ಬೀಜಿಂಗ್[ಏ.17]: ತಾಯಿ ಹೊಟ್ಟೆಯಲ್ಲಿದ್ದ ಅವಳಿ ಮಕ್ಕಳು ಹೊಡೆದಾಡಿಕೊಂಡು ಜಗಳೋವಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ಈ ಅಲ್ಟ್ರಾಸೌಂಡ್ ವಿಡಿಯೋ ವೀಕ್ಷಿಸಲಾಗುತ್ತಿದ್ದು, ಪ್ರೇಕ್ಷಕರು ಇದನ್ನು ಬಹಳಷ್ಟು ಇಷ್ಟ ಪಡುತ್ತಿದ್ದಾರೆ. 

ಇದು ಚೀನಾದಲ್ಲಿ ನಡೆದ ಘಟನೆಯ ವಿಡಿಯೋ ಎನ್ನಲಾಗಿದೆ. 2018ರಲ್ಲೇ ಇದು ಚೀನಾದಲ್ಲಿ ಶೇರ್ ಮಾಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯ ಅಲ್ಟ್ರಾಸೌಂಡ್ ವಿಡಿಯೋ ಇದಾಗಿದೆ. ಪರೀಕ್ಷೆಗೆಂದು ಆಸ್ಪತ್ರೆಗೆ ತೆರಳಿದ್ದ ವೇಳೆ ಅವಳಿ ಮಕ್ಕಳು ಪರಸ್ಪರ ಮುಖಕ್ಕೆ ಹೊಡೆದು ಜಗಳವಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ಕೂಡಲೇ ಮಕ್ಕಳ ತಂದೆ ಟಾವೋ ಈ ವಿಡಿಯೋ ಚಿತ್ರೀಕರಿಸಿದ್ದಾರೆ.

ಚೀನಾದ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಕ್ಕಳ ತಂದೆ 'ಹೊಟ್ಟೆಯೊಳಗಿದ್ದ ಮಕ್ಕಳು ಬಹಳಷ್ಟು ಸಮಯ ಪರಸ್ಪರ ಹೊಡೆದಾಡಿಕೊಂಡಿದ್ದವು' ಎಂದಿದ್ದಾರೆ. ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟಿದೆ. 

ಈಗ ಮಕ್ಕಳು ಜನಿಸಿದ್ದು, ಚೆರಿ ಹಾಗೂ ಸ್ಟ್ರಾಬೆರಿ ಎಂದು ನಾಮಕರಣ ಮಾಡಿದ್ದಾರೆ. ಹೀಗಿದ್ದರೂ ಈ ವಿಡಿಯೋ ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಹರಿದಾಡುತ್ತಿದೆ. 'ಹೊಟ್ಟೆಯೊಳಗೇ ಹೀಗೆ ಜಗಳವಾಡಿದ್ದಾರೆ ಆದರೆ ಹೊರ ಬಂದ ಬಳಿಕ ಪರಸ್ಪರ ಪ್ರೀತಿಯಿಂದ ಇರುತ್ತಾರೆ' ಎಂದು ವೀಕ್ಷಕನೊಬ್ಬ ಕಮೆಂಟ್ ಮಾಡಿದ್ದಾನೆ.