Asianet Suvarna News Asianet Suvarna News

ದೇವರನ್ನು ನೋಡುವ ಆಸೆ ಯಾರಿಗಿದೆ!

ನಂಬಿಕೆ ಮತ್ತು ದೇವರು ಒಳಗಿಲ್ಲದೇ ಹೋದರೆ ಹೊರಗೆ ಸಿಗಲು ಸಾದ್ಯವಿಲ್ಲ. ಒಳಗೆ ಕಾಣಿಸದೇ ಇದ್ದದ್ದು ಹೊರಗೆ ಹೇಗೆ ಕಾಣಿಸೀತು? ಅಂತರಂಗದಲಿ ಹರಿಯ ಕಾಣದವನ್ನು ಹುಟ್ಟುಕುರುಡು ಅನ್ನುವ ಮಾತು ಅರ್ಥಪೂರ್ಣವಾಗುವುದು ಹೀಗೆ. ಒಳಗಿಲ್ಲದ್ದು ಹೊರಗಿರುವುದುಲ್ಲ. ಹೊರಗಿದ್ದದ್ದು ಒಳಗಿರುವುದಿಲ್ಲ. ಒಳಗು ಹೊರಗಿನ ಅಂತರ ನಾವಷ್ಟು ಕೊಂದಷ್ಟು ಕಿರಿದಾಗಿರುವುದಿಲ್ಲ.

 

Who has a desire to see god?
Author
Bengaluru, First Published Aug 6, 2018, 11:14 AM IST

ಒಂದು ವಯಸ್ಸಿನಲ್ಲಿ ಎಲ್ಲರನ್ನೂ ಕಾಡುವ ಪ್ರಶ್ನೆ ಇದು. ಈ ಪ್ರಶ್ನೆಗೆ ಉತ್ತರವಾಗಿ ಆಸ್ತಿಕರು ಗಾಳಿಯ ಉದಾಹರಣೆ ಕೊಡುತ್ತಾರೆ. ಗಾಳಿ ಇದೆಯೋ ಇಲ್ಲವೋ? ನಮಗೆ ಕಾಣಿಸುವುದಿಲ್ಲ ಆದರೂ ಗಾಳಿ ಇದೆಯಲ್ಲ. ಹಾಗೆಯೇ ದೇವರಿದ್ದಾನೆ ಎಂದು ನೂರೆಂಟು ವಾದಗಳೊಂದಿಗೆ ದೇವರ ಅಸ್ತಿತ್ವವನ್ನು ಸಾಬೀತು ಮಾಡಲು ನೋಡುತ್ತಾರೆ. ದೇವರಿಲ್ಲ ಅನ್ನುವವರೂ ತಮ್ಮದೇ ವಾದ ಮಂಡಿಸುತ್ತಾರೆ. ಯಾವತ್ತೂ ತಾವು ನೋಡಿಲ್ಲದ, ಇದ್ದಾನೋ ಇಲ್ಲವೋತಿಳಿಯದ, ದೇವರನ್ನು ನಿರಾಕರಿಸಲಿಕ್ಕೂ ಸ್ಥಾಪನೆ ಮಾಡಿಕೊಳ್ಳಲಿಕ್ಕೂ ನಮಗೆ ನೂರಾರು ಕಾರಣಗಳು ಸಿಗುತ್ತವೆ.

ಆದರೆ, ದೇವರನ್ನು ಒಮ್ಮೆಯಾದರೂ ನೋಡಬೇಕು ಅಂತ ಆಸೆಪಡುವವರು ಯಾರಾದರೂ ಇದ್ದಾರಾ? ಯಾಕಿಲ್ಲ, ನಾವೆಲ್ಲ ದೇವರನ್ನು ನೋಡುವ ಆಶೆಯುಳ್ಳವರೇ, ಅದಕ್ಕಾಗಿಯೇ ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗುತ್ತೇವೆ. ದೇವರ ಫೋಟೋ ಮನೆಯಲ್ಲಿದೆ, ದೇವರ ಕೋಣೆಯಲ್ಲಿ ದೇವರ ಮೂರ್ತಿಯಿದೆ. ಎಷ್ಟೋ ಸಲ ದೇವರನ್ನು ನೋಡುವುದಕ್ಕೆಂದೇ ಬೇರೆ ಬೇರೆ ಊರುಗಳಿಗೂ ತೀರ್ಥಯಾತ್ರೆ ಹೋಗಿ ಬರುತ್ತೇವೆ. ದೇವರನ್ನು ನೋಡುವ ಆಶೆಯಿಲ್ಲದವರು ಯಾರಾದರೂ ಇರಲಿಕ್ಕೆ ಸಾಧ್ಯವೇ ಎಂದು ಎಲ್ಲರೂ ಹೇಳುತ್ತಲೇ ಇರುತ್ತಾರೆ.

ಅಲ್ಲಿಗೆ ಹೋದಾಗ ಅವರು ದೇವರನ್ನು ನೋಡುವುದಿಲ್ಲ. ಅವರಿಗೆ ಕಾಣಿಸುವುದು ದೇವರ ಮೂರ್ತಿ ಮಾತ್ರ. ನಾವು ಮನುಷ್ಯರನ್ನು ಭೇಟಿಯಾಗುವ ಮುಂಚೆ ಅವರಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇವೆ. ಇಂತಿಂಥಾ ದಿನ ಬರುತ್ತೇವೆ ಎಂದು ಮೊದಲೇ ಹೇಳುತ್ತೇವೆ. ಆ ದಿನಾಂಕ ಮತ್ತು ಹೊತ್ತಿಗೆ ಸರಿಯಾಗಿ ಹೋಗಿ ಅವರನ್ನು ನೋಡುತ್ತೇವೆ.

ಒಂದು ವೇಳೆ ನಾವು ಯಾರನ್ನೋ ನೋಡಲು ಹೋದಾಗ, ಅವರ ಬದಲು ಅವರ ಫೋಟೋ ಮಾತ್ರ ಇದ್ದರೆ, ನೋಡಿಕೊಂಡು ಸಂತೋಷವಾಗಿ ವಾಪಸ್ಸು ಬರುತ್ತೇವಾ? ನಿಮ್ಮ ಫೋಟೋ ನೋಡಲಿಕ್ಕಲ್ಲ ನಾವು ಬಂದಿದ್ದು ಅಂತ ಸಿಟ್ಟು ಮಾಡಿಕೊಳ್ಳುವುದಿಲ್ಲವಾ? ಯಕಶ್ಚಿತ್ ಮನುಷ್ಯರನ್ನೇ ಲೈವ್ ಆಗಿ ನೋಡಬೇಕು ಅಂತ ಆಸೆಪಡುವ ನಾವು ದೇವರನ್ನೇಕೆ ಫೋಟೋದಲ್ಲೋ ಮೂರ್ತಿರೂಪದಲ್ಲೋ ನೋಡಿ ತೃಪ್ತಿಪಡುತ್ತೇವೆ. ಯಾಕೆ ದೇವರನ್ನು ನಿಜವಾಗಿಯೂ ನೋಡಿ ಮಾತಾಡಬೇಕು ಅಂತ ನಮಗ್ಯಾರಿಗೂ ಅನ್ನಿಸುವುದಿಲ್ಲ.

ದೇವರನ್ನು ನೋಡುವುದು ಹೇಗೆ ಅಂತ ನಮಗೆ ಗೊತ್ತಿಲ್ಲ ಅಂತೇನಲ್ಲ. ತಪಸ್ಸು ಮಾಡಿದರೆ ದೇವರು ಪ್ರತ್ಯಕ್ಷ ಆಗುತ್ತಾನೆ ಎನ್ನುತ್ತಾರೆ. ರಾಕ್ಷಸರೂ ಋಷಿಗಳೂ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡು ಕಣ್ಮುಂದೆ ತಂದುಕೊಂಡ ಉದಾಹರಣೆಗಳಿವೆ. ನಮಗೆ ಅವೆಲ್ಲ ಕಥೆಗಳ ಥರ ಕಾಣಿಸುತ್ತವೆ. ನಾವೇ ಆ ಕತೆಗಳನ್ನು ಪೂರ್ತಿ ನಂಬುವುದಿಲ್ಲ. ಅಷ್ಟಕ್ಕೂ ದೇವರನ್ನು ಕೂಡ ನಾವು ಪೂರ್ತಿ ನಂಬುವುದಿಲ್ಲ. ತಪಸ್ಸು ಮಾಡಿದರೆ ದೇವರು ಪ್ರತ್ಯಕ್ಷ ಆಗುತ್ತಾನೆ ಅನ್ನುವ ನಂಬಿಕೆ ಎಷ್ಟು ಮಂದಿಗಿದೆ? ಎಂತೆಂಥಾ ಸಾಹಸಗಳನ್ನು ಮಾಡುವವರು ಯಾಕೆ ತಪಸ್ಸಿಗೆ ಕೂರುವುದಿಲ್ಲ. ಯಾಕೆ ದೇವರನ್ನು ಒಮ್ಮೆ ಕಂಡುಬಿಡೋಣ ಅಂತ ಪ್ರಯತ್ನ ಮಾಡುವುದಿಲ್ಲ. ಕಾರಣ ಇಷ್ಟೇ: ನಮಗೆ ನಮ್ಮ ಮೇಲೇ ನಂಬಿಕೆ ಇಲ್ಲ. ತಪಸ್ಸನ್ನು ಕೂಡ ಸರಿಯಾಗಿ ಮಾಡುತ್ತೇವೆಂಬ ಕನಿಷ್ಠ ನಂಬಿಕೆಯೂ ನಮಗಿಲ್ಲ. ನಮಗೆಲ್ಲಿ ದೇವರು ಕಾಣಿಸುತ್ತಾನೆ ಎಂಬ ಅಪನಂಬಿಕೆ ಇರುವುದರಿಂದಲೇ ನಾವು ತಪಸ್ಸಿಗೆ ಕೂರುವುದಕ್ಕೆ ಅಂಜುತ್ತೇವೆ. ದೇವರು ಇದ್ದಾನೆ ಎಂಬ ಪೂರ್ಣ ಭರವಸೆಯಾಗಲೀ, ಇದ್ದರೂ ಆತ ತಪಸ್ಸಿಗೆ ಒಲಿಯುತ್ತಾನೆ ಅಂತಾಗಲೀ, ಒಲಿದರೂ ತನಗೆ ಕಾಣಿಸಿಕೊಂಡಾನು ಎಂಬ ನಂಬಿಕೆಯಾಗಲೀ ನಮಗಿಲ್ಲವೇ ಇಲ್ಲ. ಹೀಗಾಗಿ ನಾವು ದೇವರೆಂದರೆ ಮೂರ್ತಿ, ಫೋಟೋ, ದೇವಸ್ಥಾನದಲ್ಲಿರುವ ಶಿಲೆ, ಸಂಕೇತ ಅಂತೆಲ್ಲ ಅಂದುಕೊಂಡಿದ್ದೇವೆ. ದೇವರನ್ನು ನೋಡಲಿಕ್ಕೆಂದು ದೇವಸ್ಥಾನಗಳಿಗೆ ಹೋಗುತ್ತಿರುತ್ತೇವೆ. ಅಷ್ಟಕ್ಕೂ ನಾವಲ್ಲಿಗೆ ಹೋಗುವುದು ದೇವರನ್ನು ನೋಡುವುದಕ್ಕೋ ದೇವರಿಲ್ಲ ಅಂತ ಖಾತ್ರಿ ಪಡಿಸಿಕೊಳ್ಳುವುದಕ್ಕೋ ಅನ್ನುವುದೇ ನಮಗೆ ಸ್ಪಷ್ಟವಿಲ್ಲ. ನಂಬಿಕೆ ಮತ್ತು ದೇವರು ಒಳಗಿಲ್ಲದೇ ಹೋದರೆ ಹೊರಗೆ ಸಿಗಲು ಸಾಧ್ಯವಿಲ್ಲ. ಒಳಗೆ ಕಾಣಿಸದೇ ಇದ್ದದ್ದು ಹೊರಗೆ ಹೇಗೆ ಕಾಣಿಸೀತು? ಅಂತರಂಗದಲಿ ಹರಿಯ ಕಾಣದವನು ಹುಟ್ಟುಕುರುಡ ಅನ್ನುವ ಮಾತು ಅರ್ಥಪೂರ್ಣವಾಗುವುದು ಹೀಗೆ. ಒಳಗಿಲ್ಲದ್ದು ಹೊರಗಿರುವುದಿಲ್ಲ. ಹೊರಗಿದ್ದದ್ದು ಒಳಗಿರುವುದಿಲ್ಲ. ಒಳಗು ಹೊರಗಿನ ಅಂತರ ನಾವಷ್ಟುಕೊಂದಷ್ಟು ಕಿರಿದಾಗಿರುವುದಿಲ್ಲ.

Follow Us:
Download App:
  • android
  • ios