ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?: ಇಂಟೆರೆಸ್ಟಿಂಗ್ ಮಾಹಿತಿ
ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?| ಪ್ರಕೃತಿ ಸೌಂದರ್ಯ, ಅಗ್ಗದ ಹೋಟೆಲ್ ಜೊತೆಗೆ ಕ್ಯಾಸಿನೋಗಳೂ ಪ್ರಮುಖ ಆಕರ್ಷಣೆ| ಕರ್ನಾಟಕದಿಂದ ಪ್ರತಿ ತಿಂಗಳು 5000 ಮಂದಿ ಶ್ರೀಲಂಕಾ ಪ್ರವಾಸಕ್ಕೆ
ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ
ಬೆಂಗಳೂರು[ಏ.23]: ಅಲ್ಲಿ ರಮಣೀಯ ಕಡಲ ಕಿನಾರೆಗಳಿವೆ. ದಟ್ಟಕಾಡು, ಸುಂದರ ಜಲಪಾತ, ಅಗ್ಗದ ದರದಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುವ ಅವಕಾಶವಿದೆ. ಇಷ್ಟಿದ್ದರೂ ಆ ದ್ವೀಪ ರಾಷ್ಟ್ರ ಕನ್ನಡಿಗರನ್ನು ಆಕರ್ಷಿಸುವುದು ಜೂಜಿಗೆ!
ಹೌದು, ಭಾನುವಾರದ ಭಯಾನಕ ಬಾಂಬ್ ಸ್ಫೋಟಕ್ಕೆ ನಲುಗಿದ ಶ್ರೀಲಂಕಾ ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರು ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ನೆಚ್ಚಿನ ವಿದೇಶಿ ಪ್ರವಾಸ ತಾಣವಾಗಿ ಬದಲಾಗಿದೆ. ಥಾಯ್ಲೆಂಡ್, ಮಲೇಷ್ಯಾ, ಸಿಂಗಾಪುರದ ನಂತರ ಬೆಂಗಳೂರಿಗರು ಅತಿ ಹೆಚ್ಚು ಭೇಟಿ ನೀಡುವ ವಿದೇಶಿ ಪ್ರವಾಸಿ ತಾಣ ಶ್ರೀಲಂಕಾ.
ಭಾರತದಿಂದ ವಿದೇಶ ಪ್ರವಾಸ ಹೋಗುವವರಲ್ಲಿ ಶೇ.12ರಿಂದ 14ರಷ್ಟುಪ್ರವಾಸಿಗರು ಶ್ರೀಲಂಕಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಬೆಂಗಳೂರು ಮತ್ತು ಕರ್ನಾಟಕದ ಭಾಗದಿಂದ ಹೋಗುವವರಲ್ಲಿ ಶೇ.8ರಿಂದ 10ರಷ್ಟುಮಂದಿ ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಸಂಸ್ಥೆಗಳ ಮಾಹಿತಿ ಪ್ರಕಾರ ಬೆಂಗಳೂರು ಹಾಗೂ ಕರ್ನಾಟಕದ ಭಾಗದಿಂದ ಪ್ರತಿ ತಿಂಗಳು ಸುಮಾರು ಐದು ಸಾವಿರ ಮಂದಿ ಇಲ್ಲಿಗೆ ಪ್ರವಾಸ ತೆರಳುತ್ತಾರೆ.
ಕುತೂಹಲಕಾರಿ ಸಂಗತಿಯೆಂದರೆ, ಬೆಂಗಳೂರಿಗರು ಹೀಗೆ ಶ್ರೀಲಂಕಾಕ್ಕೆ ಭೇಟಿ ನೀಡಲು ಪ್ರಮುಖ ಕಾರಣ ಕ್ಯಾಸಿನೋಗಳು ಅರ್ಥಾತ್ ಜೂಜು ಅಡ್ಡೆಗಳು!
ಗೋವಾಕ್ಕೆ ಹೋಲಿಸಿದರೆ ಲಂಕಾ ಅಗ್ಗ:
ನಡುಗಡ್ಡೆ ರಾಷ್ಟ್ರದ ರಮಣೀಯ ಕಡಲ ಕಿನಾರೆಗಳು, ದಟ್ಟವಾದ ಕಾಡು, ಜಲಪಾತ, ವನ್ಯಧಾಮಗಳು ಒಂದೆಡೆಯಾದರೆ, ಮತ್ತೊಂದೆಡೆ ಧಾರ್ಮಿಕ ಕ್ಷೇತ್ರಗಳು ಮತ್ತು ಕ್ಯಾಸಿನೋಗಳು ಕೂಡ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪೋಕರ್, ಕ್ರಾಫ್ಸ್, ಬ್ಲಾಕ್ ಜ್ಯಾಕ್ ಕಿನೋ, ಸ್ಲಾಟ್ ಹೌಸ್ ಎಡ್ಜ್‌ನಂತಹ ಜೂಜು ಆಡಲು ಬೆಂಗಳೂರಿನಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಶ್ರೀಲಂಕಾಗೆ ತೆರಳುತ್ತಾರೆ. ಬೆಂಗಳೂರಿನ ಕ್ಯಾಸಿನೋ ಪ್ರಿಯರಿಗೆ ತಮ್ಮ ನೆಚ್ಚಿನ ಜೂಜು ಆಡಲು ಇರುವ ಸಮೀಪದ ತಾಣ ಗೋವಾ. ಗೋವಾ ಹೊರತುಪಡಿಸಿದರೆ ಶ್ರೀಲಂಕಾವೇ ಅತ್ಯಂತ ಸಮೀಪ. ಇನ್ನು ಗೋವಾಗೆ ಹೋಲಿಸಿದರೆ ಶ್ರೀಲಂಕಾದಲ್ಲಿ ತಂಗುವ ವ್ಯವಸ್ಥೆ ಅಗ್ಗ.
ಅಷ್ಟೇ ಅಲ್ಲ, ಗೋವಾಗೆ ಹೋಲಿಸಿದರೆ ಶ್ರೀಲಂಕಾದ ಜೂಜು ಅಡ್ಡೆಗಳಲ್ಲಿ ಗೆಲ್ಲುವ ಅವಕಾಶ ಹೆಚ್ಚು ಎನ್ನಲಾಗುತ್ತದೆ. ಹೀಗಾಗಿ ನಗರದ ಜೂಜುಪ್ರಿಯರು ಶ್ರೀಲಂಕಾವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಕೇವಲ ಬೆಂಗಳೂರಿನ ಕಥೆ ಮಾತ್ರವಲ್ಲ. ಭಾರತದಿಂದ ಶ್ರೀಲಂಕಾಗೆ ಅತಿ ಹೆಚ್ಚಿನ ಮಂದಿ ಕ್ಯಾಸಿನೋಗಾಗಿ ಭೇಟಿ ನೀಡುತ್ತಾರೆ. ಒಂದು ಮಾಹಿತಿ ಪ್ರಕಾರ ಶ್ರೀಲಂಕಾಗೆ ಭೇಟಿ ನೀಡುವ ಭಾರತೀಯರ ಪೈಕಿ ಶೇ.18 ಮಂದಿಯ ಉದ್ದೇಶ ಕ್ಯಾಸಿನೋದಲ್ಲಿ ಜೂಜು ಆಡುವುದು!
ಅಗ್ಗದ ಎರಡನೇ ಆಯ್ಕೆ ಲಂಕಾ:
ಸಿಂಗಾಪುರ, ಥಾಯ್ಲೆಂಡ್, ಮಲೇಷ್ಯಾ ಸೇರಿದಂತೆ ಭಾರತೀಯರು ಹೆಚ್ಚು ಪ್ರವಾಸ ಕೈಗೊಳ್ಳುವ ರಾಷ್ಟ್ರಗಳಿಗಿಂತ ಶ್ರೀಲಂಕಾ ಕಡಿಮೆ ವೆಚ್ಚದ ವಿದೇಶಿ ಪ್ರವಾಸಿ ತಾಣವಾಗಿದೆ.
ಭಾರತೀಯರ ಅಗ್ಗದ ಪ್ರವಾಸಿ ದೇಶವೆಂದರೆ ಥಾಯ್ಲೆಂಡ್. ಅದನ್ನು ಹೊರತುಪಡಿಸಿದರೆ ಎರಡನೇ ಆಯ್ಕೆಯೇ ಶ್ರೀಲಂಕವಾಗಿದೆ. ಭಾರತದ ರುಪಾಯಿ ಮೌಲ್ಯಕ್ಕಿಂತ ಶ್ರೀ ಲಂಕಾದ ರುಪಾಯಿ ಮೌಲ್ಯ ಕಡಿಮೆ. ಭಾರತದ 1 ರು.ಗೆ ಶ್ರೀಲಂಕಾದ 2.51 ರು. ಸಿಗುತ್ತದೆ. ಹಾಗಾಗಿ, ಸ್ಟಾರ್ ಹೋಟೆಲ್ ವಾಸ್ತವ್ಯ, ವಾಹನ ಪ್ರಯಾಣ ವೆಚ್ಚ ಸೇರಿದಂತೆ ಎಲ್ಲವೂ ಕಡಿವೆÜುಯಾಗುತ್ತದೆ. ಆದ್ದರಿಂದ ಮಧ್ಯಮ ವರ್ಗದ ಜನ ಹೆಚ್ಚಾಗಿ ಶ್ರೀಲಂಕಾಕ್ಕೆ ಭೇಟಿ ನೀಡಲು ಬಯಸುತ್ತಾರೆ.
ಶ್ರೀಲಂಕಾ ಎಲ್ಲ ವರ್ಗದ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ. ಮಕ್ಕಳಿಗೆ ವನ್ಯಧಾಮಗಳು, ಸಮುದ್ರ ತೀರಗಳು, ಕ್ರೀಡಾ ಸೌಲಭ್ಯ, ಹಿರಿಯರಿಗೆ ಧಾರ್ಮಿಕ ಕೇಂದ್ರಗಳು, ಯುವಕರಿಗೆ ಹಾಗೂ ಮೋಜು ಮಾಡುವವರಿಗೆ ಕ್ಯಾಸಿನೊಗಳಂತಹ ತಾಣಗಳು ಹೀಗೆ ಎಲ್ಲವೂ ಅಲ್ಲಿವೆ. ಅಲ್ಲದೇ ಪ್ರವಾಸದ ವೆಚ್ಚ ಕೂಡ ಕಡಿಮೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇತ್ತಿಚಿನ ದಿನಗಳಲ್ಲಿ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದಾರೆ.
- ಪ್ಯಾಟ್ರಿಕ್ ಜಾರ್ಜ್ , ಖಾಸಗಿ ಪ್ರವಾಸಿ ಆಯೋಜಕ
ದಕ್ಷಿಣ ಭಾರತಕ್ಕೆ ಲಾಭ?
ಚೀನಾ, ಭಾರತ, ಆಸ್ಪ್ರೇಲಿಯಾ, ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಂದ ದ್ವೀಪರಾಷ್ಟ್ರಕ್ಕೆ ಪ್ರವಾಸಿಗರು ಹೋಗುತ್ತಾರೆ. ಆದರೀಗ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟದಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿರುವುದರಿಂದ ಪ್ರವಾಸೋದ್ಯಮದ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ. ಅದರಿಂದಾಗಿ ದಕ್ಷಿಣ ಭಾರತದ ಪ್ರವಾಸೋದ್ಯಮ ಮತ್ತು ಕಡಲ ಕಿನಾರೆಗಳಿಗೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಶೇ.5ರಷ್ಟುಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟದ್ದಾರೆ.