ಕೃಷ್ಣ ಜನ್ಮಾಷ್ಟಮಿ ಎಲ್ಲೆಲ್ಲಿ ಹೇಗೆ ಆಚರಣೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Sep 2018, 4:54 PM IST
Shri Krishna Janmashtami celebration in various place
Highlights

ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಈ ವರ್ಷ ಸೋಮವಾರ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಎಲ್ಲೆಲ್ಲಿ ಹೇಗೆಲ್ಲಾ ಆಚರಿಸುತ್ತಾರೆ ಇಲ್ಲಿದೆ ಮಾಹಿತಿ. 

ಬೆಂಗಳೂರು (ಸೆ. 02): ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಈ ವರ್ಷ ಸೋಮವಾರ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಎಲ್ಲೆಲ್ಲಿ ಹೇಗೆ ಆಚರಿಸಲಾಗುತ್ತದೆ ನೋಡಿ.

ಮಥುರಾ (ಉತ್ತರ ಪ್ರದೇಶ) 

ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣ ಜನ್ಮಾಷ್ಟಮಿಯಂದು ಇಲ್ಲಿ ಕೃಷ್ಣನ ವಿಗ್ರಹವನ್ನು ವೈಭವೋಪೇತವಾಗಿ ಅಲಂಕರಿಸಲಾಗುತ್ತದೆ. ಹಲವೆಡೆ ಕೃಷ್ಣ, ಕೃಷ್ಣನ ಸಾಹಸಗಳನ್ನು ವರ್ಣಿಸುವ ಭಜನೆಗಳು ನಡೆಯುತ್ತವೆ. ಜೊತೆಗೆ ಮಥುರಾದಲ್ಲಿ ಭೋಗ್ ಎಂಬ ಆಚರಣೆ ನಡೆಯಲಿದೆ. ಶ್ರೀಕೃಷ್ಣನಿಗೆ 56 ರೀತಿಯ ಆಹಾರ ಪದಾರ್ಥಗಳನ್ನು ನೈವೇದ್ಯ ಇಡುವ ಪದ್ಧತಿಗೆ ‘ಛಪ್ಪನ್ ಭೋಗ್’ ಎಂದು ಕರೆಯಲಾಗುತ್ತದೆ.

ಮಥುರಾದಲ್ಲಿ ಮಧ್ಯರಾತ್ರಿಯಲ್ಲಿ ನಂದ ಉತ್ಸವ ನಡೆಯಲಿದ್ದು, ಭೋಗ್ ಅರ್ಪಣೆಯಲ್ಲಿ ಕೃಷ್ಣನಿಗೆ ಪ್ರಿಯವಾದ ಆಹಾರಗಳನ್ನು ನೈವೇದ್ಯ ಮಾಡಲಾಗುತ್ತದೆ. ಬಳಿಕ ಈ ನೈವೇದ್ಯವನ್ನು ಭಕ್ತರಿಗೆ ಅರ್ಪಿಸಲಾಗುತ್ತದೆ.

ಬೃಂದಾವನ (ಉತ್ತರ ಪ್ರದೇಶ)

ಶ್ರೀಕೃಷ್ಣ ತನ್ನ ಬಾಲ್ಯವನ್ನು ಕಳೆದ ದಿನವೆಂದು ಪ್ರಸಿದ್ಧಿ ಪಡೆದ ಬೃಂದಾವನ ಭಾರತದ ಪ್ರಮುಖ ಯಾತ್ರಾರ್ಥಿ ಸ್ಥಳಗಳಲ್ಲೊಂದು. ಕೃಷ್ಣ ಜನ್ಮಾಷ್ಟಮಿಯನ್ನು ಇಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿನ ಶ್ರೀಕೃಷ್ಣ ಬಲರಾಮ ದೇವಾಲಯ, ರಾಧಾ ರಮಣ ದೇವಾಲಯ, ಬಂಕೇ ಬಿಹಾರಿ ದೇವಸ್ಥಾನ, ಇಸ್ಕಾನ್ ಮುಂತಾದೆಡೆ ಶ್ರದ್ಧಾಭಕ್ತಿಯಿಂದ ಕೃಷ್ಣನನ್ನು ಸ್ಮರಿಸಿ ಪೂಜಿಸುತ್ತಾರೆ.

ಬೃಂದಾವನವನ್ನು ಈ ಸಮಯದಲ್ಲಿ ಶ್ರೀಕೃಷ್ಣನ ರಾಸಲೀಲೆಯ ಸ್ಥಳ ಎಂದೇ ಭಾವಿಸಲಾಗುತ್ತದೆ.

ದ್ವಾರಕಾ (ಗುಜರಾತ್)

ದ್ವಾರಕೆಯನ್ನು ಕೃಷ್ಣ ಸ್ಥಾಪಿಸಿದ ರಾಜ್ಯ ಎಂದೇ ಭಾವಿಸಲಾಗುತ್ತದೆ. ಜನ್ಮಾಷ್ಟಮಿಯಂದು ಪೂರ್ತಿ ನಗರಕ್ಕೇ ಹೊಸ ಕಳೆ ತುಂಬಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಭಜನೆ, ಕೀರ್ತನೆ, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಜನರು ಕೃಷ್ಣನನ್ನು ಆರಾಧಿಸುತ್ತಾರೆ.

ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಗುಜರಾತಿನ ಮಹಿಳೆಯರು ಮನೆ ಕೆಲಸಕ್ಕೆ ವಿದಾಯ ಹೇಳಿ ಕಾರ್ಡ್ ಆಡುತ್ತಾರೆ.

ಉಡುಪಿ (ಕರ್ನಾಟಕ)

ಕರ್ನಾಟಕದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತವೆ. ವಿಶೇಷವಾಗಿ 9 ರಂಧ್ರಗಳಿರುವ ನವಗ್ರಹ ಕಿಟಕಿಯ ಮೂಲಕ ಕೃಷ್ಣನ ದರ್ಶನ ಪಡೆಯುತ್ತಾರೆ. ಜೊತೆಗೆ ಹುಲಿ ಕುಣಿತ, ಮೊಸರು ಗಡಿಗೆ ಒಡೆವ ವಿಟ್ಲಪಿಂಡಿ, ಮತ್ತಿತರೆ ಕೃಷ್ಣ ಬದುಕಿನ ಚಿತ್ರಣ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ.

ಇಸ್ಕಾನ್ (ಬೆಂಗಳೂರು)

ಇಸ್ಕಾನ್ ದೇವಾಲಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ ಕೃಷ್ಣ ಜನ್ಮಾಷ್ಟಮಿ.ಈ ವೇಳೆ 108 ವಿಭಿನ್ನ ನೈವೇದ್ಯಗಳನ್ನಿಟ್ಟು ಕೃಷ್ಣನಿಗೆ ಅರ್ಪಿಸಿ ಪೂಜಿಸಲಾಗುತ್ತದೆ. ಅಲ್ಲದೆ ಕೃಷ್ಣನ ಮೂರ್ತಿಯನ್ನು ನೀರು, ಅರಿಶಿನ, ತುಳಸಿ ದಳಗಳು ಹಾಗೂ ಗುಲಾಬಿ ದಳಗಳಿಂದ ಶುದ್ಧಗೊಳಿಸಲಾಗುತ್ತದೆ.  ರಾಧಾ ಕೃಷ್ಣರ ಮೂರ್ತಿಯನ್ನು ತರಹೇವಾರಿ ಹೂವು ಹಣ್ಣುಗಳಿಂದ ಅಲಂಕರಿಸಿರುತ್ತಾರೆ.

ದಹಿ ಹಿಂಡಿ (ಮಹಾರಾಷ್ಟ್ರ)

ಮಹಾರಾಷ್ಟ್ರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎನ್ನುತ್ತಾರೆ. ‘ದಹಿ ಹಂಡಿ’ ಇಲ್ಲಿನ ಪ್ರಮುಖ ಆಚರಣೆ. ಕೃಷ್ಣ ಜನ್ಮಾಷ್ಟಮಿಯಂದು ಮಾನವ ಪಿರಮಿಡ್ ರಚಿಸಿ ಮೊಸರು, ನೀರು ಅಥವಾ ಹಾಲು ತುಂಬಿದ ಮಣ್ಣಿನ ಮಡಕೆಯನ್ನು ಒಡೆಯುವುದು ಅಲ್ಲಿನ ಸಂಪ್ರದಾಯ. ಇದಕ್ಕಾಗಿ ಒಂದು ವಾರ ಮೊದಲೇ ಸಿದ್ಧತೆ ನಡೆಸಲಾಗುತ್ತದೆ. ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. 

loader