Asianet Suvarna News Asianet Suvarna News

ನಿಮ್ಮ ಮನೆ ಚೆಂದವೂ ಇರಬೇಕು, ಸುಸ್ಥಿರವೂ ಆಗಿರಬೇಕು ಎಂದಾದರೆ ಹೀಗೆ ಮಾಡಿ

ನಿಮ್ಮ ಹೊಸ ಮನೆ (New Home) ಸಾಧ್ಯವಾದಷ್ಟು ಸುಸ್ಥಿರವಾಗಿರಬೇಕು, ನಿಮ್ಮ ಕಾರ್ಬನ್ ಫೂಟ್ ಪ್ರಿಂಟ್ ಕಡಿಮೆಯಾಗಿರಬೇಕು ಎನ್ನುವವರು ನೀವಾಗಿದ್ದರೆ ಮನೆಯನ್ನು ಸುಸ್ಥಿರವಾದ ಥೀಮ್ (Theme) ಅಡಿಯಲ್ಲಿಯೇ ಅಲಂಕರಿಸಿ. 
 

Sustainable Decoration Tips For Your New Home
Author
Bangalore, First Published Mar 24, 2022, 9:06 PM IST

ನೀವು ಹೊಸ ಮನೆ (Home) ಕಟ್ಟಿಸುತ್ತಿದ್ದರೆ ನಿಮ್ಮೆದುರು ಒಂದು ಬೃಹತ್ ಸವಾಲು ಎದುರಾಗಿರುತ್ತದೆ. ಅದು ಮನೆಯನ್ನು ಅಲಂಕರಿಸುವುದು (Decoration). ಅದೂ ಸಹ ನಿಮ್ಮ ಇಷ್ಟಾನಿಷ್ಟಗಳಿಗೆ ತಕ್ಕಂತೆ ಮನೆಯನ್ನು ಅಂದಚೆಂದಗೊಳಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ನೀವು ಈಗಾಗಲೇ ಸಾಕಷ್ಟು ತಯಾರಿಯನ್ನೂ ನಡೆಸಿರಬಹುದು. ಸಿದ್ಧತೆ ಮಾಡುತ್ತ ಮಾಡುತ್ತ ಹಲವಾರು ಬಾರಿ ಗೊಂದಲವೂ ಆಗಿರಬಹುದು. 

ಪೇಂಟ್ (Paint), ಲೈಟಿಂಗ್ (Lighting) ಇತ್ಯಾದಿ ಕಾರ್ಯಗಳು ಸಾಕಷ್ಟು ತಲೆಕೆಡಿಸುತ್ತವೆ. ಸಾಮಾನ್ಯ ಮನೆಗಳಂತೆ ಪೇಂಟ್ ಮಾಡಿದರೆ ಸಾಕು ಎನ್ನುವವರು ನೀವಾಗಿದ್ದರೆ ಪರವಾಗಿಲ್ಲ. ಆದರೆ, ವಿಭಿನ್ನವಾಗಿರಬೇಕು, ಆಧುನಿಕ (Modern) ಶೈಲಿಯಲ್ಲಿರಬೇಕು, ಅಭಿರುಚಿಯನ್ನು ಬಿಂಬಿಸಬೇಕು ಎನ್ನುವ ಕ್ರಿಯಾಶೀಲ ಮನೋಸ್ಥಿತಿಯವರು ನೀವಾಗಿದ್ದರೆ ಮಾತ್ರ ಈ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ (Care) ವಹಿಸಬೇಕಾಗುತ್ತದೆ. 

ಹಾಗೆಯೇ, ಮನೆಯ ಸುಸ್ಥಿರ (Sustainable) ಅಲಂಕಾರಕ್ಕೆ ಕಾಳಜಿ ನೀಡಬೇಕಾದ ಸಮಯವೂ ಇದಾಗಿದೆ. ಯಾವುದೆಂದರೆ ಅಂತಹ ವಸ್ತುಗಳನ್ನು ಬಳಕೆ ಮಾಡುವುದರಿಂದ ಪರಿಸರದ ಮೇಲೆ ಇನ್ನಷ್ಟು ಒತ್ತಡ ನಿರ್ಮಾಣವಾಗಬಹುದು. ನಿಮ್ಮ ಕಾರ್ಬನ್ ಫೂಟ್ ಪ್ರಿಂಟ್ (Carbon Foot Print) ಕಡಿಮೆ ಇರಬೇಕು, ಹಾಗೂ ನಿಮ್ಮ ಮನೆ ಪರಿಸರಕ್ಕೆ ಸಾಧ್ಯವಾದಷ್ಟು ಪೂರಕವೂ ಆಗಿರಬೇಕು ಎಂದಾದಲ್ಲಿ ಕೆಲವು ಟಿಪ್ಸ್ ನಿಮಗಾಗಿ. 

•  ವಿದ್ಯುತ್(Power) ಉಳಿಸುವ ಲೈಟಿಂಗ್ ವ್ಯವಸ್ಥೆ (Lighting)
ಮನೆಯಲ್ಲಿ ಸಾಧ್ಯವಾದಷ್ಟು ಕಡಿಮೆ ವಿದ್ಯುತ್ ಬಳಕೆಯಾಗಬೇಕು ಎನ್ನುವ ಆಸೆ ಸಹಜವಾಗಿರುತ್ತದೆ. ಇದು ವೆಚ್ಚದ ದೃಷ್ಟಿಯಿಂದಲೂ ಹಾಗೂ ಪರಿಸರದ ದೃಷ್ಟಿಯಿಂದಲೂ ಅಗತ್ಯ. ಹೀಗಾಗಿ, ವಿದ್ಯುತ್ ಉಳಿಸುವ ಬಲ್ಬ್, ಲೈಟ್ ಡಿಮ್ಮರ್ ಸ್ವಿಚ್ (Dimmer Switch) ಹಾಗೂ ಟೈಮರ್ (Timer)ಗಳನ್ನು ಬಳಕೆ ಮಾಡಬಹುದು. ವಿದ್ಯುತ್ ಬಳಕೆಯಲ್ಲಿ ಇಲ್ಲದಿರುವಾಗ ಸ್ವಯಂಚಾಲಿತವಾಗಿ ಬಲ್ಬ್ ಸ್ಥಗಿತವಾಗುವ ವ್ಯವಸ್ಥೆ ಒಳಗೊಂಡಿರುವ ಟೈಮರ್ ಹೆಚ್ಚು ಪ್ರಯೋಜನಕಾರಿ. ಡಿಮ್ಮರ್ ಕೂಡ ಸೂಕ್ತ ಲೈಟಿಂಗ್ ನಿಯಂತ್ರಣಕ್ಕೆ ಸೂಕ್ತ. 

•  ವಿಂಟೇಜ್ ಪೀಠೋಪಕರಣಗಳು (Vintage Furniture)
ನಿಮ್ಮಲ್ಲಿ ಹಳೆಯ ಪೀಠೋಪಕರಣಗಳಿದ್ದರೆ ಅದನ್ನು ಬಿಸಾಕಬೇಡಿ. ಅಥವಾ ಎಸೆಯಬೇಡಿ. ಅವುಗಳಿಗೆ ಹೊಸ ಲುಕ್ ನೀಡಲು ಯತ್ನಿಸಿ. ವಿಂಟೇಜ್ ಪೀಠೋಪಕರಣಗಳ ಬಳಕೆ ಇತ್ತೀಚೆಗೆ ಫ್ಯಾಷನ್ ಕೂಡ ಆಗಿದೆ. ಅವುಗಳಿಂದ ಮನೆಗೆ ಚೆಂದನೆಯ ಆಧುನಿಕ ಹಾಗೂ ಸಾಂಪ್ರದಾಯಿಕ ಲುಕ್ ಬರುತ್ತದೆ. ಹಳೆಯ ಮರದ ತುಂಡುಗಳಿಗೆ ಹೊಸ ಸ್ಪರ್ಶ ನೀಡಲು ಸಾಧ್ಯ. ಅದಕ್ಕಾಗಿಯೇ ಇರುವ ವೃತ್ತಿಪರರ ನೆರವು ಪಡೆದುಕೊಳ್ಳಿ. ಕೆಲವೇ ಕೆಲವು ಕೋಟ್ ಪೇಂಟ್ ಹಾಗೂ ಚಿಕ್ಕಪುಟ್ಟ ರಿಪೇರಿ ಮಾಡಿಕೊಂಡು ಹಳೆಯ ಫರ್ನಿಚರ್ ಬಳಕೆಗೆ ಆದ್ಯತೆ ನೀಡಿ. ಹಳೆಯ ಮರದ ತುಂಡುಗಳಿಗಾಗಿ ಕೆಲವು ಅಂಗಡಿಗಳಿಗೂ ಭೇಟಿ ಕೊಡಿ. ಪ್ಲಾಸ್ಟಿಕ್ ಅಥವಾ ಫೈಬರ್ ನಿಂದ ಮಾಡುವ ಪೀಠೋಪಕರಣಗಳಿಗೆ ಆದ್ಯತೆ ನೀಡಬೇಡಿ.

•   ಸುಸ್ಥಿರ ವಸ್ತುಗಳು
ಮನೆಗೆ ಕರ್ಟನ್, ರಗ್, ಫ್ಲಾವರ್ ವಾಸ್, ವಾಲ್ ಹ್ಯಾಂಗಿಂಗ್ ಇತ್ಯಾದಿ ವಸ್ತುಗಳು ಬೇಕಾಗುತ್ತವೆ. ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟ ವಸ್ತುಗಳನ್ನೇ ಬಳಕೆ ಮಾಡಿ. ಇತ್ತೀಚೆಗೆ ಸೆಣಬಿನಿಂದ ಮಾಡಿದ ಕರ್ಟನ್ ಗಳೂ ದೊರೆಯುತ್ತವೆ. ಹಾಗೆಯೇ ಜೈವಿಕ ಕಾಟನ್, ಬಿದಿರು, ಕಬ್ಬಿನ ನಾರು, ತೆಂಗಿನ ನಾರುಗಳಿಂದ ಮಾಡುವ ವಸ್ತುಗಳು ಸಾಕಷ್ಟು ದೊರೆಯುತ್ತವೆ. ಅವುಗಳ ಕುರಿತು ಚಿಂತಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಕಾರ್ಬನ್ ಫೂಟ್ ಪ್ರಿಂಟ್ ಕನಿಷ್ಠವಾಗಿರುವಂತೆ ನೋಡಿಕೊಳ್ಳಬಹುದು.

•   ಸಮಯದ ಮಿತಿಯಿಲ್ಲದ ವಿನ್ಯಾಸಗಳಿಗೆ ಆದ್ಯತೆ ನೀಡಿ. 
ಮನೆಯ ಬಣ್ಣ, ಥೀಮ್ ಹಾಗೂ ಕೆಲವು ವಿನ್ಯಾಸಗಳು ಹೇಗಿರಬೇಕೆಂದರೆ ಅವುಗಳಿಗೆ ಸಮಯದ ಮಿತಿ ಇರಬಾರದು. ಅಂದರೆ, ಅವು ಈ ಸಮಯದ ಫ್ಯಾಷನ್ ಮಾತ್ರ ಆಗಿರಬಾರದು. ಸದಾಕಾಲ ಇರುವಂಥವುಗಳಾಗಬೇಕು. ಉದಾಹರಣೆಗೆ, ನ್ಯೂಟ್ರಲ್ ಬಣ್ಣಗಳ ಬಳಕೆ. ಇಂತಹ ಬಣ್ಣಗಳು ಯಾವತ್ತೂ ಉತ್ತಮ. ಏಕೆಂದರೆ, ಇಂತಹ ಬಣ್ಣಗಳು ಇತರ ಬಣ್ಣಗಳು ಹಾಗೂ ಅಲಂಕಾರಿಕ ವಸ್ತು, ವಿನ್ಯಾಸಗಳ ನಡುವೆ ವಿಚಿತ್ರವಾಗಿ ಕಂಡುಬರುವುದಿಲ್ಲ. 

•    ಹಸಿರು ಸಸ್ಯಗಳು (Green Plants)
ಮನೆಯೊಳಗೆ ಬೆಳೆಸಬಹುದಾದ, ಕಿರು ಬೆಳಕು, ಬಾಲ್ಕನಿಯ ಗಾಢ ಬೆಳಕಿನಲ್ಲಿ ಬೆಳೆಸಬಹುದಾದ ಸಾಕಷ್ಟು ಸಸ್ಯಗಳು ಸಿಗುತ್ತವೆ. ಅವುಗಳಿಂದ ಮನೆಯನ್ನು ಅಲಂಕರಿಸುವುದು ಉತ್ತಮ.

Follow Us:
Download App:
  • android
  • ios