Asianet Suvarna News Asianet Suvarna News

ಮೌನಸಾಧಕ, ಸಹೃದಯಿ, ಶಿಲ್ಪಿ ವೆಂಕಟಾಚಲಪತಿ ಕಥನ

ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗೆ ಭಾಜನರಾದ ಸಹೃದಯೀ, ಮೆಲುಮಾತಿನ, ಸರಳ ಸಜ್ಜನಿಕೆಯ ವೆಂಕಟಾಚಲಪತಿಯವರ ಕುರಿತಾದ ಮಾಹಿತಿ ಇಲ್ಲಿದೆ.

Story of Maunasadhaka, Sahridayi, Sculptor Venkatachalapathy Vin
Author
First Published May 7, 2023, 4:33 PM IST

ನಾನು ಚಿತ್ರಕಲೆಯನ್ನು ಬಲ್ಲವನಾದರೂ ಮೂಲತಃ ಶಿಲ್ಪಿ. ವ್ಯಾಪಾರೀ ಸ್ವಭಾವವನ್ನು ಮೆಟ್ಟಿಕಲಾತ್ಮಕ ಶಿಲ್ಪದ ಪವಿತ್ರತೆಯನ್ನು ಉಳಿಸಿಕೊಂಡು ಶಿಲ್ಪ ಮಾಧ್ಯಮದ ಎಲ್ಲ ವೈವಿಧ್ಯ ಮೂಡಿಸುವ ಯತ್ನದಲ್ಲಿದ್ದರೂ ನನ್ನದೇ ಆದ ವಿಶಿಷ್ಟಶೈಲಿಯನ್ನು ಬಿಟ್ಟುಕೊಟ್ಟಿಲ್ಲ.

ಇದು ದೇವನಹಳ್ಳಿಯಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿ ಪ್ರಖ್ಯಾತರಾದ ಶಿಲ್ಪಿ ವೆಂಕಟಾಚಲಪತಿಯವರು ತಮ್ಮ ಜೀವನಗಾಥೆಯನ್ನು ತಮ್ಮದೇ ಪುಸ್ತಕ ‘ನನ್ನ ಜೀವನ ಶಿಲ್ಪ’ದಲ್ಲಿ ತೆರೆದಿಟ್ಟಬಗೆ. ಅತೀ ಸಣ್ಣ ವಯಸ್ಸಿನಲ್ಲಿಯೇ ದೇವನಹಳ್ಳಿಯ ಶಿಲ್ಪಕಲೆಯ ಪರಿಸರದಲ್ಲಿ ಮೂಡುತ್ತಿದ್ದ ಶಿಲ್ಪಗಳನ್ನು ಬೆರಗುಗಣ್ಣಿಂದ ನೋಡುತ್ತಾ ಮೈಮರೆಯುತ್ತಿದ್ದ ಹುಡುಗ ಮುಂದೊಂದು ದಿನ ತಾನೇ ರಚಿಸಿದ ಶಿಲ್ಪಗಳನ್ನು ನಾಡಿನಾದ್ಯಂತ ಶಿಲ್ಪಕಲಾಸಕ್ತರು ನೋಡಿ ಮೈಮರೆಯುವಂತೆ ಮಾಡಿದ್ದು ಅತ್ಯಂತ ಸೋಜಿಗದ ಸಂಗತಿ.

ಹೈಸ್ಕೂಲ್‌ ಶಿಕ್ಷಣದ ಹಂತದಲ್ಲಿ ಕಲಾಸೆಳೆತದಿಂದ ತಪ್ಪಿಸಿಕೊಳ್ಳಲಾಗದೆ ಬಿ.ಕೆ.ಎಸ್‌ ವರ್ಮಾ ಅವರ ಮೂಲಕ ಬೆಂಗಳೂರು ಗಾಂಧೀ ಬಜಾರಿನಲ್ಲಿದ್ದ ಕಲಾಮಂದಿರ ಕಲಾಶಾಲೆಗೆ ಸೇರ್ಪಡೆಗೊಂಡು ಅ.ನ ಸುಬ್ಬರಾಯರ ಕಲಾಶಿಕ್ಷಣ, ಜೊತೆಗೆ ನೀಡಿದ ನಿರಂತರ ಪ್ರೋತ್ಸಾಹದಿಂದ ಹಂತ ಹಂತವಾಗಿ ಶಿಲ್ಪಿಯಾಗಿ ರೂಪುಗೊಂಡರು. ಮುಂದೆ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಉದ್ಯೋಗಿಯಾಗಿ ‘ಪಾಪ್ಯುಲರ್‌ ಸೈನ್ಸ್‌’ ಗ್ಯಾಲರಿಯ ಡೈರಾಮಗಳಿಗಾಗಿ ಮಾಡಿದ ಹಲವಾರು ಕಲಾರಚನೆಗಳು, ಅಮಿತ್‌ ಸರ್ಕಾರ್‌, ಎಲ್‌.ಪಿ. ಅಂಚನ್‌, ಸಮೀರ್‌ ಮಂಡಲ್‌ ಮುಂತಾದ ದಿಗ್ಗಜರ ಜೊತೆ ಪಡೆದ ಅನುಭವದ ಜತೆ ಜತೆಗೆ ದೇಶದ ಹಲವೆಡೆ ಪ್ರದರ್ಶನದಲ್ಲಿ ಭಾಗಿಯಾಗಿ ದೇಶದ ಹಲವಾರು ಶಿಲ್ಪಕಲೆಯ ದಿಗ್ಗಜರಿಂದ (ರಾಮ್‌ ಸುತಾರ್‌, ಬೆಂಗಳೂರಿನ ಇಂಡೋ ನಿಪ್ಪಾನ್‌ ಕ್ರಾಫ್‌್ಟಸೆಂಟರ್‌ನ ವಾದಿರಾಜ್‌, ಕನಕಾಮೂರ್ತಿ ಮುಂತಾದವರು) ಕಲಿತ ಅನುಭವ ಒಂದೆಡೆಯಾದರೆ, ಮ್ಯೂಸಿಯಂ ಮೀರಿ ಬೆಳೆದ ಕಲಾರಂಗದ ಮತ್ತು ಖ್ಯಾತ ಸಾಹಿತಿಗಳ ಸಂಪರ್ಕದಿಂದ ದೊರೆತ ಅನುಭವವೂ ಈ ಪುಸ್ತಕದಲ್ಲಿ ದಾಖಲಾಗಿದೆ.

ಸೃಜನಶೀಲರು ಅಧಿಕಾರಿಗಳಿಗೆ ಹತ್ತಿರ ಇರಬೇಕೇ?

ಕಂಚು, ಕಲ್ಲು, ಟೆರ್ರಾಕೊಟಾ ಮುಂತಾದ ಮಾಧ್ಯಮ ಬಳಸಿ ರಚಿಸಿದ ಭಾವಶಿಲ್ಪ, ಮ್ಯೂರಲ್‌ ಹಾಗೂ ಕಲಾಕೃತಿಗಳು ದೇಶ ಹಾಗೂ ನಾಡಿನ ಪ್ರತಿಷ್ಠಿತ ಸಂಗ್ರಹದಲ್ಲಿದೆ. ದೇವನಹಳ್ಳಿಯಿಂದ ಕತ್ರಿಗುಪ್ಪೆಯ ಇಟ್ಟುಮಡುವಿನ ತಮ್ಮದೇ ಸ್ಟುಡಿಯೋ ಸ್ಥಾಪನೆಯವರೆಗಿನ ಕುತೂಹಲಕರ ಸಂಗತಿಗಳು, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿ ಮಾಡಿದ ಸಾಧನೆಯ ವಿವರಗಳೂ ಚಲಪತಿಯವರ ಬರವಣಿಗೆಯಲ್ಲಿ ಪುಸ್ತಕದ ಪುಟ ತೆರೆಯತ್ತಾ ರೂಪಗೊಳ್ಳುತ್ತವೆ.

ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯ ಲಲಿತಕಲಾ/ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಜಕಣಾಚಾರ್ಯ ಪ್ರಶಸ್ತಿ ಸೇರಿದಂತೆ ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗೆ ಭಾಜನರಾದ ಸಹೃದಯೀ, ಮೆಲುಮಾತಿನ, ಸರಳ ಸಜ್ಜನಿಕೆಯ ವೆಂಕಟಾಚಲಪತಿಯವರಿಗೆ ಇನ್ನಷ್ಟುದೇಶದ ಪ್ರತಿಷ್ಠಿತ ಪ್ರಶಸ್ತಿಗಳು ಸಿಗಲಿ ಎಂದು ಹಾರೈಸುತ್ತಾ ಅವರ ಇನ್ನಷ್ಟುಅನುಭವದ ಮಾತನ್ನು ಅವರ ‘ನನ್ನ ಜೀವನ ಶಿಲ್ಪ’ ಪುಸ್ತಕದಲ್ಲಿಯೇ ಓದಿ ಶ್ರೇಷ್ಠ ಶಿಲ್ಪಿಯನ್ನು ಗೌರವಿಸೋಣ.

 

Follow Us:
Download App:
  • android
  • ios