ಎದುರು ಮನೆ, ಪಕ್ಕದ ಮನೆ ಹೆಂಗಸರಲ್ಲಿ ಶೀತಲ ಸಮರ ಶುರುವಾಗಿರುತ್ತದೆ. ಗಂಡ ಮನೆಗೆ ಬರೋದೆ ತಡ, ಮನೆಯಲ್ಲಿ ಟಿವಿ ಸದಾ ಆನ್ ಇರುತ್ತದೆ. ಜಾಹಿರಾತು ಬರುವುದೇ ತಡ, ಹೆಂಡತಿ ದೊಡ್ಡ ದನಿಯಲ್ಲಿ ,ಪಕ್ಕದ ಮನೆ ಪದ್ಮಕ್ಕನ ಮನೆಲ್ಲಿರೋದು ಇದೆ ಫ್ರಿಜ್..ಎದುರುಗಡೆ ಮನೆ ಹೇಮನ ಮನೆಯಲ್ಲಿರೋದು..

ಸುಮನ್ ಆರ್‌ ಶಿವಣ್ಣ

ಜಾಹೀರಾತು ಇಲ್ಲದ ಜಗತ್ತನ್ನು ಇಂದು ಕಲ್ಪಿಸಿಕೊಳ್ಳಲೂ ಅಸಾಧ್ಯ! ಆಡ್ (Add) ಎಂಬ ಪದ ಅದೆಷ್ಟು ಅಗಾಧವಾಗಿ ಬಳಕೆಯಾಗುತ್ತಿದೆ ಎಂದರೆ ಅಡ್ವರ್ಟೈಸ್‌ಮೆಂಟ್ ಇಲ್ಲ ಎಂದರೆ ವಸ್ತುಗಳೇ ಇಲ್ಲವೇನೋ ಎಂಬಷ್ಟು! ಆಕರ್ಷಣಿಯ, ಪರಿಣಾಮಕಾರಿ, ಪ್ರಯೋಜನಕಾರಿ, ಅದ್ಭುತ.. ಅತ್ಯದ್ಭುತ ಎಂದು ಒಂದಕ್ಕೊಂದು ಸಂಬಂಧವೇ ಇರದ ಪದಗಳಿಂದ ಸುಳ್ಳಿನ ಲೋಕವನ್ನೇ ಸೃಷ್ಟಿಸಿ ಒಂದು ಕೆಜಿ ಒಂದೂವರೆ ಕೆಜಿ ಮೇಕಪ್ ಹಾಕ್ಕೊಂಡು ವರ್ಣಿಸುವುದನ್ನೇ 'ಈ ಕಾಲದ ಜಾಹಿರಾತು' ಎನ್ನಬಹುದು.

ಕಪ್ಪಗಿದ್ದವರು ಬೆಳ್ಳಗಾಗಬಹುದು.. ತೆಳ್ಳಗಿದ್ದವರು ದಪ್ಪಗಾಗಬಹುದು.. ದಪ್ಪ ಇದ್ದವರು ತೆಳ್ಳಗಾಗಬಹುದು. ಗಿಡ್ಡ ಇದ್ದವರು ಉದ್ದ ಆಗಬಹುದು.. ಉದ್ದ ಇದ್ದವರು ಗಿಡ್ಡ ಆಗುವ ಅಗತ್ಯವಿಲ್ಲದೇ ಇದ್ದರೂ ಬೇಕಾದರೆ ಮಾಡಿಕೊಳ್ಳಬಹುದು. ನಿಮ್ಮ ಕೊಳೆಯಾದ ಬಟ್ಟೆ, ಪಾತ್ರೆ, ತಿಕ್ಕದೇ ಉಜ್ಜದೇ ಬಿಳಿ ಬಿಳಿ ಆಗುತ್ತದೆ ಎಂದೋ, ಒಂದೋ ಎರಡೋ..! ಇನ್ನು ಈ ಜಾಹಿರಾತುಗಳು ಹೇಳುವುದು ಒಂದಲ್ಲ, ಎರಡಲ್ಲ. ತುಂಬಾ ಆಸಕ್ತಿನಿಂದ ಟಿವಿ ನೋಡುತ್ತಿದ್ದಾಗ ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ 'ನನ್ನದೊಂದು ಎಲ್ಲಿ ಇಡ'ಲಿ ಎಂದು ಬಂದು ಬಿಡುತ್ತೆ!

ಇನ್ನು ಧಾರವಾಹಿಗಳು ಅಥವಾ ರಿಯಾಲಿಟಿ ಶೋಗಳನ್ನು ಕುತೂಹಲದಿಂದ ನೋಡುತ್ತಿರುವಾಗ ಬರುವ ಈ ಜಾಹೀರಾತುಗಳು ಹೆಂಗಸರಿಗೆ ದೊಡ್ಡ ದುಶ್ಯನ್ ಎನ್ನಬಹುದೇ? ಆದರೆ ಹಾಗೆ ಹೇಳುವ ಮೊದಲು ತಾಳಿ.. ಕೆಲವು ಬಾರಿ ಜಾಹೀರಾತು ಬರುವ ನಿಮಿಷಗಳಲ್ಲಿ ಅಡುಗೆ ಮನೆಯಲ್ಲಿ ತರಾತುರಿಯಲ್ಲಿ ಕೆಲಸ ಮಾಡಿಕೊಂಡು ಬರುವ ಸೂಪರ್ ಫಾಸ್ಟ್ ಮಹಿಳೆಯರಿಗೆ ಇದು ವರವೂ ಆಗಬಹುದು. ಕೆಲವು ಬಾರಿ ಎಷ್ಟೋ ಮನೆಗಳಲ್ಲಿ ಉಕ್ಕುತ್ತಿರುವ ಹಾಲು, ಅನ್ನ-ಸಾಂಬಾರುಗಳನ್ನು ಉಳಿಸಿರುವ ಖ್ಯಾತಿಯನ್ನು ಕೂಡ ಟಿವಿ ಜಾಹೀರಾತುಗಳು ಪಡೆದಿದ್ದೂ ಇದೆ.

ಕೆಲವರಿಗೆ ಮಾರುಕಟ್ಟೆಗೆ ಯಾವುದೇ ಹೊಸ ವಸ್ತು ಬರಲಿ ಅದನ್ನು ಖರೀದಿಸುವ ಚಟವಿರುತ್ತದೆ. ಈ ಎದುರು ಮನೆ, ಪಕ್ಕದ ಮನೆ ಹೆಂಗಸರಲ್ಲಿ ಶೀತಲ ಸಮರ ಶುರುವಾಗಿರುತ್ತದೆ. ಗಂಡ ಮನೆಗೆ ಬರೋದೆ ತಡ, ಮನೆಯಲ್ಲಿ ಟಿವಿ ಸದಾ ಆನ್ ಇರುತ್ತದೆ. ಜಾಹೀರಾತು ಬರುವುದೇ ತಡ, ಹೆಂಡತಿ ದೊಡ್ಡ ದನಿಯಲ್ಲಿ 'ಪಕ್ಕದ ಮನೆ ಪದ್ಮಕ್ಕನ ಮನೆಲ್ಲಿರೋದು ಇದೆ ಫ್ರಿಜ್.. ಎದುರುಗಡೆ ಮನೆ ಹೇಮನ ಮನೆಯಲ್ಲಿರುವುದು ಇದೇ ಕಂಪನಿಯ ವಾಷಿಂಗ್ ಮಷಿನ್.. ಜಾಹೀರಾತಿನಲ್ಲಿ ಬಂದು ನಾಲ್ಕು ದಿನ ಆಗಿಲ್ಲ, ಆ ಕಾರ್ನರ್ ಕಮಲಕ್ಕನ ಮನೇಲಿ ಇದೇ ಕಂಪನಿಯ ಎಸಿ, ಹೊ.., ನಮ್ಮ ಮನೆಗೆ ಅದು ಯಾವ ಶತಮಾನಕ್ಕೆ ಬರುತ್ತೋ...' ಎಂದು ಬೊಬ್ಬೆ ಹೊಡೆಯತೊಡಗುತ್ತಾರೆ. ಈ ಜಾಹೀರಾತುಗಳು ಅದೆಷ್ಟು ಸಂಸಾರಗಳಲ್ಲಿ ಹುಳಿ ಹಿಂಡಿದೆಯೋ ಏನೋ?

ಯಾವುದೇ ಮೂಲೆಯಿಂದ ಬಂದು 'ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಉಪ್ಪು ಇದೆಯೇ?' ಎಂದು ಕೇಳುವ ಮಹಿಳೆ. ಅದನ್ನು ಕೇಳಿ ಕೇಳಿ ಸಾಕಾಗಿ ಒಬ್ಬ ನಮ್ಮ ಟೂತ್‌ಪೇಸ್ಟ್‌ನಲ್ಲಿ 'ಉಪ್ಪು ಅಷ್ಟೇ ಅಲ್ಲ, ಖಾರ, ಮಸಾಲೆ ಎಲ್ಲಾನೂ ಇದೆ. ನಮ್ಮ ಮನೇಲಿ ಅದನ್ನೆ ಹಾಕಿ ಒಗ್ಗರಣೆ ಕೊಡ್ತಾರೆ' ಎಂದು ಹೇಳಿದ ಧೀರ . 'ಆಶೀರ್ವಾದ್ ಗೋಧಿಹಿಟ್ಟು, ಅದೂ ಇದೂ ಅಂತ ಅದೆಷ್ಟೋ ಹಿಟ್ಟು-ಸ್ವೀಟುಗಳು ನಮ್ಮ ದೇಶದ ಉತ್ಪಾದನೆಯೇ ಅಲ್ಲ. ಆದರೆ ವಿದೇಶದ ಆ ಉತ್ಪಾದನೆಗಳನ್ನು ನಮ್ಮ ದೇಶದಲ್ಲಿ ನಮ್ಮ ದೇಶದ ನೆಟಿವಿಟಿಗೆ ತಕ್ಕ ಹೆಸರಿನಿಂದ ಪ್ರಚಾರಗೊಳಿಸುತ್ತಾರೆ.

ಇನ್ನು ಸಿನಿಮಾಗಳಿಗೆ ಕೊಡುವ ಜಾಹೀರಾತುಗಳಿಗೆ ವಿದೇಶಿಯರೇ ಬಂಡವಾಳ ಮಾಡಬೇಕು. ದೇಶಿಯ ಉತ್ಪನ್ನಗಳು ಅವರಿಗೆ ಅಷ್ಟೊಂದು ದುಡ್ಡು ಮಾಡಲ್ಲ. ಅವರು ನಮ್ಮನ್ನು ಸರಳವಾಗಿ ನಮಗೆ ಹತ್ತಿರವಾದ ಮಾರ್ಗದಿಂದಲೇ ಯಾಮಾರಿಸುತ್ತಾರೆ. ಆದರೆ ಜನಸಾಮಾನ್ಯರು ಇದ್ಯಾವುದನ್ನು ಯೋಚಿಸುವುದಿಲ್ಲ. ನಾವು ಲೈಫಲ್ಲಿ ಒಂದು ನಿರ್ಧಾರವನ್ನು ಕೈಗೊಳ್ಳಬೇಕಾದರೆ ಒಂದಲ್ಲಾ ನೂರು ಬಾರಿ ಯೋಚಿಸುತ್ತೇವೆ. ಅದೇ ಒಂದು ವಸ್ತುವನ್ನು ಖರೀದಿಸಬೇಕು ಎಂಬುದು ಕೂಡ ಒಂದು ನಿರ್ಧಾರವೇ ಅಲ್ಲವೇ? ಆದರೆ ಇದರ ಬಗ್ಗೆ ಏಕೆ ಯೋಚಿಸೋದಿಲ್ಲ?

ಕಾಂಪ್ಲಾನ್, ಹಾರ್ಲಿಕ್ಸ್ ಕಂಪನಿಗಳು ವಿದೇಶವೊಂದರಲ್ಲಿ ಒಂದು ಬಾರಿ ಜಾಹೀರಾತು ಕೊಟ್ಟಿತು. ಕೊಟ್ಟ ಒಂದೇ ತಾಸಿಗೆ ಆ ಹಾರ್ಲಿಕ್ಸ್ ಕಂಪನಿ ಸಾವಿರ ಲಕ್ಷಗಟ್ಟಲೆ ದಂಡ ಕಟ್ಟಬೇಕಾಯಿತು ಆದರೆ ನಮ್ಮ ಭಾರತ ಇಂಥದಕ್ಕೆಲ್ಲಾ ತುಂಬಾ ಧಾರಾಳಿ ಎನ್ನಿಸಿಕೊಂಡ ದೇಶ. ಅದು ನಮ್ಮ ಜನರೇಶನ್ ಹುಟ್ಟಿನಿಂದಾಗಲೂ ಇದೆ.. ( I am a Complain boy.., Boost is the Secret of our Energy.. ) ಎಂದು ನನ್ನ ತಲೆಯಲ್ಲೂ ಅಚ್ಚೊತ್ತಿಬಿಟ್ಟಿದೆ. ಇನ್ನು ಎಷ್ಟು ತಲೆಮಾರುಗಳ 'ಡಿಎನ್ಎ'ಯಲ್ಲಿ ಅದು ಅಚ್ಚು ಆಗುತ್ತೋ ನಾ ಕಾಣೆ! ಆದರೆ ಒಂದಂತೂ ಸತ್ಯ, ಏನೆಂದರೆ, ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ.

ಇಂತಹ ಜಾಹಿರಾತುಗಳ ಜರೂರ್ ಇದೆಯೇ? ಇನ್ನು, ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಹಾನಿಕಾರಕವೆಂದು ಬರೆದಿದ್ದರೂ, ಅದನ್ನು ಓದಿಯೂ ಚಿತ್ರಗಳನ್ನು ನೋಡಿಯೂ ಉಪಯೋಗಿಸುವವರು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುವುದು ಸಾಮಾನ್ಯ ಸಂಗತಿ ಎನ್ನಬಹುದು. ನೀವು ಎಷ್ಟೇ ದುಡ್ಡು ಕೊಟ್ಟರೂ ನಿಮ್ಮ ಆಯುಷ್ಯದಲ್ಲಿ ಒಂದು ಘಳಿಗೆ, ದಿನವನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅಂತಹುದರಲ್ಲಿ ನಾವು ದುಡ್ಡು ಕೊಟ್ಟು ನಿಮ್ಮ ಆಯಷ್ಯವನ್ನು ನೀವೇ ಕ್ಷೀಣಿಸಿಕೊಳ್ಳುತ್ತಿದ್ದೀರಿ.

ಯಾವುದೇ ಜಾಹೀರಾತು ಇರಲೀ ಅದು ಪ್ರಸ್ತುತಪಡಿಸುವ ಉತ್ಪನ್ನಗಳಲ್ಲಿ ನಿಜಾಂಶ, ನಿಖರತೆ, ಸ್ಪಷ್ಟತೆ, ಪರಿಣಾಮಗಳು, ದುಷ್ಪರಿಣಾಮಗಳು ಎಲ್ಲವನ್ನು ನಿಖರವಾಗಿ ಸಾಬೀತುಪಡಿಸಬೇಕು. ಇಲ್ಲವಾದರೆ ಅದು ಬಳಕೆಗೆ ಅನರ್ಹ. ಅಂತಹ ಜಾಹಿರಾತುಗಳ ಜರೂರತ್ ಇಲ್ಲವೇ ಇಲ್ಲ. ಗ್ರಾಹಕರು ವಸ್ತು ನಿಷ್ಠತೆಗೆ ಬೆಲೆ ಕೊಡಬೇಕೆ ಹೊರತು ವಸ್ತುವಿನ ಆಕರ್ಷಣೆ, ಆಡಂಬರಕಲ್ಲ! ಈ ಟಿವಿ ಹಾಹೀರಾತುಗಳ ಹಾವಳಿಗಳ ಹೇಳಹೊರಟರೆ ನೂರಾರು ಹೇಳಬಹುದು, ಆದರೆ ನಮಗೆ ಇರಬೇಕಾದ 'ಎಚ್ಚರಿಕೆ' ಎಂಬ ಒಂದೇ ಪದ ಆ ಎಲ್ಲಾ ನೂರು ಪದಗಳಿಗೆ ಕಡಿವಾಣ ಹಾಕಲು ಸಾಕು! ಎನಂತೀರಾ?