Asianet Suvarna News Asianet Suvarna News

Summer Poems: ಸುಡು ಬೇಸಿಗೆಯನ್ನು ತಣ್ಣಗಿಡಲು ಕವಿತೆಗಳ ಗೊಂಚಲು

ಬೇಸಿಗೆಯ ಕುರಿತು ಕವಿಗಳು ಸಾವಿರಾರು ಕವಿತೆ ಬರೆದಿದ್ದಾರೆ. ಇಂಗ್ಲಿಂಷಿನಲ್ಲಂತೂ ಸಮ್ಮರ್ ಎಂದರೆ ಕವಿತೆ ಹುಟ್ಟುವ ಸಮಯ. ಸುಡುವ ಬೇಸಿಗೆಯನ್ನು ತಣ್ಣಗಿಡಲು ಪದ್ಯ ಬರೆದುಕೊಡಿ ಎಂದಾಗ ಕನ್ನಡದ ಕವಿಗಳು ಬರದುಕೊಟ್ಟಿರುವ ಕವಿತೆಗಳು ಗುಚ್ಛ ಇಲ್ಲಿದೆ.

Summer poems by famous poets of Kannada literature Vin
Author
First Published Apr 16, 2023, 3:23 PM IST

ಬೇಸಿಗೆ ಪದ್ಯಗಳು

- ಲಲಿತಾ ಸಿದ್ಧಬಸವಯ್ಯ

1. ಆಗೊಂದು ಈಗೊಂದು ಕಿತ

ಅತ್ತಿತ್ತ ಕದಲುವುದು ಬಿಟ್ಟರೆ

ಬಾಕಿ ಹಗಲು ಹನ್ನೆರಡು ತಿಂಗಳೂ

ನಮ್ಮೂರ ಅಗಸೆ ಚಾವಡಿಯಲ್ಲೆ

ಸೂರ್ಯದೇವರ ಮೊಕ್ತ ಪಾಳೆಗಾರಿಕೆ

ಅವರು ನಮ್ಮೂರ ಖಾಸಾ ಅಳಿಯ

ಏಸು ಚೀಲ ತಂದೀರಿ ನೀವು, ತನ್ನಿ

ಓಸೂ ತುಂಬಿ ಒತ್ತೊತ್ತಿ ಕೂರಿದರೂ

ಮಿಕ್ಕು ಇಟ್ಟಾಡುತ್ತದೆ ಕೇರಿಮುಖಗಳ

ಸೀಯ್ವ ರಾಕ್ಷಸ ಬಿಸಿಲು !

ಕವನ ಕಥೆ ವಗೈರೆ

ಹಳಸಿದ್ದೇ ಇಲ್ಲ ನಮ್ಮೂರಲ್ಲಿ

ಅಳಿಯ ದೇವರ ಕೃಪೆ

ಅವು ಸದಾ ಆಗಿಳಿಸಿದಂತೆ

ಗರಾಂಗರಂ

-2-

ಗಂಗಳದ ಮೂಲೆಗೆ ತೆಳ್ಳನ್ನೆ ಮುದ್ದೆ

ಸೊಪ್ಪಿನೆಸರು, ಎಳ್ಳಿಕಾಯಿ ಉಪ್ಪಿನಕಾಯಿ

ದೊಡ್ಡ ಮಿಳ್ಳೆಯೊಳಗೆ ತಣ್ಣನ್ನೆ ಶಿವದಾನ

ನಡುಮದ್ದೇನ ನಿಸೂರಾಗಿ ಒಳಗಿಳಿಸಿ

ಹೊಂಗೆ ನೆರಳಿಗೆ ಸರಿದು ಬಿಟ್ಟರೆ

ಮುಂಗಣ್ಣು ಮಣ ಬೆಲ್ಲ ತೂಗಿ

ಬೇಸಿಗೆಯೆಂಬುದೂ

ಆಹಾ ! ತಿಂಗಳ ಬೆಳಕು

-3-

ಚಂದಿರನೇತಕೆ ಓಡುವನಮ್ಮ?

ಇದರ ಉತ್ತರ ನಮಗೆ ಗೊತ್ತು

ಆದರೆ ಈ ಸೂರಯ್ಯನೇಕೆ

ನಮ್ಮಾಗಸದಲ್ಲೆ ವರ್ಷೊಂಭತ್ತು ದಿನ

ಗೂಟ ಬಡಕೊಂಡು ಬಿದ್ದಿರುತಾನೆ

ಎಂಬುದಕೆ ಮೇಷ್ಟಿ್ರಗೂ ಗೊತ್ತಿಲ್ಲ

ಉತ್ತರ!

ನಮಗೆ ಬೇಸಿಗೆಯೆ

ಸರ್ವ ಋುತು ವಿಹಾರ !

-4-

ಸಮಭಾಜಕ ವೃತ್ತ

ದಿಂದ ಅದೆಷ್ಟುದೂರವಿದೆಯೋ

ನಮ್ಮೂರು? ಗೋಳದ ಮೇಲಳೆದರೆ

ಬರೇ ಒಂದು ಹೆಬ್ಬೆಟ್ಟಿನ ಅಳತೆ!

ಬೇಸಿಗೆಯೆಂಬುದು ಮಾತ್ರ

ಇಲ್ಲೆ ಗದ್ದುಗೆಯೇಳಿಸಿ

ಮಲಗಿ ಬಿಟ್ಟೈತೆ

ಥೋ! ಹೋಗತ್ತ

*

ನೀರಿಗೆ

- ಜಯಂತ ಕಾಯ್ಕಿಣಿ, ಗೋಕರ್ಣ

ಬೇಸಿಗೆ

ಅಂತ ಅಂದರೂ ಸಾಕು

ಕವಿತೆಗೆ ಬೆವರು

ಕೇರಿಗೆ

ಬಂದಿರಬಹುದು

ಐಸ್‌ ಕ್ಯಾಂಡಿಯವರು

ನೀರಿಗೆ

ಬಿಸಿಲ ಕುದುರೆ ಏರಿ

ಬರುವ ಅಲೆಮಾರಿ

ಕೇದಿಗೆ

ಮುಡಿದವಳೆದುರೇ

ಇಳಿವನು ಬಾಯಾರಿ

*

ಬಚಾವ್‌

ನಿತ್ಯ ಬೇಸಿಗೆಯ

ಧಗ ಧಗ ಬಯಲು ಸೀಮಿಯ

ಕನಸಿನ್ಯಾಗ

ಸಮುದ್ರ ಬಂದಿತ್ರಿ

ಬಯಲಿಗೆ ಈಸಾಕ್‌ ಬರವೊಲ್ಲದು

ಅಪಾರ ನೀರಾಗ ಏನ್‌ ಮಾಡ್ಲಿ

ಏನ್‌ ಬಿಡ್ಲಿ ಅನ್ನೋದ್ರಾಗ

ಉಸಿರುಗಟ್ಟಿ

ಜೀವಾನ ಬಾಯಿಗೆ ಬಂದು

ಗಕ್ಕಂತ ನಿದ್ದಿ ನಡುವೆ ಎದ್ದು ಕುಂತು

ಯಪ್ಪೋ ಬಚಾವಾದ್ನೆಪೋ ಅಂತು

ಆವಾಜು ಕಿವಿಯಾಗಿತ್ತು

ಉಪ್ಪು ಬಾಯಾಗಿತ್ತು

ಎಲ್ಲಮ್ಮನ ಗುಡ್ಡದ ಮ್ಯಾಲಿಂದ

ನೋಡಿದರ

ಸುತ್ತೂ ಉದೋಕ

ಮೂರು ಕಲ್ಲಿನ ಸಾವಿರಾರು ಒಲಿಗಳ

ಒಪ್ಪೊತ್ತಿನ ಹೋಮ

ನಡೆದೇ ಇತ್ತು

***

ಬೆಂಗಳೂರಲ್ಲಿ ಬೇಸಿಗೆ

-ಎಚ್‌.ಎಸ್‌.ವಿ

ಈಗ ಬೆಂಗಳೂರೊಂದು ಇಡ್ಲಿ ಬೇಯಿಸುವ ಕುಕ್ಕರ್‌.

ಇಡ್ಲಿ ಬೇಯುತ್ತಿವೆ ಉಸಿರುಗಟ್ಟಿಸೊ ಹೊರದಾರಿ ಯಿರದ ಉಷ್ಣಾಗಾರದಲ್ಲಿ. ಎರಡಿಡ್ಲಿ ಚಟ್ನಿ ಎಂದು

ಕೂಗುವರು ಯಾರೋ. ಭುಸ್ಸೆಂಬ ಹಬೆಯ ನಡುವೆ

ಇಡ್ಲಿ ರೆಡಿ. ಒದ್ದೆ ಬಟ್ಟೆಯಲ್ಲದ್ದಿದ ತುದಿ ಬೆರಳಲ್ಲಿ

ಇಡ್ಲಿಯೆತ್ತಿ ಪ್ಲೇಟಲ್ಲಿಟ್ಟು ಜೋಡಿಡ್ಲಿ ಸುತ್ತ ಅಭಿಷೇ

ಕದ ತಣ್ಣನೆ ಚಟ್ನಿ. ಚಟ್ನಿ ಇರುವಲ್ಲಿ ತಳಕ್ಕೆ ಹುಷಾರಾಗಿ

ಕೈ ನೀಡಬೇಕು. ಬಿಸಿಯುಸಿರು ಬಿಡುವ ಇಡ್ಲಿ ಇರುವ

ಕಡೆ ಕೈ ಚಾಚಿದರೆ ಬೆರಳು ಬೆಂದಾವು. ಸ್ಪೂನಲ್ಲಿ

ಚೂರೇ ಚೂರು ಸುಡು ಸುಡು ಇಡ್ಲಿ ಚಟ್ನಿಯಲ್ಲದ್ದಿ

ನಾಲಗೆಗೊದಗಿಸಿದರೆ ಥಟ್ಟನೆ ನೆತ್ತಿಗೇರುವ ಸಖತ್‌

ಖಾರ. ಹಿಂದೆಯೇ ನಾಲಗೆಗೆ ಚುರುಕು ಮುಟ್ಟಿಸೊ

ಕೆಂಡಗಾವು. ಪಾಪದ ನಾಲಗೆ ಸುಟ್ಟುಕೊಳ್ಳುತ್ತಲೆ

ಇಡ್ಲಿ ತಿಂದದ್ದಾಯಿತು. ಇನ್ನು ಬಿಸಿ ಕಾಫಿ ಸರದಿ.

ಅದೋ ಉಷ್ಣಪಾಕದ ಬೇಗುದಿ. ಲೋಟದಂಚು ತುಟಿಗೆ ತಾಗಿ

ಉರಿಮುತ್ತು. ಜೊಲ್ಲಲ್ಲಿ ನಾಲಗೆ ನೆನೆಸಿ ಮನೆಯತ್ತಿನ್ನು ಸಾಗಿ.

***

ಸುಡು ಹಾಡು

- ನಂದಿನಿ ಹೆದ್ದುರ್ಗ

‘ಇಲ್ಲಿದ್ದೇನೆ’

ಕೂಗಿ ಹೇಳುವ ಹುಚ್ಚು ಬಯಕೆಯಾಗುತ್ತದೆ

ಬೇಕಂತಲೇ ಮರೆಯಲ್ಲುಳಿಯುತ್ತೇನೆ

ಗೊತ್ತೇ ನಿಮಗೆ?

ಉರಿವ ಹಗಲಿನಲ್ಲಿ

ಒಲವು ಆವಿಯಾಗುತ್ತದೆ

ಬಟ್ಟಲು ನೀರಿಟ್ಟು ಮುಷ್ಟಿಕಾಳು ಕೊಟ್ಟು

ಬೊಗಸೆಯಲ್ಲಿ ಗುಬ್ಬಚ್ಚಿ ಸಾಕುವ ವಿದ್ಯೆ

ಕಲಿಯುತ್ತಿದ್ದೇನೆ.

ಈ ಸಂಜೆ ಮಳೆ ಬರುತ್ತದೆ.

-2-

ಉರಿವ ಹಗಲನ್ನೂ ದೂರಬಾರದು ಗೆಳತಿ

ಅಂಗಳದ ದಾಸವಾಳಕ್ಕೆ ಸೂರ್ಯ ಕುಂಚ

ಆಡಿಸುತ್ತಾನೆ

ಎರಡು ಪದಗಳ ಪ್ರೇಮ

ಪತ್ರ ಬರೆದು ಸಂಜೆ ಬಿಡುವಿನಲ್ಲಿ

ಗಾಳಿಪಟ ಹಾರಿಸಬೇಕು

ಮುಗಿಲು ಕೂಡುತ್ತದೆ ನೋಡು

ಮೂರುದಿನಗಳ ಒಳಗೆ

-3-

ವಿಮೋಚನೆಯ ಸುಖವಿಲ್ಲದ

ಶಪಿತ

ಹಗಲುಗಳು ನಿಡುಸುಯ್ಯುತ್ತಿವೆ

ಸುಡುವ ಶರಧಿಯ ನೀರು

ಕುದಿವ ನೆಲದೊಡಲು

ಕಮಲದ ಕಣ್ಣೂ ಕುರುಡಾಯಿತು

ಈ ಬೆಳಗು

ಮುಡಿ ಬಿಚ್ಚೊ ನನ್ನ ಶಿವನೇ

ಹಸಿದ ಹಕ್ಕಿಯ ಹಾಡಿಗೆ

ದನಿಯಿಲ್ಲದಾಗಿದೆ

***

ಬೇಸಿಗೆ ಹೈಕುಗಳು

- ಎಚ್‌.ಡುಂಡಿರಾಜ್‌

ಬೇಸಿಗೆ ಕಾಲ

ನಿನ್ನೆದೆಯ ಫ್ರಿಜ್ಜಲ್ಲಿ

ತಣ್ಣಗಿರುವೆ

-2-

ಬಳ್ಳಾರಿಯಲ್ಲೂ

ಸೆಖೆ ಆಗುವುದಿಲ್ಲ

ಸಖಿ ಇದ್ದರೆ

-3-

ಬೇಯಿಸುವುದು

ಪ್ರೀತಿಯ ಮಳೆಯಲ್ಲಿ

ತೋಯಿಸಲಿಕ್ಕೆ

-4-

ಸಹಿಸಲಾರೆ

ಅವಳ ಬೆಂಕಿ ಮಾತು

ಬೇಸಿಗೆ ವಾಸಿ

-5-

ಅವಳು ಜೀವ

ನದಿ ಬೇಸಿಗೆಯಲ್ಲೂ

ಬತ್ತುವುದಿಲ್ಲ

-6-

ಬೇಸಿಗೆಯಲ್ಲಿ

ಹುಚ್ಚು ಹಿಡಿಸುವ ಹೂ

ಎಪ್ರಿಲ್‌ ಫäಲ್‌

-7-

ಅವಸರಿಸ

ಲಿಲ್ಲ ಸೆಕೆ ಆಕೆಯೇ

ಕಳಚಿದಳು

-8-

ಬೇಕು ಬೇಸಿಗೆ

ಮಣ್ಣ ಗಡಿಗೆ ಮತ್ತು

ಕಲ್ಲಂಗಡಿಗೆ

-9-

ಬೇಸಿಗೆ ಬಗ್ಗೆ

ಬರೆಯಲಾರೆ ಶಾಯಿ

ಆವಿಯಾಗಿದೆ

***

ಪಾಡು

- ಬಿ ಆರ್‌ ಲಕ್ಷ್ಮಣ ರಾವ್‌

ಉರಿ ಬೇಸಿಗೆ ರಜೆ, ನಡು ಮಧ್ಯಾಹ್ನ,

ಉಂಡ ಶಾಸ್ತ್ರ ಮಾಡಿ

ತುಂಡೊಂದನುಟ್ಟು ಹಾಗೆ ಅಡ್ಡಾದೆ

ನೆಲದಲ್ಲಿ ಮೈ ಚೆಲ್ಲಿ.

ಜೊಂಪು, ಸರಕ್ಕನ ಕುಸಿದಂತಾಗಿ

ಎದ್ದೆ ಬೆಚ್ಚಿ ಬಿದ್ದು.

ಫ್ಯಾನು ನಿಂತಿದೆ, ಕರೆಂಟು ಹೋಗಿದೆ.

ದಿನ ನಿತ್ಯದ ಗೋಳು!

ಒದ್ದೆ ಮುದ್ದೆಯಾಗಿದೆ ಮೈ ಬೆವೆತು,

ಅಸಹ್ಯ ನಾತ, ಜಿಡ್ಡು!

ಅರೆನಿದ್ದೆಗೆ ಚುರುಚುರು ಉರಿಗಣ್ಣು,

ಯಾಕೋ ಅಸಾಧ್ಯ, ಸುಸ್ತು!

ಒಳಗಿರಲಾರದೆ ಎದ್ದು ಹೊರಬಂದೆ

ಷಂಡ ಸಿಟ್ಟಿನಲ್ಲಿ,

ರಪ್ಪೆಂದು ರಾಚಿತು ರಣ ರಣ ಬಿಸಿಲು

ಹಿಡಿದು ಹಿಂದೆ ತಳ್ಳಿ.

*

ಕಂಡೆ: ಬಳಿಯಲ್ಲಿ ಮೈ ತಾಳುತ್ತಿದೆ

ಚೆಂದದ ಮನೆಯೊಂದು

ದುಡಿಯುತ್ತಿದ್ದಾರೆ ಹತ್ತಾರು ಮಂದಿ

ಬಿಸಿಲಿನಲ್ಲಿ ಬೆಂದು.

ಅಯ್ಯೋ ಅನ್ನಿಸಿ ಹತ್ತಿರ ಹೋದೆ.

ನಿಂತ ನೆರಳಿನಲ್ಲಿ.

ಮೈ ಮರೆತಿದ್ದರು ಗಂಡು ಹೆಣ್ಣಾಳು

ತಮ್ಮ ದುಡಿಮೆಯಲ್ಲಿ.

ಕಲಸುವ ಕೆಲಸ ತುಂಬುವ ಕೆಲಸ.

ಹೊತ್ತು ಸಾಗಿಸುವ ಕೆಲಸ,

ನೆಟ್ಟಗೆ ಜೋಡಿಸಿ ಕಟ್ಟುವ ಕೆಲಸ.

ಮೆತ್ತಿ ಸಾರಿಸುವ ಕೆಲಸ.

ಕೆಲಸದ ಪಾಡಿಗೆ ಕೆಲಸ, ನಡುನಡುವೆ

ಏನೋ ಪೋಲಿ ಮಾತು.

ಕೀಟಲೆ, ಕಿಸಕಿಸ ನಗೆ, ಹುಸಿ ಮುನಿಸು,

ಬಿಸಿಲಿನ ಪಾಡಿಗೆ ಬಿಸಿಲು.

Follow Us:
Download App:
  • android
  • ios