ಆಹಾರವು ನಮಗೆ ಪೋಷಕಾಂಶಗಳನ್ನು ಒದಗಿಸಿ ಶಕ್ತಿ ನೀಡುವುದಷ್ಟೇ ಅಲ್ಲ, ಹಲವಾರು ಆರೋಗ್ಯ ಸಮಸ್ಯೆಗಳನ್ನೂ ದೂರ ಇಡುತ್ತದೆ. ದೇಹಕ್ಕೆ ಕೆಲವು ಪೋಷಕಸತ್ವಗಳ ಕೊರತೆಯಾದಾಗ ಒಂದಿಲ್ಲೊಂದು ಸಮಸ್ಯೆ ಕಾಡತೊಡಗುತ್ತದೆ. ಅವುಗಳಲ್ಲಿ ಅತಿ ಸಾಮಾನ್ಯವಾದುದು ಒಣತ್ವಚೆ. ನಿಮ್ಮೊಳಗೆ ಏನು ಹೋಗುತ್ತದೆ ಎಂಬುದು ನಿಮ್ಮ ಹೊರಗಿನ ಚರ್ಮ ಹಾಗೂ ಲುಕ್ಕನ್ನು ನಿರ್ಧರಿಸುತ್ತದೆ. ಹಾಗಾಗಿ, ಒಣತ್ವಚೆಯನ್ನು ದೂರವಾಗಿಸಲು ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವುದು ಮುಖ್ಯ. ಯಾವ ಆಹಾರವನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿದರೆ ಒಣಚರ್ಮ ಸಮಸ್ಯೆಯಿಂದ ದೂರಾಗಬಹುದು ಎಂದು ತಿಳ್ಕೋಬೇಕಾ? ಮುಂದೆ ಓದಿ.

1. ದಾಳಿಂಬೆ ಹಣ್ಣುಗಳು

ದಾಳಿಂಬೆ ಹಣ್ಣು ಒಣ ಚರ್ಮದವರಿಗೆ ವರದಾನ. ಇದು ದೇಹದಿಂದ ವಿಷ ಪದಾರ್ಥಗಳನ್ನು ಹೊರತಳ್ಳಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ವಿಟಮಿನ್ ಎ ಹಾಗೂ ಸಿ ಅಧಿಕವಾಗಿರುವ ದಾಳಿಂಬೆ ಹಣ್ಣು, ಬಹುತೇಕ ನೀರು, ಮಿನರಲ್ಸ್ ಹಾಗೂ ವಿಟಮಿನ್ಸ್ ಹೊಂದಿದೆ. ಚರ್ಮದ ತುರಿಕೆ, ಉರಿಯನ್ನು ತಗ್ಗಿಸಿ, ಚರ್ಮದ ಎಲಾಸ್ಟಿಸಿಟಿ ಹೆಚ್ಚಿಸುತ್ತದೆ. ಈ ಹಣ್ಣಿನ ಕ್ರಿಮಿ ವಿರೋಧಿ, ಆ್ಯಂಟಿ ಇನ್ಫ್ಲೇಮೇಟರಿ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವು ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ.

ಹೇಗೆ ಬಳಸಬಹುದು?

ಪ್ರತಿದಿನ ತಿಂಡಿಯೊಂದಿಗೆ ಅರ್ಧ ಕಪ್ ದಾಳಿಂಬೆ ಹಣ್ಣು ಸೇವಿಸಿ. ಇದಲ್ಲದೆ, ಎರಡು ದಿನಕ್ಕೊಮ್ಮೆ ದಾಳಿಂಬೆ ಎಣ್ಣೆಯನ್ನು ಆಲಿವ್ ಆಯಿಲ್‌ನೊಂದಿಗೆ ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತೊಳೆಯಿರಿ. 

2. ಮೊಟ್ಟೆಗಳು

ಚರ್ಮದ ಡ್ರೈನೆಸ್ ಹೋಗಲಾಡಿಸುವಲ್ಲಿ ಪರಿಣಾಮಕಾರಿ ಫಲಿತಾಂಶ ನೀಡುವ ಆಹಾರವೆಂದರೆ ಮೊಟ್ಟೆ. ಮೊಟ್ಟೆಗಳಲ್ಲಿರುವ ಫ್ಯಾಟ್ ಸೊಲ್ಯೂಬಲ್ ವಿಟಮಿನ್ಸ್ ಚರ್ಮದ ಕೋಶಗಳ ಆರೈಕೆ ಮಾಡುತ್ತವೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ಡಿ, ಇ ಹಾಗೂ ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆ್ಯಸಿಡ್‌ಗಳು, ಪ್ರೋಟೀನ್, ಫೋಲೇಟ್ ಹಾಗೂ ಇತರೆ ಪ್ರಮುಖ ನ್ಯೂಟ್ರಿಯೆಂಟ್ಸ್ ಹೇರಳವಾಗಿವೆ. ಇವೆಲ್ಲವೂ ಚರ್ಮಕ್ಕೆ ಲಾಭಕಾರಿ ಅಷ್ಟೇ ಅಲ್ಲ, ಆರೋಗ್ಯಕ್ಕೆ ಬಹೂಪಯೋಗಿಯಾಗಿದೆ. ಮೊಟ್ಟೆ ತಿನ್ನುವಾಗ ಅವುಗಳ ಯೋಕ್ ಭಾಗವನ್ನೂ ಎಂದಿಗೂ ಬಿಸಾಡಬೇಡಿ. ಏಕೆಂದರೆ ಅದರಲ್ಲೇ ನಿಮ್ಮ ಚರ್ಮ ಕೇಳುವ ಬಹುತೇಕ ಪೋಷಣೆಗಳು ಅಡಗಿರುವುದು.

ಹೇಗೆ ಬಳಸಬಹುದು?

ಪ್ರತಿದಿನ ತಿಂಡಿಯೊಂದಿಗೆ ಒಂದೆರಡು ಯಾವುದೇ ರೂಪದಲ್ಲಿ ಮೊಟ್ಟೆ ಸೇವಿಸುವುದನ್ನು ರೂಢಿ ಮಾಡಿಕೊಳ್ಳಬಹುದು. ಜೊತೆಗೆ ವಾರಕ್ಕೊಮ್ಮೆ ಮೊಟ್ಟೆಯ ಯೋಕ್ ಭಾಗವನ್ನು ನೇರವಾಗಿ ಚರ್ಮಕ್ಕೆ ಹಚ್ಚಿ, 10 ನಿಮಿಷ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದು ತೆಗೆಯಬಹುದು. 

3. ಸೊಪ್ಪುಗಳು ಹಾಗೂ ಹಸಿರು ತರಕಾರಿಗಳು

ನಿಮ್ಮ ಡ್ರೈ ಸ್ಕಿನ್ ಡಯಟ್‌ಗೆ ದಿನಕ್ಕೊಂದು ರೂಪ ಕೊಡಬೇಕೆಂದರೆ ಎರಡು ದಿನಕ್ಕೊಮ್ಮೆ ಹೇರಳವಾಗಿ ಸೊಪ್ಪು ಹಾಗೂ ಹಸಿರು ತರಕಾರಿಗಳನ್ನು ಸೇವಿಸಿ. ಕೋಸು, ಬೋಕೋಲಿ, ಪಾಲಕ್ ಇತ್ಯಾದಿ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ, ಫೋಲಿಕ್ ಆ್ಯಸಿಡ್, ಐರನ್, ವಿಟಮಿನ್ ಎ, ಬಿ,ಸಿ ಹಾಗೂ ಕೆ, ಫೈಬರ್ ಮತ್ತು ಇತರೆ ಅಗತ್ಯ ಪೋಷಕಸತ್ವಗಳು ಶ್ರೀಮಂತವಾಗಿರುತ್ತವೆ. ಈ ಎಲ್ಲ ಪೋಷಕಾಂಶಗಳಿದ್ದ ಮೇಲೆ ಕೇಳಬೇಕೆ? ಅವು ನಿಮ್ಮ ರಕ್ತ ಪರಿಚಲನೆ ಹೆಚ್ಚಿಸಿ ತುರಿಕೆಯುತ ಒಣಚರ್ಮಕ್ಕೆ ಮುಕ್ತಿ ಹಾಡುತ್ತವೆ. ಜೊತೆಗೆ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತವೆ. 

ಹೇಗೆ ಬಳಸಬಹುದು?

ಪಲ್ಯ, ಸಲಾಡ್, ಸಾಂಬಾರ್, ಸೂಪ್, ಸ್ಯಾಂಡ್‌ವಿಚ್‌ನಲ್ಲಿ ಹೇಗೆ ಬೇಕಾದರೂ ಬಳಸಬಹುದು. ಇಲ್ಲವೇ ತಂದೂರಿ ಫ್ರೈ ಮಾಡಿಕೊಂಡೂ ಸೇವಿಸಬಹುದು. 

4. ಗೆಣಸು

ಗೆಣಸು ಫಾಸ್ಪರಸ್, ಬಯೋಟಿನ್, ಪೊಟ್ಯಾಶಿಯಂ, ಕಾಪರ್, ಕೆರೋಟಿನಾಯ್ಡ್ಸ್, ವಿಟಮಿನ್ ಎ, ಬಿ1, ಬಿ2, ಬಿ3, ಬಿ6 ಹಾಗೂ ಫೈಬರ್ ಹೊಂದಿದ್ದು, ಇದು ಈ ತರಕಾರಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹಾಗೂ ಆ್ಯಂಟಿ ಇನ್ಫ್ಲಮೇಟರಿ ಅಂಶಗಳನ್ನು ಹೆಚ್ಚಿಸಿದೆ. ಇದು ಒಣಚರ್ಮಕ್ಕೆ ಮೃದುತ್ವ ಹೇಳಿಕೊಟ್ಟು, ದೇಹದಿಂದ  ಟಾಕ್ಸಿನ್ಸ್ ಹೊರತಳ್ಳುತ್ತದೆ. 

ಹೇಗೆ ಬಳಸಬಹುದು?

ಬೇಯಿಸಿ, ಸುಟ್ಟು, ಗ್ರಿಲ್ ಮಾಡಿ ಗೆಣಸನ್ನು ಸೇವಿಸಿ. ಹಸಿ ತಿಂದರೂ ನಡೆದೀತು. ಇನ್ನು ಇದರ ಫೇಸ್‌ಪ್ಯಾಕ್ ತಯಾರಿಸಲು ರಸ ತೆಗೆದು, ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 
ಇಷ್ಟೇ ಅಲ್ಲದೆ ಡ್ರೈ ಫ್ರೂಟ್ಸ್, ಮೀನು, ಎಳೆ ಸೌತೆಕಾಯಿ ಕೂಡಾ ಒಣಚರ್ಮದ ಆಹಾರವೇ. ಒಣಚರ್ಮದೊಂದಿಗೆ ಹೋರಾಡಲು ಇನ್ನಷ್ಟು ಟಿಪ್ಸ್

- ಪ್ರತಿದಿನ ಕನಿಷ್ಟ 8 ಗ್ಲಾಸ್ ನೀರು ಸೇವಿಸಿ

- ನಿದ್ದೆಗೆ ಮೋಸ ಮಾಡಬೇಡಿ.

- ಆಲ್ಕೋಹಾಲ್ ಸೇವನೆ ಬಿಟ್ಟುಬಿಡಿ. ಅದು ಡಿಹೈಡ್ರೇಶನ್‌‌ಗೆ ಕಾರಣವಾಗಿ ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. 

- ಒತ್ತಡವನ್ನು ಹತ್ತಿರ ಬರಗಗೊಡಬೇಡಿ.

- ಕ್ರೀಮ್ ಬೇಸ್ಡ್ ಮಾಯಿಶ್ಚರೈಸರ್ ಬಳಸಿ. ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಬೇಡ.

- ಇಷ್ಟಾದ ಮೇಲೂ ಒಣಚರ್ಮ ಹೋಗಲಿಲ್ಲವೆಂದರೆ ವೈದ್ಯರ ಸಹಾಯ ಪಡೆಯಿರಿ.