Asianet Suvarna News Asianet Suvarna News

ಮುಟ್ಟು ಮೌಢ್ಯವಲ್ಲ, ಸಹಜ ಕ್ರಿಯೆ!

ಜಗತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ಬಹಳಷ್ಟುಮುಂದುವರಿದಿದ್ದರೂ ಈಗಲೂ ಅನೇಕರಲ್ಲಿ ಮುಟ್ಟಿನ ಕುರಿತಾದಂತೆ ತಪ್ಪು ಗ್ರಹಿಕೆ ಇದೆ. ಆ ತಪ್ಪು ಗ್ರಹಿಕೆ ಹೋಗಲಾಡಿಸಬೇಕು, ಮುಗ್ಧ ಮಹಿಳೆಯಲ್ಲಿ ಜಾಗೃತಿ ಮೂಡಿಸಬೇಕು ಎಂಬ ಕಾರಣದಿಂದ ಮೇ 28 ಅನ್ನು ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಋುತುಚಕ್ರ ನೈರ್ಮಲ್ಯ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ತಂಡದ ಸದಸ್ಯೆ ಬರೆದ ಲೇಖನ ಇಲ್ಲಿದೆ.

Special article on world Menstrual Hygiene Day
Author
Bangalore, First Published May 28, 2019, 3:30 PM IST

ಜ್ಯೋತಿ ಹಿಟ್ನಾಳ್‌

ಮುಟ್ಟು ಅಂದರೆ, ರಕ್ತ, ರಕ್ತಸ್ರಾವ, ಕೆಂಪುಸೆರಗು, ಋುತುಚಕ್ರ, ಕರೆ, ಬಟ್ಟೆಅಂತನೂ ಕರೆಯುತ್ತಾರೆ. ವೈಜ್ಞಾನಿಕವಾಗಿ ಹೇಳಬೇಕೆಂದರೆ, ದೇಹದ ಪ್ರತಿ ಜೀವಕೋಶವೂ ನಿರಂತರ ಹೊಸದಾಗುತ್ತಾ, ಅದರ ಪಳೆಯುಳಿಕೆಗಳು ಜೀರ್ಣವಾಗಿ ಹೊಸ ಅಂಗಾಂಶ ಕಟ್ಟಲು ಸಹಾಯವಾಗುತ್ತಿರುತ್ತದೆ. ಮುಟ್ಟಿನ ಸಮಯದಲ್ಲಿ ಗರ್ಭಕೋಶದ ಹಳೆಯ ಒಳಪೊರೆ ಸುಲಿದು, ಹೊಸದಾಗಿ ಬೆಳೆಯುವ ತಯಾರಿ ನಡೆಸುತ್ತದೆ. ಪ್ರತೀ ಹೆಣ್ಣುಮಕ್ಕಳಿಗೆ ಎರಡು ಅಂಡಾಶಯವಿರುತ್ತದೆ. ತಿಂಗಳಿಗೊಂದು ಅಂಡಾಣು ಬಿಡುಗಡೆಯಾಗಿ ಒಂದು ತಿಂಗಳು ಒಂದು ಅಂಡಾಶಯದಿಂದ ಹೊರಬಂದರೆ, ಮತ್ತೊಂದು ತಿಂಗಳು ಮತ್ತೊಂದು ಅಂಡಾಶಯದಿಂದ ಹೊರಬರುತ್ತೆ. ಬಂದ ಅಂಡಾಶಯ ಪುರುಷರ ದೇಹದಲ್ಲಿರುವ ವೀರಾರ‍ಯಣುವಿಗೆ ಕಾಯುತ್ತದೆ. ಕಾರಣ ಗರ್ಭಕಟ್ಟಲು. ವೀರಾರ‍ಯಣು ಬರದೇ ಇದ್ದಾಗ ಆ ಅಂಡಾಶಯ ಒಡೆದು ರಕ್ತದ ಪದರಿನೊಂದಿಗೆ ಹೊರ ಬಂದು ಮುಟ್ಟಾಗಿ ಕಾಣಿಸುತ್ತದೆ. ಈ ಕ್ರಿಯೆ ಅದೆಷ್ಟುಸಹಜವೆಂದರೆ, ದಿನನಿತ್ಯ ಕರ್ಮವಿದ್ದಂತೆ. ವ್ಯತ್ಯಾಸ ಇಷ್ಟೇ ನಿತ್ಯ ಕರ್ಮಗಳು ದಿನನಿತ್ಯ ಬರುತ್ತೆ ಹೋಗುತ್ತೆ. ಇದು ತಿಂಗಳಿಗೊಂದು ಬಾರಿ ಬರುತ್ತೆ ಹೋಗುತ್ತೆ. ಆ ಮುಟ್ಟಿನಿಂದಲೇ ನಮ್ಮ ಹುಟ್ಟು. ಇದು ಅತ್ಯಂತ ಪ್ರಕೃತಿ ಸಹಜವಾದ ಕ್ರಿಯೆ.

'ಆ ದಿನಗಳ'ಲ್ಲಿ ಏನು ತಿನ್ನಬೇಕು?

ಈ ಕ್ರಿಯೆಯ ಹಿಂದೆ ಇರಬಹುದಾದ ನಂಬಿಕೆಗಳ ಕುರಿತು ನೋಡಿದರೆ ಆಶ್ಚರ್ಯವಾಗುತ್ತೆ, ಜನಸಾಮಾನ್ಯರಲ್ಲಿ ಇರಬಹುದಾದ ನಂಬಿಕೆ ಏನೆಂದರೆ, ಪುರಾಣಗಳಲ್ಲಿ ಪಾರ್ವತಿ ಮುಟ್ಟಾಗಿದ್ದಕ್ಕೆ ಗಂಗೆಯನ್ನು ಮುಟ್ಟಿದ್ದಳಂತೆ, ಅದಕ್ಕೆ ಗಂಗೆ ಮುನಿಸಿಕೊಂಡು ಹೋದಳಂತೆ. ಮುಟ್ಟಾದಾಗ ನೀರನ್ನು ಮುಟ್ಟಿದ್ದಕ್ಕೆ ನೀರೇ ಬರಲಿಲ್ಲವೆಂಬುವುದು. ಹೀಗೆ ಪುರಾಣದಲ್ಲಿ ಬರುತ್ತದೆ. ಅಂದರೆ ಇಂತಹ ನಂಬಿಕೆಗಳು ದೇವರನ್ನೂ ಬಿಟ್ಟಿಲ್ಲ. ಮುಟ್ಟನ್ನು ಸೂತಕವೆಂದು ಭಾವಿಸುವುದು ಇಲ್ಲಿ ಗಮನಿಸಬಹುದು.

Special article on world Menstrual Hygiene Day

ಆ ಸೂತಕದ ಸಂದರ್ಭದಲ್ಲಿ ಶುಭ ಸಮಾರಂಭಗಳಲ್ಲಿ ದೇವರ ಕಾರ್ಯಗಳಲ್ಲಿ, ದೇವಸ್ಥಾನ, ಅಡುಗೆ ಮನೆ, ಅಡುಗೆ ಸಾಮಾನುಗಳು, ಕೆಲವು ಸ್ಥಳಗಳಲ್ಲಿ ಹೆಣ್ಣು ಪ್ರವೇಶ ಮಾಡುವ ಹಾಗಿಲ್ಲ. ಯಾರನ್ನೂ ಮುಟ್ಟಿಸಿಕೊಳ್ಳುವ ಹಾಗಿಲ್ಲ. ಈ ರೀತಿಯಲ್ಲಿ ಅವಳನ್ನು ಬಂಧನದಲ್ಲಿಡಲಾಗುತ್ತೆ. ಈ ಬಂಧನದಿಂದ ಆಗಬಹುದಾದ ಅನುಕೂಲಗಳು, ಅವಳಿಗೆ ದೈಹಿಕವಾಗಿ ಶ್ರಮ ಕಡಿಮೆ ಆಗುತ್ತೆ ಅಂತ ಭಾವಿಸುತ್ತೇವೆ. ಆದರೆ ಮಾನಸಿಕವಾಗಿ ಆಕೆ ಕುಗ್ಗುತ್ತಾಳೆ ಅಲ್ವಾ? ಇದರ ಬಗ್ಗೆ ಹೆಚ್ಚು ಯೋಚಿಸದೇ, ಆಗಿನ ಕಾಲದಲ್ಲಿ ಯಾವ ಅರ್ಥಕ್ಕಾಗಿ ನಂಬಿದರೋ ಗೊತ್ತಿಲ್ಲ. ನಾವು ಯಾರನ್ನೂ ಕೇಳಿಲ್ಲ ಕೂಡ. ಆದರೆ ಈಗ ನಾವು ವಿದ್ಯಾವಂತರಾಗಿದ್ದೇವೆ. ಕಾಲ ಬದಲಾಗುತ್ತಿದೆ. ಇಷ್ಟೆಲ್ಲಾ ಆದರೂ ನಾವು ಕುರುಡು ನಂಬಿಕೆಗಳನ್ನು ನಂಬಿ ಮಾನವೀಯತೆಯನ್ನು ಮರೆಯುತ್ತಿದ್ದೇವೆ ಎಂದೆನಿಸುವುದಿಲ್ಲವೆ?

ಮುಟ್ಟು ಸಾಮಾಜಿಕ ಸಮಸ್ಯೆ

ಮುಟ್ಟು ದೈಹಿಕ ಸಮಸ್ಯೆಯಲ್ಲ ಅದು ಸಾಮಾಜಿಕೆ ಸಮಸ್ಯೆ. ಇದನ್ನು ಸಾಮಜಿಕ ಸಮಸ್ಯೆಯನ್ನಾಗಿ ಮಾಡಲಾಗಿದೆ. ಇಡೀ ಭಾರತದ ಸಮಾಜದಲ್ಲಿ ಮುಟ್ಟಿನ ಬಗೆಗೆ ಇರುವ ಸಹಜವಾದ ಪರಿಕಲ್ಪನೆಯನ್ನು ಸರಳವಾಗಿ ಯಾವ ಜನ ಸಮುದಾಯವೂ ಪರಿಗಣಿಸಿಲ್ಲ. ಅದೊಂದು ನಂಬಿಕೆ, ಮೌಢ್ಯ ಅಂತಲೇ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಬರುತ್ತಿದ್ದಾರೆ ಕೂಡ. ಕಾಲಾನಂತರದಲ್ಲಿ ಅದು ವೈಚಾರಿಕವಾಗಿ-ವೈಜ್ಞಾನಿಕವಾಗಿ ತಿಳುವಳಿಕೆಯಾಗಿ ಅರಿವು ಮೂಡುತ್ತಾ ಮೂಡುತ್ತಾ, ಅದನ್ನ ಸಹಜವಾಗಿ ನೋಡಲು ಸಾಧ್ಯವಾಗಿದೆ. ಜಾಗತಿಕ ಪ್ರಭಾವ, ತಂತ್ರಜ್ಞಾನದ ಪ್ರಭಾವ, ಇವುಗಳಿಂದ ಆ ಸಮಯದಲ್ಲಿ ಆಕೆ ಹೇಗೆ ತನ್ನನ್ನು ತಾನು ಶುಚಿಗೊಳಿಸಬಹುದು, ಅದಕ್ಕೆ ಬೇಕಾಗುವಂತ ವಸ್ತುಗಳನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ತಿಳಿದುಕೊಂಡ ಮೇಲೆ ಅವಳು ಹೊರಜಗತ್ತಿಗೆ ಬರಲು ಸಾಧ್ಯವಾಗಿದೆ.

ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

ಎಷ್ಟೋ ಮಂದಿಗೆ ಈಗಲೂ ತಪ್ಪು ಗ್ರಹಿಕೆ ಇದೆ

ಈಗಿನ ದಿನಮಾನಗಳಲ್ಲಿ ಮುಟ್ಟಿನ ವಿಷಯವಾಗಿ ತುಂಬಾ ಆಪ್ತವಾಗಿ ಅರ್ಥಮಾಡಿಕೊಳ್ಳದೇ ಇರುವುದನ್ನು ನಾವು ಕಾಣುತ್ತೇವೆ. ಮುಟ್ಟಿನ ಸಂದಂರ್ಭದಲ್ಲಿ ಪ್ಯಾಡ್‌ ಬಳಕೆ ಕೇವಲ ಸಿರಿವಂತರಿಗೆ ನಮಗಲ್ಲ ಅನ್ನೋ ಮನೋಭಾವನೆಯಲ್ಲಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗೂ ಆ ಜಗತ್ತಿನಿಂದ ಹೊರಜಗತ್ತಿಗೆ ಇನ್ನೂ ಬರದೇ ಇರುವುದು ವಿಪರ್ಯಾಸ. ಬಟ್ಟೆಬದಲು ಮೆನಷ್ಟು್ರವಲ್‌ ಕಪ್‌ ಬಳಸುವ ಕಾಲಮಾನದಲ್ಲಿ ನಾವಿದ್ದೇವೆ. ಆದರೆ ಇವತ್ತಿಗೂ ನಗರ ಮತ್ತು ಹಳ್ಳಿಗಳಲ್ಲಿ ಪ್ಯಾಡ್‌ ಇರಲಿ, ಕನಿಷ್ಟಪಕ್ಷ ಒಂದು ಬಟ್ಟೆಯನ್ನೂ ಹಾಕಿಕೊಳ್ಳುವ ತಿಳುವಳಿಕೆ ಇಲ್ಲದೆ ಮುಟ್ಟಾದ ಸವಯದಲ್ಲಿ ಎಷ್ಟೋ ಹೆಣ್ಣುಮಕ್ಕಳು, ಮರಳು, ಬೂದಿ, ಪೇಪರ್‌, ಪ್ಲಾಸ್ಟಿಕ್‌, ಹಾಕಿಕೊಳ್ಳುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾಗಿದೆ. ಆದರೆ ಇದು ಸತ್ಯ.

ಮಹಿಳೆಗೆ ಸಂಬಂಧಪಟ್ಟಂತೆ ಯಾವುದ್ಯಾವುದೋ ಸರಕಾರದ ಯೋಜನೆಗಳು ಇವೆ. ಆದರೆ ಅದು ಯಾರಿಗೆ ತಲುಪುತ್ತಿವೆ? ಎಷ್ಟೆಲ್ಲಾ ಕಲ್ಯಾಣ ಯೋಜನೆಗಳು ಇವೆ. ಏನು ಪ್ರಯೋಜನ? ಆದರೆ ಅದರ ಬಗ್ಗೆ ಯಾವ ತಿಳುವಳಿಕೆಯೂ ನೀಡದೇ ಇರುವುದರಿಂದ, ಎಷ್ಟೋ ಮಹಿಳೆಯರಿಗೆ ನ್ಯಾಪ್ಕಿನ್‌ ಅನ್ನು ಉಪಯೋಗಿಸಬೇಕಾ, ಉಪಯೋಗಿಸಬಾರದಾ ಎಂಬುದೇ ಗೊತ್ತಿಲ್ಲ. ಹಾಗಿದ್ದ ಮೇಲೆ ನಮ್ಮ ಶಿಕ್ಷಣ ಯಾರಿಗೆ ತಲುಪುತ್ತಿದೆ? ಈ ಹಿನ್ನೆಲೆಯಲ್ಲಿ ನೋಡಿದಾಗ ಮುಟ್ಟಿನ ಬಗ್ಗೆ ಇರುವ ಮೌಢ್ಯತೆ, ತಪ್ಪು ಗ್ರಹಿಕೆ ಹೋಗಲಾಡಿಸುವುದು ಈ ಕ್ಷಣದ ತುರ್ತು.

ಮುಕ್ತವಾಗಿ ಮುಟ್ಟಿನ ನೈರ್ಮಲ್ಯ ದಿನ ಆಚರಿಸಬೇಕು

ಇದೆಲ್ಲಾ ವಿಷಯಗಳ ಬಗ್ಗೆ ಅನೇಕರ ಹೋರಾಟದ ಫಲವಾಗಿ ವಿಶ್ವಸಂಸ್ಥೆ 2014ರಲ್ಲಿ ಮೇ 28ನ್ನು ‘ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ’ ಎಂದು ಘೋಷಿಸಿದೆ. ನಮ್ಮ ದೇಶದಲ್ಲಿ, ಮಕ್ಕಳ ದಿನಾಚರಣೆ, ಮಹಿಳೆಯರ ದಿನಾಚರಣೆ, ತಾಯಂದಿರ ದಿನಾಚರಣೆ, ಅಪ್ಪಂದಿರ ದಿನಾಚರಣೆ, ಅಣ್ಣಂದಿರ ದಿನಾಚರಣೆ. ಈ ಎಲ್ಲಾ ಆಚರಣೆಗಳನ್ನು ಬಹಳ ನಿರ್ಭೀತಿಯಿಂದ ಪ್ರೀತಿಯಿಂದ ಆಚರಿಸುತ್ತೇವೆ. ಆಚರಿಸಬೇಕು ಕೂಡ. ಆದರೆ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಇರುವ ಹಲವು ಆಚರಣೆಗಳನ್ನ ಬರೀ ಅಂಗನವಾಡಿ, ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಮಾಡುತ್ತಾ ಬರುವುದು ಯಾವ ನ್ಯಾಯ? ಇನ್ನು ಮುಂದೆಯಾದರೂ, ಈ ದಿನಾಚರಣೆಯನ್ನು ಯಾವುದೇ ಮುಜುಗರವಿಲ್ಲದೆ, ಆಚರಿಸುವಂತೆ ಆಗಬೇಕು. ಆ ಕಾಲ ಈಗ ಬಂದಾಗಿದೆ. ದಿಟ್ಟದನಿಯ ಎತ್ತುವಂಥ, ಹಿಂಸೆಯನ್ನು ಮೆಟ್ಟುವಂತಹ, ಮೌನವನ್ನು ಮುರಿಯುವಂತಹ ಕಾಲ ಈಗ ಬಂದಾಗಿದೆ. ನಾವೆಲ್ಲರೂ ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ ಆಚರಿಸೋಣ. ಜಾಗೃತಿ ಮೂಡಿಸೋಣ.

 

Follow Us:
Download App:
  • android
  • ios