ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ನೀರಿಗಿಂತ ಮಿಗಿಲಾದ ಔಷಧ ಇನ್ನೊಂದು ಸಿಗಲು ಸಾಧ್ಯವೇ ಇಲ್ಲ. ಸಿನಿಮಾ ನಟ- ನಟಿಯರ ಸಂದರ್ಶನಗಳನ್ನು ಓದದವರು ವಿರಳ ಎಂದೇ ಹೇಳಬಹುದು. ನಟಿಯರು ತಮ್ಮ ಸೌಂದರ್ಯದ ಗುಟ್ಟು ‘ನೀರು’ ಎಂದೇ ಹೇಳುತ್ತಾರೆ. ಒತ್ತಡದ ಸನ್ನಿವೇಶಗಳಲ್ಲಿ ಕೆಲಸ ಮಾಡುವವರು ತಮ್ಮ ಜತೆ ಸದಾ ಒಂದು ಬಾಟಲ್ ನೀರು ಇಟ್ಟುಕೊಂಡರೆ ಅದಕ್ಕಿಂತ ದೊಡ್ಡ ರಿಲೀಫ್ ಬೇರೆ ಇಲ್ಲ.

ಮೂತ್ರಾಂಗಗಳಿಗೆ ಸಂಬಂಧಿಸಿದ ಯಾವುದೇ ತೊಂದರೆ ಇರಲಿ, ಅತಿ ಸುಲಭದ ಪರಿಹಾರ ಎಂದರೆ ನೀರು. ಇದನ್ನು ಯಾರು, ಯಾರಿಗೂ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿಯೇ ಇದು. ಸಣ್ಣಪುಟ್ಟ ವ್ಯತ್ಯಾಸ ಕಾಣಿಸಿಕೊಂಡ ತಕ್ಷಣ ತಾವಾಗಿಯೇ ಜಾಸ್ತಿ ನೀರು ಕುಡಿಯಲು ಆರಂಭಿಸುತ್ತಾರೆ. ಅದರಲ್ಲಿಯೂ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದ್ದರಂತೂ ನೀರು ರಾಮಬಾಣ. ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆಯಾದರೆ ವೈದ್ಯರು ಸೂಚಿಸುವ ಪರಿಹಾರವೂ ಇದೇ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದರೆ ಮೊದಲು ಮಾಡುವುದು ಎಂದರೆ ನಾಲ್ಕಾರು ಬಾಟಲ್ ಡ್ರಿಪ್ಸ್ ಹಾಕುವುದು! ಮೂತ್ರಕೋಶ, ಮೂತ್ರನಾಳಗಳಲ್ಲಿ ಏನಾದರೂ ಕಲ್ಮಶಗಳು ಸಿಲುಕಿಕೊಂಡಿದ್ದರೆ ನೀರು ಮೂತ್ರದಲ್ಲಿ ಎಲ್ಲವನ್ನೂ ಹೊರದಬ್ಬುತ್ತದೆ. ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಮೂತ್ರಕೋಶ ಸೋಂಕು ತಗುಲಿದರು ಅಷ್ಟೆ.

ಎಷ್ಟು ಸಾಧ್ಯವೋ ಅಷ್ಟು ಜಾಸ್ತಿ ನೀರು ಕುಡಿಯಬೇಕು. ದಿನಕ್ಕೆ ಏನಿಲ್ಲವೆಂದರೂ 8-10 ಗ್ಲಾಸ್  ನೀರು ಕುಡಿಯುವುದು ಒಳ್ಳೆಯದು. ಅದು ಎರಡು ಕೆಲಸ ಮಾಡುತ್ತದೆ. ಒಂದು-ಬ್ಯಾಕ್ಟೀರಿಯಾಗಳನ್ನು ಶರೀರದಿಂದ ಹೊರದಬ್ಬುವುದು, ಎರಡು-ಮೂತ್ರವನ್ನು ಡೈಲ್ಯೂಟ್ ಮಾಡುವುದು.