ಭಗವದ್ಗೀತೆ ಇನ್ನು ಕನ್ನಡದಲ್ಲಿಯೂ ಲಭ್ಯ

Veteran author H S Venkatesh Murthy translates Bhagavadgeetha in to Kannada
Highlights

1966 ರಿಂದ 1971 ರ ವರೆಗೆ ನಾನು ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಅಧ್ಯಾಪಕನಾಗಿದ್ದೆ. ಆಗ ನಾನು ವಿದ್ಯಾರ್ಥಿನಿಲಯದ ಮೇಲ್ವಿಚಾರಕನೂ ಆಗಿದ್ದೆ. ರಾತ್ರಿಯ ಊಟಕ್ಕೆ ಮೊದಲು ವಿದ್ಯಾರ್ಥಿಗಳಿಗೆ ವ್ಯಾಸಪೀಠದ ಸಭಾಂಗಣದಲ್ಲಿ ಪ್ರತಿ ದಿನವೂ ಭಗವದ್ಗೀತೆಯ ಒಂದು ಅಧ್ಯಾಯವನ್ನು ಹೇಳಿಕೊಡುವ ಹೊಣೆ ನನ್ನದಾಗಿತ್ತು. ನಾನು ಮೊದಲು ಒಂದು ಶ್ಲೋಕವನ್ನು ಹೇಳುವುದು; ವಿದ್ಯಾರ್ಥಿಗಳು ಸಾಮೂಹಿಕವಾಗಿ ಅದನ್ನು ಪುನರುಚ್ಚರಿಸುವುದು-ಹೀಗೆ ಪ್ರತಿನಿತ್ಯವೂ ಗೀತಾ ವಾಚನ ನಡೆಯುತಿತ್ತು. ಆಗ ನನ್ನ ಮನಸ್ಸು ಗೀತೆಯತ್ತ ಆಕರ್ಷಿತವಾಯಿತು. 

1966 ರಿಂದ 1971 ರ ವರೆಗೆ ನಾನು ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಅಧ್ಯಾಪಕನಾಗಿದ್ದೆ. ಆಗ ನಾನು ವಿದ್ಯಾರ್ಥಿನಿಲಯದ ಮೇಲ್ವಿಚಾರಕನೂ ಆಗಿದ್ದೆ. ರಾತ್ರಿಯ ಊಟಕ್ಕೆ ಮೊದಲು ವಿದ್ಯಾರ್ಥಿಗಳಿಗೆ ವ್ಯಾಸಪೀಠದ ಸಭಾಂಗಣದಲ್ಲಿ ಪ್ರತಿ ದಿನವೂ ಭಗವದ್ಗೀತೆಯ ಒಂದು ಅಧ್ಯಾಯವನ್ನು ಹೇಳಿಕೊಡುವ ಹೊಣೆ ನನ್ನದಾಗಿತ್ತು.

ನಾನು ಮೊದಲು ಒಂದು ಶ್ಲೋಕವನ್ನು ಹೇಳುವುದು; ವಿದ್ಯಾರ್ಥಿಗಳು ಸಾಮೂಹಿಕವಾಗಿ ಅದನ್ನು ಪುನರುಚ್ಚರಿಸುವುದು-ಹೀಗೆ ಪ್ರತಿನಿತ್ಯವೂ ಗೀತಾ ವಾಚನ ನಡೆಯುತಿತ್ತು. ಆಗ ನನ್ನ ಮನಸ್ಸು ಗೀತೆಯತ್ತ ಆಕರ್ಷಿತವಾಯಿತು. ಅದನ್ನು ನನಗೆ ಶುದ್ಧವಾಗಿ ಹೇಳಿಕೊಡುವ ಗುರುಗಳು ಇರಲಿಲ್ಲ. ಮನೆಯಲ್ಲಿ ವಿನೋಬರ ಗೀತೆಯ ಪ್ರವಚನದ ಕೃತಿಯಿತ್ತು. ಅದನ್ನು ಓದತೊಡಗಿದೆ. ಐವತ್ತರ ದಶಕದಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಡಿ.ವಿ,ಜಿ, ಅವರ ಗೀತೆಯ ಬಗೆಗಿನ ಚಿಂತನೆ ಜೀವನಧರ್ಮ ಯೋಗ ಎಂಬ ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಅದರ ಕಟ್ಟಿಂಗ್ಸ್ ನನ್ನ ಬಳಿ ಇದ್ದವು. ಅದನ್ನೂ ಓದತೊಡಗಿದೆ. ತಿಲಕರು, ಶ್ರೀರಂಗರು ಗೀತೆಯ ಬಗ್ಗೆ ಬರೆದದ್ದು ನನ್ನ ಗಮನಕ್ಕೆ ಬಂದದ್ದು ನಾನು ಬೆಂಗಳೂರಲ್ಲಿ ಕಾಲೇಜು ಅಧ್ಯಾಪಕನಾಗಿದ್ದ ಅವಧಿಯಲ್ಲಿ.

ಹೆಚ್ಚು ಕಮ್ಮಿ ಆ ದಿನಗಳಲ್ಲೇ ಪುತಿನ ಅವರ  ಗೀತೆಯ ಪದ್ಯರೂಪದ ಅನುವಾದವನ್ನು ಓದಿದೆ. ನನಗೆ ಆಪ್ತರಾಗಿದ್ದ ಎನ್.ಎಸ್. ಶ್ರೀಧರಮೂರ್ತಿ ನಾಗರಸನ ಗೀತಾನುವಾದವನ್ನು ನನಗೆ ದೊರಕಿಸಿದರು. ಜೊತೆಜೊತೆಗೇ ಗೀತೆಯ ಬಗ್ಗೆ ನಿಷ್ಠುರವಾದ ಟೀಕೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಭಾರಿ ಪ್ರಶಂಸೆಗೂ ಅಷ್ಟೇ ತೀವ್ರವಾದ ಟೀಕೆಗೂ ಪಾತ್ರವಾಗಿದ್ದ  ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬೇಕೆಂಬ ತಹತಹ ಪ್ರಾರಂಭವಾಯಿತು.  ಇಂಗ್ಲಿಷ್ ಮತ್ತು ಕನ್ನಡ ಟೀಕುಗಳು ನನಗೆ ಗೀತೆಯನ್ನು ಸಮೀಪಿಸಲು ಸಹಾಯ ಮಾಡಿದುವು.

ಅಷ್ಟು ಸಾಲದು ಎನ್ನಿಸಿ ಆತ್ಮೀಯಮಿತ್ರರೂ ಸಂಸ್ಕೃತ ವಿದ್ವಾಂಸರೂ  ಆದ ಡಾ|ಶ್ರೀರಾಮಭಟ್ಟರ ಜೊತೆಯಲ್ಲಿ ಗೀತೆಯನ್ನು ಓದುತ್ತಾ ಚರ್ಚಿಸುತ್ತಾ ಗೀತೆಯನ್ನೂ, ಅದರ ಆಪ್ತ ಮಿಡಿತಗಳನ್ನೂ, ತತ್ತ್ವ ಸೂಕ್ಷ್ಮಗಳನ್ನೂ ಎಷ್ಟು  ಸಾಧ್ಯವೋ ಅಷ್ಟು ಅರ್ಥಮಾಡಿಕೊಳ್ಳಲು ನಿರಂತರ ಅಭ್ಯಾಸ ನಡೆಸಿದೆ. ಪುತಿನ ತಮ್ಮ ಶ್ರೀಹರಿಚರಿತೆಯ ಪ್ರಸ್ತಾವನೆಯಲ್ಲಿ ಗೀತೆಯ ಬಗ್ಗೆ ಹೊಸ ನೋಟವುಳ್ಳ ಸುದೀರ್ಘ  ಪ್ರಸ್ತಾವನೆಯನ್ನು ಪ್ರಕಟಿಸಿದ್ದರು. ಕಳೆದ ದಶಕವು ಗೀತೆಯ ಬಗ್ಗೆ ಕನ್ನಡದಲ್ಲಿಯೂ  ಮತ್ತೆ ಕೃತಿಗಳ ರಚನೆ ಪ್ರಾರಂಭವಾದ ಕಾಲ. ಗೀತೆಯನ್ನು ಯೋಗಶಾಸ್ತ್ರವಾಗಿ  ಚರ್ಚಿಸುವ ಡಾ|ಜಿ.ಎಸ್.ಆಮೂರರ ಕೃತಿ ನನ್ನಲ್ಲಿ ಅನೇಕ ಹೊಸ ಹೊಳಹುಗಳನ್ನು ಹುಟ್ಟುಹಾಕಿತು.

ಹಾಗೇ ಲಕ್ಷ್ಮೀಶ ತೋಳ್ಪಾಡಿಯವರು ಬರೆದ ಕೃತಿ. ಜೊತೆಗೆ  ಡಿ.ವಿ.ಪ್ರಹ್ಲಾದರು ಅನೇಕ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದ ಗೀತೆಯ ಕುರಿತ ಹೊಸ ಕೃತಿ. ಅದರಲ್ಲಿ ಅದೆಷ್ಟು ವಿಭಿನ್ನ ಬಗೆಯ

ಗೀತಾಪ್ರವೇಶಗಳು!
ನನ್ನ ಮನೆಯಾಕೆ ತೀರಿಕೊಂಡ ಮೇಲೆ ಪ್ರತಿ ಮುಂಜಾನೆ ಗೀತಾಪಾರಾಯಣ  ಮಾಡುವುದು ರೂಢಿಗೆ ಬಂತು. ಅನುಮಾನಗಳನ್ನು ಸಂದೇಹಗಳನ್ನು ಪರಿಹರಿಸಲು ಶ್ರೀರಾಮಭಟ್ಟರ ಸಹಾಯವಿತ್ತು. ಗೀತೆಯ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಂದಿರುವ ಬಹಳಷ್ಟು ಕೃತಿಗಳು ನನ್ನ ಗ್ರಂಥಾಲಯವನ್ನು ಸೇರಿದವು. ಕೀರ್ತಿನಾಥ ಕುರ್ತಕೋಟಿಯವರ ಲೇಖನವೊಂದರಿಂದ ಪ್ರಭಾವಿತನಾಗಿ  ಜ್ಞಾನದೇವ ಗೀತೆಯ ಆಧರಿಸಿ ಬರೆದಿರುವ ಘನವಾದ ಕೃತಿಯನ್ನು ಧಾರವಾಡದ ಪುಸ್ತಕ ಅಂಗಡಿ ಒಂದರಲ್ಲಿ ಕೊಂಡಿದ್ದಾಯಿತು.

ವೇದಗಳಂತೆ ಗೀತೆಯೂ ಒಂದು ಶಾಸ್ತ್ರ ಕಾವ್ಯವೇ. ಗೀತೆ ಎನ್ನುವ ಅದರ ಹೆಸರೇ  ಅದರ ಕಾವ್ಯದ ವಾಲುವಿಕೆಯ ಸೂಚನೆಯಾಗಿದೆ. ಜೊತೆಗೆ ಗೀತೆಯನ್ನು  ಬೋಧಿಸುವ ಕೃಷ್ಣನದ್ದು ತನ್ನ ಆಪ್ತ ಶಿಷ್ಯ ಅರ್ಜುನನೊಂದಿಗೆ ಸಖ್ಯ ಸಂಬಂಧ. ಕೃಷ್ಣ  ಆಚಾರ್ಯ ಪೀಠದಲ್ಲಿ ಕುಳಿತು ಅಪ್ಪಣೆ ಕೊಡುತ್ತಿಲ್ಲ. ಗೀತೆ, ಹೀಗಾಗಿ ಬಾಯಿ  ಮುಚ್ಚಿಕೊಂಡು ನಾನು ಹೇಳಿದ್ದನ್ನು ನೀನು ಮಾಡು ಎಂದು ಅಪ್ಪಣೆಕೊಡಿಸುವ  ಪ್ರಭುಸಮ್ಮಿತೆಯಲ್ಲ. ಕೃಷ್ಣಾರ್ಜುನರದ್ದು ಜನ್ಮಜನ್ಮಾಂತರದ ಸಖ್ಯ, ನೀನು ಹಳೆಯ ನಾನು ಗೆಳೆಯ ಎಂಬಂತೆ! ಹಾಗಾಗಿ ಗೀತೆಯು ಕಾಂತಾಸಮ್ಮಿತೆಯ ಕಡೆ ವಾಲುವ ಮಿತ್ರ ಸಮ್ಮಿತೆ! ಕಾವ್ಯವು ಮಿತ್ರಸಮ್ಮಿತೆ, ಕಾಂತಾಸಮ್ಮಿತೆಯ ಅಭಿವ್ಯಕ್ತಿಯಲ್ಲವೆ?

ಗೀತೆಯನ್ನು ಗೀತೋಪನಿಷತ್ತು ಎಂದೇ ಕರೆಯುವರು. ತತ್ತ್ವವನ್ನು ಬೋಧಿಸುವ ಕೃಷ್ಣ ಮತ್ತು ಗೀತೆಯನ್ನು ಆಲಿಸುವ ಅರ್ಜುನ ಒಂದೇ ರಥದಲ್ಲಿ ಹತ್ತಿರ ಹತ್ತಿರ ಕುಳಿತೇ ಈ ಸಂವಾದ ನಡೆಸುತ್ತಿದ್ದಾರೆ. ಅರ್ಜುನನ ಮನಸ್ಸಲ್ಲಿ ಉಂಟಾಗುವ ಸಂಶಯಗಳನ್ನು ಸಮಾಧಾನ ಚಿತ್ತದಿಂದ ಪರಿಹರಿಸುವ ಪ್ರಯತ್ನವನ್ನು ಕೃಷ್ಣ ಉದ್ದಕ್ಕೂ ಮಾಡುತ್ತಾ ಹೋಗಿದ್ದಾನೆ. ಗೀತೆಯ ಸಂದರ್ಭದಲ್ಲಿ ಕೃಷ್ಣ ಏಕಶಾಲಾಧ್ಯಾಪಕನೇ! ಅವನ ವಿದ್ಯಾರ್ಥಿಯೂ ಒಬ್ಬನೇ! ಜೀವ ಸಖರಾದ
ಇಬ್ಬರು ಗೆಳೆಯರ ನಡುವೆ ನಡೆಯುವ ಆಪ್ತ ಸಂವಾದ ಭಗವದ್ಗೀತೆ.

ಅದಕ್ಕೊಂದು ಸಾಂದರ್ಭಿಕ ಒತ್ತಡವಿದೆ. ಹಾಗಾಗಿ ಅದು ತತ್ತ್ವಕ್ಕಾಗಿ ತತ್ತ್ವದ  ಚಿಂತನೆಯಲ್ಲ. ಮತ್ತು ಚಿಂತನೆಯ ಏಕಮುಖೀ ಪ್ರವಾಹವೂ ಅಲ್ಲ. ತನ್ನ ಯಾವುದೇ ಸಂಶಯವನ್ನು ಮುಕ್ತವಾಗಿ ಕೃಷ್ಣನೆದುರು ಮಂಡಿಸುವ ಸ್ವಾತಂತ್ರ್ಯ ಅರ್ಜುನನಿಗಿದೆ. ರಣಾಂಗಣದ ಮಧ್ಯೆ ತನ್ನ ಬಂಧುಬಳಗ ಗುರುಹಿರಿಯರನ್ನು ಯುದ್ಧದಲ್ಲಿ ಕೊಲ್ಲುವುದು ಹೇಗೆ? ಈ ಯುದ್ಧವೇ ನನಗೆ ಬೇಡ ಎಂದು ಕರ್ತವ್ಯ ವಿಮುಖನಾದ ಆಪ್ತ ಗೆಳೆಯ, ಬಂಧು, ಶಿಷ್ಯ ಅರ್ಜುನನಿಗೆ ಮತ್ತೆ ಕರ್ತವ್ಯದ ದೀಕ್ಷೆಯನ್ನು ಕೃಷ್ಣ ನೀಡುತ್ತಾನೆ. ಯುದ್ಧವನ್ನೂ ಇಲ್ಲಿ  ರೂಪಕಾತ್ಮಕವಾಗಿಯೇ ಗ್ರಹಿಸಬೇಕು. ರಥ , ಸಾರಥ್ಯಗಳನ್ನೂ ಕೂಡ ಒಂದು ಸಂದರ್ಭದ ಒತ್ತಾಯವನ್ನು ಸೃಷ್ಟಿಸಲಿಕ್ಕಾಗಿ ರಣರಂಗ, ಸನ್ನಿಹಿತವಾದ ಯುದ್ಧೋದ್ಯಮ,
ಇತ್ಯಾದಿಗಳು ಸೂಚಿತವಾಗಿವೆ.

ತನ್ನ ಜೀವಿತ ಕಾಲದಲ್ಲಿ  ಪ್ರತಿಯೊಬ್ಬ ವ್ಯಕ್ತಿಯೂ ಒಮ್ಮೆಯಲ್ಲ ಒಮ್ಮೆ ಈ ಕರ್ತವ್ಯ ವಿಮುಖತೆಯ ವಿಷಾದ ಮತ್ತು ನಿಷ್ಕ್ರಿಯ ಸ್ಥಿತಿಗೆ ಬಂದೇ ಬರುವನು. ಅಂಥ ಸಂದರ್ಭದಲ್ಲಿ ವ್ಯಕ್ತಿಯ ಹೊಣೆಗಾರಿಕೆಯೇನು? ಏತಕ್ಕಾಗಿ ಕರ್ತವ್ಯ ನಿರ್ವಹಣೆಯು ಅಗತ್ಯ? ಆ ಕರ್ತವ್ಯನಿರ್ವಹಣೆಯನ್ನು ಯಾವ ಮನಃಸ್ಥಿತಿಯಲ್ಲಿ ನಿಭಾಯಿಸಬೇಕಾಗಿದೆ? ಕರ್ಮ ಮಾಡಿಯೂ ಕರ್ಮದ ಅಂಟಿನಿಂದ ಪಾರಾಗುವುದು ಹೇಗೆ? ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಣೆ ನಮ್ಮ ಮನದ ಶಮತೆಗೆ ಎಷ್ಟು ಅಗತ್ಯ? ಈ ಎಲ್ಲವನ್ನೂ ಗೀತೆಯು ಪದರ ಪದರವಾಗಿ ನಮ್ಮ ಕಣ್ಣೆದುರು ಬಿಡಿಸಿಡುತ್ತದೆ.

ಬದುಕಿನ ಅನಿವಾರ್ಯವಾದ ಹೋರಾಟದಲ್ಲಿ ನಮ್ಮ ಜವಾಬುದಾರಿಯೇನು ಎಂಬುದನ್ನು ವಿವರಿಸುತ್ತದೆ. ಹೀಗೆ ಗೀತೆ ಅರ್ಜುನನನ್ನು ಮಾತ್ರವಲ್ಲ ಕೇಳುಗರೆಲ್ಲರನ್ನೂ ಉದ್ದೇಶಿಸಿದೆ. ಅದನ್ನು ಸಾಂಕೇತಿಕವಾಗಿ ಗೀತೆಯಲ್ಲೇ ಸೂಚಿಸಲಾಗಿದೆ. ಗೀತೆಯನ್ನು ಯುದ್ಧ ಮಧ್ಯದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸುತ್ತಾನೆ. ಸಂವಾದದ ಮೂಲಕವೇ ನಿರ್ಮಿತವಾಗುವ  ಜೀವನಬೋಧೆಯಿದು. ಬೋಧನೆಯಲ್ಲಿ ಕೃಷ್ಣ ತೋರುವ ಸಮಾಧಾನ ಮತ್ತು ಸಣ್ಣ ದನಿಯ ಸಲ್ಲಾಪ
ಹೃದಯಕ್ಕೆ ಅಮೃತ ಸೇಚನ ಮಾಡುವಂತಿದೆ. ಕೃಷ್ಣ ಅರ್ಜುನನಿಗೆ ಏನು ಹೇಳಿದನು ಎಂಬುದನ್ನು ಸಂಜಯ ದೊರೆ ಧೃತರಾಷ್ಟ್ರನಿಗೆ ಹೇಳುತ್ತಾನೆ. ಸಂಜಯ ಧೃತರಾಷ್ಟ್ರನಿಗೆ ಹೇಳುವುದನ್ನು ನಾವೆಲ್ಲರೂ ಗೀತೆಯ ಅಭ್ಯಾಸದಲ್ಲಿ ತೊಡಗಿದಾಗ ಮತ್ತೆ ಕೇಳುತ್ತೇವೆ.

ಹೀಗೆ ಗೀತೆಯ ಬೋಧನೆ ಒಂದು ಜ್ಞಾನಮೂಲದಿಂದ ಪ್ರಾರಂಭವಾಗಿ ಸೂರ್ಯರಶ್ಮಿಗಳಂತೆ ಭುವನ ವ್ಯಾಪಿಯಾಗಿ ಹರಡಿಕೊಳ್ಳತೊಡಗುತ್ತದೆ. ಗೀತೆಯನ್ನು ಕೃಷ್ಣ ಅರ್ಜುನನಿಗೆ ಹೇಳುವುದು. ಅದನ್ನೇ ಆ ಕ್ಷಣದಲ್ಲೇ ಸಂಜಯನು ಧೃತರಾಷ್ಟ್ರನಿಗೆ ಹೇಳುವುದು, ಅದನ್ನೇ ಆಯಾ ಕ್ಷಣದಲ್ಲಿ ಗೀತೆಯನ್ನು ಓದುವ ಮಹಾ ಸಮುದಾಯವೊಂದು ಸಾಮೂಹಿಕವಾಗಿ ಕೇಳುವುದು ಸಂಭವಿಸುತ್ತಾ ಇದೆ. ಹೀಗಾಗಿ ಗೀತೆಯು ಬೆಳಕಿನ ಹರಡಿಕೊಳ್ಳುವ ತಂತ್ರದ ಫಲವಾಗಿದೆ. ಗೀತಾಸಂವಾದವು ಮೂರು ನೆಲೆಗಳಲ್ಲಿ ಒಮ್ಮೆಗೇ  ಸಂಭವಿಸುತ್ತಾ ಇದೆ. ಅರ್ಜುನ ನಮ್ಮ ಪ್ರತಿನಿಧಿಯಾಗುತ್ತಾನೆ. ನಮಗೆ ಕೃಷ್ಣ ಸಾನ್ನಿಧ್ಯವನ್ನು ಕರುಣಿಸುವ ಮಹಾತ್ಮನೂ ಆಗುತ್ತಾನೆ.

ಅರ್ಜುನನಿಗೆ ಗೀತೆಯನ್ನು ಕೇಳುವಾಗ ಅನೇಕ ಸಂಶಯಗಳು ಸಹಜವಾಗಿ ಯೇ ಉಂಟಾಗುತ್ತಿದ್ದವು. ಆ ಸಂಶಯಗಳನ್ನು ಕೃಷ್ಣ ಮುಂದೆ ಇರಿಸಿ ಅವನ್ನು  ಪರಿಹರಿಸಿಕೊಳ್ಳುವ ಸ್ವಾತಂತ್ರ್ಯವೂ ಅವನಿಗಿತ್ತು. ಅರ್ಜುನನಲ್ಲಿ ಹುಟ್ಟಿದ ಸಂಶಯಗಳು ನಮ್ಮಲ್ಲಿ ಹುಟ್ಟುವುದರ ಜೊತೆಗೆ ಅದಕ್ಕಿಂತ ಭಿನ್ನವಾದ ಅನೇಕ ಸಂಶಯಗಳೂ ನಮ್ಮಲ್ಲಿ ಉಂಟಾಗಬಹುದಲ್ಲ! ಅವುಗಳನ್ನು ಪರಿಹರಿಸುವ ಹೊಣೆ ಕೃಷ್ಣನಿಗೆ ಉಂಟೋ? ಗೀತೆಯಲ್ಲಿ ನಮ್ಮೆಲ್ಲರ ಹೊಸ ಹೊಸ ಸಂಶಯಗಳಿಗೆ ಸಮಾಧಾನವುಂಟೋ? ಉಂಟು. ಅವು ಅನುಕ್ತವಾಗಿಯೇ ಗೀತೆಯಲ್ಲಿ ಅಭಿವ್ಯಕ್ತವಾಗುತ್ತವೆ ಎಂಬುದು ಶ್ರದ್ಧೆಯುಳ್ಳವರ ಅನಿಸಿಕೆ. ಈವತ್ತಿನ ಎಲ್ಲ ಸಂಶಯಗಳಿಗೂ ಗೀತೆ ಉತ್ತರಿಸಲೇಬೇಕೆಂಬ ಹಠವಾದರೂ ಯಾಕೆ? ನಮ್ಮ ಬಗೆಹರಿಯಲಾರದ ಕೆಲವು ಸಂಶಯಗಳಿಗೆ ಅನ್ಯಮೂಲದ  ಅಧ್ಯಯನವೋ , ಅಥವಾ ಸ್ವಂತವಾಗಿ ನಡೆಸುವ ನಿಧಿಧ್ಯಾಸನವೋ ನಮಗೆ ಪರಿಹಾರ ಒದಗಿಸೀತು.

ನಾನು ಹೇಳಿದ್ದನ್ನು ಗ್ರಹಿಸು. ಕೊನೆಗೆ ನಿನಗೆ  ತೋರಿದಂತೆ ಮಾಡು ಎಂಬುದಾಗಿ ಕೃಷ್ಣನೇ ಗೀತಾಬೋಧವನ್ನು ಮುಕ್ತವಾಗಿ ಇರಿಸಿದ್ದಾನೆ. ಸ್ವಧರ್ಮ ಎನ್ನುವುದು ಈವತ್ತು ಪಡೆಯುವ ಅರ್ಥ ಗೀತೆಯ ಸಂದರ್ಭಕ್ಕಿಂತ ಭಿನ್ನವಾದುದು. ಜಾತಿಯಂತೆ ವೃತ್ತಿ ಎಂಬುದು ಈಗ ಇಲ್ಲ. ಈಗ ವೃತ್ತಿಯಂತೆ ವರ್ಣವು ಲಕ್ಷಿತವಾಗುವುದು. ಜೀವನ ನಿರ್ವಹಣೆಗೆ ನಾವು ನಿರ್ವಹಿಸುವ ವೃತ್ತಿಯೇ ನಮ್ಮ ಸ್ವಧರ್ಮವಾಗುವುದು. ನಾನು ಅಧ್ಯಾಪಕನೋ  ವಿದ್ಯಾರ್ಥಿಗಳಿಗೆ ನಿಷ್ಠೆಯಿಂದ ಪಾಠಪ್ರವಚನ ನಡೆಸುವುದೇ ನನ್ನ ಸ್ವಧರ್ಮವಾಗಿದೆ. ಮೇನೇಜ್ಮೆಂಟ್ ಮೆಚ್ಚಬೇಕು, ಸರೀಕರು ಭೇಷ್ ಎನ್ನಬೇಕು, ಸರ್ಕಾರ ಅತ್ತ್ಯುತ್ತಮ ಅಧ್ಯಾಪಕ ಎಂದು ನನ್ನನ್ನು ಮನ್ನಿಸಬೇಕು-ಇದೆಲ್ಲವೂ ಕಾಮ್ಯಕರ್ಮದ ಫಲವೇ!

ಕಡೆಯ ಪಕ್ಷ ನನ್ನ ವಿದ್ಯಾರ್ಥಿಗಳು ಮೆಚ್ಚಿ  ಅಹುದಹುದೆನ್ನಬೇಕು ಎಂದು ನಾನು ಬಯಸಲೇ? ಅದೂ ಕಾಮ್ಯಕರ್ಮವೇ! ನನ್ನ ಆತ್ಮತೃಪ್ತಿಗಾಗಿ ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳು ಮೆಚ್ಚಬಹುದು. ಮೇನೇಜ್ಮೆಂಟೂ ಮೆಚ್ಚಬಹುದು. ಸರ್ಕಾರದ ಬಿರುದುಬಾವಲಿಗಳೂ ದೊರಕಬಹುದು. ಆದರೆ ನನ್ನ ದುಡಿಮೆ ಅದಕ್ಕಾಗಿಯಲ್ಲ. ಫಲವನ್ನು ನಿರ್ವಹಿಸುವುದು ಸಮಷ್ಟಿಯ ಹೊಣೆಗಾರಿಕೆಯಾಗಿದೆ. ನನ್ನ ಕೆಲಸವನ್ನು ನಿಷ್ಠೆ, ಪ್ರೀತಿ, ಮತ್ತು  ಪ್ರಾಮಾಣಿಕತೆಯಿಂದ ನಿರ್ವಹಿಸುವುದೇ ನನ್ನ ಜವಾಬುದಾರಿ. ಸುಟ್ಟುಕೊಳ್ಳುತ್ತಾ  ಉರಿಯುವುದು-ಇದೇ ನನ್ನ ಪಾಲಿಗೆ ನಿಷ್ಕಾಮ  ಕರ್ಮಯೋಗ. ಗೀತೆ ಕೇಂದ್ರದಲ್ಲಿ ಈ ಜೀವನ ಮತ್ತು ಕರ್ತವ್ಯ ನಿರ್ವಹಣೆಯ ಮಹಾಬೋಧೆಯನ್ನು ಮಾಡುತ್ತಾ ಇದೆ.

ಇದು ದೇಹಧರ್ಮವೂ ಹೌದು; ಮನಸ್ಸಿನ ಧರ್ಮವೂ ಹೌದು. ಶೀತೋಷ್ಣ ಮತ್ತು  ಸುಖದುಃಖಗಳನ್ನು ಸಮಾನವಾಗಿ ಗ್ರಹಿಸಬೇಕು ಎಂಬ ಮಾತಿನ ಅಂತರಾರ್ಥವೂ ಇದೇ ಅಲ್ಲವೆ? ದಿವ್ಯವಾದ  ನಿರ್ಲಿಪ್ತಿಯಲ್ಲಿ ಮಾತು ಮನಸ್ಸು ದೇಹವನ್ನು ಸೇವೆಯಲ್ಲಿ ತೊಡಗಿಸು ಎಂದು ಗೀತೆ ಬೋಧಿಸುತ್ತಿದೆ. ಅದು ಹೆಚ್ಚು ನಾಟಿರುವುದು ಬದುಕಿಗೇ ವಿನಾ ಜೀವನಾನಂತರದ ಮೋಕ್ಷಕ್ಕೆ ಅಲ್ಲ. ಹಾಗಾಗಿಯೇ ಡಿವಿಜಿ ಅವರು ಗೀತೆಯನ್ನು ಜೀವನ ಧರ್ಮ ಯೋಗ ಎಂದು ಕರೆದಿರುವರು. ಸಂಯಮವೇ ಸಂತೃಪ್ತಿಯನ್ನು ಸಮಾಧಾನವನ್ನೂ ತರಬಲ್ಲದು ಎಂಬುದು ನನಗೆ ಅತ್ಯಂತ ಪ್ರಿಯವಾಗಿರುವ ಗೀತೆಯ ಮಹಾಬೋಧೆ. ಇಷ್ಟಾಗಿಯೂ ಗೀತೆಯು ಕಳೆದು ಹೋದ ಯುಗವೊಂದರಲ್ಲಿ ಉದ್ಭವಿಸಿದ ತಾತ್ವಿಕತೆ. ಅದನ್ನು ಸಾರಾಸಗಟಾಗಿ ಈವತ್ತಿಗೆ ಅನ್ವಯಿಸುವುದೂ, ಅದರ ಪ್ರತ್ಯಂಶವನ್ನೂ ಒಪ್ಪಲೇ ಬೇಕೆಂದು ಹಠ  ಮಾಡುವುದೂ ಅಗತ್ಯವೆನ್ನಿಸುವುದಿಲ್ಲ. ನಮ್ಮ ಈವತ್ತಿನ ಸಮಾಜಕ್ಕೂ ಅಗತ್ಯವಾದ ಮಾರ್ಗದರ್ಶಿಯಾದ ಅನೇಕ ಜೀವನಮರ್ಮಗಳನ್ನು

ಗೀತೆ ಬೋಧಿಸುತ್ತಿದೆ!
ಅದನ್ನು ನಾವು ಚಿಂತಿಸಬೇಕಾಗಿದೆ. ಸರ್ವಸಮ್ಮತವಾದ  ಮೌಲ್ಯಗಳನ್ನು ಒಪ್ಪಿ ಅಳವಡಿಸಿಕೊಳ್ಳಬೇಕಾಗಿದೆ. ಒಪ್ಪಿತವಾಗದ ಸಂಗತಿಗಳನ್ನು ಬದಿಗಿಡುವ ಸ್ವಾತಂತ್ರ್ಯವನ್ನು ಕೃಷ್ಣನೇ ನಮಗೆ ಕಲ್ಪಿಸಿದ್ದಾನೆ. ಜ್ಞಾನ, ಕರ್ಮ, ಭಕ್ತಿ ಯೋಗಗಳನ್ನು ಕೃಷ್ಣ ಹಂತಹಂತವಾಗಿ ತನ್ನ ಶಿಷ್ಯನಿಗೆ ಬೋಧಿಸಿದ್ದಾನೆ. ನನ್ನನ್ನು ಗೊಂದಲಗೊಳಿಸಬೇಡ. ನನಗೆ ಹಿತವಾಗುವ ಒಂದನ್ನು ಸ್ಪಷ್ಟವಾಗಿ ಬೋಧಿಸು ಎಂಬುದಾಗಿ ಅರ್ಜುನ ಪ್ರಾರ್ಥಿಸಿದ್ದಾನೆ. ಅಧ್ಯಾತ್ಮದಲ್ಲಿ ಆಳವಾದ
ಪ್ರವೇಶವಿರದ ನಮ್ಮಂಥ ಆಧುನಿಕರಿಗೆ ಕೃಷ್ಣನ ಕರ್ಮಯೋಗ ಅಸಾಮಾನ್ಯವಾದ ಅಮೃತಬೋಧೆ. ಕರ್ಮಯೋಗದ ಗ್ರಹಿಕೆ ಮತ್ತು ಜೀವನ ಕ್ರಮದಲ್ಲಿ ಕಾಯಾವಾಚಾಮನಸಾ ತೊಡಗುವಿಕೆಗೆ ನಾನು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದೇನೆ. ಬೀಳುತ್ತಾ, ಏಳುತ್ತಾ, ಕರ್ಮಯೋಗದ ಅನುಸಂಧಾನದಲ್ಲಿ ತೊಡಗುವ ಯತ್ನಮಾಡುತ್ತಿದ್ದೇನೆ. ಹೀಗಾಗಿಯೇ ಗೀತೆಯು ಒಂದು ಪ್ರಾಯೋಗಿಕ ತತ್ತ್ವ ಬೋಧೆ ಎಂದು  ನನಗೆ ತೋರುತ್ತದೆ.

ಲೇಖಕರು: ಎಚ್ ಎಸ್ ವೆಂಕಟೇಶ ಮೂರ್ತಿ 

loader