ಕುಂದಗೋಳ ಉಪಚುನಾವಣೆಯ ಪ್ರಚಾರಕ್ಕೆ ಹುಬ್ಬಳ್ಳಿಗೆ ಹೋಗಬೇಕಾಗಿತ್ತು. ಬೆಳಗ್ಗೆ ಐದು ಗಂಟೆಗೆ ಎದ್ದಿದ್ದೆ. ತುಟಿ ಕೊಂಚ ಊದಿಕೊಂಡಿತು. ನಂತರ ನಾಲಗೆ ದಪ್ಪ ಆಗಲು ಶುರುವಾಯಿತು. ಮಾತಾಡಲಿಕ್ಕೂ ಆಗದಂತೆ ನಾಲಗೆ ಮರಗಟ್ಟಿತು. ಯಾಕೆ ಹೀಗಾಗುತ್ತದೆ ಅಂತ ತಕ್ಷಣ ಗೊತ್ತಾಗಲಿಲ್ಲ. ಹಿಂದೊಮ್ಮೆ ಇಂಥದ್ದೇ ಅಲರ್ಜಿ ಆಗಿದ್ದರಿಂದ ಅದೇ ಇರಬಹುದೇನೋ ಅಂತ ಗಾಬರಿಯಾದೆ. ಸ್ವಲ್ಪ ಹೊತ್ತಿಗೆ ಉಸಿರಾಡುವುದು ಕಷ್ಟವಾಯಿತು. ಈ ಅಲರ್ಜಿ ಆದಾಗ ಶ್ವಾಸಕೋಶದ ಸುತ್ತಮುತ್ತಲ ಜಾಗ ಊದಿಕೊಂಡು ಗಂಟಲು ಹಿಚುಕಿದ ಹಾಗಾಗಿ ಉಸಿರಾಟ ಕಷ್ಟವಾಗುತ್ತದೆ. ತಕ್ಷಣವೇ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋದೆ. ಅವರು ಐವಿ ಇಂಜೆಕ್ಷನ್‌ ಕೊಟ್ಟರು. ಮಧ್ಯಾಹ್ನದ ತನಕ ಆಸ್ಪತ್ರೆಯಲ್ಲಿದ್ದೆ.

ಇದೊಂದು ವಿಚಿತ್ರವಾದ ಕಾಯಿಲೆ. ಯಾವ ಕಾರಣಕ್ಕೆ ಬರುತ್ತದೆಯೋ ನನಗೆ ಗೊತ್ತಿಲ್ಲ. ಯಾವುದೋ ಒಂದು ಆಹಾರಕ್ಕೆ ಅಲರ್ಜಿ ಇರುವುದರಿಂದ ಬರುತ್ತದೆ ಎಂದು ವೈದ್ಯರು ಹೇಳಿದರು. ಯಾವ ಅಲರ್ಜಿ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ಹಿಂದೊಮ್ಮೆ ರಾತ್ರಿ ಹನ್ನೊಂದೂವರೆಗೆ ಇದೇ ಥರ ಆಗಿದ್ದಾಗ ನಾನು ಅಲರ್ಜಿಗೆ ಕೊಡುವ ಸಾಮಾನ್ಯ ಮಾತ್ರೆ ತೆಗೆದುಕೊಂಡಿದ್ದೆ. ಆಗ ನಾನು ಮೊಸರನ್ನ ತಿಂದಿದ್ದೆ ಅಷ್ಟೇ. ನಾಲ್ಕು ತಿಂಗಳಲ್ಲಿ ಹೀಗಾಗುತ್ತಿರುವುದು ಎರಡನೇ ಸಲ.

ಇದು ಚರ್ಮದ ಅಲರ್ಜಿ ಎಂದಿದ್ದಾರೆ ವೈದ್ಯರು. ಊಟದಿಂದ ಬರುತ್ತದಂತೆ. ನನ್ನದು ತುಂಬ ವಿಚಿತ್ರವಾದ ಪ್ರಕರಣ ಎಂದಿದ್ದಾರೆ. ಒಮ್ಮೊಮ್ಮೆ ಒಂದೊಂದು ಆಹಾರದಿಂದ ಬರಲಿಕ್ಕೆ ಸಾಧ್ಯ ಎನ್ನುತ್ತಿದ್ದಾರೆ. ಹತ್ತು ನಿಮಿಷದ ಒಳಗೆ ಚಿಕಿತ್ಸೆ ಸಿಗದೇ ಇದ್ದರೆ ಅಪಾಯ ಎಂದು ವೈದ್ಯರು ಹೇಳಿದರು. ಈ ಹಿಂದೆ ಇಂಥದ್ದೇ ಸಮಸ್ಯೆ ಆಗಿದ್ದನ್ನು ಗಾಯಕ ಸೋನು ನಿಗಮ್‌ ಯೂಟ್ಯೂಬಲ್ಲಿ ಹಾಕಿದ್ದರು. ನಾನು ಅದನ್ನು ನೋಡಿದ್ದೆ. ಅವರಿಗೆ ಸೀಫುಡ್‌ ತಿಂದು ಹೀಗಾಗಿತ್ತಂತೆ.

ಇದಕ್ಕೆ ವೈದ್ಯರು ಆ್ಯಂಜಿಯೋಡೀಮಾ ಎಂದು ಹೆಸರು ಕೊಟ್ಟಿದ್ದಾರೆ. ಈ ಬಗ್ಗೆ ಎಲ್ಲರಿಗೂ ತಿಳುವಳಿಕೆ ಇದ್ದರೆ ಅತ್ಯುತ್ತಮ.- ಶ್ರುತಿ, ನಟಿ

ಎರಡು ವಾರಗಳ ಹಿಂದಿನ ಕಥೆಯಿದು. ಹಿರಿಯ ನಟಿ ಶ್ರುತಿ ಅವರ ಮಗಳು ಗೌರಿ ಒಂದು ಟ್ವೀಟ್‌ ಮಾಡಿದ್ದರು. ತನ್ನ ತಾಯಿ ಶೃತಿ ‘ಆ್ಯಂಜಿಯೊಡಿಮ’ ಎಂಬ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಾರೆ. ಇಂಥ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ಹೋಗಿ. ತಡ ಮಾಡಿದರೆ ಜೀವಕ್ಕೇ ಅಪಾಯ ಎಂಬ ಎಚ್ಚರಿಕೆಯೂ ಇದರಲ್ಲಿತ್ತು.

ಅಷ್ಟಕ್ಕೂ ಆ್ಯಂಜಿಯೊಡಿಮ ಅಂದರೇನು, ಅದು ಜೀವಕ್ಕೇ ಹೇಗೆ ಎರವಾಗಬಲ್ಲದು?

ವಿಚಿತ್ರ ಬಗೆಯ ಅಲರ್ಜಿ

ಆ್ಯಂಜಿಯೋಡಿಮ ಅನ್ನೋದು ವಿಚಿತ್ರ ಬಗೆಯ ಅಲರ್ಜಿ. ನಾವು ತಿನ್ನುವ ಆಹಾರದಿಂದಲೂ ಇದು ಬರಬಹುದು. ಚರ್ಮದ ಕೆಳ ಪದರದಲ್ಲಿ ಊತ ಉಂಟಾಗುತ್ತದೆ. ಅಲರ್ಜಿಯ ರಿಯಾಕ್ಷನ್‌ನಂತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಮೂರು ದಿನಗಳ ಕಾಲ ಈ ಲಕ್ಷಣ ಇರುತ್ತೆ. ಮೂತ್ರಕೋಶಗಳಲ್ಲಾದರೆ ನವೆ ಉಂಟಾಗಬಹುದು. ಸೊಳ್ಳೆ ಕಡಿತ, ಕೆಲವು ಸಸ್ಯಗಳಿಂದ ಒಸರುವ ಹಾಲು, ಪೆನ್ಸಿಲಿನ್‌ ಆ್ಯಸ್ಪರಿನ್‌ನಂಥ ಔಷಧಗಳಿಂದ ಈ ಸಮಸ್ಯೆ ಉಲ್ಬಣಿಸಬಹುದು. ಊದಿಕೊಂಡ ಜಾಗಗಳು ಬಿಸಿಯಾಗಿ ನೋಯುತ್ತವೆ. ಕಣ್ಣಿನಲ್ಲಾದರೆ ದೃಷ್ಟಿಗೆ ಸಮಸ್ಯೆ.

ಬ್ರೆಸ್ಟ್ ಚೆಕ್ ಮಾಡ್ಕೊಳ್ಳಿ: ಕ್ಯಾನ್ಸರ್ ಬಾರದಂತೆ ನೋಡ್ಕೊಳ್ಳಿ!

ಅಲರ್ಜಿಯಲ್ಲದೇ ಅನುವಂಶೀಯವಾಗಿ, ಡ್ರಗ್ಸ್‌ನಿಂದ, ಕೆಲವೊಮ್ಮೆ ಯಾವ ಕಾರಣದ ಸುಳಿವನ್ನೂ ಕೊಡದೆಯೂ ಕಾಣಿಸಿಕೊಳ್ಳಬಹುದು. ಚರ್ಮದಾಳದಿಂದಲೇ ಬರುವ ಈ ಊತ ಕೈಕಾಲು, ಬಾಯಿ, ನಾಲಗೆ, ಜನನಾಂಗ ಹೀಗೆ ಎಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಸಡನ್ನಾಗಿ ಕಾಣಿಸಿಕೊಳ್ಳುವ ಇದು ಕ್ಷಿಪ್ರವಾಗಿ ಪರಿಣಾಮ ತೋರಿಸುತ್ತದೆ. ಸುಸ್ತು, ಆಯಾಸ, ತಲೆ ಸುತ್ತುಬರೋದು, ಪ್ರಜ್ಞಾಹೀನತೆ ಇತ್ಯಾದಿ ಇತರ ಲಕ್ಷಣಗಳು. ಎಫಿನ್‌ಪ್ರಿನ್‌ನಂಥ ಔಷಧಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡುತ್ತಾರೆ. ಹಸುಗೂಸುಗಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಇನ್ನೊಂದು ಶಾಕಿಂಗ್‌ ವಿಷ್ಯ ಅಂದರೆ ವಿಶ್ವಾದ್ಯಂತ ಸಾವಿರಾರು ಶಿಶುಗಳು ಈ ಸಮಸ್ಯೆಯಿಂದ ಮರಣವನ್ನಪ್ಪಿವೆ!

ಅಪಾಯಗಳೇನು?

ಬಹಳ ಅಪಾಯಕಾರಿಯಾದದ್ದು ಗಂಟಲು ಹಾಗೂ ಉಸಿರಾಟದ ಅಂಗಗಳಲ್ಲಿ ಸಡನ್ನಾಗಿ ಕಾಣಿಸಿಕೊಳ್ಳುವ ಊತ. ಇದರಿಂದ ಉಸಿರುಗಟ್ಟಿದ ಅನುಭವವಾಗುತ್ತೆ. ತಲೆಸುತ್ತು ಬವಳಿ ಬಂದಂತಾಗಿ ವ್ಯಕ್ತಿ ಪ್ರಜ್ಞಾಹೀನನಾಗಿ ಕುಸಿದು ಬೀಳುತ್ತಾನೆ. ಕೂಡಲೇ ಟ್ರೀಟ್‌ಮೆಂಟ್‌ ಸಿಗದಿದ್ದರೆ ಪ್ರಾಣಕ್ಕೇ ಇದು ಎರವಾಗಬಹುದು ಎನ್ನುತ್ತಾರೆ ವೈದ್ಯರು.

ಸೋನು ನಿಗಮ್‌ಗೂ ಬಂದಿತ್ತು!

ಕೆಲವು ದಿನಗಳ ಹಿಂದೆ ಬಾಲಿವುಡ್‌ ಗಾಯಕ ಸೋನು ನಿಗಮ್‌ಗೂ ‘ಆ್ಯಂಜಿಯೋಡಿಮ’ ಕಾಣಿಸಿಕೊಂಡಿತ್ತು. ಸೀಫುಡ್‌ ತಿಂದಿದ್ದರ ಅಲರ್ಜಿ ರಿಯಾಕ್ಷನ್‌ನಿಂದ ಹೀಗಾಯ್ತು ಅಂತ ಸೋನು ನಿಗಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಬರೆದುಕೊಂಡಿದ್ದರು. ಜೊತೆಗೆ ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೋವನ್ನೂ ಪೋಸ್ಟ್‌ ಮಾಡಿದ್ದರು. ಆಕ್ಸಿಜನ್‌ ಮಾಸ್ಕ್‌ ಹಾಕ್ಕೊಂಡಿದ್ದ ಸೋನು ಅವರ ಕಣ್ಣು ಸಿಕ್ಕಾಪಟ್ಟೆಊದಿ ಮುಚ್ಚಿಕೊಂಡಿತ್ತು. ‘ಇಂಥ ಅಲರ್ಜಿ ಕಾಣಿಸಿಕೊಂಡಾಗ ದಯವಿಟ್ಟು ಯಾರೂ ಚಾನ್ಸ್‌ ತಗೊಳ್ಳೋಕೆ ಹೋಗ್ಬೇಡಿ. ಕೂಡಲೇ ಆಸ್ಪತ್ರೆಗೆ ಹೋಗಿ’ ಅಂತ ಸೋನು ಈ ಸಂದರ್ಭದಲ್ಲಿ ತನ್ನ ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿದ್ದರು.