Asianet Suvarna News Asianet Suvarna News

ತುಪ್ಪ ಹೆಚ್ಚಿಸುತ್ತೆ ತ್ವಚೆಯ ಸೌಂದರ್ಯ

ಚರ್ಮವನ್ನು ಕಾಂತಿಯುತ ಆಗಿಸಿಕೊಳ್ಳಲು ಯಾವುದೇ ಕ್ರೀಮ್‌ಗಳಿಗಿಂತ ಪರಿಣಾಮಕಾರಿ ನಮ್ಮ ಜೀವನಶೈಲಿ. ಆರೋಗ್ಯಕರ ಲೈಫ್ ಸ್ಟೈಲ್‌ಗಿಂತ ಅದ್ಭುತ ಫೇಸ್‌ಪ್ಯಾಕ್ ಇಲ್ಲ. ಹಾಗಾದರೆ, ಚರ್ಮವನ್ನು ಹೊಳಪೇರಿಸಿಕೊಳ್ಳುವ ಆ ಸರಳ ಉಪಾಯಗಳು ಯಾವುವು?

Tips for skin glowness

ಮಾನವ ಮೂಳೆ ಮಾಂಸದ ತಡಿಕೆ, ಅದರ ಮೇಲಿದೆ ಚರ್ಮದ ಹೊದಿಕೆ... ಎಂಬ ಜನಪ್ರಿಯ ಗೀತೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ಚರ್ಮ ಎನ್ನುವುದು ಮೇಲ್ಹೊದಿಕೆಯಾ? ಖಂಡಿತಾ ಅಲ್ಲ! ಈ ಚರ್ಮದ ಮರ್ಮದ ಅಗಾಧತೆ ಅರಿತರೆ ಅಚ್ಚರಿಯೇ ಆಗುತ್ತದೆ.

ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅನೇಕರು ಹರಸಾಹಸ ಪಡುತ್ತಿರುತ್ತಾರೆ. ಅವರು ಹಚ್ಚದ ಕ್ರೀಂ ಇಲ್ಲ, ಮಾಡದ ಫೇಸ್‌ಪ್ಯಾಕ್ ಇಲ್ಲ! ಆದರೆ ಚರ್ಮದ ರಕ್ಷಣೆ  ಅಥವಾ ಆರೋಗ್ಯ ಅಂತ ಬಂದಾಗ ಇದೆಲ್ಲದಕ್ಕಿಂತ ಮೊದಲು ಬರುವುದು ನಮ್ಮ ದೇಹದ ಆರೋಗ್ಯ. ನಾವು ಆರೋಗ್ಯವಾಗಿದ್ದಾಗ ಚರ್ಮ ಕೂಡ ಸ್ವಾಭಾವಿಕವಾಗಿ ಚೆನ್ನಾಗಿರುತ್ತದೆ. ಅದೇ ನಮ್ಮ ಆರೋಗ್ಯ ಹದಗೆಟ್ಟಾಗ, ಆರೋಗ್ಯದಲ್ಲಿ ಏರುಪೇರಾದಾಗ, ಹೊರಗಿನಿಂದ ಏನೇ ಲೇಪಿಸಿಕೊಂಡರೂ ಪ್ರಯೋಜನವಾಗದು. ಹಾಗಾಗಿ ಆರೋಗ್ಯಯುತ ಹಾಗೂ ಸಹಜ ಕಾಂತಿಯುತ ತ್ವಚೆಯನ್ನು ಪಡೆಯುವಲ್ಲಿ ಮೊದಲಿಗೆ ಬರುವುದು ಹೊರಗಿನಿಂದ ಹಚ್ಚುವ ಯಾವುದೇ ಕ್ರೀಂ/ ಲೋಷನ್/ ಪ್ಯಾಕ್‌ಗಳಲ್ಲ. 

ಬದಲಿಗೆ ಆರೋಗ್ಯಕರ ಶರೀರ ಹಾಗೂ ಆರೋಗ್ಯಕರ ಜೀವನಶೈಲಿ. ಹೊಸ ವರ್ಷಕ್ಕೆ ಹೊಸ ಕಾಂತಿ ಪಡೆದುಕೊಳ್ಳಲು, ಚರ್ಮದ ಆರೋಗ್ಯ ಕಾಪಾಡಲು ಸರಳ ಉಪಾಯಗಳು ಇಲ್ಲಿವೆ.

- ಸತ್ವಯುತ ಆಹಾರ ಸೇವನೆ

-ಹಣ್ಣು, ತರಕಾರಿ, ಒಣಗಿ ಹಣ್ಣುಗಳು ಹಾಲನ್ನು ಯಥೇಚ್ಛವಾಗಿ ಆದಷ್ಟು ತರಕಾರಿಗಳನ್ನು ಬೇಯಿಸಿ ಸೇವಿಸುವುದು ಉತ್ತಮ.

-ತ್ವಚೆಯ ಕಾಂತಿ  ಹೆಚ್ಚಿಸಲು ದೇಹಕ್ಕೆ ತುಪ್ಪದ ಅಗತ್ಯವಿದೆ. ಸಾಧ್ಯವಾದಷ್ಟು ತುಪ್ಪು ಸೇವಿಸಿ. 

- ಹಣ್ಣು, ತರಕಾರಿ, ಒಣಗಿದ ಹಣ್ಣುಗಳು, ಹಾಲನ್ನು ಯಥೇಚ್ಚವಾಗಿ ಸೇವಿಸಿ. ಆದಷ್ಟು ತರಕಾರಿಗಳನ್ನು ಬೇಯಿಸಿ ಸೇವಿಸುವುದು ಉತ್ತಮ.

- ತ್ವಚೆಯ ಕಾಂತಿ ವೃದ್ಧಿಸಲು ತುಪ್ಪ ಬಹಳ ಸಹಕಾರಿ. ಹೆಚ್ಚೆಚ್ಚು ತುಪ್ಪ ತಿನ್ನಿ.

- ಬಿಸ್ಕೇಟ್, ಚಾಕ್ಲೆಟ್, ಬ್ರೆಡ್, ಪಫ್‌ಗಳಂಥ ಬೇಕರಿ ಫುಡ್ ತಿನ್ಲೇಬೇಡಿ. ಬೆಳಗ್ಗೆದ್ದೊಡನೆ ಹಾಲಿನೊಂದಿಗೊ ಕಾಫಿ ಜೊತೆಗೋ ಬಿಸ್ಕೇಟ್/ ಬ್ರೆಡ್‌ಗಳನ್ನು ತಿನ್ನುವ ರೂಢಿ ಇದ್ದರೆ ಬಿಟ್ಟುಬಿಡಿ. ಇದರಿಂದ ಮಲಬದ್ಧತೆಯಾಗುವ ಸಾಧ್ಯತೆಗಳಿವೆ.

- ಪಾನಿಪೂರಿ, ಮಂಚೂರಿ, ಪಿಜ್ಜಾ, ಬರ್ಗರ್‌ಗಳಂಥ ಜಂಕ್ ಫುಡ್‌ಗಳಿಂದ ದೂರ ಇರಿ. ಇದರಿಂದ ಜೀರ್ಣಕ್ರಿಯೆ ಕುಂಠಿತವಾಗುತ್ತದೆ.

- ಹಸಿವಾದಾಗ ಖಾಲಿ ಹೊಟ್ಟೆಯಲ್ಲಿರುವುದಾಗಲಿ ಅಥವಾ ಹಸಿವಿಲ್ಲದಾಗ ಸುಮ್ಮನೆ ಬಾಯಿ ಚಪಲಕ್ಕೆ ತಿನ್ನುವುದಾಗಲಿ ಮಾಡ್ಬೇಡಿ. ಇವರಡೂ ಕಾಯಿಲೆಗಳು ಬರಲು ಮುಖ್ಯ ಕಾರಣ. ನೀರು ಕುಡೀತಾನೆ ಇರಿ!

- ನೀರನ್ನು ಸೇವಿಸಿದಷ್ಟೂ ತ್ವಚೆಯು ಸ್ನಿಗ್ಧವಾಗಿ, ಸುಂದರವಾಗಿರುತ್ತದೆ. ಹಾಗಾಗಿ ಆಗಾಗ ನೀರನ್ನು ಸೇವಿಸುತ್ತಿರಿ.

- ಬೆಚ್ಚಗಿರುವ ಅಥವಾ ಬಿಸಿನೀರು ಸೇವನೆ ತ್ವಚೆಗೆ ಹಿತಕರ.

ನಿದ್ರೆ

- 6-8 ಗಂಟೆ ನಿದ್ದೆ ಶರೀರಕ್ಕೆ ಅವಶ್ಯ.

- ತಡರಾತ್ರಿಯವರೆಗೂ ಕೆಲಸ ಮಾಡುವ, ಟಿವಿ/ಕಂಪ್ಯೂಟರ್/ ಮೊಬೈಲ್ ನೋಡುವ ಅಭ್ಯಾಸ ಬಿಡಿ. ಇದರಿಂದ ತ್ವಚೆಯು ಪೇಲವವಾಗಿ ಕಾಂತಿ ಕಳೆದುಕೊಳ್ಳುತ್ತದೆ.

- ನಿದ್ದೆಗೆಟ್ಟರೆ ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಮೂಡುತ್ತವೆ.

ವ್ಯಾಯಾಮ

- ವ್ಯಾಯಾಮದಿಂದಾಗಿ ಶರೀರದ ಬೆವರು ಗ್ರಂಥಿಗಳು ಸರಿಯಾಗಿ ಕೆಲಸ ಮಾಡುತ್ತವೆ. ಬೆವರಿನೊಂದಿಗೆ ತ್ವಚೆಯಲ್ಲಿನ ಕಲ್ಮಶಗಳೆಲ್ಲ ಹೊರಹೋಗುತ್ತವೆ.

- ಅಷ್ಟೇ ಅಲ್ಲದೆ, ವ್ಯಾಯಾಮದಿಂದ ಆರೋಗ್ಯವಂತ ಸುಂದರ ದೇಹಾಕೃತಿಯನ್ನೂ ಪಡೆಯಬಹುದು.

ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಣೆ

- ಅತಿಯಾದ ಬಿಸಿಲಿನಲ್ಲಿ ಹೊರಗೆ ಹೋಗುವಾಗ ತುಂಬು ತೋಳಿನ ಅಂಗಿಯನ್ನು ಧರಿಸುವುದು ಉತ್ತಮ.

- ಸನ್‌ಸ್ಕ್ರೀನ್ ಬಳಕೆಯೂ ಸಹಾಯಕ. ಆದರೆ, ಸನ್ ಸ್ಕ್ರೀನ್ ಆಯ್ಕೆ ಎಚ್ಚರಿಕೆಯಿಂದ ಮಾಡಿರಿ. ಚಿಕ್ಕ ಮಕ್ಕಳಿಗೆ ಇದು ಒಳ್ಳೆಯದಲ್ಲ. ಹಾಗಾಗಿ, ದೇಹವನ್ನು ಬಟ್ಟೆಯಿಂದ ಮುಚ್ಚುವುದು ಹೆಚ್ಚು ಸೂಕ್ತ.

ಕ್ರಿಮಿ- ಕೀಟಗಳಿಂದ ರಕ್ಷಣೆ

- ಎಷ್ಟೋ ಬಾರಿ ಕ್ರಿಮಿ ಕೀಟಗಳಿಂದಾದ ಚರ್ಮದ ತೊಂದರೆಗಳು ಎಷ್ಟು ದಿನವಾದರೂ ವಾಸಿಯಾಗದು. ದೇಹದಲ್ಲಿ ಅದರಿಂದಾಗಿ ನಂಜಾಗಬಹುದು. ಕಲೆಗಳು ಉಳಿಯುವ ಸಾಧ್ಯತೆಯೂ ಹೆಚ್ಚು. ಇವುಗಳಿಂದ ರಕ್ಷಣೆ ಬಹಳ ಮುಖ್ಯ. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ.

- ಮನೆಯ ಕಿಟಕಿಗಳಿಗೆ ಮಸ್ಕಿಟೋ ಮೆಷ್ ಬಳಸಿ.

- ಸಂಜೆ ಹೊತ್ತು ಮನೆಯಲ್ಲಿ ಧೂಪವನ್ನು ಬಳಸುವುದರಿಂದ ಸಾಕಷ್ಟು ಬಗೆಯ ಕ್ರಿಮಿಕೀಟಗಳು ನಾಶವಾಗುತ್ತವೆ.

- ಹೊರಗೆ ಹೋಗುವಾಗ ಕ್ರಿಮಿಯಿಂದ ರಕ್ಷಿಸುವ ರಾಸಾಯನಿಕಯುಕ್ತ ಕ್ರೀಮ್ ಬಳಸುವುದಕ್ಕಿಂತ ಬೇವಿನೆಣ್ಣೆಯನ್ನು ಬಳಸಿ. ಇದು ಅತ್ಯುತ್ತಮ ನೈಸರ್ಗಿಕ ಕ್ರಿಮಿನಾಶಕ.

ಹೊಟ್ಟೆ ಹುಳುಗೆ ಚಿಕಿತ್ಸೆ

- ಹೊಟ್ಟೆಹುಳು ಇದ್ದಾಗಲೂ ತ್ವಚೆಯು ಕಾಂತಿಹೀನವಾಗುತ್ತದೆ. ಬಿಳಿ ಕಲೆಗಳು ಮೂಡುತ್ತವೆ. ಹಾಗಾಗಿ 6 ತಿಂಗಳಿಗೊಮ್ಮೆ ಜಂತುವಿಗೆ ಔಷಧಿ ತೆಗೆದುಕೊಳ್ಳಬೇಕು ಒಂದೊಂದು ಚರ್ಮಕ್ಕೆ ಒಂದೊಂದು ಕತೆ

ವಾತ ಪ್ರಧಾನ ಚರ್ಮ ಲಕ್ಷಣ: 

- ಸಾಮಾನ್ಯವಾಗಿ ತೆಳುವಾಗಿ ತಣ್ಣಗಿರುತ್ತದೆ. ಒಣ  ತ್ವಚೆಯಾದ ಇದು ಗಾಳಿಗೆ ಬೇಗ ಒಣಗುತ್ತದಲ್ಲದೆ, ಒರಟಾಗಿದ್ದು ಬೇಗ ಸುಕ್ಕಾಗುವ ಹಾಗೂ ಚಪ್ಪಳಿಕೆ ಏಳುವ ಸಾಧ್ಯತೆ ಇರುತ್ತದೆ. 

- ಸಾಮಾನ್ಯವಾಗಿ ಕಪ್ಪು- ಕಡು ಗೋಧಿ ವರ್ಣದಿಂದ ಕೂಡಿರುತ್ತದೆ.

ಸಮಸ್ಯೆ: ಈ ರೀತಿಯ ತ್ವಚೆಯವರಿಗೆ ಸಾಧಾರಣವಾಗಿ ಡ್ರೈ ಎಕ್ಸಿಮಾ, ಕಾಲು ಒಡಕಿನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಜೀವನಶೈಲಿ: ಸುಲಭವಾಗಿ ಡಿಹೈಡ್ರೇಟ್ ಅಥವಾ ಒಣಗುವ ಈ ತ್ವಚೆಯನ್ನು ಹೊಂದಿದವರು ಆದಷ್ಟು ಬಿಸಿ ನೀರು ಹಾಗು ಬಿಸಿ ಅಹಾರವನ್ನು ಸೇವಿಸಬೇಕು. ಬಿಸಿಯಾದ ಎಣ್ಣೆ ಮಸಾಜ್ ಅಥವಾ ಅಭ್ಯಂಗದಿಂದ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. ಈ ಥರದ ತ್ವಚೆಯನ್ನು ಹೊಂದಿದವರು ಯಾವುದೇ ಚರ್ಮವನ್ನು ಒಣಗಿಸುವ ಕಾಸ್ಮೆಟಿಕ್ಸ್ ಬಳಸಬಾರದು. ಉದಾ: ಆಲ್ಕೋಹಾಲ್‌ನಿಂದ ತಯಾರಾದ ಫೇಸ್‌ವಾಶ್, ಪ್ಯಾಕ್, ಮುಲ್ತಾನಿ ಮಿಟ್ಟಿ... ಮುಂತಾದವು.

ಪಿತ್ತ ಪ್ರಧಾನ ಚರ್ಮ

ಲಕ್ಷಣ: ಯಾವಾಗಲೂ ಬಿಸಿಯಾಗಿರುತ್ತದೆ. ಇದು ಬಹಳ ಸೂಕ್ಷ್ಮವಾಗಿದ್ದು, ಬಿಸಿಲಿಗೆ ಸುಲಭವಾಗಿ ಸುಡುತ್ತದೆ (ಟ್ಯಾನ್).

ಸಮಸ್ಯೆ: ಕೆಂಪು ಕಜ್ಜಿ, ತುರಿ, ಮೊಡವೆ ಏಳುವ ಸಾಧ್ಯತೆ ಜಾಸ್ತಿ. ಈ ರೀತಿಯ ತ್ವಚೆಯನ್ನು ಹೊಂದಿದವರಿಗೆ ಹೆಚ್ಚಾಗಿ ಮಚ್ಚೆಗಳು, ಭಂಗು, ಸರ್ಪಸುತ್ತು, ಉರಿ ಊತಗಳಂಥ ಚರ್ಮ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ತ್ವಚೆಯ ಸೌಂದರ್ಯಕ್ಕೇನು ಮಾಡಬೇಕು?

- ತಣ್ಣೀರನ್ನು ಸೇವಿಸುವುದು ಉತ್ತಮ. ಉಪ್ಪು, ಹುಳಿ, ಖಾರ ಹಾಗೂ ಮಸಾಲೆ ಪದಾರ್ಥ ಕಡಿಮೆ ತಿನ್ನಬೇಕು. ಅತೀ ತೀಕ್ಷ್ಣವಾದ ಕಾಸ್ಮೆಟಿಕ್ಸ್ ಬಳಸುವುದು,

- ಅತಿಯಾಗಿ ಹಬೆ ತೆಗೆದುಕೊಳ್ಳುವುದೂ ಒಳ್ಳೆಯದಲ್ಲ.

ಕಫ ಪ್ರಧಾನ ಚರ್ಮ ಲಕ್ಷಣ

- ದಪ್ಪ ಇರುತ್ತದೆ. ಬೇರೆಯದಕ್ಕಿಂತ ದೊಡ್ಡ ರಂಧ್ರಗಳನ್ನು ಹೊಂದಿರುತ್ತದೆ ಹಾಗು ಬಿಸಿಲಿಗೆ ಬೇಗ ಸುಡುವುದಿಲ್ಲ. ಸಾಧಾರಣವಾಗಿ ಬಿಳಿ ಹಾಗು ಕಾಂತಿಯುತ ತ್ವಚೆ ಇರುವ ಈ ಚರ್ಮ ಎಣ್ಣೆ ಜಿಡ್ಡಿನಿಂದ ಕೂಡಿರುತ್ತದೆ.

ಸಮಸ್ಯೆ: ಜಿಡ್ಡಿನಂಶ ಜಾಸ್ತಿಯಾದಾಗ ಚರ್ಮದಲ್ಲಿ ಬಿಳಿ ಹಾಗೂ ಕಪ್ಪು ಬಣ್ಣದ ಮೇಣದಂಥ ಅಂಶ (ವೈಟ್ಹೆಡ್ ಮತ್ತು ಬ್ಲಾಕ್ ಹೆಡ್) ಶೇಖರಣೆಯಾಗುತ್ತದೆ. ಜೊತೆಗೆ ಕೀವು ಮಿಶ್ರಿತ ಗುಳ್ಳೆಗಳು, ಕೀವು ತುಂಬಿದ ಮೊಡವೆಗಳಾಗುವ ಸಾಧ್ಯತೆ ಜಾಸ್ತಿ.

ಜೀವನಶೈಲಿ: ಇಂಥ ತ್ವಚೆಯನ್ನು ಹೊಂದಿದವರು ಎಣ್ಣೆ ಪದಾರ್ಥ, ಸಿಹಿ ಪದಾರ್ಥ, ಮಾಂಸ, ಚೀಸ್, ಪನ್ನೀರ್‌ಗಳನ್ನು ಕಡಿಮೆ ಸೇವಿಸಬೇಕು. ಸದಾ ಬಿಸಿ ನೀರನ್ನು  ಸೇವಿಸುವುದು ಉತ್ತಮ. ಹಾಗೆಯೇ ಎಣ್ಣೆ ಅಂಶವನ್ನು ಹೆಚ್ಚಿಸುವಂಥ ಕ್ರೀಂ, ಲೋಷನ್‌ಗಳ ಬಳಕೆ, ಹಾಲಿನ ಕೆನೆಯಿಂದ ಅಥವಾ ಬೇರೆ ಜಿಡ್ಡಿನ ಪದಾರ್ಥಗಳಿಂದ  ಮಾಡಿರುವಂಥ ಕಾಸ್ಮೆಟಿಕ್ಸ್‌ಗಳನ್ನು ಬಳಸಬಾರದು. ಆಗಾಗ್ಗೆ ಹಬೆ ತೆಗೆದುಕೊಳ್ಳುವುದರಿಂದ ರಂಧ್ರಗಳಲ್ಲಿ ಶೇಖರಣೆಯಾದ ಜಿಡ್ಡಿನಂಶ ಹೊರ ಬರುವುದರಿಂದ ತ್ವಚೆ ಕಾಂತಿಯುತವಾಗುವುದು.

ಇದು ನಿಮಗೆ ತಿಳಿದಿರಲಿ

- ಪಿತ್ತ ಪ್ರಧಾನ ತ್ವಚೆಯವರಿಗೆ ಹೆಚ್ಚಾಗಿ ಕಪ್ಪು ಮಚ್ಚೆ ಅಥವಾ ಭಂಗು ಬರುವ ಸಾಧ್ಯತೆ ಜಾಸ್ತಿ. ಹಾಗಾಗಿ ಅದು ಬರದಂತೆ ತಡೆಗಟ್ಟಲು ಅವರು ನಿತ್ಯ ಮಂಜಿಷ್ಟ, ರಕ್ತಚಂದನ, ಲೋಧ್ರ ಮುಂತಾದ ಗಿಡಮೂಲಿಕೆಗಳಿಂದ ಮಾಡಿರುವ ಕ್ರೀಮ್ ಅಥವಾ ಪುಡಿ ಬಳಸುವುದು ಸೂಕ್ತ. 

- ಹಾಗೆಯೇ ವಾತ ಪ್ರಧಾನ ಚರ್ಮ ಉಳ್ಳವರಿಗೆ, ಗಾಳಿಗೆ ಬೇಗ ಚರ್ಮ ಒಣಗದಂಥ ಗುಣಗಳಿರುವ ಕ್ರೀಂ ಸೂಕ್ತ. ರಾತ್ರಿ ಮಲಗುವಾಗ ತೆಳುವಾಗಿ ಕುಂಕುಮಾದಿ ತೈಲ ಹಚ್ಚಿ ಮಲಗುವುದರಿಂದ ಒಣ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. 

- ಕಫ ಪ್ರಧಾನವಾದ ಚರ್ಮದವರು ಜಾಹೀರಾತು ನೋಡಿ ಇದೇ ಕುಂಕುಮಾದಿ ತೈಲವಿರುವ ಕ್ರೀಂ ಬಳಸಿದರೆ ಮೊಡವೆ ಏಳುವ ಅಪಾಯವಿರುತ್ತದೆ. 

- ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಯಾವುದೋ ಫೇಷಿಯಲ್ ಮಾಡಿಸಿಕೊಂಡರೆ ಮುಖ ಸುಂದರವಾಗಿರುತ್ತದೆ ಎನ್ನುವುದು ತಪ್ಪು. ನಮ್ಮ ಶರೀರದಲ್ಲಿರುವ ಭ್ರಾಜಕ ಪಿತ್ತ, ರಸ, ರಕ್ತ, ಸಾರ... ಹೀಗೆ ಹಲವಾರು ಅಂಶಗಳು ಪ್ರಾಕೃತವಾಗಿದ್ದಾಗ ಮಾತ್ರ ತ್ವಚೆ ಸುಂದರವಾಗಿರಲು ಸಾಧ್ಯ. 

- ಹಿಮೋಗ್ಲೋಬಿನ್ ಕಡಿಮೆ ಇರುವ ವ್ಯಕ್ತಿಗೆ ಒಂದೇ ತಿಂಗಳಲ್ಲಿ ಕಾಂತಿ ಹೆಚ್ಚಿಸಿಕೊಳ್ಳಲು ಯಾವ ಕ್ರೀಂ ಕೂಡ ನೆರವಿಗೆ ಬರುವುದಿಲ್ಲ. ಹಾಗೊಮ್ಮೆ ನೀವು ಬೆಳ್ಳಗಾಗಿದ್ದೀರ ಎಂದರೆ, ನಿಮ್ಮ ಮುಖ ಬ್ಲೀಚ್ ಆಗಿ ಸುಡುತ್ತಿದೆ ಎಂದರ್ಥ. ೬ ಅತಿಯಾದ ಆ್ಯಸಿಡಿಟಿ ಇರುವವರಿಗೆ ಅದನ್ನು ಸರಿಮಾಡಿಕೊಳ್ಳದೆ ಮೊಡವೆ ನಿವಾರಣೆ ಆಗದು. 

- ಸರಿಯಾಗಿ ನಿದ್ರೆ ಮಾಡದೆಯೋ ಅಥವಾ ಟೆನ್ಷನ್‌ನಿಂದಲೋ ಕಣ್ಣಿನ ಸುತ್ತ ಕಪ್ಪುಗಟ್ಟಿದ್ದರೆ ಅಂಡರ್ ಐ ಕ್ರೀಮ್ ಏನೂ ಮಾಡಲು ಸಾಧ್ಯವಿಲ್ಲ. 

- ಹಾಗಾಗಿ ಯಾವುದೇ ಕ್ರೀಮ್ ಬಳಸುವ ಮೊದಲು ಒಮ್ಮೆ ನಿಮ್ಮ ಚರ್ಮದ ಗುಣ, ಆರೋಗ್ಯದ ಸ್ಥಿತಿಯನ್ನು ಅರಿತು ಬಳಸುವುದು ಸೂಕ್ತ.

ಡಾ. ಪ್ರಕೃತಿ ಮಂಚಾಲೆ

Follow Us:
Download App:
  • android
  • ios