Asianet Suvarna News Asianet Suvarna News

ಅಡಿಕೆ ಮರವೇರಿ ಔಷಧಿ ಸಿಂಪಡಿಸುವ ದಿಟ್ಟ ಮಹಿಳೆ

ಮಹಿಳೆಯರು ತಾವು ಅಬಲೆಯರಲ್ಲ, ಸಬಲೆಯರು ಎಂದು ನಿರೂಪಿಸುತ್ತಾ ಎಲ್ಲ ಕೆಲಸಗಳಲ್ಲೂ ಮುಂಚೂಣಿಗೆ ಬರುತ್ತಿರುವುದನ್ನು ನಾವು ಕಾಣುತ್ತಲೇ ಇದ್ದೇವೆ. ಸೇವೆಯಿಂದ ಸೇನೆಯವರೆಗೂ ಅವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಅಡಕೆ ಮರವೇರಿ ಮದ್ದು ಬಿಡುವ ಕೆಲಸಕ್ಕೂ ಮಹಿಳೆ ಕಾಲಿಟ್ಟಾಗಿದೆ. ಇಂತ ಸಾಹಸಮಯ ಕಾರ್ಯವನ್ನು ಸಾಧ್ಯವಾಗಿಸಿದ್ದಾರೆ ಸುಳ್ಯದ ದಿಟ್ಟ ಮಹಿಳೆ.

Women sprays chemicals too areca plants
Author
Bengaluru, First Published Aug 7, 2018, 1:30 PM IST

ಅಡಕೆ ಮರವೇರಿ ಅಡಕೆ ಕೋಯ್ಲು ಮಾಡುವುದು ಸಾಹಸದ ಕೆಲಸ. ಇನ್ನು ಔಷಧ ಸಿಂಪಡಣೆ ಮಾಡುವುದು ಅಷ್ಟೇ ಸವಾಲಿನ ಕೆಲಸ. ಸ್ವಲ್ಪ ಆಯಾಮ ತಪ್ಪಿದರೂ ಜೀವಕ್ಕೇ ಅಪಾಯ. ಇಂಥಹ ಅಪಾಯಕಾರಿ ಕೆಲಸ ಕೇವಲ ಪುರುಷರಿಂದ ಮಾತ್ರ ಸಾಧ್ಯ ಎನ್ನುವವರಿಗೆ ಇಲ್ಲ ಇದನ್ನು ಮಹಿಳೆಯೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಚಂದ್ರಲೇಖಾ.

ಸುಳ್ಯದ ಜಾಲ್ಸೂರು ಗ್ರಾಮದ ಅಡ್ಕಾರ್ ಕೋನಡ್ಕಪದವಿನ ಚಂದ್ರಲೇಖಾ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಮಾಡಿಕೊಂಡು ಮಗಳು ನಿಶ್ಮಿತಾಳೊಂದಿಗೆ ಬದುಕಿನ ಬಂಡಿ ಸಾಗಿಸುತ್ತಿದ್ದವರು. ಹೀಗಿರುವಾಗಲೇ ಮೂರು ವರ್ಷಗಳ ಹಿಂದೆ ಆಲೆಟ್ಟಿ ನಾಗಪಟ್ಟಣದಲ್ಲಿರುವ ತನ್ನ ಅಕ್ಕ ರತ್ನಾವತಿ ಮತ್ತು ಭಾವ ಆನಂದ ಗೌಡರ ಅಡಕೆ ತೋಟಕ್ಕೆ ವಿಪರೀತ ಕೊಳೆರೋಗ ಬಾಧಿಸಿದ್ದರಿಂದ ಅವರು ತತ್ತರಿಸಿಹೋಗಿದ್ದರು. ಭಾವನಿಗೆ ವಯಸ್ಸಾಗಿದ್ದು, ಅಡಕೆ ಮರಕ್ಕೆ ಏರುವಷ್ಟು ಶಕ್ತಿ ಇಲ್ಲ. ಮದ್ದು ಬಿಡಲು ಸರಿಯಾದ ಜನಗಳೂ ಸಿಗುತ್ತಿಲ್ಲ. ಈಗ ಸುಮ್ಮನೆ ಕುಳಿತರೆ ಅಡಕೆ ಮರಗಳು ನಾಶವಾಗುತ್ತವೆ. ಅಕ್ಕನ ಸಂಸಾರ ತೊಂದರೆಗೆ ಸಿಲುಕುತ್ತದೆ ಎಂದುಕೊಂಡು ಸ್ವತಃ ತಾನೇ ಮರವೇರಿ ಔಷಧ ಸಿಂಪಡಣೆಗೆ ಮುಂದಾದರು ಚಂದ್ರಲೇಖಾ.

ಬೆಳೆ ರಕ್ಷಣೆ ಅನಿವಾರ್ಯವಾಗಿತ್ತು

‘ಅಡಕೆ ತೋಟಕ್ಕೆ ಔಷಧ ಸಿಂಪಡಿಸದೆ ಅಡಕೆ ಎಲ್ಲ ಬಿದ್ದು ನಾಶ ಆಗುತ್ತಿರುವಾಗ ನೋಡಿ ಬೇಸರವಾಯಿತು. ಆಗ ಬೇರೆ ದಾರಿ ಕಾಣದೆ ನಾನೇ ಔಷಧ ಸಿಂಪಡಿಸಲು ಮುಂದಾದೆ. ಮುಂದೆ ಅದೇ ಅಭ್ಯಾಸವಾಗಿ ಕಳೆದ ಮೂರು ವರ್ಷಗಳಿಂದ ನಾನೇ ಈ ಕೆಲಸ ಮಾಡುತ್ತಿದ್ದೇನೆ. ಪ್ರಾರಂಭದಲ್ಲಿ ಭಯ, ನಾಚಿಕೆ, ಮುಜುಗರಕ್ಕಿಂತ ಅಡಕೆ ಬೆಳೆಯನ್ನು ರಕ್ಷಿಸುವುದು ಅನಿವಾರ್ಯವಾಗಿತ್ತು. ಈಗ ನನ್ನ ಕಾರ್ಯ ನೋಡಿ ಎಲ್ಲರೂ ಪ್ರಶಂಸಿಸುತ್ತಾರೆ. ಒಂದು ವಿಶೇಷವಾದ ಕೆಲಸ ಮಾಡುತ್ತಿರುವ ಖುಷಿ ಇದೆ’ ಎನ್ನುವ ಚಂದ್ರಲೇಖಾ ಮುಖ್ಯವಾಗಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸವನ್ನೂ ಮಾಡಿಕೊಂಡು ಬಂದಿದ್ದಾರೆ. 

600 ಅಡಕೆ ಮರಗಳ ಆರೈಕೆ

ತೋಟದಲ್ಲಿ ಇರುವ ೬೦೦ ಅಡಕೆ ಮರಗಳ ಸಂಪೂರ್ಣ ಆರೈಕೆ ಜವಾಬ್ದಾರಿ ಚಂದ್ರಲೇಖಾ ಅವರದ್ದೇ. ಇವುಗಳೆಲ್ಲಕ್ಕೂ ಎರಡೇ ದಿನದಲ್ಲಿ ಔಷಧ ಸಿಂಪಡಣೆ ಮಾಡಿ ಮುಗಿಸುತ್ತಾರೆ. ಇದರ ಜೊತೆಗೆ ಹತ್ತಿರದ ತೋಟಗಳಿಗೂ ಔಷಧ ಸಿಂಪಡಿಸುವ ಕೆಲಸವನ್ನೂ ಮಾಡುತ್ತಾ  ಬಂದಿದ್ದಾರೆ. ‘ತೋಟಕ್ಕೆ ಔಷಧಿ ಸಿಂಪಡಿಸುವವರು ಸಿಗುವುದು ತುಂಬ ಕಷ್ಟವಾಗಿದ್ದರಿಂದ ಅಡಕೆ ಮರವೇರುವ ಮೆಷಿನ್ ಖರೀದಿ ಮಾಡಿದ್ದೆವು. ಆದರೆ ನನಗೆ ಇದರಲ್ಲಿ ಮರವೇರಲು ಏರಲು ಸಾಧ್ಯವಾಗಿಲ್ಲ. ತೋಟವೆಲ್ಲಾ ರೋಗಕ್ಕೆ ತುತ್ತಾಗಿ ನಾಶವಾಗುವ ವೇಳೆಯಲ್ಲಿಚಂದ್ರಲೇಖಾ ನೆರವಾದಳು. ಅವಳ ಧೈರ್ಯದ ಫಲವಾಗಿ ನನ್ನ ತೋಟ ಉಳಿದಿದೆ’ ಎನ್ನುತ್ತಾರೆ ಭಾವ ಆನಂದ ಗೌಡ.

 

 

Follow Us:
Download App:
  • android
  • ios