ಮೇಕೆಗೆ ಟ್ರೈನ್ ಟಿಕೆಟ್ ಪಡೆದ ಮಹಿಳೆ… ಆಕೆ ಮುಗ್ದ ನಗುಗೆ ನೆಟ್ಟಿಗರು ಫಿದಾ!
ಟ್ರೈನಿನಲ್ಲಿ ಅದೆಷ್ಟೋ ಮಂದಿ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸ್ತಾರೆ. ಎರಡು ನಿಲ್ದಾಣ ಬಂದ್ರೆ ಇಳಿಯೋದೇ, ಟಿಟಿಇ ಬರೋ ಮುನ್ನ ನಿಲ್ದಾಣ ಬಂದಿರುತ್ತೆ ಎನ್ನುವವರಿದ್ದಾರೆ. ಆದ್ರೆ ಈ ಮಹಿಳೆ ಪ್ರಾಮಾಣಿಕತೆಗೆ ಜೀವಂತ ಸಾಕ್ಷ್ಯ. ತಾನಲ್ಲದೆ ತನ್ನ ಮೇಕೆಗೂ ಆಕೆ ಟಿಕೆಟ್ ತೆಗೆದುಕೊಂಡು ಮೆಚ್ಚುಗೆ ಗಳಿಸಿದ್ದಾಳೆ.

ಸಣ್ಣ ಪಟ್ಟಣವಿರಲಿ, ಹಳ್ಳಿ ಇರಲಿ ಇಲ್ಲ ನಗರ ಪ್ರದೇಶವಿರಲಿ ಎಲ್ಲ ಕಡೆ ಪ್ರಯಾಣಿಸುವ ರೈಲು ಸದಾ ತುಂಬಿರುತ್ತದೆ. ರೈಲು ಪ್ರಯಾಣಕ್ಕೆ ಅನುಕೂಲಕರವಾದ ಸಾರಿಗೆಯಾಗಿದೆ. ಜನರು ತಮ್ಮ ಜೊತೆ ದೊಡ್ಡ ದೊಡ್ಡ ಲಗೇಜ್ ಗಳನ್ನು ರೈಲಿನಲ್ಲಿ ಆರಾಮವಾಗಿ ಕೊಂಡೊಯ್ಯುತ್ತಾರೆ. ರೈಲು ಪ್ರಯಾಣದ ವೇಳೆ ನಾವು ವಿಭಿನ್ನ ಜನರನ್ನು ನೋಡುವ ಅವಕಾಶ ಸಿಗುತ್ತದೆ. ಕೆಲವರು ಟಿಕೆಟ್ ಇಲ್ಲದೆ ರೈಲು ಹತ್ತಿದ್ರೆ ಮತ್ತೆ ಕೆಲವರು ಮನೆಯ ಎಲ್ಲ ಸಾಮಾನುಗಳನ್ನು ಹೊತ್ತು ತಂದಿರುತ್ತಾರೆ. ಇನ್ನು ಕೆಲವರು ತಮ್ಮ ಸಾಕು ಪ್ರಾಣಿಗಳೊಂದಿಗೆ ಪ್ರಯಾಣ ಬೆಳೆಸುತ್ತಾರೆ. ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿ ಎಷ್ಟು ಲಗೇಜ್ ತೆಗೆದುಕೊಂಡು ಹೋಗ್ಬೇಕೆಂಬ ನಿಯಮವಿದೆ. ಹೆಚ್ಚಿನ ಲಗೇಜ್ ಗೆ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ. ಜನರು ತಮಗೆ, ತಮ್ಮ ಲಗೇಜ್ ಗೆ ಟಿಕೆಟ್ ಶುಲ್ಕ ನೀಡಲು ಹಿಂದೇಟು ಹಾಕುವ ಸಮಯದಲ್ಲಿ ಈ ಮಹಿಳೆಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಆಕೆ ತನಗೆ ಮಾತ್ರವಲ್ಲ ತನ್ನ ಜೊತೆ ಪ್ರಯಾಣ ಬೆಳೆಸ್ತಿದ್ದ ಮೇಕೆಗೂ ಟಿಕೆಟ್ ಪಡೆದಿದ್ದಾಳೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ಈ ಮಹಿಳೆ ವಿಡಿಯೋ (Video) ವೈರಲ್ ಆಗಿದೆ. ಐಎಎಸ್ ಅವ್ನಿಶ್ ಶರಣ್ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ನೀವು ಕ್ಯೂಟ್ ಆಗಿ ಸ್ಮೈಲ್ ಮಾಡ್ತಿರುವ ಮಹಿಳೆಯನ್ನು ನೋಡ್ಬಹುದು. ಮಹಿಳೆ ತನ್ನ ಕೈನಲ್ಲಿ ಮೇಕೆ (Goat) ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಹಿಡಿದಿದ್ದಾಳೆ. ಟಿಟಿಇ ಅಲ್ಲಿಗೆ ಬಂದು ಮಹಿಳೆಯನ್ನು ಪ್ರಶ್ನೆ ಮಾಡ್ತಿರೋದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಟಿಕೆಟ್ ಇದ್ಯಾ ಎಂದು ಟಿಟಿಇ ಕೇಳ್ತಾರೆ. ಹೌದು ಎನ್ನುವ ಮಹಿಳೆ ಟಿಕೆಟ್ ತೋರಿಸುವಂತೆ ಪಕ್ಕದಲ್ಲಿರುವ ವ್ಯಕ್ತಿಗೆ ಹೇಳ್ತಾಳೆ. ಮೇಕೆಗೂ ಟಿಕೆಟ್ ತೆಗೆದುಕೊಂಡಿದ್ದೀರಾ ಎಂದು ಟಿಟಿಇ ಮತ್ತೆ ಪ್ರಶ್ನೆ ಕೇಳ್ತಾರೆ. ಅದಕ್ಕೆ ಮಹಿಳೆ ಹೌದು ಎಂದು ಉತ್ತರ ನೀಡುತ್ತಾಳೆ. ಅಲ್ಲದೆ ಟಿಕೆಟ್ ತೋರಿಸುತ್ತಾಳೆ. ಟಿಕೆಟ್ ನಲ್ಲಿ ಮೂವರಿಗೆ ಟಿಕೆಟ್ ಶುಲ್ಕ ನೀಡಿರುವುದನ್ನು ನೋಡಿದ ಟಿಟಿಇ, ಹೋ, ಮೂವರಿಗೆ ಟಿಕೆಟ್ ಖರೀದಿ ಮಾಡಿದ್ದೀರಿ ಎನ್ನುತ್ತಾರೆ. ಅದನ್ನು ಕೇಳಿದ ಮಹಿಳೆ ಮುಕ್ತವಾಗಿ ನಗೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ತನ್ನ ಮೇಕೆಗೂ ಟಿಕೆಟ್ ಖರೀದಿ ಮಾಡಿದ್ದಲ್ಲದೆ ಹೆಮ್ಮೆಯಿಂದ ಈ ವಿಷ್ಯವನ್ನು ಟಿಟಿಇಗೆ ಹೇಳಿದ ಮಹಿಳೆ. ಆಕೆ ನಗು ನೋಡಿ. ಅಧ್ಬುತವಾಗಿದೆ ಎಂದು ವ್ಯಕ್ತಿ ತನ್ನ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
ಶ್ರೀಮಂತರನ್ನೇ ಹೆಚ್ಚಾಗಿ ಕಾಡುತ್ತೆ ಈ ಚರ್ಮದ ಕ್ಯಾನ್ಸರ್, ಏಕೋ?
ಟ್ವಿಟರ್ ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಅನೇಕ ಬಾರಿ ಇದು ರೀ ಟ್ವಿಟ್ ಆಗಿದ್ದು, ನೂರಾರು ಮಂದಿ ಮಹಿಳೆ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ.
ಮೇಕೆಗೆ ಟಿಕೆಟ್ ತೆಗೆದುಕೊಂಡ ಮಹಿಳೆ ಕೆಲಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಮಹಿಳೆಗೆ ನಮನ ಸಲ್ಲಿಸಿದ್ದಾರೆ. ಆಕೆ ಕೆಲಸ ಹೃದಯ ಮುಟ್ಟಿದೆ ಎಂದು ಕಮೆಂಟ್ ಮಾಡಿದ್ದಾರೆ. ಬಡವರು ಶ್ರೀಮಂತರಿಗಿಂತ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆಂದು ಬಳಕೆದಾರನೊಬ್ಬ ಕಮೆಂಟ್ ಮಾಡಿದ್ದಾನೆ. ಇಂಥ ಪ್ರಾಮಾಣಿಕ ವ್ಯಕ್ತಿಗಳಿಂದಲೇ ದೇಶ ಮುಂದೆ ಹೋಗ್ತಿದೆ, ಅಭಿವೃದ್ಧಿ ಕಾಣುತ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಟಿಕೆಟ್ ಇಲ್ಲದೆ ಮುಂಬೈಗೆ ಪ್ರಯಾಣಿಸಿ ಈಗ ಹಿರೋಗಳಾಗಿ ಕೋಟ್ಯಾಧಿಪತಿಗಳಾದ ಅನೇಕರು ನಮ್ಮಲ್ಲಿದ್ದಾರೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
Fitness Tips: ತೂಕ ಎತ್ತೋ ವ್ಯಾಯಾಮದ ನಂತ್ರ ಕಾರ್ಡಿಯೋ ಮಾಡ್ಬಹುದಾ?
ರೈಲ್ವೆ ಇಲಾಖೆ ಈ ಮಹಿಳೆಯ ಪ್ರಾಮಾಣಿಕತೆಗೆ ಮೆಚ್ಚಿ ಸಹಾಯ ಮಾಡಬೇಕು. ಆಕೆ ನೋಡಿದ್ರೆ ತುಂಬಾ ಬಡವಳಂತೆ ಕಾಣ್ತಾಳೆ ಎನ್ನುವ ಮಾತುಗಳೂ ಕೇಳಿ ಬಂದಿದ್ದು, ಮಹಿಳೆ ನಗುವಿಗೆ ಜನರು ಕಳೆದುಹೋಗಿದ್ದಾರೆ.