂದೂ ಹೇಳಲಾಗದು. ಅದಕ್ಕೇ ಭಾಷೆಯು ಹೇಗಿರಬೇಕೆಂದು ವಿವೇಚಿಸುವಾಗ ಬಸವಣ್ಣನವರು ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಶಲಾಕೆ ಇವುಗಳ ಅನಂತರ ಲಿಂಗ ಮೆಚ್ಚಿ ಅಹುದೆನ್ನಬೇಕೆಂಬ ಪರಮಪ್ರಮೇಯವನ್ನು ಶೃಂಗ ಸ್ಥಾನದಲ್ಲಿ ಇರಿಸಿದ್ದು. ನಡೆ ನುಡಿ ಒಂದಾಗದ ಬದುಕು ಅಕ್ಷಮ್ಯವೆಂದು ಸತ್ಯನಿಷ್ಠುರವಾದ ಕಟೂಕ್ತಿಯನ್ನಾಡಿದ್ದು. ಪದವಿಟ್ಟಳುಪದೊಂದಗ್ಗಳಿಕೆ ಎಂದು ಕುಮಾರವ್ಯಾಸ ತನ್ನ ಭಾಷೆಯ ಮೂಲಧರ್ಮವನ್ನು ಕುರಿತು ಹೇಳುವನಲ್ಲ, ಆ ಪದ್ಯವನ್ನೊಮ್ಮೆ ನೆನೆಯೋಣ. ಅದು ಕೇವಲ ಕವಿಯ ಲೇಖನಿಯ ಅಸ್ಕಲನವನ್ನು ಕುರಿತಷ್ಟೇ ಮಾತಾಡುತ್ತಿಲ್ಲ. ಪದ ಎಂಬ ಮಾತಿಗೆ ಕನ್ನಡದಲ್ಲಿ ಎರಡರ್ಥವಿದೆ. ಒಂದು ಭಾಷೆಯ ಶಬ್ದ; ಇನ್ನೊಂದು ವ್ಯಕ್ತಿತ್ವದ ಚಾರಿತ್ರ್ಯದ ದೃಢತೆ.  ಪದವಿಟ್ಟು ಅಳುಪದಿರುವುದು ಚಾರಿತ್ರ್ಯಶುದ್ಧಿ, ಭಾಷಾ ಶುದ್ಧಿ ಎರಡನ್ನೂ ಒಂದೇ ಉಸುರಿಗೆ ಇಬ್ಬಾಯಿ ಖಡ್ಗದಂತೆ ನುಡಿಯುತ್ತಾ ಇದೆ. 

ಯಾವ ರಾಜಕಾರಣಿಯೂ ಒತ್ತಡ ಹಾಕಿಲ್ಲ: ಮನು ಬಳಿಗಾರ

ಬಸವಣ್ಣನವರ ನಡೆ ನುಡಿಯ ಅಭೇದವನ್ನು ಕುಮಾರವ್ಯಾಸನ ರೂಪಕ ಬೇರೊಂದು ಪರಿಭಾಷೆಯಲ್ಲಿ ಉದ್ಗರಿಸುತ್ತಿದೆ. ನಮ್ಮ ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುವ ಉದ್ಯಮಿಗಳು ಉಚ್ಚ ನ್ಯಾಯಲಯಕ್ಕೆ ಮಾತೃಭಾಷೆಯಲ್ಲಿ ಕಲಿಯುವುದು  ಅನ್ಯಭಾಷಿಕರ, ಅಲ್ಪಸಂಖ್ಯಾತರ ಹಕ್ಕು ಮತ್ತು ಪೋಷಕರ ಬೇಡಿಕೆಯ ಒತ್ತಾಯ ಎನ್ನುವ ವಾದವನ್ನು ಮುಂದಿಟ್ಟು ಉಚ್ಚನ್ಯಾಯಲಯಕ್ಕೆ ಮೊರೆಹೋಗುತ್ತಾರೆ. ಆಗ ಮುಖ್ಯ ನ್ಯಾಯಲಯವು  ಕನ್ನಡ ಪರವಲ್ಲದ, ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವುದು ಪೋಷಕರ ಹಕ್ಕು ಅನ್ನುವ ತೀರ್ಪು ನೀಡುವುದು. ಹಿಂದೆ ಅದೇ ಉಚ್ಚ ನ್ಯಾಯಾಲಯವು ಕನ್ನಡ(ಅಂದರೆ ತಾಯ್ನುಡಿ-ಪರಿಸರ ನುಡಿ) ಶಿಕ್ಷಣ ಮಾಧ್ಯಮವಾಗಬೇಕು ಎಂಬ ತೀರ್ಪು ನೀಡಿದ್ದು ವಿಸ್ಮರಣೆಗೆ ಸಲ್ಲುತ್ತದೆ. ಮತ್ತೆ ನಾವು ನ್ಯಾಯಾಂಗದ ಮೊರೆಹೊಗಬೇಕಾದ, ಕಾನೂನಿನ ಹೋರಾಟ ನಡೆಸಬೇಕಾದ ತಿರುಮುರುವು ಸ್ಥಿತಿ ಉಂಟಾಗುವುದು. ಶಿಕ್ಷಣ ಮಾಧ್ಯಮ ಕನ್ನಡ ಆಗಬೇಕು ಎನ್ನುವು ತತ್ತ್ವಕ್ಕೆ ಕಾನೂನಿನ ತೊಡಕುಗಳು ಉಂಟಾಗುವುವು.

ಕಾಲಕಾಲಕ್ಕೆ ನಮ್ಮ ಸರ್ಕಾರೀ ನಿಲುವುಗಳೂ ವ್ಯತ್ಯಸ್ತಗೊಳ್ಳುತ್ತಾ ಹೋಗಿರುವುದನ್ನೂ ನಾನು ಈ ಮಹಾಸಮ್ಮೇಳನದ ಸಮಕ್ಷಮ ಪ್ರಸ್ತಾಪಿಸ ಬಯಸುತ್ತೇನೆ. ಮೊದಲು ಕನ್ನಡ ಪರ ನಿಲುವು. ಬಳಿಕ ಅನುದಾನ ಪಡೆಯುವ ಮತ್ತು ಪೂರ್ಣ ನಿರ್ವಹಣೆಯ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಶಿಕ್ಷಣ ಮಾಧ್ಯಮ! ಕೊನೆಗೆ ಸರ್ಕಾರವೇ ಇಂಗ್ಲಿಷ್ ಮಾಧ್ಯಮದ ಒಂದು ಸಾವಿರ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವ ಹಿಡಿದ ಹಠ ಬಿಡದ ಮೊಂಡು ನಿಲುವು ತಾಳುವುದು. ಹಾಗೆ ಸ್ಥಾಪಿತವಾದ ಇಂಗ್ಲಿಷ್ ಮಾಧ್ಯಮದ ಪ್ರೈಮರಿ ಶಾಲೆಗಳ ಭವಿಷ್ಯ ಏನಾಯಿತೆಂಬುದು ಅಧ್ಯಯನದ ವಿಷಯ. ಇದಕ್ಕಾಗಿ ಯಾವ ಪೂರ್ವ ಸಿದ್ಧತೆಗಳು ನಡೆದವು? ಯಾವ ಶಿಕ್ಷಣ ಸಮಿತಿಯ ಸಲಹೆ-ಸೂಚನೆ ಪಡೆಯಲಾಯಿತು? ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧಿಸುವ ಶಿಕ್ಷಕರು ಸಿದ್ಧವಿದ್ದಾರೆಯೇ? ನಾನು ಈಚಿನ ಅಭ್ಯಾಸದಿಂದ ಉಪಲಬ್ಧವಿರುವ ಅಂಕಿ ಅಂಶಗಳ ಪ್ರಕಾರ ಇಂಗ್ಲಿಷ್ ಶಾಲೆಗಳು ಶಿಕ್ಷಣ ಮಟ್ಟದ ಇಳಿವಿಗೆ ಕಾರಣವಾಗಿವೆ. 

ಜಿ.ಎಸ್.ಜಯದೇವ, ಎಚ್.ಎನ್.ಮುರಳೀಧರ ಸಂಪಾದಿಸಿರುವ ನೆಲದ ನುಡಿಯ ನಂಟು ಎಂಬ, ಕನ್ನಡಿಗರೆಲ್ಲ ಮನನ ಮಾಡಲೇಬೇಕಾದ ಕೃತಿಯಲ್ಲಿ ಈ ಬಗ್ಗೆ ಅಂಕಿ ಅಂಶ ಸಹಿತ ಮಾಹಿತಿಗಳಿವೆ. ಮಕ್ಕಳು ಶಾಲೆ ಬಿಡುವ ಪ್ರಮಾಣ ಹೆಚ್ಚಾಗುತ್ತಿದೆ. ಅವರು ನಿಸ್ತೇಜರೂ ನಿರ್ವೀರ್ಯರೂ ಆಗುತ್ತಿರುವರು. ಇದು ಕನ್ನಡ ಮಕ್ಕಳು ಮತ್ತು ಕನ್ನಡ ಭಾಷೆಯ ಸ್ಥಿತಿ ಮಾತ್ರವಲ್ಲ. ಭಾರತದ ಎಲ್ಲ ಪ್ರಾಂತ್ಯಗಳಲ್ಲೂ  ಕಾಣುತ್ತಿರುವ ಸಾಮಾನ್ಯ ದೃಶ್ಯ. ಆಂಗ್ಲಮಾಧ್ಯಮದ ಮೂಲಕ ಮಾಹಿತಿಗಳನ್ನು ನೆನಪಿನ ಶೈತ್ಯಾಗಾರಕ್ಕೆ ಸುರಿದುಕೊಳ್ಳುತ್ತಿರುವ ಎಲ್ಲ ಮಕ್ಕಳ ಸ್ಥಿತಿಯೂ ಅದೇ ಆಗಿದೆ.

ಶಿಕ್ಷಣ ಮಾಧ್ಯಮ ಮತ್ತು ಸಾಹಿತ್ಯ ಸಂಸ್ಕೃತಿಯ ಸಂಬಂಧವೂ ನಾವು ಊಹಿಸಲಾರದಷ್ಟು ನಿಕಟವಾದದ್ದು. ನಾವೆಲ್ಲಾ ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದವರು. ಕಲಿಯಬೇಕಾದ ಪಠ್ಯಗಳನ್ನೆಲ್ಲಾ ಕನ್ನಡದಲ್ಲೇ ಕಲಿತವರು. ಒಂದು ವಿಷಯ ಕಲಿಯುವಾಗ ವಸ್ತು ಮತ್ತು ಅದನ್ನು ಸೂಚಿಸುವ ಭಾಷೆ ಎರಡನ್ನೂ ಕಲಿಯುವ ದ್ವಿಮುಖೀ ಒತ್ತಡವಿಲ್ಲದೆ ಬೆಳೆದವರು. ನಮಗೆ ಎಲೆ ಗೊತ್ತಿತ್ತು. ಒಲೆ ಗೊತ್ತಿತ್ತು. ಅಲ್ಲಿ ನಮ್ಮ ತಾಯಿ ಉರುವಲು ಹಾಕಿ ಅನ್ನ ತಯಾರಿಸುವುದು ಗೊತ್ತಿತ್ತು. ಸೂರ್ಯ ರಶ್ಮಿ ಮತ್ತು ಅದರ ಶಾಖ ಗೊತ್ತಿತ್ತು. ಮರದ ಎಲೆ, ಮರಕ್ಕೆ ಅನ್ನ ತಯಾರಿಸಿ ಬಡಿಸುವ ಅಡುಗೆ ಮನೆ ಎಂಬುದು ನಮಗೆ ಅನುಭವವೇದ್ಯವಾದ ಸಂಗತಿ. ಇನ್ನೂ ಉಚಾಯಿಸಿ ಹೇಳಬೇಕೆಂದರೆ ಅದು ಸಂಗತಿಯೇ ಅಲ್ಲ. ಒಂದು ನಿತ್ಯಾನುಭವದ ವಿಸ್ತರಣೆ. 

ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗಾದರೆ ಗ್ರಹಿಸಬೇಕಾದ ಸಂಗತಿ ಮತ್ತು ಮಾಧ್ಯಮದ ಭಾಷೆ ಈ ಎರಡರ ನಡುವೆ ಯಾವಾಗಲೂ ಬಿರುಕುಗಳು. ಪುಸ್ತಕವನ್ನು ಕಪಾಟಿನಲ್ಲಿ ಅವರು ಜೋಡಿಸುವರು ಅಷ್ಟೆ. ಅದು ವಾತಾಪಿ ಜೀರ್ಣೋಭವ ಆಗಿ ಅನುಭವವಿದಿತವಾಗದು. ಹೊಟ್ಟೆಯ ಮೇಲೆ ಕಟ್ಟಿದ ಕಟ್ಟೋಗರ ಹಸಿವನ್ನು ನೀಗಬಲ್ಲುದೆ? ಮಸ್ತಕದಲ್ಲಿ ತುರುಕಿದ ಪುಸ್ತಕ ಮನೋಗತವಾಗಬಲ್ಲುದೆ?

 ನಾವು ಪ್ರೈಮರಿ ಮಾಧ್ಯಮಿಕ ಪ್ರೌಢ ಶಾಲೆಗಳಲ್ಲಿ ಏನನ್ನು ಕಲಿತೆವೋ ಅದಕ್ಕೆ ಪೂರಕವೂ ಪೋಷಕವೂ ಆದಂಥ ಸಂಗತಿಗಳನ್ನು ಶಾಲೆಯ ಹೊರಗೆ ಕಲಿತದ್ದು ಮಾತ್ರ ಸತ್ಯ. ರಾತ್ರಿ ನೋಡಿದ ಯಕ್ಷಗಾನ, ಸಂಜೆ ನಡೆದ ಭಜನಾಮಂಡಲಿಯ ಪಾದಯಾತ್ರೆ, ಅವರು ಒಕ್ಕೊರಲಲ್ಲಿ ಹಾಡುತ್ತಾ ಹೋಗುತ್ತಿದ್ದ ತತ್ವಪದಕಾರರ ಪದ, ಗೋವಿಂದಾ ಎಂದು ಕೂಗುತ್ತಾ ಮನೆಮನೆಗೆ ಬರುತ್ತಿದ್ದ ದಾಸಯ್ಯಗಳ ದಾಸರ ಹಾಡುಗಳು, ಅವರು ತರುವ ಎಣ್ಣೆ ಗಿಮಟಿನ ಕಾಲ್ದೀಪ, ಮಿರುಗುಟ್ಟುವ ಗೋಪಾಲ 
ಬುಟ್ಟಿ , ಗಂಟೆ ಜಾಗಟೆಯ ಭೋರ್ಗರೆತ, ಅದೆಲ್ಲಾ ಶಾಲೆಯ ಹೊರಗೆ ನಾವು ಕಲಿಯುತ್ತಿದ್ದ ಜೀವನ ವೈವಿಧ್ಯದ ಒಂದು ಎದೆಹೊಗುವ ಅನುಭವ. ನಮ್ಮ ಈ ನಿತ್ಯಾನುಭವ ಶಾಲೆಗಳಲ್ಲಿ ಭಾಷೆಯ ಮೂಲಕ ಪಠ್ಯಗಳ ಮೂಲಕ ಭಾಷಾವತರಣಗೊಳ್ಳುವ ಚೋದ್ಯ ಸಂಭವಿಸುತ್ತಾ ಇತ್ತು. ಅನುಭವ ಮತ್ತು ಕಲಿಕೆಯ ನಡುವೆ ಅಂತರವಿರಲಿಲ್ಲ. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ನಾನು ಕಾರಂತ, ಅನಕೃ , ತರಾಸು, ಕಟ್ಟೀಮನಿ ಅವರ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದ್ದೆ. 

ಕನ್ನಡಮ್ಮನ ಸೇವೆ ಮಾಡಲು ಸುಯೋಗ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯ: ಡಿಸಿ ಶರತ್

ಪ್ರೌಢ ಶಾಲೆಗಳಲ್ಲಿ ನರಸಿಂಹ ಶಾಸ್ತ್ರಿ ಎಂಬ ಹೆಸರಿನ ನನ್ನ ಅಧ್ಯಾಪಕರು ಶಾಲೆಯ ಪಠ್ಯವನ್ನು ಮಾತ್ರವಲ್ಲ ನಮಗೆ ಕುವೆಂಪು ಅವರ ಮಲೆನಾಡಿನ ಚಿತ್ರಗಳು, ಕೈಲಾಸಂ ಅವರ ಟೊಳ್ಳುಗಟ್ಟಿ ನಾಟಕವನ್ನು ಓದಿ ಹೇಳುತ್ತಾ ಇದ್ದರು. ಆ ವೇಳೆಗೆ ನಾನು ಕುವೆಂಪು ಬೇಂದ್ರೆಯವರ ಕವಿತೆಗಳನ್ನು ಓದುವ ಹುಚ್ಚಿಗೆ ಬಿದ್ದಿದ್ದೆ. ನಾನು ಬರೆದರೆ ಆಗ ಕನ್ನಡದಲ್ಲೇ ಬರೆಯಬೇಕಾಗಿತ್ತು.  ಕನ್ನಡ ಆ ಕಾಲದಲ್ಲಿ ಅನ್ಯಥಾ ಶರಣಂ ನಾಸ್ತಿ ಎಂಬ ಆತ್ಮ ಕ್ಷೇಮದ ನೆಲೆಯಲ್ಲಿತ್ತು. ನಾನು ನನ್ನ ಗೆಳೆಯರು ಕನ್ನಡದಲ್ಲೇ ಓದಿದೆವು ಕನ್ನಡದಲ್ಲೇ ಬರೆದೆವು. ಈವತ್ತು ನಮ್ಮಮಕ್ಕಳು ಮೊಮ್ಮಕ್ಕಳು ಓದಿದರೆ ಇಂಗ್ಲಿಷ್ ನಾವೆಲ್ಲುಗಳನ್ನು ಓದುವರು. ಬರೆದರೆ ಇಂಗ್ಲಿಷ್ ಕಥೆ ಕವಿತೆ ಬರೆಯುವರು.  ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಅವಜ್ಞತೆಗೆ ಒಳಗಾಯಿತೆಂದರೆ, ಎಲ್ಲವನ್ನೂ ಮಕ್ಕಳಿಗೆ ನಾವು ಇಂಗ್ಲಿಷಲ್ಲೇ ಬೋಧಿಸುವುದಾದರೆ ಕನ್ನಡದಲ್ಲಿ ಹೊಸದನ್ನು ಹುಟ್ಟಿಸುವ ಶಕ್ತಿಯನ್ನು ನಮ್ಮ ಮಕ್ಕಳು ಕಳೆದುಕೊಳ್ಳುವರು. ಸೃಷ್ಟಿಯ ಶಕ್ತಿಯನ್ನು ಕಳೆದುಕೊಳ್ಳುವಂತೆಯೇ ಗ್ರಹಿಕೆಯ ಶಕ್ತಿಯನ್ನೂ ಕಳೆದುಕೊಳ್ಳುವರು. ಬಹಳ ಸಮರ್ಥರಾದ ಹಿರಿಯ ಸಾಹಿತಿಗಳು ಈಗ ಮಕ್ಕಳಿಗಾಗಿ ಕವಿತೆ, ಕಥೆ, ನಾಟಕಗಳನ್ನು ಬರೆಯುತ್ತಿರುವರು.  

ಹೊಸಬರೊಂದಿಗೆ ಚೆನ್ನವೀರ ಕಣವಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕೆ.ವಿ.ತಿರುಮಲೇಶ, ಚಂದ್ರಶೇಖರ ಕಂಬಾರ, ವೈದೇಹಿ, ಈಗ ಮಕ್ಕಳ ಸಾಹಿತ್ಯ ರಚನೆಯಲ್ಲೂ ತೊಡಗಿರುವರು. ಪ್ರತಿಭಾಶಾಲಿಗಳಾದ ಹೊಸ ಲೇಖಕರ ದೊಡ್ಡ ಪಟ್ಟಿಯೇ ಇದೆ. ಮಕ್ಕಳ ಸಾಹಿತ್ಯದ ಬೃಹತ್ ಸಂಪುಟಗಳು , ಮೀಮಾಂಸಾ ಕೃತಿಗ್ಫ಼ಳು ಹೊರಬಂದಿವೆ. ಈ ವಿಷಯದಲ್ಲಿ ಬೊಳುವಾರು ಮತ್ತು ಆನಂದಪಾಟೀಲರನ್ನು ನಾವು ವಿಶೇಷವಾಗಿ ನೆನೆಯ ಬೇಕಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಮಕ್ಕಳ ಪತ್ರಿಕೆ ಹೊರಬರುತ್ತಿರುವುದು.  ಸಮಸ್ಯೆ ಇರುವುದು ಸೃಷ್ಟಿಶೀಲರಲ್ಲಲ್ಲ.  ಗ್ರಾಹಕರಲ್ಲಿ. ಮಕ್ಕಳ ನಾಲಗೆಯಿಂದ ಕನ್ನಡದ ಬೀಜಾಕ್ಷರಗಳೇ ಮಾಯವಾಗುತ್ತಿರಲು ವರಾದರೂ ಕನ್ನಡ ಕೃತಿಗಳನ್ನು ಓದಲು ಹೇಗೆ ಸಮರ್ಥರಾಗುವರು? ಇದೆಲ್ಲದರ ಮೂಲ ತೊಡಕು ಕನ್ನಡ ಶಿಕ್ಷಣ ಮಾದ್ಶ್ಯಮವಾಗಿ ಚ್ಯುತಗೊಳ್ಳುತ್ತಿರುವ ದುರಂತದಲ್ಲಿಯೇ ಇದೆ. 

ಈವತ್ತಿನ ಸಾಹಿತ್ಯದ ಪರಿಸ್ಥಿತಿಯನ್ನೇ ನೋಡಿ. ನಡುಪ್ರಾಯದಿಂದ ಕೆಳಗಿನ ಎಷ್ಟು ಮಂದಿ ಗಟ್ಟಿ ಕೃತಿಗಳನ್ನೀಗ ನಿರ್ಮಾಣ ಮಾಡುತ್ತಿದ್ದಾರೆ?  ಬೆರಳೆಣಿಕೆಯಷ್ಟು ಮಂದಿ ಸಿಕ್ಕಾರು. ಬರೆಯಬಲ್ಲ ನಮ್ಮ ಯುವಕ ಯುವತಿಯರೆಲ್ಲ ಎಲ್ಲಿ ಹೋದರು? ಅಥವಾ ಯಾವ ಭಾಷೆಯಲ್ಲಿ ತಮ್ಮ ಅನುಭವವನ್ನು ತೋಡಿಕೊಳ್ಳುತ್ತಿರುವರು? ಇಪ್ಪತ್ತನೇ ಶತಮಾನದ ದೊಡ್ಡ ಲೇಖಕರನ್ನು ನಮ್ಮ ಈವತ್ತಿನ ತರುಣ ಪೀಳಿಗೆ ಆಳವಾಗಿ ಅಭ್ಯಾಸ ಮಾಡುತ್ತಿದೆಯೇ?  ಇಪ್ಪತ್ತನೇ ಶತಮಾನದ ಕಥೆಯೇ ಇಷ್ಟಾದರೆ ಹತ್ತು, ಹನ್ನೆರಡು, ಹದಿನೈದು, ಹದಿನಾರು, ಈ ಶತಮಾನಗಳಲ್ಲಿ ಹೊರಬಂದ ನಮ್ಮ ಅತ್ಯುತ್ಕೃಷ್ಟ ಕೃತಿಗಳನ್ನು ಎಷ್ಟು ಮಂದಿ ಹೊಸ ಲೇಖಕರು ಹಚ್ಚಿಕೊಂಡು ಓದುತ್ತಿರುವರು? ಈ ವಿಸ್ಮರಣೆಯು ಉಂಟುಮಾಡುವ ದಾರುಣ ಪರಿಣಾಮವೇನು? ಇಂಥವು ಉತ್ತರಿಸಲು ಅಸಾಧ್ಯವಾದ ಪ್ರಶ್ನೆಗಳು. ಈ ಪರಿತಾಪದ ನೆಲೆಯಲ್ಲೇ ನನ್ನ ಅವತರಣಿಕೆ ಮಾಲೆ, ಕುಮಾರವ್ಯಾಸ ಕಥಾಂತರದಂಥ ಮರು ಓದಿನ ಕೃತಿಗಳು ರಚಿತವಾದದ್ದು.

ನಮ್ಮ ಸಾವಿರ ವರ್ಷದ ಕನ್ನಡ ಸಾಹಿತ್ಯ ಪರಂಪರೆಯ ನೆನಪನ್ನು ನಮ್ಮ ಹೊಸ ಪೀಳಿಗೆಯ ಮನಸ್ಸಲ್ಲಿ ಮತ್ತೆ ಉಜ್ಜೀಸುವ ಯೋಜನೆಗಳನ್ನು ಕೈಗೊಳ್ಳುವ ತುರ್ತುಯತ್ನಗಳನ್ನು ನಾವು ಕೈಗೊಳ್ಳಲೇಬೇಕಾಗಿದೆ. ಮೊದಲೆಲ್ಲಾ ಪಠ್ಯಗಳಲ್ಲಾದರೂ ಪ್ರಾಚೀನ ಸಾಹಿತ್ಯದ ಒಂದೆರಡು ವೃತ್ತಗಳೋ, ಕಂದಗಳೋ, ಕಥಾಭಾಗಗಳೋ,  ವಚನಖಂಡಗಳೋ, ಕೀರ್ತನೆ -ಸುಳಾದಿ- ಉಗಾಭೋಗಗಳೋ, ರಗಳೆಗಳೋ ನಮ್ಮ ಮಕ್ಕಳಿಗೆ ಪರಿಚಯವಾಗುತ್ತಿದ್ದವು. ಈಗ ಶಿಕ್ಷಣ ಕ್ರಮದಿಂದಲೇ ಕನ್ನಡ ಭಾಷೆ-ಆ ಭಾಷೆಯಲ್ಲಿ ಮೈದಾಳಿದ ಸಾಹಿತ್ಯ ಮತ್ತು ವೈಚಾರಿಕತೆ ನಮ್ಮ ಮಕ್ಕಳಿಂದ ದೂರವಾಗುತ್ತಿದೆ. ಕನ್ನಡದಲ್ಲಿ ಕಲಿಯುವ ಮಾತಿರಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳು ಕೂಡ ದಿನೇ ದಿನೆ ಕಡಿಮೆಯಾಗುತ್ತಿವೆ.  ಹಳ್ಳಿಗಳಲ್ಲಿ ನಾವು ಮಕ್ಕಳಿದ್ದಾಗ ಇದ್ದಂಥ ಸಾಹಿತ್ಯಕ ಸಾಂಸ್ಕೃತಿಕ ಸಾಮುದಾಯಿಕ ಜೀವನ ಕ್ರಮಗಳು ಈಗ ಕಾಣೆಯಾಗುತ್ತಾ ಇವೆ. ನಮ್ಮೂರಲ್ಲಿ ಕುಂಬಾರಿಕೆ ನಡೆಯುತ್ತಾ ಇಲ್ಲ. ಮರಗೆಲಸದಲ್ಲಿದ್ದ ಗುಡಿಕಾರರು ಕಾಣುತ್ತಿಲ್ಲ. ಕೈಮಗ್ಗಗಳು ಬಂದಾಗಿವೆ. ನಾಟಕ ಯಕ್ಷಗಾನ ಪ್ರಯೋಗಗಳು ಕ್ಷೀಣಿಸುತ್ತಾ ಇವೆ. ಭಜನಾಮಂಡಲಿಗಳು ಕಾಣವು. ಕುರಿತೋದೆಯೂ ಸರ್ವಜ್ಞ ಬಸವಣ್ಣ ಕುಮಾರವ್ಯಾಸ ಲಕ್ಷ್ಮೀಶ ಪುರಂದರ ಕನಕರನ್ನು ಅವರ ಕೃತಿಗಳನ್ನೂ ಸಲೀಲವಾಗಿ ಮಾತುಗಳಲ್ಲಿ ಪ್ರಸ್ತಾಪಿಸುತ್ತಿದ್ದ ನಮ್ಮ ಹಳ್ಳಿಯ ಹತ್ತು ಸಮಸ್ತರು ಈಗ ಕಾಲಹತಿಯಿಂದ ನಿಶ್ಶೇಷವಾಗಿದ್ದಾರೆ. ಹರಟೆಕಟ್ಟೆ ದೇವಾಲಯದ ಅಂಗಳ ನಿರ್ಜನವಾಗಿವೆ. 

ಹಳ್ಳಿ ಹಳ್ಳಿಯಲ್ಲೂ ಕುಡಿಯುವ ಅಡ್ಡೆಗಳು. ನಮ್ಮಲ್ಲಿಂದು ಸಮುದಾಯ ನೆರೆಯುತ್ತಿದ್ದ ಬಾವಿ ಕೆರೆ ತೊರೆ ಗುಡಿ ದರ್ಗ ಚರ್ಚುಗಳು ಜನಜೀವನದಿಂದ ದೂರವಾಗಿ ನಮ್ಮ ಮನೆ ಮತ್ತು ಅದರಲ್ಲಿ ಪ್ರತಿಷ್ಠಾಪಿತವಾಗಿರುವ ವಿಶ್ವದ ಬೇಕು ಬೇಡದ ಎಲ್ಲ ಮಾಹಿತಿಗಳನ್ನು ನಡುಮನೆಗೆ ತಂದು ಸುರಿಯುವ ಟೀವಿಗಳು, ಮನುಷ್ಯ ಸಂಬಂಧಗಳನ್ನು ದೂರವಾಣಿಯ ಮೂಲಕ ನಿಜದ ಭ್ರಮೆಗೆ ತರುವ ವ್ಯವಸ್ಥೆ ದ್ವಿಗುಣಿತವಾಗುತ್ತಾ ಇದೆ. ಮನೆಮನೆಗಳಿಗೀಗ ನಲ್ಲಿಗಳು ಬಂದು, ಊರಿಗೆ ಬಂದೋರು ಬಾವಿಗೆ ಬರೋಲ್ವೆ? ಎಂಬ ಗಾದೆ ಈಗ ಅರ್ಥಹೀನವೆನಿಸುತ್ತಿದೆ. ಎಂದರೆ ಸಮುದಾಯದ ಬದುಕು ನಮ್ಮಲ್ಲಿ ತೀವ್ರಗತಿಯಲ್ಲಿ ಕ್ಷೀಣಿಸುತ್ತಿದೆ.ನಮ್ಮ ಅರ್ಥವ್ಯವಸ್ಥೆ ಮತ್ತು ಜೀವನ ಕ್ರಮ ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಸಂದರ್ಭದಲ್ಲಿ ನಾವು ಏನನ್ನು ಗಳಿಸುತ್ತಿದ್ದೇವೆ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಪರ್ಯಾಲೋಚಿಸುವ ವ್ಯವಧಾನವೂ ನಮಗೆ ಇಲ್ಲವಾಗಿದೆ. ಹಳ್ಳಿ ಕಳಾಹೀನವಾಗುತ್ತಿದೆ. ಹಳ್ಳಿಗಳನ್ನು ಪೋಷಿಸುತ್ತಿದ್ದ ಗೋವರ್ಧನಗಿರಿಗಳೂ ಈಗ ನುಣ್ಣಗೆ ನಿಂತಲ್ಲೇ ಮಂಗಮಾಯವಾಗುತ್ತಿವೆ. ನದಿಗಳು ವಿಜೃಂಭಿತ ಚರಂಡಿಗಳಾಗುತ್ತಿವೆ. ಕಾಡುಗಳು ಉಪವನವಾಗುವುದಿರಲಿ ಖಂಡತುಂಡಾಗಿ ಕೈಕಾಲು ಕಡಿದು ಬಟ್ಟಬಯಲಾಗಿ, ಮನೆಕಟ್ಟುವ ನಿವೇಶನಗಳಾಗಿ ರೂಪಾಂತರಗೊಳ್ಳುತ್ತಿವೆ. ಪರಿಸರದ ನಾಶವೆಂಬುದು ಜೀವಜಗತ್ತಿನ ನಾಶ....ವಿಶೇಷವಾಗಿ ಬಡವರ ನಾಶ. ಗಾಡ್ಗೀಳ್ ಎಂಬ ವಿಜ್ಞಾನಿಯು ಕಾಗದದ ಉದ್ಯಮಕ್ಕಾಗಿ ಬಿದಿರ ಕಾಡುಗಳು ನಾಶವಾಗಿ ಬಿದಿರು ಬುಟ್ಟಿ ಚಾಪೆ ಹೆಣೆಯುವ ಜನರ ಬದುಕು ಹೇಗೆ ದುಸ್ತರವಾಯಿತು ಎನ್ನುವುದನ್ನು ವಿವರಿಸಿದ್ದಾರೆ.

ಕಲಬುರಗಿ ಅಕ್ಷರ ಜಾತ್ರೆ: ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕಾರಜೋಳ ಚಾಲನೆ

ಕಾಂಕ್ರಿಟ್ ಬಂದು ನಾಡಹೆಂಚುಗಳು ಮಾಯವಾದವು. ಮಾರುಕಟ್ಟೆಯಲ್ಲಿ ಸಿದ್ಧ ವಸ್ತುಗಳ ಮಾಸ್ ಒದಗಣೆಯಿಂದಾಗಿ ಗ್ರಾಮಜೀವನ ತನ್ನ ಸ್ವಾವಲಂಬೀ ಸತ್ವವನ್ನು ಕಳೆದುಕೊಂಡಿದೆ. ಬೀಸುವ ಕುಟ್ಟುವ ಕೇರುವ ಉತ್ತು ಬಿತ್ತುವ ನಿತ್ಯ ವ್ಯವಸಾಯಗಳು, ದೈಹಿಕ ಶ್ರಮಗಳು ಕಾಣದಾಗಿ ರೆಡಿಮೇಡ್ ಸಾಮಗ್ರಿಗಳು ಮತ್ತು ಪ್ರತಿಯೊಂದು ಕಾಯಕಕ್ಕೂ ಪರ್ಯಾಯವಾಗಿ ಒದಗಿರುವ ಯಂತ್ರ ವ್ಯವಸ್ಥೆ ಗ್ರಾಮೀಣ ಬದುಕನ್ನು ನಿರ್ಜೀವಗೊಳಿಸುತ್ತಿದೆ.  ಒಟ್ಟಾರೆ ಸಮುದಾಯದ ಬದುಕು ಕಾಣೆಯಾಗುತ್ತಿದೆ. ಹಳ್ಳಿಗಳಲ್ಲೇ ಹೀಗಾಗುತ್ತಿದೆ ಎನ್ನುವಾಗ ನಗರದ ವಿಷಯ ಹೇಳುವುದೇ ಬೇಡ. ಬದುಕು ಕೇವಲ ತನಗಾಗಿ, ತಾನು ಮೊದಲು, ಬಳಿಕ ಇನ್ನೊಬ್ಬರು ಎಂಬುದು ಈವತ್ತು ಆಧುನಿಕ ಸಂಸ್ಕೃತಿಯ ನಿತ್ಯ ಬೋಧೆ. ವಿಮಾನಯಾನದಲ್ಲಿ ಕಾಣುವ ಸೂಚನಾಪತ್ರ ತಾವು ನೋಡಿರಬಹುದು. ಅವಗಢ ಸಂಭವಿಸಿದಲ್ಲಿ ಮೊದಲು ನಿಮ್ಮ ರಕ್ಷಣೆ ಮಾಡಿಕೊಳ್ಳಿ. ಆಮೇಲೆ ಉಳಿದವರ ಕಡೆ ಗಮನಕೊಡಬಹುದು! ತಾನು ಬದುಕಬೇಕಾದದ್ದು ತನಗಾಗಿಯಲ್ಲ, ಇತರರಿಗಾಗಿ ಎನ್ನುವುದು ಭಾರತೀಯ ಜೀವನಕ್ರಮದ ಪ್ರಧಾನ ಆಶಯವಾಗಿತ್ತು.  

ರಾಮಾಯಣದಲ್ಲಿ ಬರುವ ಸಂಪಾತಿ ಮತ್ತು ಜಟಾಯುವಿನ ಕಥೆ ನನಗೀಗ ನೆನಪಾಗುತ್ತಿದೆ. ಸಂಪಾತಿ ಮತ್ತು ಜಟಾಯು ಇಬ್ಬರು ಮಹಾ ಗೃಧ್ರಸೋದರರು. ಒಮ್ಮೆ ಇಬ್ಬರೂ ಜಿದ್ದು ಕಟ್ಟಿ ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರತೊಡಗಿದ್ದಾರೆ. ಜಟಾಯು ಅಣ್ಣ ಸಂಪಾತಿಯನ್ನು ಮೀರಿಸಬೇಕೆಂಬ ಜಿದ್ದಿನಲ್ಲಿ ಅವನಿಗಿಂತ ಮೇಲೆ ಸೂರ್ಯನ ಸಮೀಪಕ್ಕೆ ಹಾರತೊಡಗಿದಾಗ ಅಣ್ಣ ಸಂಪಾತಿ ತಮ್ಮನನ್ನು ಉಳಿಸಬೇಕೆಂಬ ಉದ್ದೇಶದಿಂದ ಜಟಾಯುವುಗಿಂತ ಮೇಲೆ ಹಾರಿ ಸೂರ್ಯನ ತೀಕ್ಷ್ಣ ಕಿರಣಗಳಿಂದ ತಮ್ಮನನ್ನು ರೆಕ್ಕೆ ಹರಡಿ ರಕ್ಷಿಸುತ್ತಾನೆ. ತಮ್ಮ ಕ್ಷೇಮವಾಗಿ ಉಳಿದ; ಅಣ್ಣ ರೆಕ್ಕೆ ಸೀದು ಭೂಮಿಗೆ ಬಿದ್ದ. ಅಧುನಿಕ ವಿಮಾನಪಕ್ಷಿಯ ಬೋಧನೆ ಸಂಪಾತಿಯ ನಿಲುವಿಗೆ ತದ್ವಿರುದ್ಧವಾಗಿದೆ!

ಈಗ ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಠಾಚಾರಕ್ಕೆ ಈ ಸ್ವಾರ್ಥ ಕೇಂದ್ರಿತ ಜೀವನ ಸಿದ್ಧಾಂತವೇ ಪ್ರಧಾನಕಾರಣವಾಗಿದೆ. ನಮಗೆ ಗಣಿ ಮಾಡಿ ಹಣ ಮಾಡುವುದು ಮುಖ್ಯ. ಖನಿಜಸಂಪತ್ತು ಈ ದಂದಾದುಂದಿಯಲ್ಲಿ ನಾಶವಾದರೆ ಭವಿಷ್ಯದ ಗತಿಯೇನು ಎಂಬ ಚಿಂತೆ ಯಾರಿಗೂ ಇಲ್ಲ. ನಾವು ಹೆಚ್ಚು ಹೆಚ್ಚು ಕಾರ್ಖಾನೆಗಳನ್ನು ಮಾಡೋಣ. ಅವುಗಳ ತ್ಯಾಜ್ಯವಸ್ತುವಿನಿಂದ ನಮ್ಮ ಜೀವನದಿಗಳು ಕಾಳಿಂದಿ ಮಡುಗಳಾದರೆ ಆಗಲಿ. ಈವತ್ತಿನ ಲಾಭವೇ ನಮ್ಮ ಪರಮ ಗುರಿ. ಸ್ವಾರ್ಥಕ್ಕಾಗಿ ಪರ್ವತಾರಣ್ಯಗಳ ನಾಶ. ಅಲ್ಲಿ ವಾಸಿಸುತ್ತಿದ್ದ ವನ್ಯಜೀವಿಗಳ ನಾಶ. ನದಿ ನದಗಳ ನಾಶ. ವಿಶಿಷ್ಟ ಜಾತಿಯ ಮರಗಿಡಗಳ ನಾಶ! ಇಕಾಲಜಿ ಎಂಬ ತತ್ವವನ್ನು ಗಾಳಿಗೆ ತೂರಿ ನಾನಾಯಿತು ಮೂರುಲೋಕವಾಯಿತು ಎಂದು ಕೋಟ್ಯಾಂತರ ಲೆಕ್ಖದ ಐಶ್ವರ್ಯ ಸಂಪಾದನೆ ಅವ್ಯಾಹತವಾಗಿ ನಡೆಯುತ್ತಿದೆ. ನಮ್ಮ ಗುರಿ  ಬಡತನದ ನಿರ್ಮೂಲನವಲ್ಲ. ಐಶ್ವರ್ಯದ ಧ್ರುವೀಕರಣ. 

ಬಡವ ಬಲ್ಲಿದರ ನಡುವೆ ನಿತ್ಯ ನಿತ್ಯ ವಿಸ್ತರಿಸುವ ಮಹಾಕಂದರ. ಸರ್ವರಿಗೆ ಸಮಪಾಲು ಬೆಳದಿಂಗಳು ಅನ್ನುವುದು ಕೇವಲ ಆದರ್ಶದ ಮಾತಾಗಬೇಕೆ? ಸಂಪತ್ತು ನಾಚಿಕೆಯ ಸಂಗತಿಯಾಗದೆ ನಾಡಿನ ಉದ್ಧಾರವಿಲ್ಲ. ಸಿರಿವಂತರು ಕೆರೆ ಕೊಳ್ಳಗಳಂತೆ ಅಗತ್ಯಬಿದ್ದಾಗ ಹಳ್ಳಿಗೆ ನೀರುಣಿಸುವ ಟ್ರಸ್ಟಿಗಳಾಗಬೇಕೆಂದು ಪುತಿನ ಯಾವಾಗಲೂ ಹೇಳುತ್ತಿದ್ದರು. ಐಟಿಗಳ ಹದ್ದಿನ ಕಣ್ಣನ್ನೂ ತಪ್ಪಿಸಿ ನಗನಿಕ್ಷೇಪಗಳು ಕತ್ತಲ ರಕ್ಷಾ ಕೋಣೆಗಳಲ್ಲಿ ವೃದ್ಧಿಸುತ್ತಲೇ ಇವೆ. ತಾಯ ಮೊಲೆ ಹಾಲೇ ವಿಷವಾಗಿ ಕೊಲ್ಲಲೆಳಸಿದರೆ ಕಾಯಬಲ್ಲ ದೈವವನ್ನು ಎಲ್ಲಿಂದ ತರೋಣ?

ಈವತ್ತಿನ ಸಮಾಜದಲ್ಲಿ ಆತ್ಮರಕ್ಷಣೆ ಮುಖ್ಯವಾಗಿದೆಯೇ ವಿನಾ ಆರ್ತರಕ್ಷಣೆಯಲ್ಲ. ಮಹಾರಥಿ ಎಂಬ ಪರಿಕಲ್ಪನೆಯನ್ನು ನಾನೀಗ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಯಾವನು ಯುದ್ಧದಲ್ಲಿ ತನ್ನ ಸಾರಥಿಯನ್ನು, ತನ್ನ ರಥವನ್ನು, ತನ್ನ ಧ್ವಜವನ್ನು, ತನ್ನ ಕುದುರೆಗಳನ್ನು, ತನ್ನ ಸೇನೆಯನ್ನು  ಮತ್ತೂ ತನ್ನನ್ನು ರಕ್ಷಿಸಿಕೊಳ್ಳಲು ಸಮರ್ಥನೋ ಅವನು ಮಾತ್ರ ಮಹಾರಥ. ಈವತ್ತೂ ಈ ತತ್ವವನ್ನು ನಮ್ಮ ನಾಯಕರಿಗೆ ಅನ್ವಯಿಸಿ ಅರ್ಥೈಸಬೇಕಾಗಿದೆ. ಯಾರು ತನ್ನ ನೆಲೆಯನ್ನು, ನಾಡನ್ನು, ಕಾಡು ಬೆಟ್ಟಗಳನ್ನು, ಅಲ್ಲಿ ಜೀವಿಸಿವ ಮೃಗಪಕ್ಷಿಗಳನ್ನು, ತನ್ನ ಆಶ್ರಿತರನ್ನು, ಮತ್ತೂ ಕೊನೆಗೆ ತನ್ನನ್ನು ರಕ್ಷಿಸಿಕೊಳ್ಳಬಲ್ಲನೋ ಆತ ಈವತ್ತಿನ ರಾಜಧರ್ಮದ ಮಹಾರಥಿ. ಅಂಥವರನ್ನು ನಾವೀಗ ಶಬರಿ ಶ್ರದ್ಧೆಯಲ್ಲಿ ನಿರೀಕ್ಷಿಸಬೇಕಾಗಿದೆ. ನಮ್ಮ ನಾಡು ನುಡಿ ನಾಡವರನ್ನು ಕಾಯ್ದು ದೇಶದ ಅಖಂಡತ್ವವನ್ನು ಕಾಯ್ದುಕೊಳ್ಳಬೇಕಾಗಿದೆ.

          ಭಾಷಾವಾರು ಪ್ರಾಂತ್ಯ ಪ್ರಾಪ್ತಿಗಾಗಿ ಎಂತೆಂಥ ಆತ್ಮಬಲಿಗಳು ನಡೆದವು, ನಿಸ್ವಾರ್ಥ ಹೋರಾಟಗಳು ನಡೆದವು ನಾವೀಗ ನೆನೆಯಬೇಕಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಬಳ್ಳಾರಿಯ ರಂಜಾನ್ ಸಾಬ್ ಆತ್ಮತ್ಯಾಗ ಮಾಡಿಕೊಂಡರು- ತೆಲುಗು ಏಕೀಕರಣಕ್ಕಾಗಿ  ಪೊಟ್ಟಿಶ್ರೀರಾಮುಲು ಆತ್ಮಾರ್ಪಣೆ ಮಾಡಿಕೊಂಡಂತೆ. ಬರಗೂರು ರಾಮಚಂದ್ರಪ್ಪನವರ ಸಮ್ಮೇಳನಾಧ್ಯಕ್ಷ ಭಾಷಣ ಇದನ್ನು ಉಲ್ಲೇಖಿಸಿದೆ.ಕರ್ನಾಟಕದಲ್ಲಿ ವಿಲೀಕರಣಗೊಳ್ಳಲು ಈ ಕಲ್ಯಾಣ ಕರ್ನಾಟಕವು ನಡೆಸಿದ ಹೋರಾಟವೇನು ಸಾಮಾನ್ಯವಾದುದೆ? ಕಲಬುರ್ಗಿ ಪ್ರಾಂತ್ಯವು ಕನ್ನಡ ಸಾಹಿತ್ಯದ ಉಗಮಸ್ಥಲ ಎಂದು ಇತಿಹಾಸ ಬಲ್ಲವರೆಲ್ಲರಿಗೂ ಗೊತ್ತು. 

ಕನ್ನಡ ಭಾಷೆಯ ಪ್ರಥಮ ಕೃತಿ ಕವಿರಾಜಮಾರ್ಗ ಸೃಷ್ಟಿಯಾದದ್ದು ಕಲಬುರ್ಗಿ ಪ್ರಾಂತ್ಯದಲ್ಲಿ. ಕ್ರಿಸ್ತಶಕ ಎಂಟರಿಂದ ಹತ್ತನೇ ಶತಮಾನದ ವರೆಗೆ ಕರ್ನಾಟಕವನ್ನು ಆಳಿದ ರಾಷ್ಟ್ರಕೂಟರಿಗೆ ಮಲಖೇಡ ರಾಜಧಾನಿಯಾಗಿತ್ತು. ಕವಿರಾಜಮಾರ್ಗದ ಕರ್ತೃ ಶ್ರೀವಿಜಯ ರಾಷ್ಟ್ರಕೂಟ ದೊರೆ ನೃಪತುಂಗನ ಆಸ್ಥಾನ ಕವಿ. ಕವಿವರ್ಯ ಬೇಂದ್ರೆಯವರು ಹೇಳುವಂತೆ ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಬೀಡು  ಕಲ್ಯಾಣಕರ್ನಾಟಕ. ದೇವರದಾಸಿಮಯ್ಯ -ಆತನ ಪತ್ನಿ ದುಗ್ಗಳೆ, ಕೆಂಭಾವಿ ಭೋಗಣ್ಣ, ಏಕಾಂತರಾಮಯ್ಯ, ಕೋಲಿ ಶಾಂತಯ್ಯ, ಷಣ್ಮುಖ ಸ್ವಾಮಿ ಮೊದಲಾದ ಮಹನೀಯರು ಈ ಪ್ರಾಂತ್ಯಕ್ಕೆ ಸೇರಿದವರು. ಸಮೀಪದಲ್ಲಿರುವ ದೇವನೂರು ಕವಿ ಲಕ್ಷ್ಮೀಶನ ಜನ್ಮಸ್ಥಲವೆಂದು ಈಗಲೂ ಅನೇಕ ವಿದ್ವಾಂಸರು ಅಭಿಪ್ರಾಯಪಡುವರು.ದಾಸ ಸಾಹಿತ್ಯಕ್ಕೂ ಕಲಬುರ್ಗಿಯ ಕೊಡಿಗೆ ಅಸಾಮಾನ್ಯವಾದುದೇ. 

ಸುರಪುರದ ಆನಂದದಾಸ, ಮಣ್ಣೂರ ದಾಸ, ನಾಯಕಲ್ ರಾಮಾಚಾರ್ಯ ಹೀಗೆ ಅನೇಕರನ್ನು ನಾವೀಗ ನೆನೆಯಬೇಕಾಗಿದೆ. (ಹೆಚ್ಚಿನ ವಿವರಗಳಿಗೆ ಕಲಬುರ್ಗಿ ಜಿಲ್ಲೆಯ ಕವಿ-ಕಾವ್ಯ ಪರಂಪರೆ-ಸಂಪಾದಕರು: ಪ್ರಧಾನ ಸಂಪಾದಕರು- ವೀರಭದ್ರ ಸಿಂಪಿ ನೆಲೋಗಿ, ಕಲಬುರ್ಗಿ ಜಿಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ-ಸಂಪಾದಕರು:  ಪ್ರಧಾನ ಸಂಪಾದಕರು-ವೀರಭದ್ರ ಸಿಂಪಿ ನೆಲೋಗಿ, ಸಂಪಾದಕರು: ಡಾ ಇಂದುಮತಿ ಪಾಟೀಲ, ಸಹ ಸಂಪಾದಕರು- ಡಾ ಎಂ.ಎಸ್. ಸಿರವಾಳ- ಈ ಗಣ್ಯ ಕೃತಿಗಳನ್ನು ಆಸಕ್ತರು ಗಮನಿಸಬಹುದು). ಇಂಥ ಕಲ್ಬುರ್ಗಿಯಲ್ಲಿ ಆರಂಭದ ನಾಲಕ್ಕು ಶತಮಾನಗಳ ನಂತರ, ಆರುನೂರು ವರ್ಷಗಳ ಮುಸ್ಲಿಮ್ ಆಳ್ವಿಕೆಯ ಪರಿಣಾಮವಾಗಿ( ಬಹಮನಿ ಸುಲ್ತಾನರು, ಆನಂತರ ಬಿಜಾಪುರದ ಆದಿಲ್ಶಾಹಿಗಳು, ಮುಂದೆ ಹೈದ್ರಾಬಾದಿನ ನಿಜಾಮರ ಆಳ್ವಿಕೆಗೆ ಈ ಪ್ರಾಂತ್ಯವು ಒಳಪಟ್ಟಿತ್ತು)  ಉರ್ದು ಭಾಷೆಯು ಮಾಧ್ಯಮವಾಗಿದ್ದ ಕಾರಣ ಕನ್ನಡ ಸಂಪೂರ್ಣವಾಗಿ ಕಡೆಗಣಿತವಾಗಿತ್ತು. 

ಕಲಬುರ್ಗಿ(ಕಲ್ಲು ಬರಗ-ಬರಗ ಒಂದು ಧಾನ್ಯ ವಿಶೇಷ) ಗುಲ್ಬರ್ಗ(ಗುಲ್ಬರ್ಗ-ಹೂ ಎಲೆ- ಎಂದು ಪರ್ಶಿಯನ್ ಭಾಷೆಯ ನಿಷ್ಪತ್ತಿಯ ಅರ್ಥಾಂತರಕ್ಕೆ ಒಪ್ಪಿಸಿಕೊಂಡಿದ್ದು ಭಾಷೆಯ ವೈಪರೀತ್ಯದ ಪರಿಣಾಮವೇ ಸರಿ). ಕಲ್ಬುರ್ಗಿ ಜಿಲ್ಲೆಯ ವಿಮೋಚನೆಗಾಗಿ ವಿಮೋಚನಾ ಚಳುವಳಿಯ ನಾಯಕರು ನಡೆಸಿದ ಹೋರಾಟವನ್ನೂ ನಾವು ಕೃತಜ್ಞತೆಯಿಂದ ನೆನೆಯಬೇಕಾಗಿದೆ. ಇಂಥ ಕಲಬುರ್ಗಿಯಲ್ಲಿ 1888ರ ವರೆಗೆ ಮಕ್ಕಳಿಗೆ ಮಾತೃ ಭಾಷೆಯಾದ ಕನ್ನಡದಲ್ಲಿ ಶಾಲೆಗಳೇ ಇರಲಿಲ್ಲ.  ಕನ್ನಡ ಮಕ್ಕಳೂ ಆಗ ಓದುತ್ತಿದ್ದುದು ಉರ್ದು ಅಥವಾ ಮರಾಠಿ ಮಾಧ್ಯಮದಲ್ಲಿ. ಹೈದ್ರಾಬಾದ್ ಕರ್ನಾಟಕ ಕರ್ನಾಟಕದಲ್ಲಿ 1956ರಲ್ಲಿ ಏಕೀಕರಣಗೊಂಡಮೇಲೆ ಕನ್ನಡದ ಉಳಿವಿಗಾಗಿ ದೊಡ್ಡ ಹೋರಾಟವೇ ನಡೆದಿದೆ. ಕಲ್ಯಾಣ ಕರ್ನಾಟಕದಲ್ಲಿ ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಿದ ಮಹನೀಯರನ್ನು ನಾವಿಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ.ಪೂಜ್ಯ ದೊಡ್ಡಪ್ಪ ಅಪ್ಪ, ಬಿ.ಬಿ.ಚಿಮ್ಮಲಗಿ, ನರಸಿಮಹರಾವು, ಕಪಟರಾಳ ಕೃಷ್ಣ ರಾವ್, ಭೀಮಸೇನ ರಾವ್ ತವಗ, ಪೂಜ್ಯ ಭಾಲಕಿ ಚನ್ನಬಸವ ಪಟ್ಟದ ದೇವರು, ರಾಘವೇಂದ್ರಾಚಾರ್ಯ ಕುಷ್ಟಗಿ, ಅಣ್ಣಾರಾವ್ ಗಣಮುಖಿ, -ಇಂಥ ಹಿರಿಯರ ಪಟ್ಟಿ ಬಹುದೊಡ್ಡದು. ಪ್ರಾತಿನಿಧಿಕವಾಗಿ ಕೆಲವು ಹೆಸರುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನ ಲಿಟರರಿ ಫೆಸ್ಟ್‌ ಆಗಬಾರದು: ಎಚ್. ಎಸ್.ವಿ

ನಿಜಾಮರ ದಬ್ಬಾಳಿಕೆ, ಅದರಲ್ಲೂ ರಜಾಕಾರರ ಉಗ್ರಗಾಮಿ ಹಾವಳಿಗಳಿಂದ ಕನ್ನಡಿಗರು ಆಗ ಗಡಿಶಿಬಿರಗಳನ್ನು ಸ್ಥಾಪಿಸಿಕೊಂಡು ಹೋರಾಡಬೇಕಾಯಿತು. ಮತಾಂಧರಾದ ರಜಾಕಾರರ ಸಂಘಟನೆ ನಿಜಾಮರ ಸೈನ್ಯ ಮತ್ತು ಪೋಲೀಸಿಗಿಂತ ನಾಲಕ್ಕು ಪಟ್ಟು ಹೆಚ್ಚು ಇತ್ತು ಎಂಬುದು ಅದು ಹೇಗೆ ಒಂದು ಪರ್ಯಾಯ ಮಿಲಿಟಿರಿ ವ್ಯವಸ್ಥೆಯೇ ಆಗಿತ್ತು ಎಂಬುದು ನಮ್ಮ ಗಮನಕ್ಕೆ ತರುವುದು. ಅಂಥ ಸಂದರ್ಭದಲ್ಲಿ ಅಸ್ಮಿತೆಯ ರಕ್ಷಣೆಗಾಗಿ ಹುಟ್ಟಿಕೊಂಡವು ಗಡಿಶಿಬಿರಗಳು. ಇಂಥ ಆತ್ಮಜಾಗರಣೆಯ ಶಿಬಿರಗಳು, ಕನ್ನಡವನ್ನು ಉಳಿಸಿಬೆಳೆಸಲು ಶಿಕ್ಷಣ ವಲಯದಲ್ಲಿ ನಡೆದ ಮಹತ್ವದ ಪ್ರಯೋಗಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ದೇಶ ಪ್ರೇಮ, ಭಾಷಾಪ್ರೀತಿ ಮತ್ತು ರಾಜಕೀಯ ಎಚ್ಚರಗಳು ಈ ಪ್ರಾಂತ್ಯದಲ್ಲಿ ಅನೇಕ ರಾಷ್ಟ್ರಪುರುಷರ, ರಾಜಕೀಯ ಮುತ್ಸದ್ದಿಗಳ ಹುಟ್ಟಿಗೆ ಕಾರಣವಾಗಿವೆ.

ಕರ್ನಾಟಕದಲ್ಲಿ ಗಡಿವಿವಾದಗಳು ಇನ್ನೂ ಬಗೆಹರಿದಿಲ್ಲ. ಕನ್ನಡ ಪರವಾಗಿ ಬಂದ ವರದಿಗಳು ಅನುಷ್ಠಾನಕ್ಕೆ ಬಂದಿಲ್ಲ. ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಗಡಿಶಿಬಿರಗಳು ಪ್ರಜಾಪ್ರಭುತ್ವವಾದೀ ನೆಲೆಯಲ್ಲಿ ಮತ್ತೆ ಸ್ಥಾಪಿತವಾಗಬೇಕೆ ಎಂಬ ಅನಿಸಿಕೆ ಮನಸ್ಸಲ್ಲಿ ಮೂಡುತ್ತಾ ಇದೆ. ಗಡಿ ಪ್ರಾಂತ್ಯಗಳು ಬಹುಭಾಷಾ ಸಂಸ್ಕೃತಿಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆನ್ನಿಸುತ್ತಾ ಇದೆ. ಆದರೆ ಯಾವ ಭಾಷೆಯೂ ಇನ್ನೊಂದು ಭಾಷೆಯನ್ನು ಅಳಿಸಿಹಾಕಲು ಯತ್ನಿಸಬಾರದು. ಬರಗೂರು ರಾಮಚಂದ್ರಪ್ಪನವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿರುವಂತೆ ಗಡಿಗ್ರಾಮ ಮನ್ನಣೆ ದೊರೆಯದ ಕನ್ನಡಿಗರು ನೆಲೆಸಿರುವ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿರುವ ಗ್ರಾಮಗಳಿಗೆ ತುರ್ತಾಗಿ ಗಡಿಗ್ರಾಮ ಮನ್ನಣೆ ದೊರಕಬೇಕು. ಅವರು ಕನ್ನಡ ಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಬಾರದು. ಬಹುಭಾಷಾ ಸಂಸ್ಕೃತಿಯು ಯಾವಾಗಲೂ ಉಪಾಧೇಯವಾದುದೆ. ಭಾಷೆಯನ್ನೂ ಆ ಮೂಲಕ ಸಮುದಾಯಗಳನ್ನು ಒಳಗೊಳ್ಳುವುದಕ್ಕೆ ನಮಗೊದಗಿದ ಸದವಕಾಶವೆಂದೇ ಬಹುಭಾಷಾ ಸಂಸ್ಕೃತಿಯನ್ನು ನಾವು ಮಾನ್ಯ ಮಾಡಬೇಕು. ಅದರಲ್ಲೇ ಅಖಂಡ ಭಾರತದ ಹಿತವಿದೆ. 

ಬಹುತ್ವವನ್ನು ಮನ್ನಿಸುವ ಏಕೀಕರಣ ನಮ್ಮ ಈವತ್ತಿನ ಅಗತ್ಯ. ಬಹುಳ ಸಂಸ್ಕೃತಿಯನ್ನು ನಾವು ಪೋಷಿಸದೆ ಹೋದರೆ ಮುಂದಿನ ಪೀಳಿಗೆ ದೊಡ್ಡ ನಷ್ಟವನ್ನು ಅನುಭವಿಸುವುದು. ತಾಳುವಿಕೆಯೇ ತಪವಾದ ಕನ್ನಡಿಗರಿಗೆ ಸೈರಣೆಯನ್ನು ಬೋಧಿಸಬೇಕಾದ್ದಿಲ್ಲ.  ಅತಿ ಸೈರಣೆ ಆತ್ಮನಾಶಕ್ಕೆ ಎಡೆಗೊಡಬಹುದೆಂಬ ಎಚ್ಚರಿಕೆ ಮಾತನ್ನು ಮಾತ್ರ ಹೇಳಬೇಕಾಗಿದೆ.  ಒಂದು ಕಡೆ ವಲಸೆಗೆ ಅನುಮತಿ, ಇನ್ನೊಂದು ಕಡೆ ಭಾಷಾವಾರು ಪ್ರಾಂತ್ಯಗಳ ರಚನೆ ಈ ಎರಡು ಆಳದಲ್ಲಿ ವಿರುದ್ಧಮುಖೀ ನಿಲುವುಗಳಾಗಿವೆ. ಈ ಬಗ್ಗೆ ಆಳವಾದ ಚಿಂತನೆ ಮತ್ತು ಹೊಸ ಸರ್ವಹಿತಕಾರೀ ನಿಲುವುಗಳು ಅಗತ್ಯವಾಗಿವೆ. ಪ್ರಾಂತ್ಯ ಪ್ರಾಂತ್ಯಗಳ ನಡುವಿನ ಸಂಬಂಧ(ನದಿ ಗಡಿ ಶಿಕ್ಷಣ ಮಾಧ್ಯಮ ಸಮಸ್ಯೆ), ಪ್ರಾಂತ್ಯ ಕೇಂದ್ರಸರಕಾರಗಳ ಸಂಬಂಧ ಮರುವ್ಯಾಖ್ಯೆಯ ಮೂಲಕ ವಿವೇಚನೆಗೆ ಒಳಗಾಗಬೇಕು.  ಕುವೆಂಪು ಅವರು ಕೇಂದ್ರ ಮತ್ತು ಪ್ರಾಂತ್ಯ ಸಂಬಂಧವನ್ನು ತಾಯಿ ಮಕ್ಕಳ ಸಂಬಂಧವಾಗಿ ಪರ್ಯಾಲೋಚಿಸಿ ಅವುಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸುವ ಹೃದಯದ ಹಾದಿಯನ್ನು ತಮ್ಮ ಕವಿತೆಯಲ್ಲಿ ಪ್ರತಿಮೀಕರಿಸಿದ್ದಾರೆ. ಬೇಂದ್ರೆಯವರು ಪ್ರಾಂತ್ಯ ಪ್ರಾಂತ್ಯಗಳ ನಡುವೆ ಸೋದರ ಸಂಬಂಧವನ್ನು ಕಲ್ಪಿಸಿ ಪ್ರಾಂತ್ಯ ಪ್ರಾಂತ್ಯಗಳ ಸಂಬಂಧದ ವಿಷಮತೆಯನ್ನು ಪರಿಹರಿಸಿಕೊಳ್ಳುವ ಉಪಾಯ ಸೂಚಿಸಿದ್ದಾರೆ. 

ಭಾವನೆಯ ನೆಲೆಯಲ್ಲಿ ಇವು ಮಹತ್ವದ ಕಲ್ಪನೆಗಳು. ಆದರೆ ವಾಸ್ತವ ಸತ್ಯ ಆದರ್ಶದ ಮಾತುಗಳನ್ನು ಯಾವಾಗಲೂ ತಿರಸ್ಕರಿಸುತ್ತಾ ಬರುತ್ತಿದೆ. ಕೇಂದ್ರ ಪ್ರಾಂತ್ಯಗಳ ಸಂಬಂಧವನ್ನು ಕುರಿತು ಮಾತಾಡುವಾಗ ನಾವು ಬಯಸುವುದು ಸ್ವಾಯತ್ತೆಯನ್ನೇ ಹೊರತು ಪಾರತಂತ್ರ್ಯವನ್ನಲ್ಲ ಎಂದು ತಮ್ಮ ಅಧ್ಯಕ್ಷಭಾಷಣದಲ್ಲಿ ಪುತಿನ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗದೆ ಹೋದಲ್ಲಿ ರಾಜಾಜಿಯವರು ಬಹುಹಿಂದೆಯೇ ಸೂಚಿಸಿದಂತೆ ರಾಜ್ಯ ಸರಕಾರಗಳು ಕೇಂದ್ರ ವ್ಯವಸ್ಥೆಯ ಹಿಡಿತದಲ್ಲಿ ನಲುಗುವ ವಿಜೃಂಭಿತ ಕಾರ್ಪೊರೇಷನ್ ಗಳು ಆಗಿಬಿಡಬಹುದು. ಕೇಂದ್ರದ ನಿಯಂತ್ರಣ ಪ್ರಾಂತ್ಯಗಳನ್ನು ಚದುರಿಹೋದಂತೆ ಒಗ್ಗೂಡಿಸುವಲ್ಲಿ ಅಗತ್ಯ. ಬಳ್ಳಿಯಲ್ಲಿ ಪ್ರತಿಯೊಂದು ಹೂವೂ ತನ್ನಷ್ಟಕ್ಕೆ ಸಂಪೂರ್ಣವಾಗಿ ಅರಳುವಂತೆ ಪ್ರಾಂತ್ಯಗಳು ಸ್ವಾಯತ್ತತೆಯನ್ನು ಸಾಧಿಸುವುದು ಅತ್ಯಗತ್ಯ. ದೇಹದ ಯಾವ ಭಾಗ ದುರ್ಬಲವಾದರೂ ದೇಹಿ  ವಿಕಲಾಂಗಿಯೇ. ಸಮುದ್ರವನ್ನು ಸೇರಿದ ಮೇಲೂ ತಮ್ಮ ಪಾಡಿಗೆ ತಾವು ಹರಿಯುವ ನದಿಗಳ ಸ್ವಾತಂತ್ರ್ಯ ಕೇಂದ್ರ ಪ್ರಾಂತ್ಯ ಸಂಬಂಧವನ್ನು ಆದರ್ಶದ ನೆಲೆಯಲ್ಲಿ ಹಿಡಿಯಬಹುದಾದ ಅದ್ಭುತ ರೂಪಕ.

ವಾಸ್ತವ ಮತ್ತು ಆದರ್ಶಗಳ ಸಂಘರ್ಷದ ಪ್ರಸ್ತಾಪ ಮಾಡುವಾಗ ನನಗೆ ಬದುಕು ಮತ್ತು ಕಲೆಯ ನಡುವಿನ ಈವತ್ತಿನ ವಿಷಮ ನೆಲೆಯೂ ಕಾಡುವುದು. ನಮ್ಮ ಬಹುಪಾಲು ಜನ ನೋಡುತ್ತಿರುವ ಓದುತ್ತಿರುವ ಮಾಡುತ್ತಿರುವ ವಿಭಿನ್ನ ಕಲಾಪ್ರಕಾರಗಳು ಈಗ ಆತ್ಮಾಭಿವ್ಯಕ್ತಿಗಿಂತ, ಸಾಮಾಜಿಕ ಬದ್ಧತೆಗಿಂತ ಹೆಚ್ಚಾಗಿ ಹಣಮಾಡುವ ಉದ್ಯಮಗಳಾಗುತ್ತಿವೆಯೆಂಬ ಕಠೋರ ಸತ್ಯ ಎದೆಗೆಡಿಸುವಂತಿದೆ.  ಬದುಕಿನಿಂದ ಬಹು ದೂರವಿದ್ದು ಭ್ರಮೆಗಳನ್ನು ಬಿತ್ತುವ ಕಲಾಮಾಧ್ಯಮಗಳೇ ಈವತ್ತು ವಿಜೃಂಭಿಸುತ್ತಿರುವುದು. ಕನ್ನಡ ಕಲೆ ಕನ್ನಡ ಜೀವನದ ದಿಗ್ದರ್ಶಿಯಾಗಬೇಕು. ಈವತ್ತಿನ ವ್ಯಾಪಾರಿ ಕಲಾಮಾಧ್ಯಮಗಳು ಆ ಜವಾಬುದಾರಿಯನ್ನು ನಿರ್ವಹಿಸುತ್ತಿವೆಯೇ? ಬಿ.ವಿ.ಕಾರಂತ, ಗಿರೀಶ ಕಾಸರವಳ್ಳಿ ಈಗ ಬಹುಜನದ ಆಯ್ಕೆಯಲ್ಲ. 

ಕರ್ನಾಟಕದಲ್ಲಿ ಕಲೆಯು ಕನ್ನಡ ಸಂಸ್ಕೃತಿಯ ಅಭಿವ್ಯಕ್ತಿಯಾಗಬೇಕು; ಅಗ್ಗದ ಮನರಂಜನೆಯ ಸಾಧನವಲ್ಲ ಎಂದು ನಂಬುವ ಗಂಭೀರ ಕಲಾಚಿಂತನೆಯ ಹತ್ತಾರು ಕಲಾತ್ಮಕ ಚಿತ್ರಗಳು ಕನ್ನಡದಲ್ಲಿ ಈಗಲೂ ನಿರ್ಮಾಣಗೊಳ್ಳುತ್ತಿವೆ. ಈಗ ಹೊಸ ಹೊಸ ನಿರ್ದೇಶಕರು ಈ ನಿರ್ಮಾಣಗಳ ಮುಂಚೂಣಿಯಲ್ಲಿದ್ದಾರೆ. ಈ ಚಿತ್ರಗಳ ಬಿಡುಗಡೆಗಾಗಿ ಪ್ರತಿ ಜಿಲ್ಲೆಯಲ್ಲೂ ಕಿರು ಚಿತ್ರ ಮಂದಿರಗಳನ್ನು ನಿರ್ಮಿಸುವುದು ನಮ್ಮ ಸರ್ಕಾರದ ಬಹು ದೊಡ್ಡ ಹೊಣೆಗಾರಿಕೆ.  ಬೆಂಗಳೂರಿನಲ್ಲೇ ಇದ್ದ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ಅಂಥ ಉದ್ದೇಶಕ್ಕಾಗಿ ಮತ್ತೆ ಚಾಲೂ ಆಗಬೇಕು.. ಭ್ರಮೆಗಳನ್ನು ಬಿತ್ತುವ ಕ್ರೌರ್ಯವನ್ನು ವಿಜೃಂಭಿಸುವ ಭಾರತ ಬಯಸುವ ನಾಯಕತ್ವ ಎಂಥದೆಂದು ಗ್ರಹಿಸಲು ವಿಫಲವಾಗುತ್ತಿರುವ ಕಲಾವ್ಯಾಪರವು ಈವತ್ತು ನಮ್ಮನ್ನು ಆಕರ್ಷಿಸುತ್ತಿರುವ ಸರಕು. ಅವು ತೋರಿಸುವ ಕಣ್ಕುಕ್ಕುವ ವೈಭವ, ಕಲಾಕಾರರ ಉಡುಪು ಕುಣಿತ ಹಾಡು ಯಾವುದೂ ಕನ್ನಡದ ಆತ್ಮವನ್ನು ಪ್ರತಿಬಿಂಬಿಸದಾಗಿದೆ.  

ಕಲೆ ಕೇವಲ ಮನರಂಜನೆಯ ಬಾಬತ್ತೋ? ಹಣ ಹೂಡಿ ಹಣ ಬೆಳೆಯುವ ವ್ಯಾಪಾರೋದ್ಯಮವೋ ಈ ಬಗ್ಗೆ ನಮ್ಮ ಕಲಾಪ್ರಬುದ್ಧರು ಮರು ಚಿಂತನೆ ನಡೆಸಬೇಕಾಗಿದೆ. ಕಲಾತ್ಮಕ ಎಚ್ಚರ, ಸಹಜವಾದ ಆತ್ಮಾಭಿವ್ಯಕ್ತಿ ಇದ್ದೂ ಜನಪ್ರೀತಿಗಳಿಸುವುದು ಈವತ್ತಿನ ತುರ್ತು ಅಗತ್ಯ. ಪುಟ್ಟಣ್ಣ ಕಣಗಾಲ್, ಎನ್.ಲಕ್ಷ್ಮೀನಾರಾಯಣರಂಥವರು ಇಂಥ ಹೊಸದಾರಿಗೆ ತೂರುದೀಪವಾಗಬಲ್ಲರು. ಸಾಹಿತ್ಯದಲ್ಲೂ ಅಷ್ಟೆ. ಪಂಪನದ್ದು ಘನವಾದ ಕಾವ್ಯ. ಕುಮಾರವ್ಯಾಸ ವಚನಕಾರರು ದಾಸರು ಘನವಾದದ್ದನ್ನು ಜನ ತಣಿಯುವಂತೆ ಒಪ್ಪಿಸುವ ದೇಸೀ ಮಾರ್ಗ. ಇವೆರಡನ್ನೂ ಬಿಟ್ಟು ಕಲೆ ಮಾರಾಟದ ಸರಕಾಗುವುದು, ಹಣ ಬೆಳೆಯುವ ಹುನ್ನಾರವಾಗುವುದು ಕನ್ನಡ ಸಂಸ್ಕೃತಿಗೆ ಮಾರಕ.

ನಮ್ಮ ನವಯುಗದ ನಾಯಕರು ಯಾರು ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಾದುದು ಈವತ್ತಿನ  ಮೊದಲ ಅಗತ್ಯ; ನಾಯಕತ್ವದ ಹೊಣೆ ಅರಿತು ಜೀವನದ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ನಾಯಕರಾಗಿ ನಿಲ್ಲುವುದು ಎರಡನೆಯ ಗುರುತರ ಜವಾಬುದಾರಿ. ರಾಜಕೀಯ ನಾಯಕರಿರುವಂತೆ ರೈತ ನಾಯಕರು, ಯೋಧ ನಾಯಕರು, ಉದ್ಯಮಿ ನಾಯಕರು, ಸಿನಿಮಾ ನಾಯಕರು, ಕ್ರೀಡಾ ನಾಯಕರು, ಭಾಷಾಸಂಸ್ಕೃತಿ ನಾಯಕರ ಪಡೆ  ನಿರ್ಮಾಣಗೊಳ್ಳಬೇಕಾಗಿದೆ. ನಾಯಕತ್ವ ಎಂಬುದು ವ್ಯಕ್ತಿತ್ವದ ವಿಜೃಂಭಣೆಯಲ್ಲ. ಪರಹಿತ ಸಾಧನೆಯ ಗುರುತರವಾದ ಜವಾಬುದಾರಿ. ಅಂಥ ನಾಯಕರು ದೇಶದ ಘನತೆಯನ್ನು ಕಾಯಬಲ್ಲವರಾಗುತ್ತಾರೆ. ಅಂಥ ನಾಯಕರು ತಮ್ಮ ತಮ್ಮ ಭಾಷಾ ಮತ್ತು ಅಸ್ಮಿತೆಯ ರಕ್ಷಣೆಯಲ್ಲೂ ತೊಡಗುವರು. ಡಾ. ರಾಜಕುಮಾರ್ ಅಂಥವರು ನಮ್ಮ ಹೊಸ ಕಲಾವಿದರಿಗೆ ಆದರ್ಶವಾಗಬೇಕು. ಸರಳ ಉದಾಹರಣೆ ಮೂಲಕ ನನ್ನ ವಿಚಾರವನ್ನು ವಿವರಿಸುತ್ತೇನೆ: ಕ್ರಿಕೆಟ್ ಕಲಿಯೊಬ್ಬ ವಿಕೆಟ್ಟುಗಳ ರಕ್ಷಣೆ ಮಾಡಿಕೊಂಡರೆ ಸಾಲದು.  ತನ್ನ ನಡೆ-ನುಡಿ, ಚಾರಿತ್ರ್ಯ, ಸಂಗಡಿಗರ ಸ್ವಾಭಿಮಾನ ರಕ್ಷಣೆ, ಒಟ್ಟು ಪಂಗಡದ ನ್ಯಾಯಶೀಲ ತೊಡಗುವಿಕೆ-ಎಲ್ಲದರಲ್ಲೂ ತನ್ನ ನಾಯಕತ್ವವನ್ನು ಮೆರೆಯಬೇಕಾಗಿದೆ. ಗೆಲ್ಲುವುದೇ ಆಟದ ಗುರಿಯಲ್ಲ. ನೂರಕ್ಕೆ ನೂರು ಮನಸ್ಸು ಹಾಕಿ ಪ್ರಾಮಾಣಿಕವಾಗಿ ಕ್ರಿಡಾಧರ್ಮಕ್ಕೆ ಲೋಪವಾಗದಂತೆ ಆಡುವುದೇ ಕ್ರೀಡಾನಾಯಕನ ಗುರಿ. ಈ ಮಾತು ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವಂಥದ್ದು. 

ನಾನು ಕನ್ನಡವನ್ನು ಬದುಕುವುದಕ್ಕಿಂತ ನಮ್ಮ ಜನಪ್ರಿಯ ಚಲನಚಿತ್ರ ನಾಯಕ, ನಾಯಕಿ, ಕ್ರೀಡಾ ಪಟು, ಚಿತ್ರಶಿಲ್ಪಿ, ಸಂಗೀತಜ್ಞ ಕನ್ನಡವನ್ನು ಬದುಕುವುದು ಸಮುದಾಯದ ಆತ್ಮಾಭಿಮಾನವನ್ನು ತತ್ಕ್ಷಣವೇ ಊರ್ಜಿತಗೊಳಿಸಬಲ್ಲುದು. ಕ್ರಿಕೆಟ್ ಮೈದಾನದಲ್ಲಿ ನಮ್ಮ ಅನಿಲ್ಕುಂಬ್ಳೆಯೋ, ರಾಹುಲ್ ದ್ರಾವಿಡ್ಡೋ ಕನ್ನಡದಲ್ಲಿ ಕೆಲವು ತುಂಡು ಮಾತು ಹೇಳಿದಾಗಲೂ ನಮ್ಮ ಹುಡುಗರು ಸಡಗರಪಟ್ಟಿದ್ದು ರೋಮಾಂಚಿತರಾಗಿದ್ದು ನಾನು ಬಲ್ಲೆ! ಜೀವನದ ಎಲ್ಲ ರಂಗದ ನಾಯಕರೂ ಕನ್ನಡವನ್ನು ಜೀವಿಸಬೇಕೆಂಬುದು ನನ್ನ ಆಗ್ರಹ್ಪೂರ್ವಕ ಮನವಿ.ಕನ್ನಡ ಪತ್ರಿಕೆ ಓದುವ, ಕನ್ನಡ ನಾಟಕ ಸಿನಿಮಾ  ನೋಡುವ, ಕನ್ನಡ ಭಾವಗೀತೆ ಹಾಡುವ, ಕನ್ನಡದಲ್ಲಿ ಮಾತಾಡುವ ನಿತ್ಯೋತ್ಸವ ಕನ್ನಡವನ್ನು ಯಾವತ್ತೂ ಬೆಳಗುವ ದೀಪವಾಗಿ ಉಳಿಸಬಲ್ಲುದು. ಇಲ್ಲಿ ಕನ್ನಡ ಹವ್ಯಾಸಿ ರಂಗಭೂಮಿ, ಮತ್ತು ಸುಗಮ ಸಂಗೀತ ರಂಗದ ಬಗ್ಗೆ ಪ್ರಶಂಸೆಯ ಮಾತೊಂದನ್ನು ಹೇಳಲೇಬೇಕು. 

ಕರ್ನಾಟಕದಲ್ಲಿ ರಂಗಶಿಕ್ಷಣ ಕೊಡುವ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ.  ಭಾವ ಗೀತೆ ಕಲಿಸುವ ನೂರಾರು ಸುಗಮ ಸಂಗೀತ ಶಾಲೆಗಳಿವೆ. ಸಾವಿರಾರು ಮಕ್ಕಳು , ತರುಣರು ಇಂಥ ಶಾಲೆಗಳಲ್ಲಿ ಸ್ವ-ಇಚ್ಛೆಯಿಂದ ಕಲಿಯುತ್ತಿದ್ದಾರೆ. ಈ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಕೇವಲ ಕನ್ನಡ ಮಾತ್ರ! ಇದು ನಾವೆಲ್ಲಾ ಹೆಮ್ಮೆ ಪಡಬೇಕಾದ ಸಂಗತಿ. ಒತ್ತಾಯವಿಲ್ಲದೆ ಈ ಶಾಲೆಗಳಲ್ಲಿ ಕನ್ನಡ ಶಿಕ್ಷಣಮಾಧ್ಯಮವಾಗಿ ಚಾಲ್ತಿಯಲ್ಲಿದೆ. ಇನ್ನು ರಂಗೋತ್ಸವಗಳು ಬೆಂಗಳೂರು, ಮೈಸೂರು, ಧಾರವಾಡ, ಹೆಗ್ಗೋಡು, ಸಿರಿಗೆರೆ, ಸಾಣೇಹಳ್ಳಿ, ಮಲ್ಲಾಡಿಹಳ್ಳಿ, ಮಂಗಳೂರು, ದಾವಣಗೆರೆ ಹೀಗೆ ಕರ್ನಾಟಕದ ನಾನಾ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಾ ಇವೆ.  ಕನ್ನಡ ಕವಿಗಳ ಭಾವಗೀತೆಗಳ ಗಾಯನದ ಹಬ್ಬಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಾ ಇವೆ. ಕನ್ನಡ ಸಾಹಿತ್ಯ ಸಮ್ಮೇಳನದ ವೈಭವವನ್ನು ನೆನಪಿಸುವಂಥ ಸಂಭ್ರಮದ ಸುಗಮ ಸಂಗೀತ ಸಮ್ಮೇಳನಗಳನ ವೈ.ಕೆ.ಮುದ್ದುಕೃಷ್ಣರ ನೇತೃತ್ವದಲ್ಲಿ ಪ್ರತಿವರ್ಷವೂ ನಡೆಯುತ್ತಾ ಇವೆ. ಉಪಾಸನ, ಗಾಯನಗಂಗಾ ಮೊದಲಾದ ಸಂಸ್ಥೆಗಳಿಗೆ ಭಾವಗೀತಾ ಉತ್ಸವ ನಿತ್ಯೋತ್ಸವದ ವಿದ್ಯಮಾನ. ಬೇಂದ್ರೆ ಕುವೆಂಪು ಕೆ ಎಸ್ ನ ಅವರಂಥ ಕನ್ನಡದ ಮಹೋನ್ನತ ಕಾವ್ಯ ದನಿಗಳನ್ನು ಕನ್ನಡ ಜನಸಮುದಾಯದ ಹೃದಯದಲ್ಲಿ ಬಿತ್ತುವಲ್ಲಿ ನಮ್ಮ ಸುಗಮಸಂಗೀತ ಕಲಾವಿದರು ಶ್ಲಾಘ್ಯ ಕೆಲಸ ಮಾಡುತ್ತಿರುವರು. ಇನ್ನು ರಂಗ ಪಠ್ಯಗಳನ್ನು ನಮ್ಮ ಹೊಸ ಜನಾಂಗ ಎಷ್ಟರ ಮಟ್ಟಿಗೆ ಅಧ್ಯಯನ ಮಾಡುವುದೋ ತಿಳಿಯದು. ನಮ್ಮ ರಂಗಮಂದಿರಗಳಂತೂ ಪ್ರತಿ ನಿತ್ಯವೂ ಕಾರ್ನಾಡ ಕಂಬಾರ ಶ್ರೀರಂಗ ಕೈಲಾಸಂ ಮೊದಲಾದ  ನಾಟಕಕಾರರ ಕೃತಿಗಳನ್ನು ರಂಗಸ್ಥಲದಲ್ಲಿ ಪ್ರತ್ಯಕ್ಷೀಕರಿಸುವ ಘನವಾದ ಕಾರ್ಯದಲ್ಲಿ ತೊಡಗಿವೆ.  

ಕನ್ನಡದ ಮುಖ್ಯ ಕೃತಿಗಳ ಡಿಜಟಲೀಕರಣ ನಿರಂತರವಾಗಿ ಸಾಗುತ್ತಾ ಇದೆ. ಮಾಸ್ಮೀಡಿಯಾಗಳನ್ನು ಸರ್ಥಕವಾಗಿ ಕನ್ನಡದ ಅಭಿವೃದ್ಧಿಗೆ ಬಳಸಿಕೊಳ್ಳುವ ಕೆಲಸವೂ ನಡೆಯುತ್ತಾ ಇದೆ. ಕರ್ನಾಟಕದ ಹೊರಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಕನ್ನಡ ಶಾಲೆಗಳು ಇನ್ನೂ ಕಾರ್ಯಪ್ರವೃತ್ತವಾಗಿಯೇ ಇವೆ. ಕೆಲವು ಕಡೆ ಕನ್ನಡ ಸ್ನಾತಕೋತ್ತರ ಅಭ್ಯಾಸ ಕೂಡ ನಡೆಯುತ್ತಾ ಇದೆ. ಕರ್ನಾಟಕ ಮತ್ತು ಭಾರತದ ವಿಷಯ ಹಾಗಿರಲಿ, ಅಮೆರಿಕಾ, ಇಂಗ್ಲೆಂಡ್, ಸಿಂಗಪೂರ್ , ಆಸ್ಟ್ರೇಲಿಯ, ದುಬಾಯ್, ಕತಾರ್, ಬೆಹರೇನ್  ಮೊದಲಾದ ಹೊರ ದೇಶಗಳಲ್ಲೂ ಕನ್ನಡವನ್ನು ಮಕ್ಕಳಿಗೆ ಕಲಿಸುವ ಶಾಲೆಗಳಿವೆ.  ಬೇರೆ ಬೇರೆ ದೇಶಗಳ ಕನ್ನಡ ಸಂಘಗಳು ಪ್ರತಿವರ್ಷವೂ ಕನ್ನಡ ಲೇಖಕರನ್ನು ಬರಮಾಡಿಕೊಳ್ಳುತ್ತಾ ಕನ್ನಡ ಶ್ರದ್ಧೆಯನ್ನು ಬತ್ತದ ತೊರೆಯಂತೆ ರಕ್ಷಿಸಿಕೊಂಡಿವೆ. ಅಮೆರಿಕಾದಲ್ಲಿ ಇಂಗ್ಲೆಂಡಲ್ಲಿ ಸಾಹಿತ್ಯ ಸಮ್ಮೇಳನವೂ ನಡೆಯುತ್ತಾ ಇವೆ.  ಆ ದೇಶಗಳಲ್ಲಿ ಸಮರ್ಥರಾದ ಲೇಖಕರೂ ಕನ್ನಡ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದಾರೆ.  ಗ್ರಂಥ ಪ್ರಕಾಶನವನ್ನೂ ಕೈಗೊಂಡಿದ್ದಾರೆ. ಆ ಎಲ್ಲ ಅನಿವಾಸಿ ಕನ್ನಡಿಗರ ಮನಸ್ಸು ಈಗ ಕಲ್ಬುರ್ಗಿಯ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರೀಕೃತವಾಗಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.

ಬಿಸಿಲೂರಿನಲ್ಲಿ ಕನ್ನಡ ಜಾತ್ರೆ: ಸಮ್ಮೇಳನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ಹೇಳೀ ಕೇಳಿ ಇದು ಸಾಹಿತ್ಯ ಸಮ್ಮೇಳನ. ಕನ್ನಡ ಪುಸ್ತಕೋದ್ಯಮ ಮತ್ತು ಸದ್ಯದ ಸಾಹಿತ್ಯ ಸಂದರ್ಭದ ಬಗ್ಗೆ ಕೆಲವು ಮಾತುಗಳನ್ನು ಹೇಳುವುದು ನನ್ನ ಕರ್ತವ್ಯ. ಪುಸ್ತಕ ಪ್ರಕಾಶನ ಮತ್ತು ಮುದ್ರಣದ ಗುಣಮಟ್ಟ ನಿಜಕ್ಕೂ ಸಾಹಿತ್ಯಾಭಿಮಾನಿಗಳು ಹೆಮ್ಮೆ ಪಡುವಂತಿದೆ. ಇದರಲ್ಲಿ ಎರಡು ಮಾತಿಲ್ಲ. ಪುಸ್ತಕ ಪ್ರಕಾಶನವು ದಂಡಿಯಾಗಿ ಹಣ ತರುವ ದಂಧೆಯಲ್ಲ. ಆದಾಗ್ಯು ಕೇವಲ ಸಾಹಿತ್ಯ ಪ್ರೀತಿಯಿಂದ ಹತ್ತಾರು ಪ್ರಕಾಶನ ಸಂಸ್ಥೆಗಳು ಈಗ ಪ್ರಕಟಣ ಸಾಹಸದಲ್ಲಿ ತೊಡಗಿಕೊಂಡಿವೆ. ಪ್ರತಿ ವಾರವೂ ಒಂದಲ್ಲ ಒಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಬೆಂಗಳೂರಲ್ಲಂತೂ ನಡೆಯುತ್ತಲೇ ಇರುತ್ತದೆ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ, ಮನೋಹರ ಗ್ರಂಥ ಮಾಲೆ, ಸಪ್ನ ಬುಕ್ ಹೌಸ್, ಅಂಕಿತ ಪುಸ್ತಕ,  ಅಭಿನವ ಪುಸ್ತಕ, ಅಕ್ಷರ ಪ್ರಕಾಶನ, ರಾಘವೇಂದ್ರ ಪ್ರಕಾಶನ, ಮುಂತಾದ ಅನೇಕ ಪ್ರಕಟಣ ಸಂಸ್ಥೆಗಳು ಈಚಿನ ದಿನಗಳಲ್ಲಿ ನಿರಂತರವಾಗಿ ಗ್ರಂಥ ಪ್ರಕಾಶನದಲ್ಲಿ ತೊಡಗಿವೆ.   ಹೊಸ ಹೊಸ ಲೇಖಕರು (ಅವರು ಸಮಾಜದ ಬೇರೆಬೇರೆ ವಲಯಗಳಿಂದ ಬಂದಂಥವರು!ಕೇವಲ ಕನ್ನಡ ಇಂಗ್ಲಿಷ್ ಅಧ್ಯಾಪಕರಲ್ಲ) ಬರವಣಿಗೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ.  

ಕನ್ನಡ ಸಾಹಿತ್ಯದಲ್ಲೀಗ ಪ್ರವಾಹರೂಪಿಯಾದ ಸಾಹಿತ್ಯ ಚಳುವಳಿಯ ಉಕ್ಕು ಕಾಣುತ್ತಿಲ್ಲವಾದರೂ ಸಮರ್ಥರಾದ , ಬೇರೆ ಬೇರೆ ಮನೋಧರ್ಮದ ಅನೇಕ ಹೊಸ ಪೀಳಿಗೆಯ ಲೇಖಕರು ಹೊಸ ವಸ್ತು ವಿಷಯ ಹೊಸ ಸಂವೇದನೆ ಹೊಸ ಆಶಯಗಳ ಕೃತಿಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸುತ್ತಾ ಇದ್ದಾರೆ. ಆತ್ಮಶೋಧಕವಾದ ಕೃತಿಗಳೂ, ಸಮಾಜಮುಖಿಯಾದ ಕೃತಿಗಳ ಹೆಗಲಿಗೆ ಹೆಗಲು ತಾಗಿಸುತ್ತಾ ಈಗ ಪೆರೇಡು ನಡೆಸುತ್ತಾ ಇವೆ.ಈಚಿನ ದಿನಗಳಲ್ಲಿ ನನ್ನ ಓದಿಗೆ ದೊರೆತ ಕೆಲವು  ಪುಸ್ತಕಗಳನ್ನು ನೆನೆದರೂ ಹೊಸ ಜನಾಂಗದ ಕ್ರಿಯಾಶೀಲತೆಯ ಮಟ್ಟ ಮನಸ್ಸಿಗೆ ಸಮಾಧಾನ ನೀಡುವಂತಿದೆ.  ಯುವಪೀಳಿಗೆಯಲ್ಲಿ ಸಂಯುಕ್ತಾಪುಲಿಗಲ್, ರಾಜೇಂದ್ರಪ್ರಸಾದ್, ಮಂಜುನಾಯಕ ಚೆಲ್ಲೂರು, ಶಶಿ ತರೀಕೆರೆ, ಕರ್ಕಿ ಕೃಷ್ಣಮೂರ್ತಿ, ಕಾವ್ಯ ಕಡಮೆ, ಎಚ್.ಎಸ್.ಅನುಪಮ, ವಿಕ್ರಮ್ ಹತ್ವಾರ್-ರಂಥ ಆಸೆಹುಟ್ಟಿಸುವ ಲೇಖಕರು ಕಾಣಿಸಿಕೊಂಡಿದ್ದಾರೆ. ಈ ಸಾಲಿಗೆ ಸೇರಬೇಕಾದ ನನ್ನ ಕಣ್ತಪ್ಪಿ ಹೋದ ಇನ್ನೂ ಅನೇಕ ಮಂದಿ ಇರಲಿಕ್ಕೆ ಸಾಧ್ಯ. ಕಥೆ ಕಾದಂಬರಿ ಕ್ಷೇತ್ರಗಳಲ್ಲಿಯಂತೂ ನಮ್ಮ ಸಾಹಿತ್ಯದ ಬೆಳೆ ಹುಲುಸಾಗಿದೆ. ನಿರಂತರವಾಗಿ ಬೃಹದ್ ಗಾತ್ರದ ಕಾದಂಬರಿಗಳು ಪ್ರಕಟವಾಗುತ್ತಲೇ ಇವೆ. ಇದೇ ಬಗೆಯ ಮಹತ್ವಾಕಾಂಕ್ಷೆ ಅನುವಾದ ಕೃತಿಗಳಲ್ಲೂ ಕಂಡುಬರುತ್ತಿದೆ. 

ಕಳೆದ ಒಂದೆರಡು ವರ್ಷಗಳನ್ನು ನೆನೆದರೂ ಅದೆಂಥ ಹೆಮ್ಮೆ ಪಡುವ ಸಾಹಿತ್ಯ ಕೃಷಿಯನ್ನು ನಾವು ಕಂಡಿದ್ದೇವೆ! ಬಂಡಾಯ ದಲಿತ ಮುಸ್ಲಿಮ್-ಸಂವೇದನೆ, ಸ್ತ್ರೀಸಂವೇದನೆಯ ಬೆಲೆಬಾಳುವ ಸಾಹಿತ್ಯ ಮಾಲೆ ಈಚಿನ ವರ್ಷಗಳಲ್ಲಿ ಪ್ರಕಟಗೊಂಡಿವೆ. ಈಗಾಗಲೇ ಹೆಸರು ಮಾಡಿರುವ ಲೇಖಕರ ಈಚಿನ ಕೃತಿ ಸಂಪದವು ಕೂಡ ಅಭಿಮಾನ ಮೂಡಿಸುವಂತಿದೆ. ಪುರುಷೋತ್ತಮ ಬಿಳಿಮಲೆಯವರ ಕನ್ನಡ ಕಥನಗಳು, ಡಿ ಎಸ್ ನಾಗಭೂಷಣ ಅವರ ಗಾಂಧಿಕಥನ, ಶ.ಷಟ್ಟರ್ ಅವರ ರೂವಾರಿ, ಕೆ.ವಿ.ಅಕ್ಷರ ಅವರ ಶಂಕರ ವಿಹಾರ, ರಹಮತ್ ತರೀಕೆರೆಯವರ ಹಿತ್ತಲ ಜಗತ್ತು, ನರಹಳ್ಳಿ ಅವರ ಬಾ ಕುವೆಂಪು ದರ್ಶನಕ್ಕೆ -ಕಳೆದ ಕೆಲವು ತಿಂಗಳುಗಳಲ್ಲಿ ಸಾಹಿತ್ಯಾಸಕ್ತರ ಗಮನವನ್ನು ವಿಶೇಷವಾಗಿ ಸೆಳೆದಂಥ ಕೃತಿಗಳು. ನಮ್ಮ ಹಿರಿಯ ಲೇಖಕರು ಆತ್ಮಕಥೆಗಳನ್ನು ಪ್ರಕಟಿಸುತ್ತಿದ್ದಾರೆ. ಅವುಗಳಲ್ಲಿ ನಮ್ಮ ಸೋದರಿಯರು ಬರೆದ ನಿರ್ಭಿಡೆಯ ಕೃತಿಗಳು ಓದುಗ ಬಳಗದ ವಿಶೇಷ ಪ್ರಶಂಸೆಗೆ ಪಾತ್ರವಾಗಿವೆ.ನಮ್ಮ ಅನೇಕ ಮುಖ್ಯ ಲೇಖಕರ ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದಗೊಂಡು ವಿಶ್ವ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿರುವ ಹೊಸ ವಿದ್ಯಮಾನವೊಂದು ಈಗ ಚಾಲ್ತಿಗೆ ಬಂದಿದೆ. 

ವಿವೇಕ ಶಾನಭಾಗ, ವಸುಧೇಂದ್ರ, ರಾಘವೇಂದ್ರ ಪಾಟೀಲ, ಜಯಂತ ಕಾಯ್ಕಿಣಿ ಮೊದಲಾದ ನಮ್ಮ ಮಹತ್ವದ ಲೇಖಕರೀಗ ಇಂಗ್ಲಿಷ್ ಅನುವಾದಗಳಿಂದ ವಿಶ್ವ ಸಾಹಿತ್ಯರಂಗವು ಕನ್ನಡದದತ್ತ ಕಣ್ಣು ಹಾಯಿಸುವಂತೆ ಮಾಡಿರುವರು. ಜೊತೆಜೊತೆಗೆ ಕನ್ನಡದ ಅನೇಕ ಕ್ಲಾಸಿಕ್ಕುಗಳನ್ನು ಇಂಗ್ಲಿಷ್ ಭಾಷೆಗೆ ತರುವ ಸಾಹಸದಲ್ಲಿ ನಮ್ಮ ಸಮರ್ಥ ಅನುವಾದಕ ಬಳಗ ತೊಡಗಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಕುವೆಂಪು, ಬೇಂದ್ರೆ, ಪುತಿನ, ಆನಂದಕಂದ, ಕಟ್ಟೀಮನಿ ಮೊದಲಾದ ಲೇಖಕರ ಹೆಸರಲ್ಲಿ ಸ್ಥಾಪಿತವಾದ ಟ್ರುಸ್ಟುಗಳು ಬೆಲೆಬಾಳುವ ಕೃತಿಗಳ ಪ್ರಕಟಣೆಯಲ್ಲಿ ನಿರಂತರವಾಗಿ ತೊಡಗಿಕೊಂಡಿವೆ. ಬಹು ಸಂಖ್ಯೆಯಲ್ಲಿ ಹೊಸ ಕೃತಿಗಳು ಬರುತ್ತಿರುವುದರಿಂದ ನಾನು ಓದಿ ಸಂತೋಷ ಪಟ್ಟ ಕೆಲವು ಮುಖ್ಯ ಕೃತಿಗಳನ್ನು ಮಾತ್ರ  ನನಗಿಲ್ಲಿ ಪ್ರಸ್ತಾಪಿಸುವುದು ಸಾಧ್ಯವಾಗುತ್ತಿದೆ. ಇಲ್ಲಿ ಉಲ್ಲೇಖಗೊಳ್ಳಬೇಕಾದ ಇನ್ನೂ ಅನೇಕ ಹೆಸರುಗಳಿವೆ ಎಂಬುದನ್ನು ನಾನು ಬಲ್ಲೆ.

ಈವತ್ತು ಕನ್ನಡಿಗರ ಉತ್ಸವ ಕಲಬುರ್ಗಿಯಲ್ಲಿ ನಡೆಯುತ್ತಾ ಇದೆ. ಕನ್ನಡ ನಾಡು ನುಡಿಗಳ ಬಗ್ಗೆ ಕನ್ನಡಿಗರ ಅಭಿಮಾನವನ್ನು ಜಾಗೃತಗೊಳಿಸುವ ಮಹಾನ್ ವೇದಿಕೆಯಿದು. ಲೇಖಕರು, ಪ್ರಕಾಶಕರು , ಅಭಿಮಾನಿಗಳು-ಹೀಗೆ ಸರಸ್ವತೀ ದೇಗುಲದ ಮೂರೂ ಆಧಾರ ಸ್ತಂಭಗಳು- ಒಂದೇ ಅಸ್ತಿವಾರದಲ್ಲಿ ನೆಲೆಗೊಳ್ಳುವ ಈ ಸಮಾರಂಭದಲ್ಲಿ ಕನ್ನಡದ ಹೆಸರಲ್ಲಿ ಎಲ್ಲ ಧರ್ಮೀಯರೂ ಪಂಥೀಯರೂ ಪಕ್ಷೀಯರೂ ಒಂದಾಗುವರು. ಬಹುವಚನಿಗಳೂ  ಸಮಾನಸ್ಕಂಧರೂ ಆಗುವರು. ಸಾವಿರಾರು ಪುಸ್ತಕಗಳು ಮಾರಾಟವಾಗಿ ಕಲಬುರ್ಗಿಯಿಂದ ಕನ್ನಡ ಸರಸ್ವತಿಯ ರಥೋತ್ಸವ ನಾಡಿನಾದ್ಯಂತ ಮನೆಮನೆಯ ಅಭ್ಯಾಸದ ಕೋಣೆಗೆ ತಲಪುವುದು. ಎಂಥ ವೈಶಾಲ್ಯಕ್ಕೆ ಅದೆಂಥ ಪುಟ್ಟ ತಂಗುಮನೆ! ವಿಶ್ವವೇ ನಮ್ಮ ಎದೆಗೂಡಲ್ಲಿ ಇಷ್ಟದೀಪವಾಗಿ ಪ್ರತಿಷ್ಠಿತವಾಗುವ ಈ ದಿವ್ಯ ಮುಹೂರ್ತದಂದು ಕನ್ನಡ ಸೋದರ ಸೋದರಿಯರಿಗೆ ನನ್ನ ಎದೆತುಂಬಿದ ಶುಭಾಶಯಗಳು.

 

 ಗೆಲ್ಲಲಿ ಕನ್ನಡ; ಬಾಳಲಿ ಕನ್ನಡ

ನಮ್ಮೊಳ ಮಾತಿನ ಮೆಲ್ಲುಲಿ ಕನ್ನಡ!