Asianet Suvarna News Asianet Suvarna News

ಅವರನ್ನು ಅವರಾಗಿಯೇ ಇರಲು ಬಿಡಿ!

ಭಿಕ್ಷೆ ಎಂಬೋದು ಯಾವ ರೀತಿಯಲ್ಲಾದರೂ ಇರಬಹುದು ಯಾವ ರೂಪದಲ್ಲಾದರೂ ಕೇಳಬಹುದು. ಇದಕ್ಕೆ ಹೊತ್ತುಗೊತ್ತಾಗಲಿ, ಆಸ್ತಿ ಅಂತಸ್ತಾಗಲೀ ಇರೋಲ್ಲ. ಯಾರ ಬಳಿಯಾದರೂ ಸರಿ ಒಟ್ಟಿನಲ್ಲಿ ನಾ ಬಯಸಿದ್ದು ನಾ ಕೇಳಿದ್ದು ದೊರೆತರೆ ಸಾಕೆನ್ನುಷ್ಟುಮಾತ್ರ ಅಲ್ಲಿರುತ್ತೆ.

Tips to overcome from negative thoughts
Author
Bengaluru, First Published Jul 31, 2019, 5:27 PM IST
  • Facebook
  • Twitter
  • Whatsapp

ಭಿಕ್ಷೆ ಎಂಬೋದು ಯಾವ ರೀತಿಯಲ್ಲಾದರೂ ಇರಬಹುದು ಯಾವ ರೂಪದಲ್ಲಾದರೂ ಕೇಳಬಹುದು. ಇದಕ್ಕೆ ಹೊತ್ತುಗೊತ್ತಾಗಲಿ, ಆಸ್ತಿ ಅಂತಸ್ತಾಗಲೀ ಇರೋಲ್ಲ. ಯಾರ ಬಳಿಯಾದರೂ ಸರಿ ಒಟ್ಟಿನಲ್ಲಿ ನಾ ಬಯಸಿದ್ದು ನಾ ಕೇಳಿದ್ದು ದೊರೆತರೆ ಸಾಕೆನ್ನುಷ್ಟು ಮಾತ್ರ ಅಲ್ಲಿರುತ್ತೆ.

ಸಂಕುಚಿತ ಮನೋಭಾವ ಇಲ್ಲಿ ಕಡಿಮೆ ಇರುತ್ತೆ. ಹಸಿವಿನ ತೀರ್ವತೆ, ಅನಿವಾರ್ಯತೆ ಹೆಚ್ಚೇ ಇರುತ್ತೆ. ಪಡೆಯಲೇಬೇಕೆಂಬ ಹಠ ಬೇರೆ. ದಾಹದ ಮೋಹವಿರುತ್ತೆ. ಅದರ ರೂಪಗಳೋ ಹಲವು ರೀತಿ. ಪ್ರೇಮ, ವಿದ್ಯೆ, ಹಣ, ಹಸಿವಿನ ಭಿಕ್ಷೆ. ಉದ್ದೇಶವೊಂದೇ. ಪಡೆಯುವ ಹಂಬಲ. ಆ ಹಾದಿಯಲ್ಲಿ ಸಾಗುವಾಗ ದೇವರ ಮೊರೆ ಹೋಗಬಹುದು, ಉಳ್ಳವರ ಮೊರೆ ಹೋಗಬಹುದು.

ಒಟ್ಟಿನಲ್ಲಿ ಎಲ್ಲಕ್ಕಿಂತ ಮಿಗಿಲು ಹೊಟ್ಟೆಹಸಿವಿನ ದಾಹ. ಒಂದು ಹೊತ್ತು ಉಪವಾಸವಿರಬಹುದು ಎರಡು ಹೊತ್ತು ಹಸಿವನ್ನೇ ಜೀವನ ಮಾಡಿಕೊಳ್ಳಲಾಗುತ್ತದೆಯೇ. ವಿಧಿಯಾಟ ವಿಪರೀತವಾದರೆ ವಿಪರ್ಯಾಸಗಳೇ ವಿಷಾಧವಾಗುತ್ತದೆ. ನಾಲಿಗೆಗೆ ಒಮ್ಮೆ ರುಚಿ ಸಿಕ್ಕು ಇಷ್ಟವಾಗಿಬಿಟ್ಟರೆ ಪದೇಪದೇ ನಾಲಲಿಗೆ ಅದನ್ನೇ ಕೇಳುತ್ತೆ. ಆದರೆ ಬಡತನ ತಡೆಯುತ್ತೆ. ನಿರಾಸೆ ಆವರಿಸಿರುತ್ತೆ. ದುಃಖ ಉಮ್ಮಳಿಸುತ್ತೆ.

ಹೀಗೊಮ್ಮೆ ನನ್ನಮ್ಮ ವಾಟ್ಸ್‌ಅಪ್‌ನಲ್ಲಿ ಒಂದು ವಿಡಿಯೋ ಕಳುಹಿಸಿದಳು. ಅವಳ ಮನಸ್ಸು ವಿಚಲಿತವಾಗಿತ್ತು. ತುಂಬಾ ಡಿಸ್ಟರ್ಬ್‌ ಆಗಿದ್ದಳು. ವಿಡಿಯೋದಲ್ಲಿ ಇದ್ದದ್ದು ಇಷ್ಟು. 4 ಜನ ಹುಡುಗರು ಪಿಜ್ಜಾ ಕಾರ್ನರ್‌ನಲ್ಲಿ ಹರಟೆ ಹೊಡೆಯುತ್ತ ಗಂಟೆಗಟ್ಟಲೆ ಕುಳಿತು ಮಾತನಾಡುವ ಸಲುವಾಗಿ ಬರುತ್ತಾರೆ. ಗಾಜಿನ ಕಿಟಕಿಯಾಚೆ ಒಬ್ಬ ಕಡುಬಡ ಹುಡುಗ ಇವರನ್ನೇ ನೋಡುತ್ತಾ ನಿಲ್ಲುತ್ತಾನೆ.

ಇವರೋ ತಮ್ಮ ಲೋಕದಲ್ಲೇ ತಾವಿರುತ್ತಾರೆ. ಅದರಲ್ಲೊಬ್ಬ ಅತ್ತಿತ್ತ ನೋಡುತ್ತಾ ಆ ಹುಡುಗನನ್ನು ಗಮನಿಸುತ್ತಾನೆ. ತಕ್ಷಣವೇ ಹೋಗಿ ಅವನ ಕೈ ಹಿಡಿದು ಒಳಗೆ ಕರೆದುಕೊಂಡು ಬಂದು ಟೇಬಲ್‌ ಶೇರ್‌ ಮಾಡಿ ಬಿಡ್ತಾನೆ. ಉಳಿದವರಿಗೆ ಅಪಮಾನವಾದಂತಾಗಿ ಗೆಳೆಯನಿಗೆ ಈ ರೀತಿ ಮಾಡಬೇಡ ಇದು ನಮ್ಮ ಸಮಯ, ಎಂದಾಗ ಇವ ಅವರಿಗೆ ನಿರುತ್ತರನಾದ! ಕೋಪಗೊಂಡ ಸ್ನೇಹಿತರೆಲ್ಲಾ ಹೊರ ಹೊರಟುಬಿಟ್ಟರು.

ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಈ ‘ಉತ್ತಮ’ನು ಹುಡುಗನಿಗೆ ತರಹೇವಾರಿ ವಿಧವಿಧವಾದ ತಂಪು ಪಾನೀಯಗಳು ಅಲ್ಲಿ ದೊರಕುವ ಫುಡ್‌ ಐಟಂಗಳನ್ನು ಕೊಡಿಸಿ ಅವನ ಹಸಿವಿನ ದಾಹವನ್ನು ನೀಗಿಸಿಬಿಟ್ಟ. ಹುಡುಗ ಫುಲ್‌ ಖುಷ್‌, ಉತ್ತಮನಿಗೆ ಒಬ್ಬ ಬಡ ಹುಡುಗನ ಹಸಿವನ್ನು ನೀಗಿಸಿದೆನಲ್ಲ ಎಂಬ ಆತ್ಮ ತೃಪ್ತಿ! (ಇದೇ ಸೇಮ್‌ ಸೀನ್‌ ಈಗ್ಗೆ 16-17 ವರುಷದ ಕೆಳಗೆ ನಡೆದಿತ್ತು. ಮಲ್ಲೇಶ್ವರದ 8ನೇ ಕ್ರಾಸ್‌ನಲ್ಲಿ ಆಗಷ್ಟೇ 25 ರೂಪಾಯಿಯ ಪಿಜ್ಜಾ ಕನ್ನಿಕಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿರೋ ಚಾಟ್ಸ್‌ ಅಂಗಡೀಲಿ ಶುರುವಾಗಿತ್ತು. ನನ್ನ ಮಗ ಆಗಾಗ ಅಲ್ಲಿ ಅದನ್ನು ತಿನ್ನುತ್ತಿದ್ದ.

ಆಗೊಮ್ಮೆ ಬಡ ಪುಟ್ಟಹುಡುಗ ಇವನ ಹಿಂದೆ ಬಂದವನೇ ಅಣ್ಣಾ ಅಣ್ಣಾ ಎಂದಿದ್ದೇ ತಡ ಒಂದು ಪಿಜ್ಜಾ ಆರ್ಡರ್‌ ಮಾಡಿ ಆ ಮಗುವಿಗೆ ಕೊಡಿಸೇಬಿಟ್ಟ. ನನಗಂತೂ ನನ್ನ ಮಗನ ಬಗ್ಗೆ ಬಹಳವೇ ಹೆಮ್ಮೆಯೆನಿಸಿ ಬಿಟ್ಟಿತು, ಆದರೆ ಇಂದಿನ ನನ್ನ ಮನಸ್ಸು!) ಅಲ್ಲಿಗೆ ವಿಡಿಯೋ ಮುಗಿಯಿತು. ಮುಂದಾ? ಇಲ್ಲೇ ನನ್ನ ಪ್ರಶ್ನೆ. ಫೋನಾಯಿಸಿ ಅಮ್ಮ ಕೇಳಿದಳು ವಿಡಿಯೋ ಎಷ್ಟುಮನಕಲುಕುವ ಹಾಗಿತ್ತಲ್ವಾ? ಪಾಪ ಆ ಪುಟ್ಟಹುಡುಗನ ಹಸಿವು ಅದನ್ನು ನೀಗಿಸಿದ ಆ ದೊಡ್ಡ ಹುಡುಗ ಎಲ್ಲರೂ ಹೀಗೇ ಇದ್ರೆ ಎಷ್ಟುಚೆನ್ನಾಗಿರುತ್ತೆ ಅಲ್ವಾ? ಎಂದಾಗ ನನಗ್ಯಾಕೋ ಬೇಸರವಾಯಿತು.

ಅಮ್ಮ ನೀನೇ ಯೋಚನೆ ಮಾಡು... ಆ ಚಿಕ್ಕ ಹುಡುಗನಿಗೆ ಈ ಉತ್ತಮನು ಏನೋ ಉದಾರ ಮನಸ್ಸಿನಿಂದ ತರಹೇವಾರಿ ತಿಂಡಿಗಳನ್ನು ಕೊಡಿಸಿದ. ಆ ದಿನಕ್ಕೆ ಆ ಹೊತ್ತಿಗೆ ಅದು ಸರಿ! ಆದರೆ ನಾಳೆಯೂ ಅವ ಕೊಡಿಸುತ್ತಾನ? ಬಿಲ್‌ ಪೇ ಮಾಡ್ತಿದ್ದ ಹಾಗೇ ಈ ಬಡವ ಯಾರು ಆ ಉತ್ತಮನ್ಯಾರೋ? ಅವರೇನು ಪ್ರತಿದಿನ ಸಿಗ್ತಾರಾ? ಪ್ರತಿದಿನ ಇದನ್ನೆಲ್ಲಾ ಕೊಡಿಸ್ತಾರಾ? ವಾಸ್ತವಿಕವಾಗಿ ಇದು ಒಂದು ಹೊತ್ತಿನ ಸಂದರ್ಭಗಳು ಅಷ್ಟೇ? ಆ ಮಗುವಿನ ಬಾಯಿಗೆ ಆ ಪಿಜ್ಜಾ ರುಚಿಸುತ್ತೆ.

ಅವನ ತಾಯಿ ತಂದೆ ಕಷ್ಟಪಟ್ಟು ಹೊತ್ತಿನ ಊಟಕ್ಕೆ ಹೆಣಗಾಡುತ್ತಿರುವ ಸಂದರ್ಭದಲ್ಲಿ ಇವ ಇಂಥ ರಿಚ್‌ ಫುಡ್‌ ಕೊಡಿಸಿ ಅವನಿಗೆ ರುಚಿ ಹತ್ತಿಸಿಬಿಟ್ಟರೆ ಅವರ ಮುಂದಿನ ಗತಿ ಏನು? ಹೋಟಲ್ಲಿನಲ್ಲಿ ಒಂದು ಮಸಾಲೆ ದೋಸೆ ಕೊಡಿಸೋಕ್ಕೆ ತಂದೆ ತಾಯಿಗೆ ಕಷ್ಟಇರೋವಾಗ, ಇನ್ನು ಪಿಜ್ಜಾ ಅವರ ಕನಸಿನ ಮಾತೇ. ಮುಂದಿನದು ನಮ್ಮ ಯೋಚನೆಗಳಿಗೆ ಒಳ ಪಡೋದು! ಆ ಪಿಜ್ಜಾ ತಿನ್ನಲು ಮನೆಯಲ್ಲಿ ಕೇಳಿದಾಗ ಏನೆಲ್ಲಾ ವಾತಾವರಣ ಸೃಷ್ಟಿಆಗಬಹುದು? ಮನೆ ತುಂಬಾ ಮಕ್ಕಳು.

ಅಷ್ಟೂ ಜನಕ್ಕು ಇದನ್ನು ಕೊಡಿಸಲು ತಂದೆ ತಾಯಿ ಏನೆಲ್ಲ ಹರಸಾಹಸ ಪಡಬೇಕು. ಅಷ್ಟುಪಟ್ಟರೂ ಒಂದೊಂದು ಪೀಸ್‌ ಸಹಾ ಸಿಗೋಲ್ಲ. ಇನ್ನು ತಿನ್ನೋ ಹಂಬಲ ಈ ಮಗುವಿನಲ್ಲಿ ಹೆಚ್ಚಾದಾಗ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುವ ಸಂಭವವಿರುತ್ತದೆ. ಅಥವಾ ದಿನಾ ಆ ಪಿಜ್ಜಾ ಕಾರ್ನರ್‌ ಮುಂದೆ ನಿಲ್ಲೋದು. ಅಂಥಹ ಉತ್ತಮನಿಗಾಗಿ ಕಾಯೋದು, ಅಂಥವರು ಬಾರರು. ಇವನಿಗೆ ಪಿಜ್ಜಾ ದೊರೆಯದೇ ಇರೋದು... ಹೀಗೇ ಆಲೋಚನೆಗಳ ಸರಮಾಲೆಯೇ ಸೃಷ್ಟಿಯಾಗುತ್ತೆ. ಧನಾತ್ಮಕ ಋುಣಾತ್ಮಕ ಯಾವುದಾದರೂ ಆಗಬಹುದು.

ಇದೇ ರೀತಿ ಮಗದೊಂದು ವಿಡಿಯೋ ಸಹಾ ನನ್ನ ಕಾಡಿತು. ವಯೋವೃದ್ಧರೊಬ್ಬರು ಊಟವಿಲ್ಲದೆ ಬಿಸಿಲಲ್ಲಿ ನಡೆದು ಸುಸ್ತಾಗಿ ಇಡುತ್ತಿದ್ದ ಹೆಜ್ಜೆ ತಡವರಿಸುತ್ತಿತ್ತು. ಇದನ್ನು ಗಮನಿಸಿದ ಯುವಕನೊಬ್ಬ ತಕ್ಷಣವೇ ಅವರನ್ನು ತನ್ನ ಹವಾನಿಯಂತ್ರಿತ ಕಾರಿನಲ್ಲಿ ಕುಳ್ಳಿರಿಸಿಕೊಂಡು ನೀರು ನೀಡಿ ಉಪಚರಿಸಿದ. ಸಾಂತ್ವಾನದ ಮಾತುಗಳನ್ನಾಡಿದ ಹಸಿವಾಗುತ್ತಿದೆ ಎಂದ ವೃದ್ಧರನ್ನು ಒಂದು ಒಳ್ಳೇ ಹೋಟೆಲ್ಲಿಗೆ ಕರೆದುಕೊಂಡು ಹೋಗಿ ಒಳ್ಳೆಯ ಊಟ ಕೊಡಿಸಿದ. ತಾತನಿಗೆ ಖುಷಿಯೋ ಖುಷಿ.

ಇಂಥ ಊಟ ನನ್ನ ಜನ್ಮದಲ್ಲೇ ನಾನು ಮಾಡಿರಲಿಲ್ಲ ನೂರ್ಕಾಲ ಚೆನ್ನಾಗಿರಪ್ಪಾ ಎಂದು ಆಶೀರ್ವದಿಸಿದರು. ಒಂದು ನಿಯಮಿತ ಊಟಕ್ಕೆ ದೇಹ ಬಾಯಿ ಒಗ್ಗಿರುತ್ತೆ. ಸಿಕ್ಕ ಚಾನ್ಸ್‌ ಎಂದು ಒಂದೂ ಬಿಡದೆ ಎಲ್ಲವನ್ನೂ ತಾತ ತಿಂದುಬಿಟ್ರು. ಇಳಿ ವಯಸ್ಸು. ಬಾಯಿ ಚಪಲ ಬೇರೆ, ಬಿಲ್‌ ಕೊಡಲು ಹೋದಾಗ ಆ ಹೋಟೆಲ್‌ ಓನರ್‌ ಬೇರೇ ಸೂಪರ್‌ ಎಂದಾಗ ಈ ಯುವಕನಿಗೇ ಏನೋ ಆನಂದ. ನಂತರ ತಾತನನ್ನು ಕರ್ಕೊಂಡು ಹೋಗಿ ಅವರ ಮನೆ ಮುಂದೆ ಇಳಿಸಿ ತಾ ಮುಂದೆ ಸಾಗಿದ. ಮುಂದೆ, ಅದೇ... ಸಂಜೆ ಆಗ್ತಿದ್ದ ಹಾಗೆ ಹೊಟ್ಟೆಯಲ್ಲಿ ಗುಡುಗುಡು ಶುರುವಾಯಿತು. ವಾಂತಿ ಬೇಧಿಗಳಾಯಿತು. ಬೆಳಗಿನ ಹೊತ್ತಿಗೆ ವಿಪರೀತವಾಯಿತು.

ಅಪ್ಪನ ಅವಸ್ಥೆ ಕಂಡು ತನ್ನ ದಿನಗೂಲಿ ಕೆಲಸಕ್ಕೆ ರಜೆ ಹಾಕಿ, ಆಸ್ಪತ್ರೆಗೆ ಕರ್ಕೊಂಡು ಹೋದ. ಅಡ್ಮಿಟ್‌ ಮಾಡಬೇಕು. ತಾತ ತುಂಬಾ ಸುಸ್ತಾಗಿದ್ದಾರೆ. ನಿನ್ನೆ ಮೊನ್ನೆ ಏನೋ ಊಟದಲ್ಲಿ ವ್ಯತ್ಯಾಸವಾಗಿದೆ. ಜೀರ್ಣ ಆಗಿಲ್ಲ. ಡ್ರಿಫ್ಸ್‌ ಹಾಕಿದ್ರೆ ಸರಿಹೋಗುತ್ತೆ ಎಂದಾಗ ಮಗ ತಲೆಮೇಲೆ ಕೈಹೊತ್ತು ಕೂತ. ಆರೋಗ್ಯ ಹೀಗಾಗಿದೆ.

ದುಡ್ಡು ಎಲ್ಲಿಂದ ತರೋದು ಇವರಿಗೇನಾದರೂ ಹೆಚ್ಚುಕಮ್ಮಿ ಆದರೆ ಹೇಗೆ? ಹೀಗೆ ನೂರಾರು ಯೋಚನೆಗಳು ಬಡ ಮಗನ ತಲೆಯಲ್ಲಿ ನುಸುಳಾಡಿತು. ದಿನಗೂಲಿಯಾದ ಮಗನ ಕೈಯಲ್ಲಿ ಸಂಸಾರ ತೂಗಿಸೋದೇ ಕಷ್ಟ. ಇದರ ಮಧ್ಯೆ ಈ ರೀತಿಯ ತೊಂದರೆಗಳು ಬಂದರೆ ಇನ್ನೂ ಕಷ್ಟ. ಸೊಸೆ ಕಸ ಮುಸುರೆ ಮಾಡಿ ಅವಳೊಂದಿಷ್ಟುಸಂಸಾರಕ್ಕೆ ಸಹಾಯಳಾಗಿದ್ದಾಳು. ಇಬ್ಬರ ದುಡಿಮೆಯಿದ್ದರೂ ಒಪ್ಪೊತ್ತಿನ ಊಟವಷ್ಟೇ. ಎರಡನೇ ಹೊತ್ತಿಗೆ ಹೆಣಗಾಡಲೇಬೇಕು.

ನನ್ನನಿಸಿಕೆ ಇಷ್ಟೇ! ಇಂಥವರಿಗೆ ಖಂಡಿತಾ ಕೊಡಿಸೋಣ. ಕೊಡಿಸುವ ಮುಂಚೆ ಕೊಂಚ ಯೋಚಿಸಿ. ನಮ್ಮ ಉದಾರತನ ಅವರಿಗೆ ಮುಳುವಾಗಬಾರದು ತೊಂದರೆಗೀಡಾಗಬಾರದು. ಅವರ ಮೈಗೆ ಒಗ್ಗುವಂಥದ್ದು, ಅವರ ಆರೋಗ್ಯಕ್ಕೆ ಹಾನಿಕಾರಕವಾಗುದಂಥದ್ದು, ದುಡ್ಡು ಕೊಡೋಕ್ಕೂ ಭಯ ಯಾಕಂದ್ರೆ ಸಂಜೆ ಆಗ್ತಿದ್ದ ಹಾಗೆ ಹೆಂಡದ ಅಂಗಡಿಗೆ ಹೋಗುತ್ತಾನೋ. ಹಾಗಾಗಿ ದಿನ ನಿತ್ಯ ಅವರು ಏನು ತಿಂತಾರೋ ಅದು ಅಥವಾ ಅದಕ್ಕೆಂತ ಕೊಂಚ ಹೆಚ್ಚಿನದನ್ನು ಮಾತ್ರಾ. ಭರ್ಜರಿ ಊಟ ತಿಂಡಿಗಳಿಗಾಗಿ ಅವರ ಮನಸು ಎತ್ತಲೋ ಓಡುತ್ತೆ. ಆರೋಗ್ಯಕ್ಕೂ ಹಾನಿಯುಂಟಾಗುತ್ತೆ.

ಅವರನ್ನ ಅವರಾಗೇ ಬದುಕಲು, ಅವರತನದಲ್ಲಿ ನಡೆಯಲು ಬಿಡೋಣ. ಇಲ್ಲ ಸಲ್ಲದ ರುಚಿ ತೋರಿಸಿ ಅವರನ್ನ ಅವರ ಮನೆಯವರನ್ನ ಸಂಕಷ್ಟಕ್ಕೆ ಸಿಲಿಕಿಸೋದು ಬೇಡ. ನಮಗೆ ದಾರಿಯಲ್ಲಿ ಸಿಗೋ ಇವರು ಮತ್ತೆಂದೂ ಸಿಗರು. ಸಿಕ್ಕರೂ ನಾವು ಮೇಲೆ ಮೇಲೆ ಅವರಿಗೆ ಈ ಉಪಚಾರ ಮಾಡೆವು. ಒಂದು ಬಾರಿ ನಾವವರಿಗೆ ತೋರಿಸೋ ಈ ಉಪಚಾರಗಳು ಬಹಳಷ್ಟುತೊಂದರೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಅವರನ್ನು ಅವರಾಗೇ ಬದುಕಲು ಬಿಡೋಣ. ಅದೃಷ್ಟವಿದ್ದರೆ ಅವರಿಗೇ ದೊರಕುತ್ತೆ. ಇಂಥವರೆಲ್ಲರಿಗೂ ಅದೃಷ್ಟಒದಗಿಬರಲೆಂದು ಆಶಿಸುತ್ತೇನೆ.

- ಸವಿತಾ ನಾಗೇಶ್ 

 

Follow Us:
Download App:
  • android
  • ios