ಚಿಕ್ಕಮಗಳೂರು ತರೀಕೆರೆಯ ಮಂಗಳಮುಖಿಯರ ಕೃಷಿ ಸಾಹಸ!
ಅನೇಕ ತೊಂದರೆಗಳು ಒಂದರ ಹಿಂದೊಂದು ಬಂದು ಸೋತೆ ಅಂತನ್ನಿಸಿದಾಗ ಯಾವುದೋ ಒಂದು ಊರಿನಿಂದ ಒಂದೊಳ್ಳೆಯ ಕತೆ ಬಂದು ಸ್ಫೂರ್ತಿಗೊಳಿಸುತ್ತದೆ. ಅಂಥಾ ಕತೆ ಇದು. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾಗ ಅವಮಾನ ಉಂಟಾಗಿದ್ದಕ್ಕೆ ಬೇಸತ್ತು ಊರಿಗೆ ಮರಳಿ ಕೃಷಿ ಸಾಧನೆ ಮಾಡಿದ ಮಂಗಳಮುಖಿಯರ ಸ್ಫೂರ್ತಿ ಕತೆ. ಚಿಕ್ಕಮಗಳೂರಿನ ತರೀಕೆರೆಯ ಅಂಜು, ಮೇಘ ಮಲ್ನಾಡ್, ಸ್ಫೂರ್ತಿ, ಹರ್ಷಿತ, ಪ್ರೇಮಾ, ಭಾಗ್ಯ ಇವರ ಸಾಧನೆಯ ಕತೆ.
ಆರ್. ತಾರಾನಾಥ್ ಚಿಕ್ಕಮಗಳೂರು
ಸಮಾಜದಲ್ಲಿ ಎಲ್ಲರಂತೆ ನಾನಿಲ್ಲ ಎಂಬ ನೋವು ಒಂದು ಕಡೆಯಾದರೆ, ಎಲ್ಲರೂ ನೋಡುವ ದೃಷ್ಟಿ, ಆಡುವ ಮಾತುಗಳು ಮನಸ್ಸು ಕುಗ್ಗಿಸುತ್ತದೆ. ಈ ನಡುವೆ ಅವಮಾನದಿಂದಲೇ ಮೇಲೆದ್ದು ಸ್ವಾಭಿಮಾನದ, ಇತರರಿಗೂ ಮಾದರಿಯಾಗಿ ಪ್ರೋತ್ಸಾಹ ನೀಡುತ್ತ ಜೀವನ ಸಾಗಿಸುತ್ತಿರುವವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತೃತೀಯ ಲಿಂಗಿ ಅಂಜು.
ಬಸ್‌ನಲ್ಲೆ ಗಿಡ ಬೆಳೆಸುವ ಬಿಎಂಟಿಸಿ ಚಾಲಕ,ನಿರ್ವಾಹಕ!
ಒಂದು ಕಾಲದಲ್ಲಿ ಬೆಂಗ್ಳೂರಿನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಅಂಜು, ಹಲವು ರೀತಿಯಲ್ಲಿ ಅವಮಾನಕ್ಕೊಳಗಾಗಿ, ಬದುಕು ಸಾಕಾದಾಗ ಅವರಿಗೆ ಕಂಡದ್ದು ಕೃಷಿ ಭೂಮಿ. ಇದರಿಂದ ಬೇಸತ್ತಿದ್ದ ಅವರು ತಮ್ಮ ಹುಟ್ಟೂರಾದ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರಕ್ಕೆ ಬಂದರು. ಬೇರೆ ಬೇರೆ ರಾಜ್ಯಗಳಲ್ಲಿದ್ದು, ಅಲ್ಲಿನ ವಾತಾವರಣ, ಜನರಾಡುತ್ತಿದ್ದ ಚುಚ್ಚು ಮಾತುಗಳು, ಮನಸ್ಸಿಗೆ ಆಗುತ್ತಿದ್ದ ನೋವಿನಿಂದ ಹೊರ ಬರಲು ಒದ್ದಾಡುತ್ತಿದ್ದ ಅವರು ಕಡೆಗೆ ಮೊರೆ ಹೋಗಿದ್ದು ಕೃಷಿಗೆ. ಕೃಷಿಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು. ಎಷ್ಟುಕೃಷಿಯಲ್ಲಿ ತೊಡಗಿಸಿ ಕೊಂಡರು ಅಂದ್ರೆ ಈಗ ಬಿತ್ತನೆಯಿಂದ ಕಟಾವಿನವರೆಗೂ ಕೃಷಿಯಲ್ಲಿ ಪರಿಣಿತರಾಗಿದ್ದಾರೆ. ಅಂಜು ಅವರಿಂದ ಪ್ರೇರಿತರಾದ ಪಕ್ಕದ ಗ್ರಾಮದ ಹರ್ಷಿತಾ ಸಹ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ತಮ್ಮ ವರ್ಗದ ಜನರಿಗೆ ಹಲವು ರೀತಿಯಲ್ಲಿ ನೆರವಾಗಿ ಸ್ನೇಹಿತೆಯರಿಗೂ ಇದರಲ್ಲಿ ಸಕ್ರಿಯಗೊಳಿಸಿ ಸಮೂಹ ಕೃಷಿ ನಡೆಸುತ್ತಿದ್ದಾರೆ.
ನಾವೇನಾದರು ಒಂದು ವಸ್ತುವನ್ನು ಕಳೆದುಕೊಂಡರೆ, ಎಲ್ಲಿ ಕಳೆದಿತ್ತೋ ಅದೇ ಜಾಗದಲ್ಲಿ ಹುಡುಕಿದರೆ ಸಿಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅಂತೆಯೇ ಈ ಮೊದಲು ನಾನು ಬೆಂಗ್ಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದೆ. ಸಾಕಷ್ಟುಜನರಿಂದಾದ ಅವಮಾನ ಸಹಿಸದೆ ನನ್ನೂರಿಗೆ ವಾಪಸ್ಸಾಗಿ ಕೃಷಿ ಮಾಡಿ ನೆಮ್ಮದಿ ಜೀವನ ನಡೆಸುತ್ತಿದ್ದೇನೆ.- ಅಂಜು, ತೃತೀಯ ಲಿಂಗಿ
ಬದುಕು ಕಟ್ಟಿಕೊಟ್ಟಕೃಷಿ
ಆರಂಭದಲ್ಲಿ ಅಂಜು ತಮ್ಮ ತಂದೆಯಿಂದ ಎರಡು ಎಕ್ರೆ ಹೊಲ ಪಡೆದು ಅದರಲ್ಲಿ ಆಲೂಗಡ್ಡೆ, ಬೀನ್ಸ್, ಬಟಾಣಿ, ಸುಲಿಯೋ ಕಾಳು ಬೆಳೆಯಲು ಆರಂಭಿಸಿದರು. ಇದಕ್ಕೆ ತೃತೀಯ ಲಿಂಗಿಗಳಾದ ಮೇಘ ಮಲ್ನಾಡ್, ಸ್ಫೂರ್ತಿ, ಹರ್ಷಿತ, ಪ್ರೇಮಾ, ಭಾಗ್ಯ ಸಹಾಯಕ್ಕೆ ಬಂದರು. ಬಿತ್ತನೆ, ಗಿಡಗಳಿಗೆ ಗೊಬ್ಬರ, ಔಷಧ ಸಿಂಪಡನೆ, ಕಳೆ ಕೀಳುವುದು ಹೀಗೆ ಫಸಲು ಕೈ ಸೇರುವವರೆಗೂ ಎಲ್ಲರೂ ಒಗ್ಗೂಡಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ.
ಲಾಠಿಯನ್ನೇ ಕೊಳಲಾಗಿಸಿದ ಪೊಲೀಸ್ ಚಂದ್ರಕಾಂತ್!
ಸ್ನೇಹಿತರ ಸಹಾಯ
ಅಂಜು ತಮ್ಮಂತೆಯೇ ಇರುವ ತಮ್ಮ ವರ್ಗದ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾದರು. ಒಂದರ್ಥದಲ್ಲಿ ಸ್ನೇಹಿತರು ಕೃಷಿ ಚಟುವಟಿಕೆಯಲ್ಲಿ ಕೈಜೋಡಿಸಿದ್ದೇ ಅಂಜು ಅವರ ಆತ್ಮಸ್ಥೈರ್ಯ ತುಂಬಿಸಿತು. ಇದರಿಂದಾಗಿ 2 ಎಕ್ರೆ ತನ್ನ ಸ್ವಂತ ಹೊಲವಾಗಿದ್ದರೆ, 2018ರಲ್ಲಿ ಪಕ್ಕದಲ್ಲಿದ್ದ ಎರಡೂವರೆ ಎಕ್ರೆ ಹೊಲವನ್ನು ಗುತ್ತಿಗೆ ತೆಗೆದುಕೊಂಡು ಬಿತ್ತನೆ ಮಾಡಿದರು. ಈ ವರ್ಷ ಮತ್ತೆರಡು ಎಕ್ರೆ ಕೃಷಿಗಾಗಿ ಗುತ್ತಿಗೆ ತೆಗೆದುಕೊಂಡಿದ್ದು, ಕೃಷಿ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಬಟಾಣಿಗೆ ಒಳ್ಳೆಯ ಬೆಲೆ ಸಿಗುತ್ತಿತ್ತು. ಸುಮಾರು ಲಕ್ಷ ರುಪಾಯಿ ಆದಾಯ ಪಡೆಯುತ್ತಿದ್ದಾರೆ. ದರೆ ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಬರಲ್ಲಿಲ್ಲ ಹಾಗಾಗಿ 15 ಸಾವಿರ ಕೈ ಸೇರಿತು ಎನ್ನುತ್ತಾರೆ ಅಂಜು.
ಪರಸ್ಪರ ಸಹಕಾರ ಇದ್ದರೆ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದರೆ ಸುಂದರ ಜೀವನ ನಡೆಸಲು ಸಾಧ್ಯ. ಇದನ್ನು ನಾವುಗಳು ಕಂಡು ಕೊಂಡಿದ್ದೇವೆ - ಮೇಘ ಮಲ್ನಾಡ್
ಇತರೆ ರೈತರಿಗೂ ಮಾದರಿ
ಅಂಜು ಅವರ ಕೆಲಸ ನೋಡಿ ಅದೇ ಗ್ರಾಮದ ಸಮೀಪದಲ್ಲಿರುವ ಕಲ್ಲತ್ತಗಿರಿಯ ತೃತೀಯ ಲಿಂಗಿ ಹರ್ಷಿತಾ ಪ್ರೇರಣೆ ಹೊಂದಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹರ್ಷಿತಾ ತಮ್ಮ ಎರಡು ಎಕ್ರೆ ಭೂಮಿಯಲ್ಲಿ ಆಲೂಗೆಡ್ಡೆ, ಬೀನ್ಸ್, ಅವರೆ ಬೆಳೆಯುತ್ತಿದ್ದಾರೆ. ಇಲ್ಲೂ ಈ ಸ್ನೇಹಿತರೆ ಬಿತ್ತನೆ ಕಟಾವು ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ವಿವಿಧ ಕಾರಣದಿಂದಾಗಿ ಜಮೀನು ಮಾರಾಟ ಮಾಡುವ ರೈತರೂ ಈ ತೃತೀಯ ಲಿಂಗಿಗಳನ್ನು ನೋಡಿ ತಮ್ಮ ಉಳುವ ಭೂಮಿಯನ್ನು ಮಾರಾಟ ಮಾಡಬಾರದು, ಅದರಲ್ಲಿ ಬದುಕು ಕಂಡುಕೊಳ್ಳಬೇಕು, ಬರಡು ನೆಲವನ್ನು ಹಸಿರು ಮಾಡಬಹುದು ಎಂಬ ಸಂದೇಶ, ಛಲ ಬರುವಂತೆ ಈ ವರ್ಗದ ಜನ ತಮ್ಮ ಶ್ರಮ, ಒಗ್ಗಟ್ಟಿನ ಮೂಲಕ ಸಾಕ್ಷೀಕರಿಸಿದ್ದಾರೆ.
ಸ್ನೇಹಜೀವಿಗಳು
ಇಲ್ಲಿರುವ ತೃತೀಯ ಲಿಂಗಿಗಳು ಸ್ನೇಹ ಜೀವಿಗಳು. ತಮ್ಮ ಮನೆಗಳಲ್ಲಿ ಯಾವುದೇ ಶುಭಾ ಕಾರ್ಯ ನಡೆಯಲಿ ಎಲ್ಲರನ್ನೂ ಕರೆಯುತ್ತಾರೆ, ಯಾರೊಬ್ಬರೂ ಬರುವುದಿಲ್ಲ ಎಂದು ಹೇಳುವುದಿಲ್ಲ. ಅಂಜು ಹಾಗೂ ಹರ್ಷಿತಾ ಅವರೂ ತಮ್ಮ ಸ್ನೇಹಿತೆಯರನ್ನು ಮರೆಯುವುದಿಲ್ಲ. ಹೊಲದಲ್ಲಿ ಹಾಕಿರುವ ಫಸಲು ಕಟಾವು ಆಗಿ ಕೈಗೆ ಹಣ ಸಿಗುತ್ತಿದ್ದಂತೆ ಎಲ್ಲರೂ ಸೇರಿಕೊಂಡು ಕಲ್ಲತ್ತಗಿರಿ, ಸವದತ್ತಿ ಯಲ್ಲಮ್ಮ, ಧರ್ಮಸ್ಥಳ ಹಾಗೂ ಇತರೆ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ ಸಲ್ಲಿಸಿ, ಸಂತೋಷದಿಂದ ಕೆಲ ದಿನ ಕಳೆದು ಮರಳಿ ತಮ್ಮ ಊರುಗಳಿಗೆ ತೆರಳುತ್ತಾರೆ. ಪ್ರತಿ ವರ್ಷ ಈ ರೀತಿ ಮಾಡುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪರಸ್ಪರ ಕಷ್ಟದಲ್ಲಿ ಸಹಾಯವಾಗುತ್ತಾರೆ. ಯಾವುದೇ ಒಳ್ಳೆಯ ಕೆಲಸ ಮಾಡುವಾಗಲೂ ಸ್ವಯಂ ಪ್ರೇರಿತವಾಗಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.ಪೋಟೋ ಫೈಲ್ ನೇಮ್ 25 ಕೆಸಿಕೆಎಂ 1