ಇಡೀ ಒಂದು ಊರನ್ನೇ ಬದಲಿಸಿದ ಮಹಿಳೆಯರು!

women changed thier native in Belagavi
Highlights

ಗಂಡಸರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಮಹಿಳೆಯರಿಗೆ ಕೆಲಸವಿಲ್ಲ. ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸವಿಲ್ಲ, ಹೊಟ್ಟೆ ತುಂಬ ಊಟವಿಲ್ಲ. ಇದೆಲ್ಲಾ ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ೨೦೦೦ದ ಆಸು ಪಾಸಿನಲ್ಲಿ ಕಂಡು ಬಂದಿದ್ದ  ವಾಸ್ತವ. ಆಗಲೇ ಶಾರದಾ ಗೋಪಾಲ ನೇತೃತ್ವದಲ್ಲಿ ಜನ್ಮ ತಾಳಿದ್ದು ಜಾಗೃತ ಮಹಿಳಾ ಒಕ್ಕೂಟ.

ಖಾನಾಪುರ ಹೇಳಿ ಕೇಳಿ ಮಲೆನಾಡು. ತಾಲೂಕಿನ ಅರ್ಧ ಭಾಗ ಕಾಡಿನಿಂದ  ಕೂಡಿದ್ದರೆ ಮತ್ತೊಂದು ಭಾಗ ಬಯಲು. ಇಪ್ಪತ್ತು ವರ್ಷದ ಹಿಂದೆ ಎಲ್ಲವೂ ಚೆನ್ನಾಗಿಯೇ ಇತ್ತು. ಇಲ್ಲಿನ ಜನ ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು. ಇದೇ ವೇಳೆ ಮತ್ತೊಂದು ಬದಿಯಲ್ಲಿ ಅರಣ್ಯ ನಾಶ, ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿತ್ತು. 

ಕ್ರಮೇಣ ಇದು ಹೆಚ್ಚಾಗಿ ಕೆರೆ ಕಟ್ಟೆಗಳು ಬತ್ತಲಾರಂಭಿಸಿದವು. ಮಳೆಯೇ ಇಲ್ಲದೇ ಕೃಷಿ ಹೊರೆಯಾಗುತ್ತಾ ಸಾಗಿತು. ಇಲ್ಲಿನ ಬಹುತೇಕ ಮಂದಿ ಹತ್ತಿರವೇ ಇದ್ದ ಮುಂಬೈ, ಕೊಲ್ಲಾಪುರ, ಗೋವಾ, ಮೀರಜ್, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಗುಳೆ ಹೋಗಲು ಶುರು ಮಾಡುತ್ತಾರೆ. ಆಗ ಇದೆಲ್ಲವನ್ನೂ ತಡೆಗಟ್ಟಿ ಮೊದಲಿನ ಖಾನಾಪುರ ನಿರ್ಮಾಣ ಮಾಡಬೇಕು ಎಂದು 2000 ನೇ ಇಸವಿಯಲ್ಲಿ ಮನಸ್ಸು ಮಾಡಿ ಇಂದು ಅದನ್ನೆಲ್ಲಾ ಸಾಕಾರಗೊಳಿಸುವತ್ತ ಹೆಜ್ಜೆ ಹಾಕುತ್ತಿದೆ ಜಾಗೃತ ಮಹಿಳಾ ಒಕ್ಕೂಟ.

‘ಮೊದಲು ಮಹಿಳೆಯರು ಜಾಗೃತರಾಗಬೇಕು. ಅವರು ಜಾಗೃತರಾಗಿ ಗುಳೆ ಹೋಗುವುದು ನಿಂತರೆ ಮಕ್ಕಳ ವಲಸೆ ತಪ್ಪುತ್ತದೆ. ಕ್ರಮೇಣ ಪುರುಷರ ವಲಸೆಯನ್ನೂ ಇದರಿಂದ ತಡೆಯಬಹುದು. ಅದಕ್ಕಾಗಿಯೇ ನಾವು ಖಾನಾಪುರದ ಬೀಡಿ ಎಂಬ ಹೋಬಳಿ ಕೇಂದ್ರದಲ್ಲಿ ಮಹಿಳೆಯರಿಗೆ ಉಳಿತಾಯ, ಕುರಿ ಸಾಕಾಣಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆ ಸೇರಿದಂತೆ ಮತ್ತಿತರ ತರಬೇತಿ ನೀಡಿ ಆರ್ಥಿಕ ಸಬಲತೆ ಉಂಟುಮಾಡುವತ್ತ ಶ್ರಮಿಸಿದೆವು. ಸರಕಾರದ ಉದ್ಯೋಗ ಖಾತರಿಯನ್ನು ಸಮರ್ಥವಾಗಿ ಬಳಸಿಕೊಂಡು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ನೆರವಿನಿಂದ ಉದ್ಯೋಗ ನೀಡಿದೆವು.

ಇದರ ಪರಿಣಾಮ ಇಂದು ಸುತ್ತ ಮುತ್ತಲ 20  ಹಳ್ಳಿಗಳ ಮಹಿಳೆಯರು, ಪುರುಷರನ್ನು ಒಟ್ಟಾಗಿಸಿಕೊಂಡು 100 ಕ್ಕೂ ಹೆಚ್ಚು ಕೆರೆ ಪುನಶ್ಚೇತನ ಮಾಡಲಾಗಿದೆ. ಆರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಮುಂದೆಯೂ ಇಲ್ಲಿ ಮೊದಲಿದ್ದ ಮರಗಿಡಗಳ ಸೊಬಗನ್ನು ಮರುಸೃಷ್ಟಿ ಮಾಡುವ ಕನಸು ಇಟ್ಟುಕೊಳ್ಳಲಾಗಿದೆ’ ಎಂದು ತಮ್ಮ ಕಾರ್ಯದ ಬಗ್ಗೆ ವಿವರಣೆ ನೀಡುತ್ತಾರೆ ಶಾರದಾ.

ಈ ವರ್ಷದ ಕಾರ್ಯಗಳೇನು?
‘ಪ್ರಾರಂಭದಲ್ಲಿ ಇಲ್ಲಿನ ಜನಕ್ಕೆ ಗಿಡ ನೆಡಿ ಎಂದರೆ ನಗುತ್ತಿದ್ದರು. ಯಾಕೆಂದರೆ ಹುಟ್ಟಿನಿಂದಲೇ ಕಾಡು ನೋಡಿಕೊಂಡು ಬಂದ ಇವರಿಗೆ ಗಿಡ ನೆಡುವುದು ಗೊತ್ತೇ ಇಲ್ಲ. ಕಾಡು ತನ್ನಷ್ಟಕ್ಕೆ ತಾನೇ ಬೆಳೆಯುತ್ತೆ. ಅದನ್ನು ನಾವು ಬೆಳೆಸುವುದು ಆಗಿ ಹೋಗದ ಮಾತು ಎನ್ನುತ್ತಿದ್ದರು. ಆದರೆ ನಿರಂತರವಾಗಿ ಕಾಡು, ಮರಗಿಡಗಳ ನಾಶದಿಂದ, ಮೂರು ವರ್ಷ ನಿರಂತರವಾಗಿ ಬರಗಾಲ ಎದುರಾಗಿದ್ದರಿಂದ ಅವರಲ್ಲಿ ನಿಧಾನವಾಗಿ ಗಿಡ ನೆಡಬೇಕು ಎನ್ನುವ ಅರಿವು ಹುಟ್ಟಿಕೊಂಡಿತು’ ಎನ್ನುವ ಸಂಘಟನೆಯ ಪ್ರಮುಖರು. 

ಇದುವರೆಗೂ ಬೀಡಿ ಸುತ್ತಲಿನ ಶಾಲಾ ಮಕ್ಕಳು ಹಾಗೂ  ಅರಣ್ಯ ಇಲಾಖೆ ಸಹಾಯದಿಂದ ಸಮೀಪದ ಗೋಲಿಹಳ್ಳಿ ನಾಕಾ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 2000 ಬೀಜ ದುಂಡೆ ಮಾಡಿ ಹೂಳಿದ್ದಲ್ಲದೆ, ಮಲಪ್ರಭಾ ನದಿ ಮೂಲ ಸ್ಥಾನವಾದ ಕಣಕುಂಬಿ ಬಳಿ ಜಲಾನಯನ ಪ್ರದೇಶದಲ್ಲಿ ಮಹಿಳೆಯರೇ ಸೇರಿಕೊಂಡು ಗುಂಡಿ ತೆಗೆದು ಸುಮಾರು 1500 ಸಸಿ ನೆಟ್ಟು, ಸುಮಾರು ೫೦೦ ಬೀಜದುಂಡೆ ಹೂಳಿದ್ದಾರೆ.  ಅಲ್ಲದೇ ಇವರ ಈ ಕಾರ್ಯದಿಂದ ಅಂತರ್ಜಲ ಮಟ್ಟವೂ  ಏರಿಕೆ ಕಂಡಿದ್ದು, ಕೆರೆಗಳಲ್ಲಿ ನೀರು ಬೇಸಿಗೆಯಲ್ಲೂ  ಇರುವಂತಾಗಿದೆ.

ಒಂದಿಡೀ ಹೋಬಳಿ ಕೇಂದ್ರದಲ್ಲಿ ಹತ್ತಿರ  ಹತ್ತಿರ ಎರಡು ದಶಕದಿಂದ ಸದ್ದಿಲ್ಲದೇ ಮಾಡಿರುವ ಕಾರ್ಯಗಳಿಂದ ಇಂದು ಮಹಿಳೆಯರು, ಪುರುಷರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿ ಬದುಕು  ಕಟ್ಟಿಕೊಳ್ಳುವಂತಾಗಿದೆ. 

-ಪ್ರಕಾಶ ಅರಳಿ ಬೆಳಗಾವಿ 

loader