ಕೆಲವೊಮ್ಮೆ ನಮ್ಮ ಪ್ರೀತಿ ಪಾತ್ರರು ನಮ್ಮಿಂದ ದೂರವಿದ್ದರೆ, ಪ್ರೀತಿಗಿಂತ ಏನೋ ಭಯ ಕಾಡುತ್ತದೆ. ಜತೆಗೆ ನಂಬಿಕೆಯೂ ಕೈ ಹಿಡಿಯುತ್ತದೆ. ಕೈ ಹಿಡಿದು ಪ್ರೇಮ ಹಕ್ಕಿಗಳಂತೆ ಸುತ್ತಾಡೋಕೆ ಇಷ್ಟ. ಆದರೆ, ಹತ್ತಿರವಿರೋಲ್ಲ. ಈಗಂತೂ ಜಮಾನ ಬದಲಾಗಿದೆ. ಕೈಯಲ್ಲಿ ಮೊಬೈಲ್ ಇರುತ್ತೆ. ನೋಡಬೇಕು ಎಂದೆನಿಸಿದಾಗ ವೀಡಿಯೋ ಕಾಲ್ ಮಾಡಬಹುದು. ಆದರೆ, ಜತೆಯಲ್ಲಿರಲಿ, ದೂರವಿರಲಿ...ಮನಸ್ಸು ಒಂದಾಗುವುದು ಮುಖ್ಯ. 

ಇಂಥದ್ದೊಂದು ಸಂಬಂಧವನ್ನು ಮೆಂಟೇನ್ ಮಾಡುವುದು ಸಾಧ್ಯಾನಾ? ಕಷ್ಟ ಎನ್ನುತ್ತಾರೆ ಕೆಲವರು. ಒಂಟಿತನ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ದುಃಖ ಉಮ್ಮಳಿಸುತ್ತದೆ. ಬೇಕೆಂದಾಗ ಸಮಾಧಾನ ಮಾಡಲು ಆಪ್ತ ಕೈಯೊಂದು ಸಿಗೋಲ್ಲ. ಒರಗಲು ಅಗತ್ಯವಿರೋ ಭುಜ ಸಿಗೋಲ್ಲ. ಒಟ್ಟಿಗೆ ತಿನ್ನಲಾಗದಂಥ ಸ್ಥಿತಿ. ಸಂಗಾತಿಯ ಸ್ಪರ್ಶವಿಲ್ಲದೇ, ರಾತ್ರಿ ಜೊತೆಯಾಗಿ ಬೆಳದಿಂಗಳ ಆಕಾಶವನ್ನು ನೋಡಲಾಗದೇ.....ಬದುಕು ಬರಡೆನಿಸಿ ಬಿಡುತ್ತದೆ. ಹಾಗಂತ ಜತೆಯಿದ್ದಾಗ ಬೆಳದಿಂಗಳ ರಾತ್ರಿಯನ್ನು ನೋಡಿರುತ್ತೀರೋ ಇಲ್ಲ ಗೊತ್ತಿಲ್ಲ. ಮನುಷ್ಯನಿಗೆ ಸಾಂಗತ್ಯ ಮಾತ್ರ ಬೇಕು. ಬೇಕೆಂದಾಗ ಸಿಗದೇ ಹೋದರೆ, ಸಂಬಂಧದಲ್ಲಿ ಬಿರುಕು ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ.

'ನೀ ಸಿಗದೇ ಬಾಳೊಂದು ಬಾಳೇ...' ಎಂದೆನಿಸುವುದು ನಮ್ಮವರು ನಮ್ಮಿಂದ ದೂರವಿದ್ದಾಗ ಮಾತ್ರ. ಅಲ್ಲಿ ಪ್ರೀತಿಯ ಕುರುಹು ಮಾತ್ರವಲ್ಲ, ಅನುಮಾನವೂ ಹೊಗೆಯಾಡುತ್ತದೆ. ಬೇರೆಯವರೊಂದಿಗೆ ಸುತ್ತಾಡುತ್ತಿರುವ ಭಯ ನಿಮ್ಮನ್ನು ಅಧೀರರನ್ನಾಗಿಸುತ್ತದೆ. ಮತ್ತೊಂದು ಸಂಬಂಧ ಹೊಂದಿರುವ ಬಗ್ಗೆಯೂ ಆತಂಕ ಹೆಚ್ಚಿಸುತ್ತದೆ. ಆದರೆ, ಉನ್ನತ ಶಿಕ್ಷಣ, ಉದ್ಯೋಗ...ಮುಂತಾದ ಕಾರಣಗಳಿಂದ ಒಬ್ಬರನ್ನೊಬ್ಬರು ಬಿಟ್ಟಿರಬೇಕಾದ ಪ್ರಸಂಗ ಬರುತ್ತದೆ. ಅದನ್ನು ನಿರ್ವಹಿಸಲು ಇಲ್ಲಿವೆ ಟಿಪ್ಸ್....

  • ವಿಪರೀತ ಸಂಭಾಷಣೆ ಬೇಡ.
  • ಕೆಲವು ನಿಯಮಗಳನ್ನು ಮಾಡಿಕೊಂಡು, ಇಬ್ಬರೂ ತಪ್ಪದೇ ಪಾಲಿಸಿ.
  • ಸಂಭಾಷಣೆಯಲ್ಲಿ ಪ್ರೀತಿ-ಪ್ರೇಮಯುಕ್ತ ಸಂಭಾಷಣೆಯೂ ನಿಮ್ಮದಾಗಿರಲಿ.
  • ಗಾಬರಿ ಅಥವಾ ಆತಂಕ ಎದುರಿಸಬೇಕಾದ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಿ.
  • ಕೆಲಸ ಮಾಡುವಾಗಿ, ಜತೆಯಲ್ಲಿರುವಂತೆ ಫೀಲ್ ಮಾಡಿಕೊಳ್ಳಲು ಫೋನ್ ಮಾಡಿಕೊಳ್ಳಿ. ಆನ್‌ಲೈನ್ ಆಟವಾಡಿ. ವೀಡಿಯೋ ಕರೆ ಮಾಡಿ.
  • ಅಪರೂಪಕ್ಕೊಮ್ಮೆಯಾದರೂ ಭೇಟಿಯಾಗಲು ಯತ್ನಿಸಿ. ಭೇಟಿ ಸದಾ ನೆನಪಿನಲ್ಲಿರುವಂತೆ ನಡೆದುಕೊಳ್ಳಿ. ಸುಖಾ ಸುಮ್ಮನೆ ಕಾದಾಡಬೇಡಿ.
  • ಪ್ರಾಮಾಣಿಕತೆ ಇದ್ದರೆ ಮಾತ್ರ ಇಂಥದ್ದೊಂದು ಬಾಂಧವ್ಯವನ್ನು ಮಧುರವಾಗಿಸಿಕೊಳ್ಳಲು ಸಾಧ್ಯ.
  • ಮತ್ತೊಬ್ಬರ ಶೆಡ್ಯೂಲ್ ತಿಳಿದುಕೊಂಡು, ಫೋನ್ ಮಾಡಿಕೊಳ್ಳಿ.
  • ಜಾಲತಾಣದಲ್ಲಿ ವಿಷಯಗಳನ್ನು ಶೇರ್ ಮಾಡಿ, ಒಬ್ಬರನ್ನೊಬ್ಬರು ಟ್ಯಾಗ್ ಮಾಡಿಕೊಳ್ಳಿ.
  • ಸ್ನೇಹಿತರು - ಬಂಧುಗಳ ಬಗ್ಗೆಯೂ ಮಾತನಾಡಿ.
  • ಇಬ್ಬರು ಪೆಟ್ ನೇಮ್‌ನಿಂದ ಕರೆದುಕೊಳ್ಳಿ.
  • ಅಂತರವಿದ್ದರೂ, ಆತ್ಮೀಯತೆಗೆ ಧಕ್ಕೆ ಬಾರದಿರಲಿ. ದೈಹಿಕವಾಗಿ ದೂರವಿದ್ದರೂ, ಮನಸ್ಸು ಒಂದಾಗಿರಲಿ.