ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳನ್ನು ತಡೆಯುವ ಸಲುವಾಗಿ ಈ ಮೆಲ್ಯಾನಿನ್‌ ಅಂಶವು ಹೆಚ್ಚು ಉತ್ಪತಿಯಾಗುತ್ತದೆ. ಇದರ ಪರಿಣಾಮ ನಮ್ಮ ತ್ವಚೆ ಕಪ್ಪಾಗುವದು.

ಪ್ರಶ್ನೆ:ಯಾವುದೇ ಕಾಲದಲ್ಲಿಯೂ ಬಿಸಿಲಿಗೆ ಮುಖ ಒಡ್ಡಿದರೆ ನನ್ನ ಮುಖ ಕಪ್ಪಾಗುತ್ತದೆ. ಅಲ್ಲದೆ ಸುಟ್ಟಂತಾಗಿ ನವೆ, ತುರಿಕೆಯಾಗುತ್ತದೆ. ವೈದ್ಯರು ಬಿಸಿಲಿನಲ್ಲಿ ಓಡಾಡಬೇಡಿ ಎನ್ನುತ್ತಾರೆ. ಆದರೆ, ಬಿಸಿಲಿನಲ್ಲಿ ಓಡಾಡದೆ ಇರಲು ಸಾಧ್ಯವಿಲ್ಲ. ಇದಕ್ಕೆ ಶಾಶ್ವತ ಪರಿಹಾರವಿಲ್ಲವೆ?
- ತ್ರೆಜೇಶ್‌, ಮಲ್ಲಸಂದ್ರ

ಉತ್ತರ: ನಿಮ್ಮ ಸಮಸ್ಯೆ ಏನೆಂದರೆ ಸನ್‌ ಟ್ಯಾನ್‌. ಸೂರ್ಯನ ಕಿರಣಗಳಲ್ಲಿ ಅತಿನೇರಳೆ ಕಿರಣಗಳು ಇರುತ್ತವೆ. ಈ ಕಿರಣಗಳು ನಮ್ಮ ತ್ವಚೆಯ ಕೋಶಗಳನ್ನು ಘಾಸಿಗೊಳಿಸಿ, ನವೆ ಉಂಟು ಮಾಡಿ, ಚರ್ಮವು ಸುಟ್ಟಂತಾಗುವಂತೆ ಮಾಡುವವು, ಅಲ್ಲದೆ ಯಾವಾಗ ಈ ಕಿರಣಗಳಿಗೆ ಅತಿ ಹೆಚ್ಚು ತ್ವಚೆಯ ತೆರೆದುಕೊಂಡಾಗ ಚರ್ಮದ ಕ್ಯಾನ್ಸರ್‌ ಸಹ ಉಂಟಾಗಬಹುದು. ಈ ಕಾರಣದಿಂದಲೆ, ನಮ್ಮ ಶರೀರವು ಇವುಗಳನ್ನು ತಡೆಯಲೆಂದು, ಒಂದು ವಿಶಿಷ್ಟಪ್ರಕ್ರಿಯೆ ತೊಡಗಿಕೊಳ್ಳುತ್ತದೆ. ಅದೆ ಮೆಲ್ಯಾನೊಜೆನೆಸಿಸ್‌ ಅಂದರೆ ಸನ್‌ ಟ್ಯಾನ್‌. ಮೆಲ್ಯಾನಿನ್‌ ಎಂಬುದು ನಮ್ಮ ತ್ವಚೆಗೆ ದಟ್ಟ(ಕಪ್ಪು) ಬಣ್ಣ ನೀಡುವ ಒಂದು ರಾಸಾಯನಿಕ ಘಟಕ. ಈ ಮೆಲ್ಯಾನಿನ್‌ ಅಂಶವು ಕಡಿಮೆ ಇದ್ದಲ್ಲಿ ತ್ವಚೆಯ ಬಣ್ಣ ಬಿಳಿಯಾಗಿರುವುದು. ಈ ಅಂಶವು ಹೆಚ್ಚಾದಂತೆ ತ್ವಚೆಯ ಬಣ್ಣ ದಟ್ಟ(ಕಪ್ಪು) ವಾಗುತ್ತ ಹೋಗುವದು. ಯಾವಾಗ ನಾವು ಸೂರ್ಯನ ಕಿರಣಗಳಿಗೆ ಹೆಚ್ಚು ಕಾಲ ಒಡ್ಡಿಕೊಳ್ಳುತ್ತೇವೆಯೊ, ಆಗ ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳನ್ನು ತಡೆಯುವ ಸಲುವಾಗಿ ಈ ಮೆಲ್ಯಾನಿನ್‌ ಅಂಶವು ಹೆಚ್ಚು ಉತ್ಪತಿಯಾಗುತ್ತದೆ. ಇದರ ಪರಿಣಾಮ ನಮ್ಮ ತ್ವಚೆ ಕಪ್ಪಾಗುವದು. ಅಂದರೆ ಸಂರಕ್ಷಿಸಲ್ಪಡುವುದು.

ಕಪ್ಪಾಗದಂತಿರಲು ಹೀಗೆ ಮಾಡಿ:
ಅತಿ ಪ್ರಕಾಶಮಾನವಾದ ಸೂರ್ಯ ಕಿರಣಗಳಿಗೆ ಹೆಚ್ಚು ನಮ್ಮನ್ನು ಒಡ್ಡದಿರುವದು, ಮಾಸ್ಕ್ ಹಾಕುವದು, ಛತ್ರಿಗಳನ್ನು ಬಳಸುವದು, ಸನ್‌ ಕೋಟ್‌ ಹಾಕುವುದು. ಸನ್‌ ಸನ್‌ ಕ್ರೀಮ್‌'ಗಳನ್ನು ಇಲ್ಲವೆ, ಸನ್‌ ಪೊಟೆಕ್ಷನ್‌ ಫ್ಯಾಕ್ಟರ್‌ ಇರುವ ಜೆಲ್‌, ಲೋಶನ್‌, ಕ್ರೀಮ್‌ ಬಳಸುವುದು. ಅಲೊವೆರಾ ಕ್ರೀಮ್‌, ಲೋಶನ್‌ಗಳನ್ನು ಉಪಯೊಗಿಸುವದು. ಮನೆಯಲ್ಲಿ ನೈಸರ್ಗಿಕವಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳು, ಜತೆಗೆ ನಿತ್ಯ ಸ್ನಾನಕ್ಕೆ 10 ನಿಮಿಷ ಮೊದಲು ಹಾಲಿನಿಂದ ಮಸಾಜ್‌, ಜೇನುತುಪ್ಪವನ್ನು ಟ್ಯಾನ್‌ ಆದ ಜಾಗದಲ್ಲಿ ಲೇಪಿಸಿ, 20 ನಿಮಿಷ ಬಿಟ್ಟು ತೊಳೆಯುವುದು. ಟೊಮ್ಯಾಟೊ ರಸವನ್ನು, ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಲೇಪಿಸಿ. ಮೊಸರು, ಲೊಳೆಸರ, ಅರಿಶಿನ ಬೆರೆಸಿ ಲೇಪಿಸಿ, ಹೆಚ್ಚು ನೀರನ್ನು ಸೇವಿಸಿ, ಆ್ಯಂಟಿಆಕ್ಸಿಡೆಂಟ್‌ ಇರುವ ಹಣ್ಣು, ಆಹಾರವನ್ನು ಸೇವಿಸಿ ಇದನ್ನು ತಡೆಗಟ್ಟಬಹುದಾಗಿದೆ.

- ಡಾ ಪೂರ್ಣಿಮಾ ರವಿ, ಚರ್ಮರೋಗ ತಜ್ಞರು
(epaper.kannadaprabha.in)