ಮನೆ ಹಾಗೂ ಆಫೀಸ್ ಎರಡನ್ನೂ ಬ್ಯಾಲೆನ್ಸ್ ಮಾಡಲು ಉದ್ಯೋಗಸ್ಥ ಮಹಿಳೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ಸೂಪರ್ ಮಾಮ್, ಮಲ್ಟಿ ಟಾಸ್ಕರ್ ಎಂದೆಲ್ಲ ಉದ್ಯೋಗಸ್ಥ ಮಹಿಳೆಯನ್ನು ಹೊಗಳಿದರೂ ಎರಡು ದೋಣಿಯ
ಮೇಲೆ ಪ್ರಯಾಣಿಸುವ ಕಷ್ಟ ಆಕೆಗೆ ಮಾತ್ರ ಗೊತ್ತು. ಮಕ್ಕಳ ಕಡೆಗೆ ಗಮನ ನೀಡಲಾಗುತ್ತಿಲ್ಲ, ಪತಿಗೆ ರುಚಿರುಚಿಯಾದ ಅಡುಗೆ ಮಾಡಿ ಬಡಿಸಲು ಸಾಧ್ಯವಾಗುತ್ತಿಲ್ಲ ಎಂಬುದೂ ಸೇರಿದಂತೆ ಅನೇಕ ಕಂಪ್ಲೇಂಟ್‍ಗಳು ಆಕೆ
ಮನಸ್ಸಿನೊಳಗೇ ಮಂಡಿಗೆ ತಿನ್ನುತ್ತಿರುತ್ತವೆ. ಹೀಗೆ ನಂಗೆ ಅದು ಮಾಡಲು ಸಾಧ್ಯವಾಗಲಿಲ್ಲ, ಇದು ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರಿಸಿಕೊಳ್ಳುತ್ತಿರುವ ಉದ್ಯೋಗಸ್ಥ ಮಹಿಳೆಯರಿಗೆ ಗುಡ್ ನ್ಯೂಸ್‍ವೊಂದು ಕಾದಿದೆ.
ಅದೇನು ಅಂತೀರಾ? ಉದ್ಯೋಗಸ್ಥ ಮಹಿಳೆಯರು ವೃದ್ಧಾಪ್ಯದಲ್ಲಿ ಗೃಹಿಣಿಯರು ಅಥವಾ ಹಣ ಸಂಪಾದಿಸದ ಮಹಿಳೆಯರಿಗಿಂತ ಉತ್ತಮ ಆರೋಗ್ಯ ಹೊಂದಿರುವ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಾರೆ ಎಂದು ಹೊಸ
ಅಧ್ಯಯನವೊಂದು ಹೇಳಿದೆ. ಅಂದಹಾಗೇ ಇದು ಒಂದೆರಡು ವರ್ಷಗಳಲ್ಲಿ ನಡೆದ ಸಾಮಾನ್ಯ ಅಧ್ಯಯನ ಎಂದು ನೀವು ಭಾವಿಸಿದರೆ, ಖಂಡಿತಾ ತಪ್ಪು. ಬರೋಬರಿ 36 ವರ್ಷಗಳ ನಿರಂತರ ಅಧ್ಯಯನದ ಪ್ರತಿರೂಪವೇ ಈ
ಫಲಿತಾಂಶ.

ಬೆಳಗ್ಗಿನ ಗಡಿಬಿಡಿಗೆ ಬ್ರೇಕ್ ಹಾಕಲು ಹೀಗೆ ಮಾಡೋದು ಅನಿವಾರ್ಯ!

ಅಧ್ಯಯನದ ಸುತ್ತ: ಉದ್ಯೋಗಸ್ಥ ಮಹಿಳೆಯರ ವೃತ್ತಿ ಹಾಗೂ ವೈಯಕ್ತಿಕ ಜೀವನದ ಪ್ರಗತಿ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸೇರಿದಂತೆ ಅನೇಕ ವಿಚಾರಗಳ ಕುರಿತು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್ ಫಾರ್
ಡೆಮೋಗ್ರಾಫಿಕ್ ರಿಸರ್ಚ್ 36 ವರ್ಷಗಳ ಸುದೀರ್ಘ ಅಧ್ಯಯನ ನಡೆಸಿತ್ತು. 1967ರಲ್ಲಿ ಪ್ರಾರಂಭಗೊಂಡ ಈ ಅಧ್ಯಯನದಲ್ಲಿ 5,100 ಉದ್ಯೋಗಸ್ಥ ಮಹಿಳೆಯರ ಜೀವನವನ್ನು ವಿಶ್ಲೇಷಿಸಲಾಯಿತು. ಈ ಮಹಿಳೆಯರು 30-44
ವಯಸ್ಸಿನಲ್ಲಿರುವಾಗ ಅಧ್ಯಯನವನ್ನು ಪ್ರಾರಂಭಿಸಿ ಅವರು 66-80 ವಯಸ್ಸು ತಲುಪುವ ತನಕ ಅವರ ವೃತ್ತಿ, ವೈಯಕ್ತಿಕ ಜೀವನ ಹಾಗೂ ಆರೋಗ್ಯ ಮುಂತಾದ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. ಅಂತಿಮವಾಗಿ ಈ
ಅಧ್ಯಯನದ ಫಲಿತಾಂಶವನ್ನು ಪರಿಶೀಲಿಸಿದಾಗ ತಮ್ಮ ಬದುಕಿನ ಪ್ರಮುಖ ಘಟ್ಟದಲ್ಲಿ 20 ವರ್ಷಗಳ ಕಾಲ ನಿರಂತರವಾಗಿ ಉದ್ಯೋಗ ಮಾಡಿ, ಹಣ ಸಂಪಾದಿಸಿದ ಮಹಿಳೆಯರಲ್ಲಿ ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು
ಗೃಹಿಣಿಯರೂ ಸೇರಿದಂತೆ ಹಣ ಸಂಪಾದಿಸದ ಮಹಿಳೆಯರಿಗಿಂತ ಕಡಿಮೆ ಇರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಉದ್ಯೋಗದಿಂದ ನಿವೃತ್ತಿ ಪಡೆದ ಬಳಿಕ ಇವರು ಉಳಿದ ಮಹಿಳೆಯರಿಗಿಂತ ಹೆಚ್ಚು ಸಂತೋಷಕರ ಜೀವನ
ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಖಿನ್ನತೆಯೂ ಕಾಡುವುದಿಲ್ಲ:  ವೃದ್ಧಾಪ್ಯದಲ್ಲಿ ಉದ್ಯೋಗಸ್ಥ ಮಹಿಳೆಯರು ಖುಷಿಯಾಗಿರುವುದು ಮಾತ್ರವಲ್ಲ, ಖಿನ್ನತೆಗೆ ಒಳಗಾಗುವ ಪ್ರಮಾಣವೂ ಕಡಿಮೆ ಎಂದಿದೆ ಈ ಅಧ್ಯಯನ. ಬಹುಶಃ ಉದ್ಯೋಗಸ್ಥ ಮಹಿಳೆಯರು ದುಡಿಮೆಯ
ಒಂದಿಷ್ಟು ಭಾಗವನ್ನು ಉಳಿತಾಯ ಮಾಡಿರುತ್ತಾರೆ. ಈ ಹಣದ ಕಾರಣದಿಂದಾಗಿ ವೃದ್ಧಾಪ್ಯದಲ್ಲಿ ಮಕ್ಕಳು ಅಥವಾ ಇನ್ಯಾರದ್ದೋ ದುಡಿಮೆಯನ್ನು ಅವಲಂಬಿಸಬೇಕಾದ ಅಗತ್ಯವಿರುವುದಿಲ್ಲ. ಇದು ಸಹಜವಾಗಿಯೇ ಅವರಲ್ಲಿ
ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಸ್ವಾಭಿಮಾನದ ಸ್ವಾವಲಂಬಿ ಬದುಕು ನಡೆಸಲು ನೆರವಾಗುತ್ತದೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡಗಳನ್ನು ನಿಭಾಯಿಸುವುದು, ಸವಾಲುಗಳನ್ನು ಎದುರಿಸುವುದು ಅಭ್ಯಾಸವಾಗಿರುತ್ತದೆ.
ಹೀಗಾಗಿ ಚಿಕ್ಕಪುಟ್ಟ ಸಮಸ್ಯೆಗಳು ಎದುರಾದಾಗ ಅವರು ಧೈರ್ಯಗುಂದುವುದಿಲ್ಲ. ಇನ್ನು ವಿಭಿನ್ನ ಸನ್ನಿವೇಶ, ಪರಿಸರಗಳಿಗೆ ಮೊದಲಿನಿಂದಲೂ ಹೊಂದಿಕೊಂಡು ಅಭ್ಯಾಸವಿರುವ ಕಾರಣ ಬದಲಾವಣೆಯನ್ನು ಸುಲಭವಾಗಿ
ಒಪ್ಪಿಕೊಳ್ಳುತ್ತಾರೆ. ಇವೆಲ್ಲ ಕಾರಣಗಳಿಂದಾಗಿ ಅವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಗೃಹಿಣಿಯರಿಗಿಂತ ಕಡಿಮೆ ಇರಬಹುದು.

ಮಹಿಳೆಯರು ಹೆಚ್ಚು ಸಂಗಾತಿಯನ್ನು ಹೊಂದಿದ್ದರೆ ಭವಿಷ್ಯಕ್ಕೆ ಒಳ್ಳೆಯದು!

ಕಹಿ ಅನುಭವಗಳಿಂದ ಆರೋಗ್ಯಕ್ಕೆ ಹಾನಿ: ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಕಹಿ ಅನುಭವಗಳು ಆಗಿಯೇ ಆಗುತ್ತವೆ. ಇಂಥ ನೆಗೆಟಿವ್ ಅನುಭವಗಳು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎನ್ನುವುದು
ಕೂಡ ಈ ಅಧ್ಯಯನದಲ್ಲಿ ಸಾಬೀತಾಗಿದೆ. ಉದ್ಯೋಗ ಸ್ಥಳದಲ್ಲಿ ತಾರತಮ್ಯಕ್ಕೊಳಗಾದ ಮಹಿಳೆಯರು ಕಡಿಮೆ ವೃತ್ತಿ ಸಂತೃಪ್ತಿ ಹೊಂದಿರುವುದು ಕೂಡ ಕಂಡುಬಂದಿದೆ. ಇಂಥವರಲ್ಲಿ ಕಮಿಟ್‍ಮೆಂಟ್ ಕಡಿಮೆಯಿರುವ ಜೊತೆಗೆ
ವಯಸ್ಸಾಗುತ್ತಿದ್ದಂತೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುತ್ತದೆ ಎಂದು ಅಧ್ಯಯನ ಹೇಳಿದೆ.