ಕೊಲ್ಕತ್ತಾ[ಮೇ.22]: 2019ರ ಆರಂಭದಲ್ಲಿ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗಿದ್ದ ಪುಡ್ ಡೆಲಿವರಿ ಸಂಸ್ಥೆ Zomato ನೌಕರರು , ಇತ್ತೀಚೆಗೆ ತನ್ನ ಮಾನವೀಯ ಮೌಲ್ಯಗಳಿಂದಾಗಿ ಸದ್ದು ಮಾಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ವಿಕಲಚೇತನ ವ್ಯಕ್ತಿಗೆ ಉದ್ಯೋಗ ನೀಡುವ ಮೂಲಕ ಭಾರೀ ಸದ್ದು ಮಾಡಿದ್ದ Zomato, ಇದೀಗ ಮತ್ತೊಮ್ಮೆ ಮಾನವೀಯ ಕಾರ್ಯ ನಡೆಸುತ್ತಿರುವ ತನ್ನ ಡೆಲಿವರಿ ಬಾಯ್ 'ರೋಲ್ ಕಾಕು' ಮೂಲಕ ಜನರ ಪ್ರಶಂಸೆಗೆ ಕಾರಣವಾಗಿದೆ.

ಕೆಲ ತಿಂಗಳ ಹಿಂದಷ್ಟೇ ಡೆಲಿವರಿ ಮಾಡಲು ಕೊಂಡೊಯ್ಯುತ್ತಿದ್ದ ಆಹಾರವನ್ನು,  ಖುದ್ದು ತಾನೇ ತಿಂದು ಉಳಿದ ತಿಂಡಿಯನ್ನು ಗ್ರಾಹಕರಿಗೆ ನೀಡಿದ್ದ ಡೆಲಿವರಿ ಬಾಯ್ ವಿಡಿಯೋ Zomato ಬ್ರಾಂಡ್ ಗೆ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿತ್ತು. ಆದರೆ ಕೆಲ ವಿಕಚೇತನ ವ್ಯಕ್ತಿಗೆ ಉದ್ಯೋಗ ನೀಡಿದ Zomato ಕುರಿತು ಜನರು ಪ್ರಶಂಸೆ ವ್ಯಕ್ತಪಡಿಸಿದ ಬೆನ್ನಲ್ಲೇ ಪತಿಕ್ರಿತ್ ಸಾಹಾರ ಮಾನವೀಯ ಕೆಲಸ ಸಂಸ್ಥೆಗೆ ಉತ್ತಮ ಹೆಸರು ತಂದುಕೊಡುತ್ತಿದೆ.

ಪತಿಕ್ರಿತ್ ಸಾಹಾ, ಅನಾಥ ಮಕ್ಕಳ ಪಾಲಿನ 'ರೋಲ್ ಕಾಕು'. Zomato ಗ್ರಾಹಕರು ಕ್ಯಾನ್ಸಲ್ ಮಾಡಿದ ಆಹಾರವನ್ನು ಎಸೆಯದೆ ಅನಾಥ ಮಕ್ಕಳಿಗೆ ಮೊಟ್ಟೆ, ಚಿಕನ್ ರೋಲ್, ಬಿರಿಯಾನಿ ಹಾಗೂ ಇನ್ನಿತರ ತಿಂಡಿ ತಿನಿಸುಗಳನ್ನು ಪ್ರೀತಿಯಿಂದ ಉಣಿಸುವ 'ಅನ್ನದಾತ'. ಕ್ಯಾನ್ಸಲ್ ಮಾಡಿದ ಆಹಾರವನ್ನಷ್ಟೇ ಬಡ ಮಕ್ಕಳಿಗೆ ಹಂಚುವ ಪತಿಕ್ರಿತ್, ಯಾವುದೇ ಕಾರಣಕ್ಕೂ ಕ್ಯಾನ್ಸಲ್ ಮಾಡದಿರುವ ಆಹಾರವನ್ನು ಹಂಚುವುದಿಲ್ಲ.

ಬಡ ಹಾಗೂ ಅನಾಥ ಮಕ್ಕಳ ಮೇಲೆ ವಿಶೇಷ ಕಾಳಜಿ ಹೊಂದಿರುವ 'ರೋಲ್ ಕಾಕು' ಇವರಿಗೆ ಊಟವನ್ನು ಹಂಚುವುದರೊಂದಿಗೆ, ಬಿಡುವಿನ ವೇಳೆ ಮಾಡುವ ಅಕ್ಷರ ಹಾಗೂ ಜ್ಞಾನ ದಾನಕ್ಕೂ ಫೇಮಸ್. ಅನಾಥ ಮಕ್ಕಳಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದೆಂದರೆ ಈತನಿಗೆ ಬಹಳ ಇಷ್ಟ.

’ನಾಲ್ಕು ವರ್ಷದ ಹಿಂದೆ ಕೋಲ್ಕತ್ತಾದ ದಂದಂ ಕಂಟೋನ್ ಮೆಂಟ್ ಬಳಿ ರಸ್ತೆ ದಾಡುತ್ತಿದ್ದಾಗ ಕಂಗಾಲಾಗಿದ್ದ ಅಪ್ರಾಪ್ತ ಬಾಲಕನೊಬ್ಬ ಓಡೋಡಿ ಬಂದು ನನ್ನ ಕಾಲಿಗೆ ಬಿದ್ದು, ಹಣ ಕೊಡುವಂತೆ ಬೇಡುತ್ತಿದ್ದ. ಆತನನ್ನು ನೋಡುತ್ತಿದ್ದಂತೆಯೇ ಆತನೊಬ್ಬ ಡ್ರಗ್ ವ್ಯಸನಿ ಹಾಗೂ ಹಣವನ್ನು ತನ್ನ ಕೆಟ್ಟ ಚಟಕ್ಕಾಗಿ ದುರುಪಯೋಗಪಡಿಸುತ್ತಾನೆ ಎಂದು ಗೊತ್ತಾಯ್ತು. ನಾನು ಆತನನ್ನು ಸಮಾಧಾನಪಡಿಸಲು ಯತ್ನಿಸಿದೆ. ಆದರೆ ಡ್ರಗ್ಸ್ ಚಟ ಆತನನ್ನು ಅದೆಷ್ಟರ ಮಟ್ಟಿಗೆ ಹಿಡಿದುಕೊಂಡಿತ್ತು ಎಂದರೆ, ಬೇರೆ ಉಪಾಯವಿಲ್ಲದೇ ನಾನು ಆತನನ್ನು ಹೊಡೆದಿದ್ದೆ. ಅಂದು ಆತ ನನ್ನೆದುರು ಸಹಾಯಕವಾಗಿ ಅತ್ತಿದ್ದ. ಅಂದಿನಿಂದ ನನ್ನ ಜೀವನ ಹೊಸ ತಿರುವುದು ಪಡೆಯಿತು’ ಇದು ಪತಿಕೃತ್ ಸಾಹಾ ಮಾತಾಗಿದೆ.

ಪಾಠ ಹೇಳಿಕೊಡುವುದರೊಂದಿಗೆ, ಇವರು ಮಕ್ಕಳಿಗಾಗಿ ಜ್ಯೂಸ್ ಹಾಗೂ ನೀರಿನ ಬಾಟಲ್ ಗಳ ಸ್ಟಾಲ್ ನಿರ್ಮಿಸಿ ಕೊಟ್ಟಿದ್ದಾರೆ. ಈ ಮೂಲಕ ಅವರಿಗೆ ದುಡಿಯುವ ದಾರಿ ತೋರಿಸಿಕೊಟ್ಟಿದ್ದಾರೆ.

ಕೋಲ್ಕತ್ತಾ ನಗರ ಸಭೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಪತಿಕ್ರಿತ್, ಬಡ ಮಕ್ಕಳಿಗೆ ಪಾಠ ಹೇಳಿಕೊಡಲೆಂದೇ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಾರದೆಂಬ ನಿಟ್ಟಿನಲ್ಲಿ Zomato ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದ ಕೆಲವೇ ದಿನಗಳಲ್ಲಿ ದಂದಂ ಪ್ರದೇಶದ ರೆಸ್ಟೋರೆಂಟ್ ಮಾಲೀಕರೊಬ್ಬರೊಂದಿಗೆ ಸ್ನೇಹಿತರಾದ ಪತಿಕ್ರಿತ್ ತಾವೇನು ಮಾಡುತ್ತಿದ್ದೇವೆ ಎಂದು ವಿವರಿಸುತ್ತಾರೆ. ಪತಿಕ್ರಿತ್ ಮಾನವೀಯ ಮೌಲ್ಯಕ್ಕೆ ಮರುಳಾದ ರೆಸ್ಟೋರೆಂಟ್ ಮಾಲಿಕ ತಾನೂ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ.

ಈಗ ಆ ಮಾಲೀಕರ ರೆಸ್ಟೋರೆಂಟ್ ನಲ್ಲಿ ಕ್ಯಾನ್ಸಲ್ ಆದ ಎಲ್ಲಾ ಆಹಾರ ಹಾಗೂ ಉಳಿದ ಆಹಾರ ಅನಾಥ ಮಕ್ಕಳಿಗೆ ನೀಡಲಾಗುತ್ತಿದೆ.