ರಾತ್ರಿ ಪಾಳಿ ಮಾಡಿದ್ರೆ ಲೈಂಗಿಕ ಹಾರ್ಮೋನ್‌ಗೆ ಕುತ್ತು...!
ಮನುಷ್ಯ ಆರೋಗ್ಯವಾಗಿರಬೇಕೆಂದರೆ ರಾತ್ರಿ ಮಲಗಿ, ಬೆಳಗ್ಗೆ ಏಳಬೇಕು. ಆದರೆ, ಅದು ಉಲ್ಟಾ ಆದಾಗ ಸಹಜವಾಗಿಯೇ ಅನಾರೋಗ್ಯ ಕಾಡುತ್ತೆ. ಅದರಲ್ಲಿಯೂ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡುವುದು ಒಳ್ಳೆಯದಲ್ಲ. ಏಕೆ?
ಮಹಿಳೆಯರು ಮನೆಯಲ್ಲಿಯೇ ಇರಲಿ, ಉದ್ಯೋಗಸ್ಥರೇ ಆಗಿರಲಿ. ಅನೇಕ ಕಾರಣಗಳಿಂದ ಆರೋಗ್ಯದಲ್ಲಿ ಏರು ಪೇರುಗಳು ಆಗುವುದು ಸಹಜ. ಅದರಲ್ಲಿ ನಿದ್ದೆಗೆಟ್ಟು ಕೆಲಸ ಮಾಡಿದರೆ, ಹಗಲು ಅದನ್ನು ಕಂಪನ್ಸೇಟ್ ಮಾಡಿಕೊಳ್ಳುವುದು ಸುಲಭವಲ್ಲ. ಆ ಕಾರಣದಿಂದಲೇ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ, ಅನಾರೋಗ್ಯ ಕಟ್ಟಿಟ್ಟ ಬುತ್ತಿ.
ನಿದ್ರೆಗೆಟ್ಟರೆ ಮಹಿಳೆಯರಿಗೆ ಕ್ಯಾನ್ಸರ್‌ನಂಥ ಮಾರಕ ರೋಗಗಳೂ ಕಾಡುವ ಸಾಧ್ಯತೆ ಇದೆ. ನಿದ್ರೆಗೆಡುವುದು ಮಾತ್ರವಲ್ಲ, ಅವರ ಜೀವನ ಶೈಲಿ ಬದಲಾವಣೆಯೂ ಕ್ಯಾನ್ಸರ್‌ಗೆ ಗುರಿ ಮಾಡುತ್ತದೆ, ಎಂದು ಸಂಶೋಧನೆಯೊಂದು ತಿಳಿಸಿದೆ. ರಾತ್ರಿ ಪಾಳಿ ಮಾಡುವ ಶೇ. 15 ಮಹಿಳೆಯರು ಈಗಾಗಲೇ ವಿವಿಧ ಬಗೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
ಸುದೀರ್ಘ ಕಾಲ ರಾತ್ರಿ ಪಾಳಿ ಮಾಡುವ ಮಹಿಳೆಯರಲ್ಲಿ ಚರ್ಮ, ಸ್ತನ ಕ್ಯಾನ್ಸರ್ ಹಾಗೂ ಶ್ವಾಸಕೋಶ ಕ್ಯಾನ್ಸರ್ ಕಾಡೋ ಸಾಧ್ಯತೆಗಳಿರುತ್ತವೆ.
ಏಕೆ ಹೀಗೆ...?
ದೇಹದ ಸೈಕಲ್ ಬೆಳಕು-ಕತ್ತಲೆಗೆ ಹೊಂದಿಕೊಂಡಿರುತ್ತದೆ. ಆ 24 ಗಂಟೆ ಸೈಕಲ್‌ನಲ್ಲಿ ತುಸು ಬದಲಾವಣೆಯಾದರೂ ಜೀವನದ ಜೈವಿಕ ತಾಳ ತಪ್ಪುತ್ತದೆ. ಅಂದರೆ ಹೃದಯ ಬಡಿತದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಎಲ್ಲ ಕಾಯಿಲೆಯೂ ಬರುತ್ತದೆ.
ಅಷ್ಟೇ ಅಲ್ಲದೆ ಕೆಲವು ವೈದ್ಯರ ಪ್ರಕಾರ ಲೈಂಗಿಕ ಹಾರ್ಮೋನ್ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ಸ್ತನದ ಕ್ಯಾನ್ಸರ್ ಕಾಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಹೆಣ್ಣು ಮಕ್ಕಳ ಜೈವಿಕ ತಾಳ ತಪ್ಪದಿರಲು ಹಗಲು ಕೆಲಸ ಮಾಡುವುದು ಒಳ್ಳೆಯ ಅಭ್ಯಾಸ. ಇದು ಮಹಿಳೆಯರ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಹೆಚ್ಚಲು ಸಹಕರಿಸುತ್ತದೆ.