ಸಾಮಾನ್ಯವಾಗಿ ಪ್ರತಿ ಹೆಣ್ಣಿನ ಸ್ತನಗಳಲ್ಲಿಯೂ ಸ್ವಲ್ಪವಾದರೂ ಗಾತ್ರ ವ್ಯತ್ಯಾಸವಿರುತ್ತದೆ. ಕೆಲವರಿಗೆ ಅನುಭವಕ್ಕೆ ಬರುವಷ್ಟು ಇದ್ದರೆ, ಮತ್ತೆ ಕೆಲವರಿಗೆ ಗೊತ್ತೇ ಆಗದಷ್ಟು ವ್ಯತ್ಯಾಸವಿರುತ್ತದೆ. ತುಸು ವಿಪರೀತವೆನಿಸುವಷ್ಟು ವ್ಯತ್ಯಾಸ ಕಂಡರೂ ಈ ವಿಷಯದಲ್ಲಿ ಗಾಬರಿಯಾಗೋ ಅಗತ್ಯವಿಲ್ಲವೆನ್ನುತ್ತಾರೆ ತಜ್ಞರು. ಆದರೂ...?

ಶೇ.80ರಷ್ಟು ಮಹಿಳೆಯರಲ್ಲಿ ಸ್ತನ ಗಾತ್ರ ವ್ಯತ್ಯಾಸವಿರುತ್ತದೆ ಎನ್ನುತ್ತದೆ ಸಂಶೋಧನೆ. ಆದರೆ, ಇದರಿಂದ ಯಾವುದೇ ತೊಂದರೆಯೂ ಇರುವುದಿಲ್ಲ. ಅದರಲ್ಲಿಯೂ ಹೆಣ್ಣು ಮಕ್ಕಳು ಮುಟ್ಟಾಗುವ ಸಮಯದಲ್ಲಿ ಇಂಥ ಬದಲಾವಣೆ ತುಂಬಾ ಸಹಜವಾದದ್ದು. ಬೆಳವಣಿಗೆಯ ವಯಸ್ಸಿನಲ್ಲಿ ಆಗುವ ಕೆಲವು ಕಾರಣಗಳಿಂದಲೂ ಈ ವ್ಯತ್ಯಾಸ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

 

ಹಾಲುಣಿಸುವ ತಾಯಂದಿರಲ್ಲಿ ಈ ವ್ಯತ್ಯಾಸ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಒಂದೇ ಮೊಲೆ ಹಾಲುಣಿಸುತ್ತಿದ್ದರಂತೂ ಇದು ಬೇಗನೆ ಗಮನಕ್ಕೆ ಬರುತ್ತದೆ. ಮಗು ಹಾಗೂ ತಾಯಿ ಇಬ್ಬರ ದೃಷ್ಟಿಯಿಂದಲೂ ಎರಡೂ ಸ್ತನಗಳಲ್ಲಿ ಹಾಲುಣಿಸುವುದನ್ನು ರೂಢಿಸಿಕೊಂಡರೆ ಒಳ್ಳೆಯದು. ಇದನ್ನು ಬಿಟ್ಟು ಈ ಸಮಸ್ಯೆಗೆ ಬೇರೆ ಯಾವುದೇ ಔಷಧಿಯಿಲ್ಲ.

ಯಾವಾಗ ಅಲರ್ಟ್ ಆಗಿರಬೇಕು? ಆದರೆ,ಸ್ತನದಲ್ಲಿ ಯಾವುದಾದರೂ ಗೆಡ್ಡೆಯಂಥ ಬೆಳವಣಿಗೆಗಳು ಕಂಡು ಬಂದರೆ, ತಕ್ಷಣವೇ ವೈದ್ಯರನ್ನು ಕಾಣುವುದೊಳಿತು. ಇದು ಸ್ತನ ಕ್ಯಾನ್ಸರ್‌ ಲಕ್ಷಣವೂ ಆಗಿರಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಹಾಗೂ ಔಷಧಿಗಳಿಂದ ಇದನ್ನು ಗುಣಪಡಿಸಬಹುದು. ಕೆಲವೊಮ್ಮೆ ಬಿದ್ದು ಗಾಯಗಳಾದರೆ, ಅಲ್ಲಿಯೇ ರಕ್ತು ಹೆಪ್ಪು ಗಟ್ಟಿ, ಗೆಡ್ಡೆಯಂಥ ಬೆಳವಣಿಗೆಗಳು ಕಾಣಿಸಬಹುದು. ಆ ಕ್ಷಣದಲ್ಲಿ ವಾಸಿಯಾದಂತೆ ಕಂಡರೂ, ಭವಿಷ್ಯದಲ್ಲಿ ಸಮಸ್ಯೆ ತಲೆದೂರುವ ಸಾಧ್ಯತೆಗಳಿರುತ್ತವೆ. ಆ ಕಾರಣದಿಂದ ಇಂಥ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸಿ, ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕೆಲವೊಮ್ಮೆ ವಂಶಪಾರಂಪರ್ಯವಾಗಿಯೂ ಈ ಸಮಸ್ಯೆ ಕಾಡಬಹುದಾಗಿದ್ದು, ಯಾವುದಕ್ಕೂ ಸ್ತನದ ಆರೋಗ್ಯದ ಬಗ್ಗೆ ಜಾಗರೂಕರಾಗಿಬೇಕು.

**ಲೈಂಗಿಕ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಪ್ರತಿಯೊಬ್ಬ ಮನುಷ್ಯನನ್ನೂ ಕಾಡುತ್ತದೆ. ಅದಕ್ಕೆ ಚಿಂತಿತರಾಗುವ ಅಗತ್ಯವಿಲ್ಲ. ಅಲ್ಲದೇ ಹೇಳಿ ಕೊಳ್ಳಲು ಸಂಕೋಚವಾಗುವುದರಿಂದ 'ಲೈಂಗಿಕ ಸಮಸ್ಯೆಗಳಿಗೆ ಸೂಕ್ತ ಔಷಧಿ ಕೊಡುತ್ತೇವೆ...' ಎಂದು ರಸ್ತೆ ಬದಿಗಳಲ್ಲಿ ಬೋರ್ಡ್ ಹಾಕಿ ಕೊಳ್ಳುವ ನಕಲಿ ವೈದ್ಯರ ಬಳಿಯೂ ಹೋಗಬೇಡಿ. ಜೀವನ ಶೈಲಿಯಲ್ಲಿ ತುಸು ಬದಲಾವಣೆ, ಅಲ್ಲದೇ, ನೈರ್ಮಲೀಕರಣದೆಡೆಗೆ ಹೆಚ್ಚು ಒತ್ತು ನೀಡುವುದರಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ನೆನಪಿರಲಿ.