ಟಿಮ್‌ ಉಳಿದ ಬ್ಯುಸಿನೆಸ್‌ಮೆನ್‌ಗಳ ಹಾಗಲ್ಲ!

ಶಿಸ್ತು ಮತ್ತು ಸಮಯಪಾಲನೆಗೆ ಇನ್ನೊಂದು ಹೆಸರಿನ ಹಾಗಿದ್ದವರು ಟಿಮ್‌. ಬೆಳಗ್ಗೆ ನಾಲ್ಕು ಗಂಟೆಗೆ ಒಂದು ಸೆಕೆಂಡ್‌ ಆಚೀಚೆ ಇಲ್ಲದ ಹಾಗೆ ಎದ್ದೇಳುವ ಆಸಾಮಿ, ಎದ್ದ ಕೂಡಲೇ ಮಾಡುವ ಮೊದಲ ಕೆಲಸ ಆ್ಯಪಲ್‌ ಬಗ್ಗೆ  ಜಗತ್ತಿನಾದ್ಯಂತದಿಂದ ಹರಿದು ಬಂದಿರುವ ಪ್ರತಿಕ್ರಿಯೆಗಳನ್ನು ಓದುವುದು. ಮಹತ್ವದ್ದು ಅನಿಸಿದ್ದಕ್ಕೆ ಉತ್ತರಿಸುತ್ತಾರೆ. ಇದು ಅವರ ದಿನಚರಿಯ ಬಹುಮುಖ್ಯ ಭಾಗ. ಏಕೆಂದರೆ ಈ ಪ್ರತಿಕ್ರಿಯೆ ಕಂಪೆನಿಯ ಮುಂದಿನ ನಡೆಯನ್ನು ನಿರ್ಧರಿಸುತ್ತದೆ.

‘ಜಗತ್ತಿನಾದ್ಯಂತದ ಜನ ತಮ್ಮ ಬ್ಯುಸಿ ಶೆಡ್ಯೂಲ್‌ನ ಒಂದಿಷ್ಟುಹೊತ್ತನ್ನು ನಮ್ಮ ಉತ್ಪನ್ನಗಳ ಬಗೆಗೆ ಪ್ರತಿಕ್ರಿಯೆ ನೀಡಲು ಮೀಸಲಿಡುತ್ತಾರೆ ಅಂದರೆ ಅದಕ್ಕೆ ಬಹಳ ಮೌಲ್ಯವಿದೆ. ಇದನ್ನು ನಾನು ಗೌರವಿಸಬೇಕು. ಜೊತೆಗೆ ಆ್ಯಪಲ್‌ ಬಗೆಗಿನ ಫೀಡ್‌ಬ್ಯಾಕ್‌ ನಮಗೆ ಬಹಳಷ್ಟುಐಡಿಯಾಗಳನ್ನು ನೀಡುತ್ತದೆ. ಅದಕ್ಕೆ ನನ್ನ ದಿನಚರಿಯ ಮೊದಲ ಭಾಗ ಈ ಫೀಡ್‌ಬ್ಯಾಕ್‌ಗೆ ಮೀಸಲು’ ಎನ್ನುತ್ತಾರೆ ಟಿಮ್‌. ಆ್ಯಪಲ್‌ ಕಂಪೆನಿಯನ್ನು ದಶಲಕ್ಷ ಕೋಟಿ ಡಾಲರ್‌ ಉದ್ಯಮವಾಗಿ ಮುನ್ನಡೆಸುವ ಟಿಮ್‌ ಯಶಸ್ಸಿಗೆ ಈ ಸಂಗತಿ ಮುಖ್ಯ ಕಾರಣ ಅಂತ ತಜ್ಞರು ವಿಶ್ಲೇಷಿಸುತ್ತಾರೆ.

ಒತ್ತಡ ನಿವಾರಣೆಗೆ ಜಿಮ್‌ ಹಾಗೂ ನಿದ್ರೆ

ದೈತ್ಯ ಉದ್ಯಮಿಗೆ ಯಾವ ಪರಿ ಒತ್ತಡಗಳಿರಬಹುದು ಎಂದು ಯೋಚಿಸಿ. ಇದನ್ನೆಲ್ಲ ನಿಭಾಯಿಸುವ ಛಾತಿ ಟಿಮ್‌ಗಿದೆ. ಅವರು ಒತ್ತಡ ನಿವಾರಣೆಗೆ ದಿನದಲ್ಲಿ 1 ಗಂಟೆಗೆ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ದಿನಕ್ಕೆ 7 ಗಂಟೆ ನಿದ್ದೆ ತಪ್ಪಿಸುವುದಿಲ್ಲ. ರಾತ್ರಿ 8.45ಕ್ಕೆ ಮಲಗುತ್ತಾರೆ. ಫೀಡ್‌ಬ್ಯಾಕ್‌ ನೋಡಿದ ಬಳಿಕ ನೇರ ಹೋಗುವುದು ಜಿಮ್‌ಗೆ. 58ರ ಜಿಮ್‌ ಅಷ್ಟುಯಂಗ್‌ ಆಗಿ ಕಾಣುವುದರ ಹಿಂದೆ ವರ್ಕೌಟ್‌ನ ಕೊಡುಗೆ ದೊಡ್ಡದಿದೆ. ಇನ್ನೊಂದು ವಿಷ್ಯ ಅಂದರೆ ಟಿಮ್‌ಗೆ ಸಿಕ್ಕಾಪಟ್ಟೆಫಿಟ್‌ನೆಸ್‌ ಕ್ರೇಜ್‌ ಇದೆ. ಜಿಮ್‌, ವ್ಯಾಯಾಮದ ಬಗ್ಗೆ ಹುಚ್ಚು ಪ್ರೀತಿ.

ಕೂಲಿ ಮಾಡುತ್ತಿದ್ದ ತಂದೆ

ಟಿಮ್‌ ಇಂದು ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಿಇಓ ಆಗಿದ್ದಾರೆ ಅಂದರೆ ಅದಕ್ಕೆ ಕಾರಣ ಸ್ವಂತ ಪರಿಶ್ರಮ. ಟಿಮ್‌ ತಂದೆ ಶಿಪ್‌ಯಾರ್ಡ್‌ನಲ್ಲಿ ಕೂಲಿ ಮಾಡುತ್ತಿದ್ದ ಕಾರ್ಮಿಕ. ತಾಯಿ ಫಾರ್ಮೆಸಿಯಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಕೊರತೆ ಹಿನ್ನೆಲೆಯಲ್ಲಿ ಟಿಮ್‌ ಚಿಕ್ಕ ವಯಸ್ಸಿನಲ್ಲೇ ಚಚ್‌ರ್‍ನ ಸುಪರ್ದಿಗೆ ಬಂದರು. ಮನೆಗೆ ಸಮೀಪವಿದ್ದ ಕಾಲೇಜಿನಲ್ಲೇ ಓದಿ ವಿಜ್ಞಾನದಲ್ಲಿ ಪದವಿ ಪಡೆದರು. ಮುಂದೆ ಓದಬೇಕೆಂಬ ಹಂಬಲ. ಅದಕ್ಕಾಗಿ ಕೆಲಸ ಮಾಡುತ್ತಲೇ ಕಾಲೇಜು ವಿದ್ಯಾಭ್ಯಾಸವನ್ನೂ ಮಾಡಿದರು. ಎಂಬಿಎ ಪದವಿ ಪಡೆದ ಬಳಿಕ ತಮ್ಮ ಕೌಶಲ್ಯದ ಮೂಲಕವೇ ಉದ್ಯಮ ಕ್ಷೇತ್ರ ಪ್ರವೇಶಿಸಿದರು.

ನಮ್ಮೆಲ್ಲರ ಯಶಸ್ಸಿನ ಕೀಲಗೈ ಏಕಾಗ್ರತೆ. ಒಂದು ವಿಷಯದ ಮೇಲೆ ನೀವೆಷ್ಟು ಫೋಕಸ್ಡ್ ಆಗಿರುತ್ತೀರಿ ಎನ್ನುವುದರ ಮೇಲೆ ನಿಮ್ಮ ಬೆಳವಣಿಗೆ ನಿಂತಿದೆ. ಇದು ಕೇವಲ ಕಂಪೆನಿ, ಉದ್ಯೋಗಕ್ಕೆಷ್ಟೇ ಸೀಮಿತವಾಗಿಲ್ಲ. ವೈಯುಕ್ತಿಕ ಬದುಕಿಗೂ ಅನ್ವಯವಾಗುತ್ತದೆ. - ಟಿಮ್ ಕುಕ್, ಆ್ಯಪರ್ ಇಂಕ್ ಸಿಒಓ

ಸ್ಟೀವ್‌ ಜಾಬ್ಸ್‌ ಆಹ್ವಾನ

ಟಿಮ್‌ ‘ಕಾಂಪೆಕ್‌’ ಕಂಪೆನಿಯಲ್ಲಿದ್ದಾಗಲೇ ಇವರ ಕೆಲಸದ ಪರಿಣತಿ ಆ್ಯಪಲ್‌ ಕಂಪೆನಿ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಕಿವಿಗೆ ಬಿದ್ದಿತ್ತು. ಒಂದು ಸಾರ್ವಜನಿಕ ಸಭೆಯಲ್ಲೇ ಜಾಬ್ಸ್‌, ಟಿಮ್‌ ಅವರನ್ನು ಆ್ಯಪಲ್‌ ಕಂಪೆನಿಗೆ ಆಹ್ವಾನಿಸಿದರು. ಇದಾದದ್ದು 1998ರಲ್ಲಿ. ಆಗ ಜಾಬ್ಸ್‌ ಅವರಿಗೆ ಯೋಚಿಸಿ ತಿಳಿಸುತ್ತೇನೆ ಎಂದಷ್ಟೇ ಹೇಳಿದ ಟಿಮ್‌ 2011ರವರೆಗೂ ‘ಕಾಂಪೆಕ್‌’ನಲ್ಲೇ ಮುಂದುವರಿದರು. 2011ರಲ್ಲಿ ಕಾಂಪೆಕ್‌ಗೆ ರಾಜೀನಾಮೆ ನೀಡಿ ಆ್ಯಪಲ್‌ ಕಂಪೆನಿ ಸೇರಿದ್ದು, ಸ್ಟೀವ್‌ ಜಾಬ್ಸ್‌ ಅವರ ಉತ್ತರಾಧಿಕಾರಿ ಕಂಪೆನಿಯನ್ನು ದಶಲಕ್ಷ ಕೋಟಿ ಡಾಲರ್‌ಗಳ ಉದ್ಯಮವಾಗಿ ಬೆಳೆಸಿದ್ದೆಲ್ಲ ನಂತರದ ಬೆಳವಣಿಗೆ.

ಹೈಸ್ಕೂಲ್‌ ಸ್ಟೂಡೆಂಟ್‌ಗೂ ಸಂದರ್ಶನ ನೀಡಿದ್ದರು!

ಟಿಮ್‌ ಸರಳತೆಗೆ ನಿದರ್ಶನವಾದ ಒಂದು ಘಟನೆ ಕಳೆದ ವರ್ಷ ನಡೆಯಿತು. ರೆಬೆಕಾ ಎಂಬ ಹೈಸ್ಕೂಲ್‌ ಹುಡುಗಿಯೊಬ್ಬಳು ಟಿಮ್‌ ಅವರನ್ನು ಇಮೇಲ್‌ ಮೂಲಕ ಸಂಪರ್ಕಿಸಿ, ಅವರನ್ನು ಭೇಟಿಯಾಗುವ ಇಚ್ಛೆ ತಿಳಿಸಿದಳು. ಸ್ವಲ್ಪ ಹೊತ್ತಿಗೇ ಅದಕ್ಕೆ ಪ್ರತಿಕ್ರಿಯಿಸಿದ ಟಿಮ್‌ ಆಕೆಯನ್ನು ತನ್ನ ಆಫೀಸ್‌ಗೆ ಕರೆದರು. ಉದ್ಯಮದ ದಿಗ್ಗಜನ ಮುಂದೆ ಹೈ ಸ್ಕೂಲ್‌ ಪೋರಿ ಕುಳಿತು, ‘ಮಿಸ್ಟರ್‌ ಟಿಮ್‌ ಕುಕ್‌..’ ಎಂದು ಮಾತಿಗಾರಂಭಿಸಿದ್ದೇ, ‘ನನ್ನನ್ನು ಟಿಮ್‌ ಎಂದು ಕರಿ. ಕುಕ್‌ ಅನ್ನೋದು ನನ್ನ ಅಪ್ಪನ ಹೆಸರು’ ಎಂದು ಮುಗುಳ್ನಕ್ಕರು. ಆಕೆಯ ಜೊತೆಗೆ ತನ್ನ ಸಕ್ಸಸ್‌ನ ಹಿಂದಿನ ಸೂತ್ರವನ್ನು ಹಂಚಿಕೊಂಡರು.