ಕಾಲೇಜಿನಲ್ಲಿ ಸಾರಿ ಡೇ ಅಂದ್ರೆ ಹುಡುಗಿಯರು ಬಣ್ಣ ಬಣ್ಣದ ಸೀರೆಗಳಲ್ಲಿ ಮಿಂಚಿದರೆ, ಹುಡುಗರು ಅವರ ಅಂದವನ್ನು ಕಣ್ತುಂಬಿಕೊಳ್ಳುವ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಪುಣೆಯ ಫೆರ್ಗುಸ್ಸನ್ ಕಾಲೇಜ್‍ನಲ್ಲಿ ಇತ್ತೀಚೆಗೆ ನಡೆದ ಟೈ ಮತ್ತು ಸಾರಿ ಡೇಯಲ್ಲಿ ಹುಡುಗಿಯರೂ ನಾಚುವಂತೆ ಮೂವರು ಹುಡುಗರು ಸೀರೆಯುಟ್ಟು ಎಲ್ಲರ ಗಮನಸೆಳೆದಿರುವುದು ವಿಶೇಷ. ಹಾಗಂತ ಈ ಹುಡುಗರನ್ನು ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ.ಇವರು ಸೀರೆಯುಟ್ಟು ಕಾಲೇಜಿಗೆ ಬಂದಿರುವುದರ ಹಿಂದೊಂದು ಸದುದ್ದೇಶವಿದೆ. ಅದೇ ಲಿಂಗ ಸಮಾನತೆ. ಹೆಣ್ಣು ಮತ್ತು ಗಂಡಿನ ನಡುವಿನ ಅಂತರವನ್ನು ತಗ್ಗಿಸಲು ಈ ಹುಡುಗರು ಸೀರೆಯ ಮೊರೆ ಹೋಗಿದ್ದರು.ದಿಟ್ಟು ಹುಡುಗನಂತೆ ಪ್ಯಾಟ್, ಶರ್ಟ್, ಕೋಟು ಹಾಗೂ ಟೈ ಧರಿಸಿದ ಹುಡುಗಿಯೊಬ್ಬಳು ಇವರಿಗೆ ಸಾಥ್ ನೀಡಿದ್ದು ಮತ್ತೊಂದು ವಿಶೇಷ. ಅಂದ ಹಾಗೇ ಇಂಥ ವಿನೂತನ ಪ್ರಯತ್ನಕ್ಕೆ ಕೈಹಾಕಿದವರು ಸುಮಿತ್ ಹೊನ್ವಾಡ್ಜಕರ್, ಆಕಾಶ್ ಪವಾರ್, ರುಷಿಕೇಶ್ ಸನಪ್ ಹಾಗೂ ಶ್ರದ್ಧಾ ದೇಶಪಾಂಡೆ.

ಇವರು ಕಾಲೇಜಿನಲ್ಲಿ ಕ್ಲಾಸ್ ಮೇಟ್ಸ್, ಮನೆಯಲ್ಲಿ ಗಂಡ ಹೆಂಡತಿ!

ಪಕ್ಕಾ ಹುಡುಗಿ ಸ್ಟೈಲ್: ಈ ಮೂವರು ಹುಡುಗರು ಸೀರೆ ಉಟ್ಟುಕೊಳ್ಳುವ ಜೊತೆಗೆ ಅದಕ್ಕೆ ಮ್ಯಾಚ್ ಆಗುವ ಬಿಂದಿ, ಬಳೆಗಳು ಹಾಗೂ ನೆಕ್ಲೇಸ್ ಧರಿಸುವ ಮೂಲಕ ಪಕ್ಕಾ ಹುಡುಗಿಯರಂತೆ ಸೀರೆಯಲ್ಲಿ ಮಿಂಚಿದರು. ಅಂದಹಾಗೇ ಈ ಹುಡುಗರಿಗೆ ಸೀರೆ ಬಣ್ಣದಿಂದ ಹಿಡಿದು ಅದಕ್ಕೆ ಒಪ್ಪುವ ಆಭರಣಗಳ ತನಕ ಎಲ್ಲವನ್ನೂ ಚಾಯ್ಸ್ ಮಾಡಿಕೊಟ್ಟಿದ್ದು ಗೆಳತಿ ಶ್ರದ್ಧಾ ದೇಶಪಾಂಡೆ ಅಂತೆ. ಅಂದಹಾಗೇ ಇವರಿಗೆ ಸೀರೆ ಉಡುವ ಯೋಚನೆ ಹೊಳೆದದ್ದು ಅಚಾನಕ್ ಆಗಿಯಂತೆ. ಕಾಲೇಜಿನ ಮೈದಾನದಲ್ಲಿ ಮೂವರು ಯುವಕರು ಲಿಂಗ ಸಮಾನತೆಗೆ ಸಂಬಂಧಿಸಿ ಏನಾದರೂ ವಿಶಿಷ್ಟವಾದದ್ದನ್ನು ಮಾಡಬೇಕು ಎಂದು ಯೋಚಿಸುತ್ತಿರುವಾಗ ಈ ಐಡಿಯಾ ಹೊಳೆಯಿತ್ತಂತೆ. ಅಂದ ಹಾಗೇ ಈ ಕಾಲೇಜಿನ ಸಂಸ್ಥಾಪಕರಲ್ಲೊಬ್ಬರಾದ ಬಾಲಗಂಗಾಧರ್ ತಿಲಕ್ ಅವರು ಮಹಾತ್ಮ ಗಾಂಧೀಜಿಯನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದದ್ದು ಇದೇ ಮೈದಾನದಲ್ಲಿ. ಇಂಥ ಐತಿಹಾಸಿಕ ಸ್ಥಳದಲ್ಲಿ ಇಂಥ ವಿಶಿಷ್ಟ ಯೋಚನೆ ಹೊಳೆದ ಬಗ್ಗೆ ಈ ಮೂವರು ಯುವಕರು ಖುಷಿ ಹಂಚಿಕೊಂಡಿದ್ದಾರೆ. 

ಸೀರೆ ಉಡುವುದು ಬಹುಕಷ್ಟದ ಕೆಲಸ: ಸೀರೆಯುಟ್ಟು ಕಾಲೇಜಿನಲ್ಲಿ ಜನಪ್ರಿಯತೆ ಗಳಿಸಿದ ಮೂವರು ಹುಡುಗರ ಬಳಿ ಆ ಅನುಭವ ಹೇಗಿತ್ತು ಎಂದು ಕೇಳಿದರೆ ಅವರ ಮೊದಲ ಉತ್ತರ ಸೀರೆ ಉಡುವುದು ಸುಲಭದ ಕೆಲಸ ಅಲ್ಲವೇ ಅಲ್ಲ ಎನ್ನುವುದು.‘ಸೀರೆ ಉಡುವ ನಿರ್ಧಾರ ಕೈಗೊಂಡಾಗ ಅದಕ್ಕೆ ಬ್ಲೌಸ್, ಲಂಗ ಹಾಗೂ ಅನೇಕ ಸೆಫ್ಟಿ ಪಿನ್‍ಗಳು ಬೇಕಾಗುತ್ತವೆ ಎಂಬ ವಿಷಯ ನಮಗೆ ತಿಳಿದಿರಲಿಲ್ಲ’ ಎನ್ನುತ್ತಾರೆ ಆಕಾಶ್ ಪವಾರ್.

'ಆ ಟೈಮ್' ನಲ್ಲಿ ಮಗು ಎದ್ದರೆ ಏನ್ಮಾಡ್ಬೇಕು?

ಕೈ ಕೊಟ್ಟ ಯೂ ಟ್ಯೂಬ್: ಮೊದಲ ಬಾರಿಗೆ ಸೀರೆ ಉಡುವ ಹುಡುಗಿಯರು ಕೂಡ ಇಂದು ಯೂ ಟ್ಯೂಬ್ ಮೊರೆ ಹೋಗುತ್ತಾರೆ.ಹಾಗಿರುವಾಗ ಇನ್ನು ಹುಡುಗರು ಸೀರೆ ಉಡುವುದು ಎಂದರೆ ನಿಸ್ಸಂದೇಹವಾಗಿ ಇದೇ ಮಾರ್ಗವನ್ನು ಅನುಸರಿಸಿರುತ್ತಾರೆ. ಆದರೆ, ಈ ಹುಡುಗರಿಗೆ ಯೂ ಟ್ಯೂಬ್ ಕೈ ಹಿಡಿಯಲಿಲ್ಲ. ಹೀಗಾಗಿ ಸೀರೆ ಉಡಲು ಗೆಳತಿ ಶ್ರದ್ಧಾ ಅವರ ನೆರವು ಪಡೆಯುವುದು ಅನಿವಾರ್ಯವಾಗಿತ್ತಂತೆ. ಅಂದ ಹಾಗೇ ಈ ಮೂವರು ಹುಡುಗರನ್ನು ರೆಡಿ ಮಾಡಲು ಶ್ರದ್ಧಾಗೆ ಒಂದೂವರೆ ಗಂಟೆ ಬೇಕಾಯಿತಂತೆ.‘ಹೆಂಗಸರು ಡ್ರೆಸ್ ಮಾಡಿಕೊಳ್ಳಲು ಜಾಸ್ತಿ ಟೈಮ್ ತೊಗೊಳ್ತಾರೆ ಎಂದು ಪುರುಷರು ಸದಾ ಕಂಪ್ಲೇಂಟ್ ಮಾಡುತ್ತಿರುತ್ತಾರೆ. ಈಗ ಕೊನೆಯಪಕ್ಷ ಮೂವರು ಗಂಡಸರಿಗಾದರೂ ಮಹಿಳೆಗೆ ಏಕೆ ಅಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿಯಿತ್ತಲ್ಲ ಎಂಬುದೇ ಖುಷಿ.ಸೀರೆ ಉಡುವುದೆಂದರೆ ಗಂಡಸರಂತೆ ಶರ್ಟ್ ಹಾಕಿಕೊಂಡು,ಜೀನ್ಸ್ ಮೇಲೆಳೆದುಕೊಂಡಂತಲ್ಲ ನೆರಿಗೆ ತೆಗೆಯಬೇಕು, ಮಡಿಕೆ ಮಾಡಬೇಕು ಹಾಗೂ ಅದನ್ನು ಸರಿಯಾಗಿ ಒಳಗೆ ಸಿಕ್ಕಿಸಿಕೊಳ್ಳಬೇಕು’ ಎನ್ನುತ್ತಾರೆ ಶ್ರದ್ಧಾ.

ಎಲ್ಲರ ಕಣ್ಣು ಸೀರೆಯುಟ್ಟ ಹುಡುಗರ ಮೇಲೆ: ಸಾರಿ ಡೇ ಅಂದು ಭಯದಿಂದಲೇ ಕಾಲೇಜಿಗೆ ಹೋದ ಈ ಮೂವರು ಹುಡುಗರಿಗೆ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿದ್ದವು. ಕೆಲವು ಹುಡುಗರು ಇವರು ಸಲಿಂಗಕಾಮಿಗಳಿರಬಹುದೇನೋ ಎಂಬ ಅನುಮಾನ ವ್ಯಕ್ತಪಡಿಸಿದ್ದರಂತೆ. ಆದರೆ, ನಂತರ ಕೆಲವರು ಇವರೊಂದಿಗೆ ಸೆಲ್ಫಿ ತೆಗೆಯಲು ಮುಂದಾಗುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇನ್ನು ಕಾಲೇಜಿನ ಹುಡುಗಿಯರಂತೂ ಈ ಮೂವರು ಹುಡುಗರ ವಿನೂತನ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಿದರಂತೆ. ಆದರೆ, ನಮಗೆ ಸೀರೆಯುಟ್ಟು ನಡೆಯುವುದೇ ಕಷ್ಟದ ಕೆಲಸವಾಗಿತ್ತು ಎನ್ನುತ್ತಾರೆ ಈ ಮೂವರು.

ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

ಹುಡುಗರಂತೆ ಪ್ಯಾಂಟ್, ಕೋಟ್ ಹಾಗೂ ಟೈ ಧರಿಸಿದ್ದ ಶ್ರದ್ಧಾ ಕೂಡ ಕೆಲವೊಂದು ನೆಗೆಟೀವ್ ಕಮೆಂಟ್ಸ್‍ಗಳನ್ನು ಕೇಳಬೇಕಾಯಿತಂತೆ. ಪುಸ್ತಕದಲ್ಲಿ ಲಿಂಗ ಸಮಾನತೆಯ ಬಗ್ಗೆ ಓದುವ ನಾವು ನಿಜಜೀವನದಲ್ಲಿ ಅದನ್ನು ಪಾಲಿಸುವುದಿಲ್ಲ. ಇದು ನೈಜ್ಯ ಬದುಕಿನಲ್ಲೂ ಪಾಲನೆಯಾಗಬೇಕು ಎಂಬುದು ಈ ನಾಲ್ವರ ಆಶಯ. ಆದರೆ, ಭಾರತದಲ್ಲಿ ಪುರುಷರನ್ನು ಮಹಿಳೆಯ ಡ್ರೆಸ್‍ನಲ್ಲಿ ಒಪ್ಪಿಕೊಳ್ಳುವ ಮನಸ್ಥಿತಿ ಇನ್ನೂ ಬೆಳೆದಿಲ್ಲ ಎಂಬುದು ವಾಸ್ತವ. ಕೆಲವು ದಿನಗಳ ಹಿಂದೆ ದೆಹಲಿಯ ಜೆಎನ್‍ಯುನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬ ಮೂಗುತಿ ಹಾಗೂ ಬಿಂದಿ ಧರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೆ ಗುರಿಯಾಗಿದ್ದನ್ನು ಮರೆಯುವಂತಿಲ್ಲ.