ಲಾಟ್ವಿಯಾ ದೇಶದಲ್ಲಿ ಪುರುಷರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಕಾರಣ, ಮಹಿಳೆಯರು ಮನೆ ಕೆಲಸಗಳಿಗೆ 'ಒಂದು ಗಂಟೆಯ ಗಂಡ' ಎಂಬ ಸೇವೆಯ ಮೂಲಕ ಪುರುಷರನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಈ ಸೇವೆಯು ಡೇಟಿಂಗ್ ಅಥವಾ ಮದುವೆಗೆ ಸಂಬಂಧಿಸಿಲ್ಲ, ಬದಲಾಗಿ ಯಾವುದಕ್ಕೆ ಎನ್ನುವುದು ಈ ವರದಿಯಲ್ಲಿದೆ.
ಲಾಟ್ವಿಯಾ: ಪ್ರಕೃತಿ ಸಮದೂಗಿಸಿಕೊಂಡು ಹೋಗಲು ಗಂಡು ಮತ್ತು ಹೆಣ್ಣಿನ ಸಂಖ್ಯೆ ಸಮ ಪ್ರಮಾಣದಲ್ಲಿ ಇರಲೇಬೇಕು. ಇಲ್ಲದಿದ್ದರೆ ಎಲ್ಲವೂ ಅಯೋಮಯ ಆಗುವುದು ದಿಟ. ಭಾರತದಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದಕ್ಕೆ ಸಾಕಷ್ಟು ಕಾನೂನುಗಳು ಇದ್ದರೂ ಹೆಣ್ಣೆಂದರೆ ತಾತ್ಸಾರದಿಂದ ನೋಡುವವರ ಸಂಖ್ಯೆ ಇಂದಿಗೂ ನಿಂತಿಲ್ಲ. ಆದರೆ ಹೆಣ್ಣೇ ಇಲ್ಲವೆಂದರೆ ಆ ಸಮಾಜವನ್ನು ಊಹಿಸಿಕೊಳ್ಳಲೂ ಹೇಗೆ ಸಾಧ್ಯವಿಲ್ಲವೋ ಅದೇ ರೀತಿ, ಗಂಡಸರು ಕೂಡ ಅಷ್ಟೇ ಸಮಾನವಾಗಿ ಬೇಕು. ಆದರೆ ಇಲ್ಲೊಂದು ದೇಶದಲ್ಲಿ ಗಂಡಸರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇದರಿಂದ ಹೆಣ್ಣುಮಕ್ಕಳನ್ನು ಗಂಟೆ ಲೆಕ್ಕದಲ್ಲಿ ಪುರುಷರನ್ನು ಬಾಡಿಗೆಗೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಅಂದಹಾಗೆ ಇಂಥ ದುಃಸ್ಥಿತಿ ಬಂದಿರುವುದು ಯುರೋಪ್ ದೇಶದ ಲಾಟ್ವಿಯಾ ದೇಶದಲ್ಲಿ. ಇಲ್ಲಿ ಲಿಂಗ ಅಸಮತೋಲನ ತೀವ್ರವಾಗಿದ್ದು, ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಂಖ್ಯೆ ತುಂಬಾ ಕಡಿಮೆ ಇದೆ. ಹುಟ್ಟುವವರೆಲ್ಲಾ ಹೆಣ್ಣಾಗಿಯೇ ಹುಟ್ಟುತ್ತಿರುವುದು ಹೆಚ್ಚಾಗಿದ್ದರಿಂದ ಪುರುಷರ ಸಂಖ್ಯೆ ಸಿಕ್ಕಾಪಟ್ಟೆ ಕಡಿಮೆ ಆಗಿರುವ ಕಾರಣದಿಂದಾಗಿ ಇಲ್ಲಿ ಪುರುಷರನ್ನು ಮಹಿಳೆಯರು ದುಡ್ಡು ನೀಡಿ ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ಪಡೆದುಕೊಳ್ಳುತ್ತಿದ್ದಾರಂತೆ. ಈ ದೇಶದಲ್ಲಿ ಪುರುಷರಿಗಿಂತ ಶೇ. 15.5 ರಷ್ಟು ಹೆಚ್ಚು ಮಹಿಳೆಯರು ಇದ್ದಾರೆ ಇದು ಯುರೋಪಿಯನ್ ಒಕ್ಕೂಟದಲ್ಲಿನ ಸರಾಸರಿ ಅಂತರಕ್ಕಿಂತ ಮೂರು ಪಟ್ಟು ಹೆಚ್ಚು ಎನ್ನಲಾಗಿದೆ. ಆದ್ದರಿಂದ 'ಒಂದು ಗಂಟೆಯ ಗಂಡ' ಎನ್ನುವ ಹೆಸರಿನಲ್ಲಿ ಗಂಡಸರನ್ನು ಬಾಡಿಗೆಗೆ ಪಡೆಯುತ್ತಾರೆ.
'ಒಂದು ಗಂಟೆಯ ಗಂಡ' ಎಂದರೇನು?
ಗಂಡ-ಹೆಂಡತಿ ಎಂದ ಮಾತ್ರಕ್ಕೆ ಬಾಡಿಗೆಗೆ ಪಡೆದುಕೊಳ್ಳುವ ಹಿಂದಿನ ಉದ್ದೇಶದ ಬಗ್ಗೆ ಏನೇನೋ ಅಪಾರ್ಥ ಕಲ್ಪಿಸಿಕೊಳ್ಳುವ ಮೊದಲು, ಹೀಗೆ ಬಾಡಿಗೆಗೆ ಪಡೆಯುವುದು ಏಕೆ ಎನ್ನೋದನ್ನು ಒಮ್ಮೆ ಗಮನಿಸಿ. ಕೆಲವು ಗಂಟೆಗಳ ಕಾಲ ನೇಮಕಗೊಳ್ಳಬಹುದಾದ ಪತಿಯನ್ನು ಸೂಚಿಸುವುದು ಹೌದಾದರೂ ಸತ್ಯವು ಸ್ವಲ್ಪ ವಿಭಿನ್ನವಾಗಿದೆ. ಲಾಟ್ವಿಯಾದಲ್ಲಿ ಗಂಟೆಯ ಲೆಕ್ಕದಲ್ಲಿ ನೇಮಕಗೊಂಡ ಈ ಗಂಡಂದಿರು ಡೇಟಿಂಗ್ ಅಥವಾ ಮದುವೆಗೆ ಸಂಬಂಧಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ; ಅವರು ಅಲ್ಲಿ ನೀಡಲಾಗುವ ಸೇವೆಯ ಭಾಗವಾಗಿದ್ದಾರೆ. ವಾಸ್ತವವಾಗಿ, ಈ ದೇಶದ ಮಹಿಳೆಯರು ಮನೆಯ ದುರಸ್ತಿ, ವಿದ್ಯುತ್ ಕೆಲಸ ಮತ್ತು ಕೊಳಾಯಿ ದುರಸ್ತಿಗಳಂತಹ ಸಣ್ಣ ಕೆಲಸಗಳನ್ನು ಪೂರ್ಣಗೊಳಿಸಲು "ಒಂದು ಗಂಟೆಯ ಗಂಡ" ಸೇವೆಯನ್ನು ಬಳಸುತ್ತಾರೆ. ಸರಳವಾಗಿ ಹೇಳುವುದಾದರೆ, ಇದು ಸಂಪೂರ್ಣವಾಗಿ ವೃತ್ತಿಪರ ಮತ್ತು ವಾಣಿಜ್ಯ ಸೇವೆಯಾಗಿದೆ.
ಅಂದಹಾಗೆ, ಲಾಟ್ವಿಯಾ ಯುರೋಪ್ನ ಲಿಥುವೇನಿಯಾ ಮತ್ತು ಎಸ್ಟೋನಿಯಾ ನಡುವಿನ ಬಾಲ್ಟಿಕ್ ಸಮುದ್ರದಲ್ಲಿರುವ ಒಂದು ಪುಟ್ಟ ದೇಶ. ಇದರ ಭೂದೃಶ್ಯವು ವಿಶಾಲವಾದ ಕಡಲತೀರಗಳು ಮತ್ತು ದಟ್ಟವಾದ, ವಿಸ್ತಾರವಾದ ಕಾಡುಗಳಿಂದ ಗುರುತಿಸಲ್ಪಟ್ಟಿದೆ. ಲಾಟ್ವಿಯಾದ ರಾಜಧಾನಿ ರಿಗಾ. ಈ ದೇಶದಲ್ಲಿ ಈಗ ಲಿಂಗ ಅಸಮಾನತೆ ತೀವ್ರವಾಗಿದ್ದು, ಇದರಿಂದಾಗಿ ಅನೇಕ ಮಹಿಳೆಯರು ಮನೆಕೆಲಸಗಳಿಗೆ ಸಹಾಯ ಮಾಡಲು ತಾತ್ಕಾಲಿಕವಾಗಿ ಗಂಡಂದಿರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಲಾಟ್ವಿಯಾದಲ್ಲಿ ಪುರುಷ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಕಳಪೆ ಜೀವನಶೈಲಿಯಿಂದಾಗಿ. ಧೂಮಪಾನ, ಮದ್ಯಪಾನ, ಆರೋಗ್ಯ ರಕ್ಷಣೆಯ ಕೊರತೆ ಮತ್ತು ಸಕ್ರಿಯ ಜೀವನದ ಕೊರತೆಯಂತಹ ಅಭ್ಯಾಸಗಳನ್ನು ಕೊಡುಗೆ ನೀಡುವ ಅಂಶಗಳಾಗಿ ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ, ಈ ದೇಶದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರ ಡೇಟಾವನ್ನು ನೋಡಿದಾಗ, ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಮಹಿಳೆಯರು ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ದೈನಂದಿನ ಕೆಲಸಗಳಿಗೆ ಪುರುಷರ ಕೊರತೆಯನ್ನು ಅನುಭವಿಸುತ್ತಾರೆ ಮತ್ತು ಅವರು ಹಸ್ಬೆಂಡ್ ಫಾರ್ ಎನ್ಆರ್ ನಂತಹ ಸೇವೆಗಳ ಸಹಾಯವನ್ನು ಪಡೆಯುತ್ತಾರೆ.
ದಿ ಪೋಸ್ಟ್ ವರದಿಯ ಪ್ರಕಾರ, ಕೆಲಸದ ಸ್ಥಳಗಳು ಮತ್ತು ದೈನಂದಿನ ಜೀವನದಲ್ಲಿ ಇಲ್ಲಿ ಪುರುಷರ ಕೊರತೆ ಎದ್ದು ಕಾಣುತ್ತಿದೆ. ಉತ್ಸವ ಕಾರ್ಯಗಳಲ್ಲಿ ಕೆಲಸ ಮಾಡುವ ಡೇನಿಯಾ ಎಂಬುವವರು ಈ ಬಗ್ಗೆ ಮಾತನಾಡಿ ತನ್ನ ಬಹುತೇಕ ಎಲ್ಲಾ ಸಹೋದ್ಯೋಗಿಗಳು ಮಹಿಳೆಯರೇ ಎಂದು ಹೇಳಿದ್ದಾರೆ.. ಅವರೊಂದಿಗೆ ಕೆಲಸ ಮಾಡುವುದನ್ನು ತಾನು ಆನಂದಿಸುತ್ತಿದ್ದರೂ, ಉತ್ತಮ ಲಿಂಗ ಸಮತೋಲನವು ಸಾಮಾಜಿಕ ಸಂವಹನಗಳನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಎಂದು ಅವರು ಹೇಳಿದರು. ಹಾಗೂ ಇಲ್ಲಿನ ಸೀಮಿತ ಆಯ್ಕೆಗಳ ಕಾರಣದಿಂದಾಗಿ ಅನೇಕ ಮಹಿಳೆಯರು ಸಂಗಾತಿಯನ್ನು ಹುಡುಕಲು ವಿದೇಶಗಳಿಗೆ ಪ್ರಯಾಣಿಸುತ್ತಾರೆ ಎಂದು ಅವರ ಸ್ನೇಹಿತೆ ಜೇನ್ ಹೇಳಿದ್ದಾರೆ.












