ಇಂದಿನ ಮಕ್ಕಳದು ಆನ್‌ಲೈನ್‍‌ನದೇ ಪ್ರಪಂಚ. ಮೊಬೈಲ್ ಒಂದು ಕೈಲಿದ್ದರೆ ಸಾಕು, ಅವರು ಏನು ಮಾಡುತ್ತಾರೆ, ಏನು ನೋಡುತ್ತಾರೆ - ಪೋಷಕರಿಗೆ ಏನೊಂದೂ ಗಮನಕ್ಕೆ ಬಾರದು. ಇನ್ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾರೆ, ಗೆಳೆಯರೊಂದಿಗೆ ಮಾತನಾಡುವ ಬದಲು ಮೆಸೇಜ್‌ನಲ್ಲೇ ಸಂವಹನ ನಡೆಸುತ್ತಾರೆ. ಪೋಸ್ಟಿಂಗ್, ಶೇರಿಂಗ್ ಅಥವಾ ಟೆಕ್ಸ್ಟಿಂಗ್ ಎಂದು ಕೆಲವೊಮ್ಮೆ ಗೊತ್ತಿಲ್ಲದೆಯೇ ಮಿತಿ ಮೀರಿ ಬಿಡುತ್ತಾರೆ. ನಂತರ ಏನಾಗಬಹುದೆಂಬ ಕಲ್ಪನೆ ಇರುವುದಿಲ್ಲ. ಹೀಗೆ ಮಿತಿ ಮೀರಿದರೆ ಏನಾಗಬಹುದು ಎಂಬುದಕ್ಕೆ ಸೆಕ್ಸ್ಟಿಂಗ್ ಉತ್ತಮ ಉದಾಹರಣೆ.
ಸೆಕ್ಸ್ಟಿಂಗ್ ಚಾಳಿ: ನಗ್ನ ಫೋಟೋಗಳು ಲೀಕ್ ಆಗೋ ಚಾನ್ಸ್ ಇದೆ ಹುಷಾರು!

ಸೆಕ್ಸ್ಟಿಂಗ್ ಎಂಬುದು ಚೈಲ್ಡ್ ಪೋರ್ನೋಗ್ರಫಿಗೆಡೆ ಮಾಡಬಹುದು
18 ವರ್ಷಕ್ಕಿಂತ ಚಿಕ್ಕ ಮಕ್ಕಳು ಸೆಕ್ಸ್ಟಿಂಗ್‌ನಲ್ಲಿ ತೊಡಗಿ ತಮ್ಮ ನ್ಯೂಡ್ ಫೋಟೋಸ್ ಶೇರ್ ಮಾಡಿಕೊಳ್ಳುವುದು ಚೈಲ್ಡ್ ಪೋರ್ನೋಗ್ರಫಿ ಎನಿಸಿಕೊಳ್ಳುತ್ತದೆ. ಕಳುಹಿಸಿದವರು ಹಾಗೂ ಪಡೆದವರು ಇಬ್ಬರೂ ಸೆಕ್ಸ್ ಅಪರಾಧಿಗಳು ಎನಿಸಿಕೊಳ್ಳುತ್ತಾರೆ. ತಮ್ಮದೇ ಫೋಟೋ ಶೇರ್ ಮಾಡಿದರೂ ಅದನ್ನು ಅಪರಾಧವೆಂದು ಪರಿಗಣಿಸಿ ಕೇಸ್ ಹಾಕಬಹುದು. 

ವ್ಯಕ್ತಿತ್ವಕ್ಕಂಟುವ ಕಳಂಕ
ಒಮ್ಮೆ ಸೆಕ್ಸ್ಟ್ ಆನ್‌ಲೈನ್ ಆಯಿತೆಂದರೆ ಅದರ ಮೇಲೆ ಕಳುಹಿಸಿದವರಿಗೆ ಯಾವ ಹಿಡಿತವೂ ಉಳಿದಿರುವುದಿಲ್ಲ. ಅದನ್ನು ಜನರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಹುಡುಗಿಯು ಯಾರಿಗೆ ಕಳುಹಿಸಿರುತ್ತಾಳೋ ಅವರೇ ಗೆಳೆಯರಿಗೆ ತೋರಿಸಬಹುದು. ನಂತರ ಸಮಾಜ ಆಕೆಯನ್ನು ಸ್ಲಟ್ ಎಂದು ಲೇಬಲ್ ಮಾಡುತ್ತದೆ. ಅಷ್ಟೇ ಅಲ್ಲ, ಈಕೆ ಲೈಂಗಿಕ ಬಳಕೆಗೆ ಸುಲಭವಾಗಿ ಸಿಗುವವಳು ಎಂದೇ ಪರಿಗಣಿಸುತ್ತಾರೆ. ಇನ್ನೂ ಕೆಲ ಕಿಡಿಗೇಡಿಗಳು ಆ ಫೋಟೋವನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಿ ಮಜಾ ನೋಡಬಹುದು. ಒಮ್ಮೆ ಬಹಿರಂಗವಾದರೆ ಸಾವಿರಾರು ಜನರು ಅದನ್ನು ಶೇರ್ ಮಾಡಿ ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಹಾಕುತ್ತಾರೆ. ಇನ್ನೂ ಬಲಿಯದ ಹದಿವಯಸ್ಸಿನ ಮನಸ್ಸು  ಘಾಸಿಗೊಂಡು ಆತ್ಮಹತ್ಯೆಯಂಥ ಕೃತ್ಯಕ್ಕೆ ಕೈ ಹಾಕುವ ಅಪಾಯಗಳೂ ಇಲ್ಲದಿಲ್ಲ. 

ಬ್ಲ್ಯಾಕ್‌ಮೇಲ್‌ಗೆ  ಗುರಿಯಾಗಬಹುದು
ಯಾವುದೋ ಇಂಪಲ್ಸ್‌ನಲ್ಲಿ ಹುಡುಗಿಯೊಬ್ಬಳು ಕಳುಹಿಸುವ ನ್ಯೂಡ್ ಫೋಟೋ ಬಳಸಿಕೊಂಡು ಯುವಕ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ತನ್ನ ತೃಷೆಗೆ ಬಳಸಿಕೊಳ್ಳಬಹುದು. ಇಲ್ಲವೇ, ಫೋಟೋ ಮಲ್ಟಿಪಲ್ ಶೇರ್ ಆಗಿ, ಸಿಕ್ಕಿದ ಯಾರೇ ಆಗಲಿ, ಫೋಟೋವನ್ನು ತಂದೆ ತಾಯಿಗೆ ತೋರಿಸುತ್ತೇವೆಂದೋ ಅಥವಾ ಸೋಷ್ಯಲ್ ಮೀಡಿಯಾಗಳಲ್ಲಿ ಹಾಕುತ್ತೇವೆಂದೋ ಬೆದರಿಸಿ, ಆಕೆಯನ್ನು ಬೇಕೆಂದಂತೆ  ಬಳಸಿಕೊಳ್ಳಬಹುದು. ಇಂಥ ಸಂದರ್ಭದಲ್ಲಿ ಹದಿ ವಯಸ್ಸಿನ ಹುಡುಗಿಯರು ಯಾರ ಸಹಾಯ ಕೇಳಲೂ ಹೆದರುತ್ತಾರೆ. 

ಜೀವನದುದ್ದಕ್ಕೂ ಆ ಒಂದು ತಪ್ಪು ಹಿಂದೆಯೇ ಬಂದು ಕಾಡಬಹುದು
ಹದಿವಯಸ್ಸಿನಲ್ಲಿ ಏನೋ ತಿಳಿಯದೆ ಕಳುಹಿಸಿದ ನ್ಯೂಡ್ ಫೋಟೋ ಅಥವಾ ಅಶ್ಲೀಲ ಸಂಭಾಷಣೆ, ಎಷ್ಟೋ ವರ್ಷಗಳ ಬಳಿಕ ಯುವತಿ ಮದುವೆಯಾದ ಮೇಲೂ ಅಚಾನಕ್  ಹೊರಬಂದು ಬಿಡಬಹುದು. ಪತಿಯ ಮನೆಯವರಿಗೆ ಸಿಕ್ಕರೆ ವೈವಾಹಿಕ ಬದುಕೇ ಬರಡಾಗಬಹುದು. ಆಕೆ ಪ್ರೀತಿಸಿದವನಿಗೆ ಕಳುಹಿಸಿದ್ದು, ಬ್ರೇಕಪ್ ಬಳಿಕ ಬೇಕಾಬಿಟ್ಟಿ ಬಳಕೆಯಾಗಬಹುದು. 
ಪೋಷಕರೇನು ಮಾಡಬೇಕು?
ಈ ಎಲ್ಲ ವಿಷಯಗಳ ಕುರಿತು ಹದಿ ವಯಸ್ಸಿನ ಮಕ್ಕಳ ಪೋಷಕರು ಮಕ್ಕಳಿಗೆ ತಿಳಿವಳಿಕೆ ನೀಡುವುದು ಅಗತ್ಯ. ಯಾವಾಗ  ಮಗುವಿಗೆ ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್ ನೀಡುತ್ತೀರೋ, ಆಗಲೇ ಸೆಕ್ಸ್ಟಿಂಗ್ ನ ಅಪಾಯಗಳ ಕುರಿತೂ ತಿಳಿಸಬೇಕು. ತಿಳಿವಳಿಕೆ  ಬಂದ ಮೇಲೆ ಯಾವ  ಮಗುವೂ ತಪ್ಪು ಮಾಡುವುದಿಲ್ಲ. ಒಂದು ವೇಳೆ ನಿಮ್ಮ ಮಗಳು ತಾನು ಸೆಕ್ಸ್ಟಿಂಗ್‌ನಲ್ಲಿ ತೊಡಗಿರುವುದಾಗಿ ಹೇಳಿದರೆ, ಶಾಂತವಾಗಿ ಆಕೆ ಹೇಳುವುದನ್ನು ಕೇಳಿಸಿಕೊಂಡು ಪ್ರತಿಕ್ರಿಯಿಸಿ. ಏಕೆಂದರೆ, ಆಕೆ ಗೆಳೆಯರ ಒತ್ತಡಕ್ಕೋ, ಬೆದರಿಕೆಗೋ ಹಾಗೆ ಮಾಡಿರಬಹುದು. ಇಲ್ಲವೇ ಪ್ರೀತಿಯಲ್ಲಿ ಕಳುಹಿಸಿದ್ದು ಬ್ಲ್ಯಾಕ್‌ಮೇಲ್‌ಗೆ ಬಳಕೆಯಾಗುತ್ತಿದೆ ಎಂಬುದನ್ನು ತಿಳಿಸಿದರೆ, ಆಕೆಯನ್ನು ಮೊದಲು ಆ ಸಂಕಟದಿಂದ ಪಾರು ಮಾಡಲು ಕ್ರಮ ತೆಗೆದುಕೊಳ್ಳಿ.