Asianet Suvarna News Asianet Suvarna News

ತುಂಟ ಮನಸ್ಸೇ, ತುಸು ಸಾವರಿಸು

ಆಧ್ಯಾತ್ಮದ ಮೊದಲ ಹೆಜ್ಜೆ ಮನೋ ನಿಗ್ರಹ, ಇದಿಲ್ಲದೇ ಮುಂದಿನ ಸಾಧನೆ ಅಸಾಧ್ಯ

Tips to have a peaceful mind
Author
Bengaluru, First Published Aug 6, 2018, 12:42 PM IST

ಯಾವುದೇ ವ್ಯಕ್ತಿಯನ್ನ ಅತೀ ಸುಲಭವಾಗಿ ಮೋಸಗೊಳಿಸುವ ವಿಷಯವೇನಾದರೂ ಇದ್ದರೇ,ಅದು ತನ್ನದೇ ಆಲೋಚನೆಗಳು. ಮನೋನಿಗ್ರಹದ ಬಗ್ಗೆ ಬರೆಯಬೇಕೆಂದರೆ ಒಂದು ದೊಡ್ಡ ಗ್ರಂಥವನ್ನೇ ಬರೆದುಬಿಡಬಹುದು. ಅಷ್ಟು ಕವಲುಗಳು, ಬೇರುಗಳುಳ್ಳ ಬೃಹತ್ ವೃಕ್ಷ ಅದು.

ಮನಸ್ಸನ್ನ ಹದಗೊಳಿಸಿ, ಪಳಗಿಸಿ, ಅದನ್ನೇ ಒಂದು ಶಕ್ತಿಯಾಗಿ ಪರಿವರ್ತಿಸಿ, ಗೆಲುವಿನ ಜೈತ್ರ ಯಾತ್ರೆ ಪ್ರಾರಂಭಿಸಬೇಕು. ಇದಕ್ಕಾಗಿ ಆಧ್ಯಾತ್ಮದಲ್ಲಿ ಪ್ರಾಣಾಯಾಮ,ಪ್ರತ್ಯಾಹಾರ, ಯೋಗದಂತಹ ಅನೇಕ ಮಾರ್ಗಗಳನ್ನ ಹೇಳಲಾಗಿದೆ. ಹಾಗೆ ನೋಡಿದ್ರೆ ಭಾರತೀಯ ಆಧ್ಯಾತ್ಮಿಕ ವಿಚಾರಗಳಿಂದ ಹಿಡಿದು, ತಾವೋ, ಜೆನ್, ಇನ್ನಿತರ ಸಿದ್ಧಾಂತಗಳ ಸಂಗ್ರಹ ಸಾರವೆಲ್ಲದರಲ್ಲೂ ಮೊದಲನೆಯ ಹೆಜ್ಜೆ ಮನಸ್ಸನ್ನ ನಿಗ್ರಹಿಸುವುದೇ ಆಗಿದೆ.

ನಮ್ಮ ಮನಸ್ಸನ್ನು ನಿರಂತರವಾಗಿ ಬಂದು ಹೋಗುವ ಅಲೆಗಳಿಗೆ ಹೋಲಿಸಬಹುದು. ದುಃಖ,ಅಹಂ ಮೋಹ, ಕೋಪ, ಹೀಗೆ ಎಲ್ಲಾ ಭಾವನೆಗಳ ಏರಿಳಿತವೂ ನಮ್ಮ ಮನೋನ್ಮಯ ಕೋಶದಲ್ಲೇ ಹುಟ್ಟುವಂಥದ್ದು. ಇದು ಸಂತೋಷಕ್ಕೆ ಅಡ್ಡಿಯಾಗಬಹುದು, ಅಥವಾ ಅವನನ್ನ ಖಿನ್ನತೆಗೆ ತಳ್ಳಿ ಸಾಯುವಂತೆಯೂ ಮಾಡಬಹುದು. ಹೀಗಾಗಿಯೇ ಮನೋನಿಗ್ರಹವು ಪ್ರತೀ ವ್ಯಕ್ತಿಗೂ ಬಹಳ ಮುಖ್ಯ.

ಪುಟ್ಟ ಮಗುವಿನಂತೆ ನಮ್ಮ ಮನಸ್ಸು, ಮೊದಮೊದಲಿಗೆ ಶಿಸ್ತಿಗೆ ಹೊಂದಿಕೊಳ್ಳದೇ ರಚ್ಚೆ ಹಿಡಿಯುವುದು. ನಿಯಂತ್ರಿಸಿದಷ್ಟೂ ಸುನಾಮಿಯ ಅಲೆಗಳಂತೆ ಮೇಲೇಳುವುದು. ಹೀಗಾಗಿ ಪ್ರಯತ್ನದ ಮೊದಲ ಹೆಜ್ಜೆ, ಅರ್ಥೈಸಿಕೊಳ್ಳುವುದಾಗಬೇಕು. ಮನಸ್ಸಿನ ಭಾವನೆಗಳನ್ನ ಅರಿಯುತ್ತಾ ಹೋದಂತೆ, ಈರುಳ್ಳಿಯ ಪದರಗಳಂತೆ ಅವು ಬಿಡಿಸಿಕೊಂಡು, ನಮಗೂ ಬಿಡುಗಡೆ ಕೊಡುತ್ತವೆ.

ಮನಸ್ಸಿಲ್ಲದೆ ಮಾನವನಿಲ್ಲ, ಆದರೆ ಮನವನ್ನ ಅರಿತ ಮಾನವ ನಿಜಕ್ಕೂ ದೈವತ್ವದ ಪೂರ್ತಿ ಬೆಳಕನ್ನ ಪಡೆಯಲು ಅಣಿಯಾಗುತ್ತಾನೆ. ವಿವೇಕಾನಂದರು ಮನಸ್ಸನ್ನು ಒಂದು ಕೊಳಕ್ಕೆ ಹೋಲಿಸಿದ್ದಾರೆ. ಪ್ರತಿದಿನ ಕೊಳದ ಮೇಲೆ ಹೇಗೆ ಪಾಚಿಯ ನಿರ್ಮಾಣವಾಗುವುದೋ ಹಾಗೆಯೇ ನಮ್ಮ ಮನಸ್ಸಿನಲ್ಲಿ ಪ್ರತಿ ಕ್ಷಣ ಆಲೋಚನೆಗಳ ನಿರ್ಮಾಣವಾಗುವುದು. ಹೀಗಾಗಿ ಮನೋ ಶುಚಿತ್ವ ಎನ್ನುವುದು ಒಂದು ಬಾರಿ ಆಗುವ ವಿಷಯವಲ್ಲ. ಅದು ಪ್ರತಿನಿತ್ಯದ ಅಭ್ಯಾಸವಾಗಬೇಕು.

ನಾವು ಓದಿ ತಿಳಿದುಕೊಂಡ ಅದೆಷ್ಟೋ ವಿಷಯಗಳು ನಮ್ಮಲ್ಲಿ ಅಹಂನ ಗೋಡೆಗಳನ್ನ ನಿರ್ಮಾಣ ಮಾಡದಂತೆ ಎಚ್ಚರವಹಿಸಬೇಕು, ಪ್ರೀತಿಯು ವ್ಯಾಮೋಹದ ಸರಪಳಿಯಾಗದೆ ಶುದ್ಧವಾಗಿಯೇ ಇರುವಂತೆ ನೋಡಿಕೊಳ್ಳಬೇಕು. ದುಃಖವು ಮತ್ತಷ್ಟು ತಿವಿದು ಗಾಯ ಮಾಡುವ ಮುಂಚೆ ನಾವದನ್ನು ಕಿತ್ತೆಸೆಯಬೇಕು.

ಅಂದು ಮೇನಕೆಯ ಹಿಂದೆ ಹೋದ ಮಹಾನ್ ಯೋಗಿ ವಿಶ್ವಾಮಿತ್ರ ಮಹರ್ಷಿಗಳಿಗಿಂತ ನಮ್ಮ ಮನಸ್ಸು ಭಿನ್ನವೇನಲ್ಲ. ಎಷ್ಟೇ ಶಾಂತಿಯನ್ನರಸಿದರೂ ಸಣ್ಣದಾದ ಮನೋತರಂಗಗಳು ಪುಟ್ಟದಾದ ಚಂಚಲತೆಯನ್ನು ಮರುಕಳಿಸಲು ಹವಣಿಸುವುದು. ಹೀಗಾಗಿ ಉಂಟಾದ ಮನೋತರಂಗವೆಲ್ಲವು ಧನಾತ್ಮಕವಾಗಿರಬೇಕು. ಎಲ್ಲರಲ್ಲೂ ಎಲ್ಲದರಲ್ಲೂ ಪ್ರೀತಿಯುಳ್ಳವರಾಗಿರಬೇಕು ಪ್ರೀತಿಯ ಮಾರ್ಗ ಅನುಸರಿಸಿ ಮನಸ್ಸನ್ನ ದಾಟಿಬಿಡಬೇಕು. ಹೀಗಾದಾಗ ಮನಸ್ಸು ದ್ವಂದ್ವಗಳಿಂದ ಹೊರಬಂದು ಪ್ರಜ್ಞೆ ಜಾಗೃತವಾಗುತ್ತದೆ. ಆತ್ಮಾನಂದದ ಬಾಗಿಲು ತೆರೆಯುತ್ತದೆ. ಇದನ್ನೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಸದಾ ಸ್ಥಿತಪ್ರಜ್ಞನಾಗಿರು ಎಂದಿರುವುದು. ಇಂದಿನಿಂದಲೇ ಇದಕ್ಕೆ ನಾವೆಲ್ಲರೂ ಅಣಿಯಾಗಬೇಕಿದೆ, ಸ್ಥಿತಪ್ರಜ್ಞರಾಗಬೇಕಿದೆ. ಏನಂತೀರಿ?

Follow Us:
Download App:
  • android
  • ios