Asianet Suvarna News Asianet Suvarna News

ಲಾಠಿಯನ್ನೇ ಕೊಳಲಾಗಿಸಿದ ಪೊಲೀಸ್‌ ಚಂದ್ರಕಾಂತ್‌!

ಲಾಠಿ ಹಿಡಿದ ಕೈ ಕೊಳಲು ಹಿಡಿದಿದ್ದಷ್ಟೇ ಅಲ್ಲ, ಲಾಠಿಯನ್ನೇ ಕೊಳಲನ್ನಾಗಿ ಪರಿವರ್ತಿಸಿ ಇಡೀ ಕರ್ನಾಟಕದ ಮನ ಗೆದ್ದಿದೆ. ಅವರ ಹೆಸರು ಚಂದ್ರಕಾಂತ ಎಸ್‌ ಹುಡಗಿ. ಊರು ಹುಬ್ಬಳ್ಳಿ. ಯಾವುದೇ ಗುರುವಿನ ಮಾರ್ಗದರ್ಶನ ಇಲ್ಲದೆ ಸ್ವಂತ ಅಧ್ಯಯನದಿಂದ ಸಂಗೀತದ ಕೆಲ ರಾಗ ಕಲಿತು, ತವೇ ತಮ್ಮ ಲಾಠಿಯನ್ನು ಕೊಳಲಾಗಿಸಿ ಸಂಗೀತ ಹೊಮ್ಮಿಸುತ್ತಾರೆ. ಅವರ ಒಂದು ವೀಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು. ಅವರ ಸಂಪೂರ್ಣ ಕತೆ ಇಲ್ಲಿದೆ.

Karnataka police head constable Chandrakanth baton into flute
Author
Bangalore, First Published Jun 8, 2019, 10:26 AM IST

ಮಯೂರ ಹೆಗಡೆ, ಹುಬ್ಬಳ್ಳಿ

ಲ್ಯಾಮಿಂಗ್ಟನ್‌ ಹೈಸ್ಕೂಲಲ್ಲಿ 8ನೇ ತರಗತಿ ಓದುತ್ತಿದ್ದಾಗ ಕಾರ್ಯಕ್ರಮವೊಂದಕ್ಕೆ ನಾನೂ ಕೊಳಲು ನುಡಿಸುತ್ತೇನೆಂದು ಮುಂದಾದಾಗ ನಿನಗೆಲ್ಲಾ ಎಲ್ಲಿ ಕೊಳಲೂದಲು ಬರುತ್ತದೆ ಎಂದಿದ್ದ ಆ ಶಿಕ್ಷಕರು ಸಹಪಾಠಿಗಳೆದುರು ಅವಮಾನ ಮಾಡಿದ್ದರು. ಆದರೆ, ಇವತ್ತು ನಾನು ಲಾಠಿಯನ್ನ ಕೊಳಲಾಗಿಸಿ ನುಡಿಸಿ ಜನ ಮನ ಗೆದ್ದಿದ್ದೇನೆ.

- ಹೀಗೆ ಹೇಳಿದ್ದು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಮುಖ್ಯಪೇದೆ ಚಂದ್ರಕಾಂತ ಎಸ್‌.ಹುಟಗಿ. ಲಾಟಿಯನ್ನೇ ಕೊಳಲಾಗಿ ಬದಲಿಸಿಕೊಂಡಿರುವ ಇವರ ಕೊಳಲೂದುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಸದ್ದು ಮಾಡಿದೆ. ಸ್ವತಃ ಹೆಚ್ಚುವರಿ ಪೊಲೀಸ್‌ ನಿರ್ದೇಶಕ ಭಾಸ್ಕರ್‌ ರಾವ್‌ ಅವರು ಹುಟಗಿಯವರನ್ನ ತಮ್ಮ ಕಚೇರಿಗೆ ಆಹ್ವಾನಿಸಿ ಅವರಿಂದ ಲಾಟಿಯಲ್ಲಿ ಕೊಳಲ ವಾದನ ಆಲಿಸಿ ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಅದನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲೂ ಹಾಕಿ ಹುಟಗಿ ಅವರನ್ನು ಶ್ಲಾಘಿಸಿದ್ದಾರೆ. ಇವರ ಈ ಕ್ರಿಯಾಶೀಲತೆಗೆ ಸಹೋದ್ಯೋಗಿಗಳೂ ತಲೆದೂಗುತ್ತಿದ್ದಾರೆ. ಸಾವಿರಾರು ಜನರ ಮನ ಗೆದ್ದಿರುವ ಹುಟಗಿಯವರ ಹೆಜ್ಜೆ ಗುರುತು ಇಲ್ಲಿದೆ.

ಯಾರು ಈ ಚಂದ್ರಕಾಂತ ಹುಟಗಿ

ಮನೆಯಲ್ಲಿನ ಬಡತನ, ಕಷ್ಟಪಟ್ಟು ಓದಿ 1992ರಲ್ಲಿ ಕರ್ನಾಟಕ ವಿವಿಯಿಂದ ಓಕಲ್‌ ಡಿಪ್ಲಮಾ ಪದವಿ ಪಡೆದ ಚಂದ್ರಕಾಂತ ಸಂಗೀತ, ನಾಟಕದಲ್ಲಿ ಪ್ರದರ್ಶನ ನೀಡುತ್ತಾ ಹೆಸರುಗಳಿಸಿದ್ದರು. ಆದರೆ ಇದರಿಂದ ಆರ್ಥಿಕವಾಗಿ ಯಾವುದೇ ಸಹಾಯ ಸಿಗಲಿಲ್ಲ. ನಂತರ ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ಪರೀಕ್ಷೆ ಬರೆದ ಹುಟಗಿ, ಸಂದರ್ಶನದಲ್ಲಿ ಆಯ್ಕೆಯಾದರು. ಮುಂದೇನು ಎಂದೇನು ಎಂದು ಮೂಡಿದ ಪ್ರಶ್ನೆಗೆ ತಂದೆಯ ಸಲಹೆಯಂತೆ 1993ರಲ್ಲಿ ಗದಗ ಜಿಲ್ಲೆಯ ಮುಳಗುಂದದಲ್ಲಿ ಮೊದಲ ಬಾರಿಗೆ ಪೊಲೀಸ್‌ ಸ್ಟೇಷನ್‌ನಲ್ಲಿ ಕಾನ್‌ಸ್ಟೇಬಲ್‌ ಆಗಿ ಇಲಾಖೆಗೆ ಸೇರಿದರು. ನಂತರ ಧಾರವಾಡದ ಗ್ರಾಮೀಣ ಠಾಣೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಹುಬ್ಬಳಿಯ ಗ್ರಾಮೀಣ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನನ್ನ ಸಂಗೀತ ಪ್ರತಿಭೆ ಬಗ್ಗೆ ಸಹೋದ್ಯೋಗಿಗಳಿಗೆ ಮಾತ್ರ ತಿಳಿದಿತ್ತು. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿದ ಮೇಲೆ ವೈರಲ್‌ ಆಗಿ ಜನರ ಮನ ಗೆದ್ದಿತು. ಇಷ್ಟುವರ್ಷದ ನನ್ನ ಸಂಗೀತ ಪ್ರಯತ್ನಕ್ಕೆ ಸಾರ್ಥಕತೆ ಸಿಕ್ಕಂತಾಗಿದೆ. ನನಗಿಂತ ನನ್ನ ತಾಯಿಗೆ ಹೆಚ್ಚು ಖುಷಿಯಾಗಿದ್ದು, ಸಾಕಷ್ಟುಜನರು ಗುರುತಿಸುವಂತಾಗಿದೆ. ಲಾಠಿಯನ್ನ ಕೊಳಲು ಮಾಡಿಕೊಂಡ ಸಂಗತಿ ಬಗ್ಗೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೆಚ್ಚುವರಿ ಪೊಲೀಸ್‌ ನಿರ್ದೇಶಕರ ಕಚೇರಿಗೆ ನನ್ನನ್ನು ಕರೆಸಿ ಪ್ರತಿಯೊಬ್ಬ ಹಿರಿಯ ಅಧಿಕಾರಿಗಳು ಕೂಡ ತಮ್ಮ ಕೊಠಡಿಗೆ ಕರೆದು ನುಡಿಸುವಂತೆ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಇನ್ನೂ ಹೆಚ್ಚಿನ ಸಂತೋಷ ತಂದುಕೊಟ್ಟಿದೆ. - ಚಂದ್ರಕಾಂತ ಹುಟಗಿ, ಹೆಡ್‌ಕಾನ್‌ಸ್ಟೇಬಲ್‌

ಬಾಲ್ಯದಿಂದಲೂ ಸಂಗೀತದಲ್ಲಿ ಒಲವು

ಹುಟಗಿ ಅವರದು ಸಂಗೀತದ ಕುಟುಂಬವಲ್ಲ. ಆದರೆ ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಹೈಸ್ಕೂಲ್‌ನಲ್ಲಿ ಕೊಳಲು ನುಡಿಸಲು ಮುಂದಾದಾಗ ಶಿಕ್ಷಕರಿಂದಲೇ ಅವಮಾನಕ್ಕೆ ಗುರಿಯಾದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಹುಟಗಿಯವರು ಯಾವುದೇ ಗುರವಿನ ಮಾರ್ಗದರ್ಶನ ಇಲ್ಲದೆಯೇ ಕೆಲವು ರಾಗಗಳ ಬಗ್ಗೆ ಅಧ್ಯಯನ ನಡೆಸಿ ಕಲಿತಿದ್ದಾರೆ. ಬಾಲ್ಯದಲ್ಲಿ ಸಹೋದರಿ ಜತೆಗೆ ಸಂಗೀತಕ್ಕೆ ಹೋಗುವಾಗ ಮಧ್ಯದಲ್ಲಿ ಅನಾರೋಗ್ಯದ ಸಮಸ್ಯೆ ಎದುರಾಗಿ ಅಲ್ಲಿಯೇ ಕೈಬಿಟ್ಟರು. ಆದರೆ ಸಹೋದರಿ ಸಂಗೀತ ಕಲಿತಿದ್ದಾರೆ. ಹುಟಗಿಯವರಿಗೆ ಮುಂದೆ ಸಂಗೀತ ಶಾಲೆ ತೆರೆಯುವ ಆಸೆ ಹೊತ್ತಿದ್ದಾರೆ. ಅವರ ಮಗಳು ಕಥಕ್‌ ನೃತ್ಯ ಕಲಿಯುತ್ತಿದ್ದು, ಮಗ ರಾರ‍ಯಪ್‌ ಮಾಡುತ್ತಾರೆ.

ಲಾಠಿಯಲ್ಲಿ ಅರಳಿದ ಕೊಳಲು

ಅದು ಚುನಾವಣಾ ಕರ್ತವ್ಯಕ್ಕೆಂದು ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಲ್ಲಿ ಒಂದಾದ ದತ್ತಪೀಠಕ್ಕೆ ಭದ್ರತೆಗೆ ತೆರಳಬೇಕಿತ್ತು. ಕರ್ತವ್ಯದಲ್ಲಿದ್ದಾಗ ನಾಲ್ಕೈದು ಗಂಟೆ ಒಂದೇ ಕಡೆ ಕುಳಿತುಕೊಳ್ಳಬೇಕಿತ್ತು. ಆಗ ಸುಮ್ಮನೆ ಕುಳಿತುಕೊಳ್ಳಲು ಚಂದ್ರಕಾಂತ ಎಸ್‌.ಹುಟಗಿ ಅವರಿಗೆ ಬೇಸರ ಮೂಡಿಸುತ್ತಿತ್ತಂತೆ. ಈ ಸಂದರ್ಭದಲ್ಲಿ ಅವರ ಕೈನಲ್ಲಿ ಹಿಡಿದಿದ್ದ ಫೈಬರ್‌ ಲಾಠಿಯೇ ಕೊಳಲಿನಂತೆ ಕಾಣಿಸಿದೆ. ಕರ್ತವ್ಯದಲ್ಲಿ ಕೊಳಲು ಹಿಡಿದು ಹೋಗಲು ಅವಕಾಶ ಇರಲಿಲ್ಲ. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಹುಟಗಿ ಫೈಬರ್‌ ಲಾಠಿಯೊಳಗೆ ಟೊಳ್ಳಾಗಿರುವುದು ಅರಿತಿದ್ದರೂ, ಮನೆಗೆ ಬಂದು ಆ ಲಾಠಿಗೆ ಡ್ರಿಲ್‌ನಿಂದ ರಂಧ್ರ ಕೊರೆಯಲು ಮುಂದಾದರು. ಹೀಗೆ ಮಾಡುವಾಗ ಆ ಲಾಠಿ ಮುರಿಯಿತಾದರೂ ಪ್ರಯತ್ನ ಬಿಡದೆ ಇನ್ನೊಂದು ಲಾಠಿ ಖರೀದಿಸಿ ಮತ್ತೆ ಪ್ರಯತ್ನ ಮುಂದುವರಿಸಿದರು. ಲಾಠಿಯನ್ನು ಕೊಳಲನ್ನಾಗಿಸುವಲ್ಲಿ ಯಶಸ್ವಿಯೂ ಆದರು.

ವೈರಲ್‌ ಆಗಿದ್ದು ಹೇಗೆ?

ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಹಾವೇರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಕವಟಗಿ ನೇತೃತ್ವದಲ್ಲಿ ತಂಡ ಭದ್ರತೆಗೆ ತೆರಳಿತ್ತು. ತಂಡದಲ್ಲಿ ಹುಟಗಿ ಕೂಡ ಇದ್ದರು. ಗಿರಿಯಾಲದ ಬಳಿ ಪೆಟ್ರೋಲಿಂಗ್‌ ವೇಳೆ ಹಾಗೇ ಸುಮ್ಮನೆ ಕೊಳಲಾಗಿದ್ದ ಲಾಠಿಯಿಂದ ನುಡಿಸುವಂತೆ ಹುಟಗಿ ಅವರಿಗೆ ಇನ್‌ಸ್ಪೆಕ್ಟರ್‌ ಕವಟಗಿ ಹೇಳಿದ್ದಾರೆ. ಅದರಂತೆ ರಸ್ತೆಯ ಬದಿ ನಿಂತು ಲಾಠಿ ತೆಗೆದು ‘ಜೇನಿನ ಹೊಳೆಯೋ ಹಾಲಿನ ಮಳೆಯೋ..’ ಹಾಡನ್ನು ನುಡಿಸಿದ್ದರು. ಹುಟಗಿ ಅವರು ಇದನ್ನು ವೀಡಿಯೋ ಮಾಡಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದರು. ಈ ವೀಡಿಯೋವನ್ನು ಮೆಚ್ಚುಕೊಂಡ ಬಹಳಷ್ಟುಶೇರ್‌ ಮಾಡಿಕೊಂಡಿದ್ದರಲ್ಲದೆ ಬರಬರುತ್ತಾ ಸಖತ್‌ ವೈರಲ್‌ ಆಯಿತು. ಜೊತೆಗೆ ಹುಟಗಿ ಅವರ ಪ್ರತಿಭೆಗೆ ಸಾಕಷ್ಟುಜನ ಹ್ಯಾಟ್ಸಾಫ್‌ ಎನ್ನುತ್ತಿದ್ದಾರೆ.

ಸಂಗೀತ ಪ್ರೇಮಿ ಆರಕ್ಷಕ

ಹಿಂದೆ ಗದಗದಲ್ಲಿ ಸೇವೆ ಸಲ್ಲಿಸುವಾಗ ವೆಂಕಟೇಶ ಗೋಡ್‌ಖಿಂಡಿ ಅವರ ಬಳಿ ಕೊಳಲು ಕಲಿಯುವ ಉದ್ದೇಶದಿಂದಲೇ ಹುಬ್ಬಳ್ಳಿಗೆ ಬಂದು ಹೋಗುತ್ತಿದ್ದೆ. ಆದರೆ ನಾಲ್ಕೈದು ತರಗತಿ ಮಾತ್ರ ಹಾಜರಾಗಿದ್ದೆ. ಉಳಿದಂತೆ ನಾನೇ ಆಸಕ್ತಿಯಿಂದ ಕಲಿತಿದ್ದೇನೆ ಎನ್ನುವ ಇವರು, ಕೀರ್ವಾಣಿ, ಯೆಮನ್‌ ರಾಗ, ಜೋಗ್‌, ಭಾಗ್ಯಶ್ರೀ ರಾಗ, ಭೈರಾಗಿ, ಭೈರವ ರಾಗ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆ ಪ್ರಮೋದಾ ಉಪಾಧ್ಯಾಯ ಹಾಗೂ ಕಥಕ್‌ ನೃತ್ಯ ಕಲಾವಿದೆ ಕುಮದಿನಿ ರಾವ್‌ ಅವರ ಕಾರ್ಯಕ್ರಮಕ್ಕೆ ಕೊಳಲು ನುಡಿಸಿ ಸಾಥ್‌ ನೀಡಿದ್ದಾರಂತೆ. ಕಾಲೇಜು ದಿನಗಳಿಂದಲೂ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಹುಟಗಿ ಹಲವು ನಾಟಕಗಳನ್ನು ಮಾಡಿದ್ದಾರೆ. ಇಲಾಖೆ ನಡೆಸುವ ಬೀದಿ ನಾಟಕಗಳಲ್ಲಿ ಭಾಗವಹಿಸಿ ಸರಗಳ್ಳತನ, ಅಪಘಾತ ತಡೆ, ಮನೆಗಳ್ಳತನ ಕುರಿತು ಜಾಗೃತಿ ಮೂಡಿಸುವ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಕೆಲ ಕೊಳಲುಗಳನ್ನು ತಾವೇ ಕೈಯಿಂದ ತಯಾರಿಸಿರುವ ಇವರ ಬಳಿ ಬ್ಲಾಕ್‌ 2, ಬ್ಲಾಕ್‌ 4, ಬೇಸ್‌ ಬ್ಲಾಕ್‌ 4, ವೈಟ್‌ 3, ಬ್ಲಾಕ್‌ 4 ಕೊಳಲು ಸಂಗ್ರಹಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ ಪೇದೆ ಚಂದ್ರಕಾಂತ ಹುಟಗಿ.

 

Follow Us:
Download App:
  • android
  • ios