ಕೈ ರೇಖೆಗಳು ಭವಿಷ್ಯ ಹೇಳೋದು ಎಷ್ಟು ಸಾಚಾನೋ ಗೊತ್ತಿಲ್ಲ, ಆದ್ರೆ ಉಗುರುಗಳು ಹೇಳೋ ಆರೋಗ್ಯದ ಸಂಗತಿಗಳನ್ನು ಮಾತ್ರ ಖಂಡಿತಾ ನಂಬಬಹುದು. ಬಲಶಾಲಿಯಾದ, ಸ್ವಚ್ಛ ಉಗುರುಗಳು ಉತ್ತಮ ಆರೋಗ್ಯವನ್ನು ಸೂಚಿಸುತ್ತವೆ. ಆದರೆ ಉಗುರಿನ ಮೇಲೆ ಗೆರೆ, ಮಾಸಲು ಬಣ್ಣ, ಉಗುರಿನ ಬಣ್ಣ ಹೀಗೆ ಒಂದೊಂದು ಬದಲಾವಣೆಯು ಒಂದೊಂದು ಆರೋಗ್ಯ ಸಮಸ್ಯೆಯನ್ನು ಹೇಳುತ್ತಿರುತ್ತವೆ. ಅನಾರೋಗ್ಯ ಕುರಿತ ಎಚ್ಚರಿಕೆ ನೀಡುತ್ತಿರುತ್ತವೆ. ಯಾವ ಸಮಸ್ಯೆಯಿದ್ದರೆ ಎಂಥಾ ಉಗುರಿರುತ್ತದೆ ನೋಡೋಣ ಬನ್ನಿ.

ಹಳದಿ ಉಗುರು
ಬಹಳ ಜನರ ಉಗುರು ಹಳದಿಯಾಗಿರುವುದನ್ನು ನಾವು ನೋಡಿರುತ್ತೇವೆ. ಅವು ಹಳದಿಯಾಗಲು ಪ್ರಮುಖ ಕಾರಣ ಫಂಗಲ್ ಇನ್ಫೆಕ್ಷನ್ ಇರಬಹುದು. ಕೆಲ ಪ್ರಕರಣಗಳಲ್ಲಿ ಅವು ಥೈರಾಯ್ಡ್, ಡಯಾಬಿಟೀಸ್ ಅಥವಾ ಶ್ವಾಸಕೋಶದ ಸಮಸ್ಯೆಯನ್ನೂ ಸೂಚಿಸುತ್ತಿರುತ್ತವೆ. ಇನ್ನು ಸಿಗರೇಟು ಅಧಿಕ ಸೇವಿಸುವ ಪರಿಣಾಮವಾಗಿಯೂ ಉಗುರು ಹಳದಿಯಾಗುತ್ತದೆ. ಅದು ಸಿಗರೇಟ್ ಸೇವನೆಯಿಂದ ಶ್ವಾಸಕೋಶಕ್ಕೆ ಹಾನಿಯಾದುದನ್ನು ಸೂಚಿಸುತ್ತಿರಬಹುದು. ಉಗುರು ಯಾವಾಗಲೂ ಹಳದಿಯಾಗಿದ್ದರೆ ನೀವು ಸ್ಮೋಕಿಂಗ್ ಬಿಡುವುದು ಒಳ್ಳೆಯದು.

ತುಂಡಾದ ಹಾಗೂ ಬ್ರಿಟಲ್ ನೇಲ್ಸ್
ಏರುಪೇರಾಗಿ ತುಂಡಾದ ಉಗುರುಗಳು ನೇಲ್ ಪ್ಲೇಟ್ ಬಹಳ ಒಣಗಿರುವುದನ್ನು ಸಾರಿ ಹೇಳುತ್ತವೆ. ಇವು ಥೈರಾಯ್ಡ್ ಸೂಚನೆಯಾಗಿರಬಹುದು. ಹೈಪೋಥೈರಾಯ್ಡಿಸಂ ಇರುವವರಲ್ಲಿ ಈ ತುಂಡಾದ ಉಗುರುಗಳು ಸಾಮಾನ್ಯ. ಥೈರಾಯ್ಡ್ ದೇಹಕ್ಕೆ ಅಗತ್ಯವಿರುವಷ್ಟು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡಲು ಅಸಮರ್ಥವಾದಾಗ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ.

ಛಿದ್ರಗೊಂಡ ಉಗುರು (ಪಿಟ್ಟೆಡ್ ನೇಲ್ಸ್)
ಜೀವತ್‌ಶವವಾದಂತೆ ಛಿದ್ರಗೊಂಡ ಉಗುರು ನೇಲ್‌ಪ್ಲೇಟ್‌ನ ಲೇಯರ್‌ಗಳು ಸರಿಯಾಗಿ ಬೆಳವಣಿಗೆ ಕಾಣದಿರುವುದರಿಂದ ಆಗುತ್ತವೆ. ಸಾಮಾನ್ಯವಾಗಿ ಸೋರಿಯಾಸಿಸ್ ಸಮಸ್ಯೆ ಇರುವವರ ಉಗುರು ಹೀಗೆ ಛಿದ್ರಗೊಂಡಿರುತ್ತದೆ. ಈ ಕಾಯಿಲೆ ಇರುವವರಲ್ಲಿ ಶೇ.50ರಷ್ಟು ಜನರ ಉಗುರು ಹೀಗಾಗಿರುತ್ತದೆ. ಆದ್ದರಿಂದ ಇಂಥ ಉಗುರು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಅನುಮಾನ ಪರಿಹರಿಸಿಕೊಳ್ಳಿ. 

ಉಗುರಿನಲ್ಲಿ ಗೆರೆಗಳು
ಒಂದು ಉಗುರಿನಲ್ಲಿ ಉದ್ದುದ್ದದ ಗೆರೆಗಳು ಕಂಡುಬಂದರೆ ಬಹುಶಃ ನೀವೆಲ್ಲಾದರೂ ಜಜ್ಜಿಕೊಂಡಿರಬಹುದು. ಅಥವಾ ಆ ಉಗುರಿಗೆ ಬೇರೇನೋ ಪೆಟ್ಟು ಬಿದ್ದಿರಬಹುದು. ಆದರೆ ಎಲ್ಲ ಉಗುರಿನಲ್ಲೂ ಗೆರೆಗಳು ಕಂಡುಬಂದರೆ ಅವು ಯಾವುದೋ ಗಂಭೀರ ರೋಗವನ್ನು ಸೂಚಿಸುತ್ತಿರುತ್ತವೆ. ಆ ಕಾಯಿಲೆಯೊಂದಿಗೆ ಹೋರಾಡಲು ದೇಹ ಅವಿರತ ಶ್ರಮ ಹಾಕುವಾಗ ಅಷ್ಟು ಮುಖ್ಯವಲ್ಲದ ಉಗುರುಗಳಿಂದ ಎನರ್ಜಿಯನ್ನು ಎಳೆದುಕೊಂಡು ಅಗತ್ಯವಿರುವೆಡೆ ಬಳಸುತ್ತಿರಬಹುದು. 

ಬಣ್ಣಗೆಟ್ಟ ಉಗುರು ಅಥವಾ ಉಗುರಲ್ಲಿ ಕಪ್ಪುಗೆರೆ
ಉಗುರು ಬಣ್ಣಗೆಟ್ಟರೆ ಅಥವಾ ಉಗುರಿನಲ್ಲಿ ಹಚ್ಚೆ ಹಾಕಿದಂತೆ ಉದ್ದ ಕಪ್ಪು ಗೆರೆ ಬಂದಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಏಕೆಂದರೆ ಅದು ಚರ್ಮದ ಕ್ಯಾನ್ಸರ್‌ನ ಸೂಚನೆಯಾಗಿರಬಹುದು. 

ಉಗುರಿನ ಕಲೆಗುಂಟು ಆರೋಗ್ಯದೊಂದಿಗೆ ನಂಟು

ಕಚ್ಚಿ ತುಂಡಾದ ಉಗುರುಗಳು
ಉಗುರು ಕಚ್ಚುವುದು ಆತಂಕ, ಚಿಂತೆ ಸೇರಿದಂತೆ ಮಾನಸಿಕ ತುಮುಲಗಳನ್ನು ಸೂಚಿಸುತ್ತದೆ. ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಪ್ರಕಾರ ಉಗುರು ಕಚ್ಚುವುದು ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್(ಒಸಿಡಿ) ಸೂಚನೆ. ಹಾಗಂತ ಉಗುರು ಕಚ್ಚುವವರಿಗೆಲ್ಲ ಈ ಮಾನಸಿಕ ಕಾಯಿಲೆ ಇರಬೇಕಿಂದಿಲ್ಲ. ಮಿತಿ ಮೀರಿ ಉಗುರು ಕಚ್ಚುತ್ತಿದ್ದರೆ ಮಾತ್ರ ಮಾನಸಿಕ ತಜ್ಞರನ್ನು ಭೇಟಿ ಮಾಡುವುದು ಒಳಿತು.

ನೀಲಿ ಉಗುರು
ನಿಮ್ಮ ಉಗುರು ನೀಲಿ ಬಣ್ಣಕ್ಕೆ ತಿರುಗಿದ್ದರೆ, ದೇಹಕ್ಕೆ ಬೇಕಾಗುವಷ್ಟು ಆಮ್ಲಜನಕ ದೊರೆಯುತ್ತಿಲ್ಲ ಎಂದರ್ಥ. ಅಲ್ಲದೆ ಇದು ಶ್ವಾಸಕೋಶದ ಅಥವಾ ಹೃದಯ ಸಂಬಂಧಿ ಕಾಯಿಲೆಗಳ ಸೂಚನೆ ಕೂಡಾ. ಇದು ಸತತವಾಗಿ ಆಗುತ್ತಿದ್ದರೆ ಆಗ ವೈದ್ಯರನ್ನು ಕಾಣಿ.

ಆರೋಗ್ಯ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಳಿ ಗುರುತುಗಳು
ಉಗುರ ಮೇಲೆ ಬಿಳಿ ಗುರುತುಗಳು ಕಂಡರೆ ಕ್ಯಾಲ್ಶಿಯಂ ಕೊರತೆ ಸೂಚಿಸುತ್ತಿದೆ ಎಂದು ಹಲವರು ನಂಬಿದ್ದಾರೆ. ಆದರೆ, ಇದು ಯಾವಾಗಲೂ ನಿಜವಲ್ಲ. ಅವು ನೀವು ಯಾವುದಕ್ಕಾದರೂ ಬೆರಳನ್ನು ಗುದ್ದಿಕೊಂಡಿದ್ದರೆ ಕೂಡ ಕಾಣಿಸಿಕೊಳ್ಳುತ್ತವೆ. 

"