ಗರ್ಭನಿರೋಧಕ ಮಾತ್ರೆ ಕೆಲವೊಮ್ಮೆ ತರುತ್ತೆ ಕುತ್ತು
ಗರ್ಭನಿರೋಧಕ ಮಾತ್ರೆ ಸೇವಿಸುವುದರಿಂದ ಬಸುರನ್ನು ತಡೆಯಲು ಹೆಣ್ಣಿಗೆ ಅನುಕೂಲವಾಗುತ್ತೆ. ಆದರೆ, ಇಂಥವು ಹೆಣ್ಣಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದು ಗ್ಯಾರಂಟಿ. ಹೆಣ್ತನಕ್ಕೆ ಮೆರಗು ನೀಡುವ ಮುಟ್ಟನ್ನು ಮಾತ್ರ ಈ ಗರ್ಭ ನಿರೋಧಕ ಔಷಧಿಗಳು ಸರಿ ಮಾಡುತ್ತದೆ. ಆದರೆ, ರಕ್ತಸ್ರಾವ ಹೆಚ್ಚಲೂಬಹುದು. ಅಲ್ಲದೇ ಹಾರ್ಮೋನ್‌ಗಳು ಏರುಪೇರಾಗುವುದರಿಂದ ಮೊಡವೆ ಮೂಡಬಹುದು.
ಆದರೆ, ಹಾರ್ಮೋನ್‌ಗೆ ತಕ್ಕಂತೆ ಗರ್ಭನಿರೋಧಕ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವು ಇಸ್ಟ್ರೋಜನ್, ಪ್ರೊಜೊಸ್ಟ್ರಾನ್‌ಗೆ ತಕ್ಕಂತೆ ಪಿಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಯಾವುದಕ್ಕೂ ತಜ್ಞ ವೈದ್ಯರ ಸಲಹೆ ಪಡೆದು, ದೇಹದ ಆರೋಗ್ಯಕ್ಕೆ ತಕ್ಕಂತೆ ಮಾತ್ರೆಗಳನ್ನು ಬಳಸುವುದು ಒಳಿತು.
ಆದರೆ, ಲೈಂಗಿಕ ರೋಗಗಳ ತಡೆಗೆ ಹಾಗೂ ಇನ್ನು ಹತ್ತು ಹಲವು ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಕಾಂಡೋಮ್ ಬಳಸುವುದು ಒಳಿತು. ಅಷ್ಟಕ್ಕೂ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಬೀರೋ ದುಷ್ಪರಿಣಾಮಗಳೇನು?
ಮಧ್ಯಂತರ ರಕ್ತಸ್ರಾವ
ಗರ್ಭನಿರೋಧಕ ಮಾತ್ರೆಗಳು ಋತುಸ್ರಾವವನ್ನು ಸುಸ್ಥಿತಿಗೆ ತರುತ್ತದೆ. ಆದರೆ, ಹೆಚ್ಚು ಸೇವನೆಯಿಂದ ಸ್ರಾವ ಹೆಚ್ಚಾಗಬಹುದು.
ವಾಕರಿಕೆ (ನಾಸಿಯಾ)
ಗರ್ಭನಿರೋಧಕ ಮಾತ್ರೆಗಳನ್ನು ಮೊದಲು ಸೇವಿಸುವಾಗ ವಾಕರಿಕೆ ಬರುತ್ತದೆ. ಆದುದರಿಂದ ಈ ಮಾತ್ರೆಗಳನ್ನು ಊಟದ ನಂತರ ಅಥವಾ ಮಲಗುವಾಗ ಸೇವಿಸಬೇಕು. ಹೆಚ್ಚು ದಿನ ವಾಕರಿಕೆ ಬಂದರೆ ವೈದ್ಯರನ್ನು ಭೇಟಿಯಾಗೋದು ಒಳ್ಳೆಯದು.
ಸ್ತನ ಮೃದುವಾಗುತ್ತದೆ
ಗರ್ಭನಿರೋಧಕ ಮಾತ್ರೆಗಳು ಸ್ತನವನ್ನು ಮೃದುಮಾಡಿ, ಹಿಗ್ಗಿಸುತ್ತದೆ. ಇದರಿಂದ ಗಾಬರಿಯಾಗೋ ಅಗತ್ಯವಿಲ್ಲ. ಆದರೆ, ತೀರಾ ಮುಜುಗರವೆನಿಸಿದರೆ ಹುಷಾರು. ಸ್ತನ ಹಿಗ್ಗುವಿಕೆಯನ್ನು ತಡೆಯಲು ಕೆಫಿನ್ ಮತ್ತು ಉಪ್ಪು ಕಡಿಮೆ ಸೇವಿಸಬೇಕು. ಸ್ಪೋರ್ಟ್ಸ್ ಬ್ರಾ ಬಳಸಬಾರದು.
ಹಾರ್ಮೋನ್
ಗರ್ಭನಿರೋಧಕ ಮಾತ್ರೆಗಳಲ್ಲಿ ಹಾರ್ಮೋನ್‌ಗಳ ಉತ್ಪಾದನೆ ಹೆಚ್ಚು ಕಡಿಮೆಯಾದುವುದರಿಂದ ತಲೆನೋವು ಮತ್ತು ಮೈಗ್ರೇನ್ ಹೆಚ್ಚಿಸುತ್ತದೆ. ಕಡಿಮೆ ಡೋಸ್ ಇರೋ ಪಿಲ್ ಬಳಸಿದರೆ, ತಲೆನೋವು ಬಾರದಂತೆ ತಡೆಯುತ್ತದೆ.
ತೂಕ ಹೆಚ್ಚಿಸುತ್ತದೆ
ಸ್ತನವನ್ನು ಹಿಗ್ಗಿಸುವುದರೊಂದಿಗೆ, ಸೊಂಟದ ಬಳಿಯೂ ಬೊಜ್ಜು ಹೆಚ್ಚಿಸುತ್ತದೆ. 6 ರಿಂದ 12 ತಿಂಗಳಲ್ಲಿ 2 ರಿಂದ 3 ಕೆಜಿ ತೂಕ ಹೆಚ್ಚಲೂಬಹುದು.
ಮೂಡ್ ಬದಲಾವಣೆ
ಮೂಡ್ ಬದಲಾವಣೆಗೆ ಕಾರಣವಾಗುವ ಈ ಪಿಲ್‌ಗಳು ಖಿನ್ನತೆಗೂ ಕಾರಣವಾಗಬಲ್ಲದು.
ಕಾಮಾಸಕ್ತಿ ಕುಂಠಿತಗೊಳಿಸುತ್ತದೆ
ಲೈಂಗಿಕ ಕ್ರಿಯೆ ತೊಡಕಾಗಬಾರದೆಂದು ತೆಗೆದುಕೊಳ್ಳುವ ಈ ಮಾತ್ರೆಗಳು ಲೈಂಗಿಕಾಸಕ್ತಿಯನ್ನೇ ಕಡಿಮೆ ಮಾಡುವ ಸಾಧ್ಯತೆಯೂ ಇದೆ. ಹಾರ್ಮೋನ್‌ಗಳ ವ್ಯತ್ಯಯದಿಂದ ಇಂಥದ್ದೊಂದು ಮನಸ್ಥಿತಿ ಬರಬಹುದು.
ದೃಷ್ಟಿ ಮಂದ
ಈ ಮಾತ್ರೆಗಳ ಸೇವನೆಯಿಂದ ದೃಷ್ಟಿಯೂ ಕುಂದಬಹುದು. ಅದರಲ್ಲಿಯೂ ಲೆನ್ಸ್ ಬಳಸುವವರು ವೈದ್ಯರ ಸಲಹೆ ಪಡೆಯದೇ ಈ ಮಾತ್ರೆಗಳನ್ನು ಬಳಸಬಾರದು.
ಯೋನಿ ಡಿಸ್ಚಾರ್ಜ್
ಯೋನಿ ಒಣಗಿದಂತೆ ಭಾಸವಾಗುತ್ತದೆ. ಯೋನಿಯ ಸ್ರಾವ ಹೆಚ್ಚು ಕಮ್ಮಿಯಾಗಿ, ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ನೋವುಂಟು ಮಾಡುತ್ತದೆ. ಇದು ಅನಾರೋಗ್ಯದ ಲಕ್ಷಣವಲ್ಲದಿದ್ದರೂ, ಕಿರಿಕಿರಿ ಅನುಭವಿಸುವುದು ಸಹಜ. ಕೆಲವೊಮ್ಮೆ ದುರ್ವಾಸನೆ ಹಾಗೂ ಬಣ್ಣ ಬದಲಾದ ಬಿಳಿ ಸ್ರಾವವೂ ಆಗಬಹುದು. ಇದು ಸೋಂಕಿನ ಲಕ್ಷಣವೂ ಆಗಹುದೆಂಬುವುದು ನೆನಪಿರಲಿ. ಇದಕ್ಕೆ ಚಿಕಿತ್ಸೆ ಅಗತ್ಯವಿದೆ.