Asianet Suvarna News Asianet Suvarna News

ಆಟೋ ಚಾಲಕನ ಪತ್ನಿ ಈಗ ಶಿವಮೊಗ್ಗ ಮೇಯರ್

ಎಲ್ಲರಂತೆ ಬದುಕುತ್ತಿದ್ದ ಮಧ್ಯಮ ವರ್ಗದ ಮಹಿಳೆಯೊಬ್ಬಳು ನಗರಕ್ಕೆ ಮೇಯರ್ ಆದ ಸಾಧನೆಯ ಕತೆ ಇದು .ಶಿವಮೊಗ್ಗ ಮಹಾನಗರಪಾಲಿಕೆಯ ಮೇಯರ್ ಲತಾ ಗಣೇಶ್ ಅವರ ಸ್ಫೂರ್ತಿ ಕಥೆ

Shivamogga mayor Latha Ganesh wife of auto driver lifestyle
Author
Bengaluru, First Published Dec 10, 2018, 10:59 AM IST

ಶಿವಮೊಗ್ಗದ ಗಾಡಿಕೊಪ್ಪದ ಚಿಕ್ಕ ಬೀದಿಯೊಂದರಲ್ಲಿನ ವಠಾರದಲ್ಲಿನ ಪುಟ್ಟಮನೆ. ಗಂಡ ಆಟೋ ಡ್ರೈವರ್. ಮೂರು ಮಕ್ಕಳು. ಕಷ್ಟಗಳ ನಡುವೆ ಸುಖ ಸಂಸಾರವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರು ನಿಭಾಯಿಸಿದ್ದರು. ಪುಟ್ಟದಾದ ಸ್ವಂತ ಮನೆಯೊಂದನ್ನು ಹೊಂದಬೇಕು ಎಂಬುದರ ಹೊರತಾಗಿ ಭಾರೀ ಕನಸುಗಳೇನೂ ಇರಲಿಲ್ಲ. ಈ ನಡುವೆ ವಾರ್ಡ್‌ನ ಬಿಜೆಪಿಯ ಕಾರ್ಯಕರ್ತರಾಗಿ ದುಡಿಯಲಾರಂಭಿಸಿದ್ದರು.

ಆ ವಾರ್ಡ್‌ನ ನಾಯಕರಾಗಿದ್ದ ಕುಮಾರ್ ಜೊತೆಗಿನ ತಂಡದಲ್ಲಿ ಅವರೂ ಸದಸ್ಯರಾಗಿದ್ದರು. ಮಗ ಹೈಸ್ಕೂಲಿಗೆ ವಿದ್ಯಾಭ್ಯಾಸ ನಿಲ್ಲಿಸಿಬಿಟ್ಟಿದ್ದ. ಕೊನೆಗೆ ಆತನಿಗೆ ಆಟೋ ಕೊಡಿಸಿ ದೂರದ ಹುಬ್ಬಳ್ಳಿಯಲ್ಲಿ ದುಡಿಯಲು ಬಿಟ್ಟಿದ್ದರು. ದೊಡ್ಡ ಮಗಳಿಗೆ ಮದುವೆಯಾಗಿ ಸುಖ ಸಂಸಾರವಿತ್ತು. ಇನ್ನಿಬ್ಬರು ಪುತ್ರಿಯರು ಪದವಿ ಓದುತ್ತಾ ತಮ್ಮ ಅಮ್ಮನ ಕನಸು ನನಸು ಮಾಡುವತ್ತ ಸಾಗಿದ್ದರು. ಹೀಗೆ ಸಾಗಿತ್ತು ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಲತಾ ಅವರ ಬದುಕು.

ಊರಲ್ಲಿನ ಕೊರತೆ ಆಲಿಸಿದಾಕೆ

ಲತಾ ಅವರ ನಿತ್ಯ ಜೀವನದ ಜಂಜಾಟಗಳು ಸಾಕಷ್ಟು ಹಣ್ಣು ಮಾಡಿದ್ದವು. ಗಾಡಿಕೊಪ್ಪ ಇತ್ತೀಚೆಗೆ ಶಿವಮೊಗ್ಗ ನಗರಕ್ಕೆ ಸೇರ್ಪಡೆಯಾದ ಹೊರವಲಯದ ಒಂದು ಹಳ್ಳಿ. ಹೀಗಾಗಿ ಮೂಲಸೌಲಭ್ಯಗಳಿಂದ ಸಾಕಷ್ಟು ಕೊರತೆ ಎದ್ದು ಕಾಣುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಯಾರಾದರೂ ಈಡೇರಿಸಿಯಾರೇ ಎಂದು ಸಾಕಷ್ಟು ಬಾರಿ ಲತಾ ಅಲವತ್ತುಕೊಂಡಿದ್ದರು. ಪಕ್ಕದ ಮನೆಯವರು, ನೆರೆ ಹೊರೆಯವರ ಜೊತೆಯ ಮಾತುಕತೆಯಲ್ಲಿ ಇವೆಲ್ಲ ನಿತ್ಯವಿಷಯವಾಗಿದ್ದವು.

ಸಂದರ್ಭ ಹೀಗಿರುವಾಗ ಇಂತಹದ್ದೊಂದು ತಿರುವು ಅವರ ಜೀವನದಲ್ಲಿ ಬರುತ್ತದೆ ಎಂದು ಭಾವಿಸಿಯೇ ಇರಲಿಲ್ಲ. ಶಿವಮೊಗ್ಗ ನಗರಪಾಲಿಕೆ ಚುನಾವಣೆ ಘೋಷಣೆಯಾಗಿ ಬಿಟ್ಟಿತು. ಮೀಸಲಿನ ಪ್ರಕಾರ ಗಾಡಿಕೊಪ್ಪ ವಾರ್ಡ್‌ಗೆ ಪರಿಶಿಷ್ಟ ಜಾತಿ ಮಹಿಳಾ ವರ್ಗ ನಿಗದಿಯಾಗಿತ್ತು. ಯಾರನ್ನು ನಿಲ್ಲಿಸುವುದೆಂದು ಆ ಪಕ್ಷದ ನಾಯಕರು ಚಿಂತಿಸತೊಡಗಿದ್ದರು. ಆ ವಾಡ್ನರ್ಲ್ಲಿ ಸಕ್ರಿಯ ಚಟುವಟಿಕೆಯಲ್ಲಿ ಇರುವವರನ್ನು ಹುಡುಕುತ್ತಾ ಹೋದರೆ ನಿಗದಿಯಾದ ಮೀಸಲು ವರ್ಗದಲ್ಲಿ ಯಾರೂ ಗೋಚರಿಸಲಿಲ್ಲ. ಕೊನೆಗೆ ನಾಯಕರ ತೋರು ಬೆರಳು ನಿಂತಿದ್ದು ಲತಾ ಅವರ ಮನೆಯ ಮುಂದೆ. ಲತಾ ಅಕ್ಷರಶಃ ಕಂಗಾಲಾಗಿದ್ದರು. ಛೇ, ಇವೆಲ್ಲ ಸಾಧ್ಯವೇ? ನಾನು ಸ್ಪರ್ಧಿಸುವುದು, ಚುನಾವಣೆಯಲ್ಲಿ ಗೆಲ್ಲುವುದು ಇವೆಲ್ಲ ಕನಸಿನ ಮಾತು. ಇವೆಲ್ಲ ನಮಗ್ಯಾಕೆ ಎಂದರು. ಬಹಳ ಒತ್ತಾಯದ ನಂತರ ಒಪ್ಪಿಕೊಂಡರು.

ಮೇಯರ್ ಸ್ಥಾನವನ್ನು ಖಂಡಿತವಾಗಿಯೂ ನಿಭಾಯಿಸುತ್ತೇನೆ. ಆರಂಭದಲ್ಲಿ ಇದ್ದ ಅಳುಕು ಈಗಿಲ್ಲ. ಗೊತ್ತಿಲ್ಲದ್ದನ್ನು ಕೇಳುತ್ತೇನೆ. ಸತ್ಯದ ಮಾರ್ಗದಲ್ಲಿ ನಡೆಯುತ್ತೇನೆ. - ಲತಾ ಗಣೇಶ್

 

ಪತಿಗೆ ಭಯ, ನೆರೆಯವರ ಪ್ರೋತ್ಸಾಹ

ಇವರ ಪತಿ ಗಣೇಶ್‌ಗೆ ಇವೆಲ್ಲ ಸರಿ ಕಾಣಲಿಲ್ಲ. ನನ್ನ ಆಟೋ ಮಾರಿಸುವ ಸಂಚು ಮಾಡುತಿ ಎಂದು ನಯವಾಗಿ ಪತ್ನಿಯನ್ನು ಗದರಿಸಿ ಕೇಳಿದ್ದರು. ಕೊನೆಗೆ ಎಲ್ಲರ ಮಾತಿಗೆ ಇವರೂ ಕಟ್ಟು ಬಿದ್ದರು. ಚುನಾವಣೆ ಕನಸಿನಂತೆ ನಡೆದು ಹೋಯಿತು. ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕವಷ್ಟೇ ಅವರ ಹೆಸರು ಲತಾ ಗಣೇಶ್ ಎಂದು ಪರಿಚಿತವಾಗಿದ್ದು ಕೂಡ. ನಿತ್ಯ ಪ್ರಚಾರದಲ್ಲಿ ಮನೆ ಮಂದಿಯೆಲ್ಲಾ ಪಾಲ್ಗೊಂಡರು. ಅಕ್ಕಪಕ್ಕದವರಿಗೂ ಆಶ್ಚರ್ಯ. ಇವೆಲ್ಲ ಹೇಗಾಯಿತು ಎಂಬ ಪ್ರಶ್ನೆ. ಆದರೆ ಖುಷಿಯಲ್ಲಿಯೇ ಜೊತೆಯಾಗಿ ತಿರುಗಿದರು, ಕರಪತ್ರ ಹಂಚಿದರು. ಇದುವರೆಗೆ ಯಾರ‌್ಯಾರ ಪರವಾಗಿಯೋ ಹಂಚುತ್ತಿದ್ದ ಕರಪತ್ರದಲ್ಲಿ ತಮ್ಮ ಪಕ್ಕದ ಮನೆಯ ಮಹಿಳೆ ಲತಾ ಹೆಸರು ಇರುವುದು ಕಂಡು ಖುಷಿಪಟ್ಟರು

ಗೆಲುವಿನ ಹೂ ಮಾಲೆ

ಕೊನೆಗೂ ಚುನಾವಣೆಯಲ್ಲಿ ಸ್ಪರ್ಧಿಸಿದರು. ಫಲಿತಾಂಶವೂ ಬಂದಿತು.ಗೆಲುವು ಲತಾ ಗಣೇಶ ಅವರದ್ದಾಗಿತ್ತು. ಅದೇ ಸಮಯದಲ್ಲಿ ರಾಜ್ಯ ಸರ್ಕಾರ ಮೇಯರ್ ಮತ್ತು ಉಪಮೇಯರ್ ಮೀಸಲು ಪ್ರಕಟಿಸಿತು. ಶಿವಮೊಗ್ಗ ನಗರಪಾಲಿಕೆಯ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲು ನಿಗದಿಪಡಿಸಿತು. ಯಾರೋ ಓಡಿ ಬಂದು ಹೇಳಿದರು, ‘ಅಕ್ಕಾ, ನೀನೇ ಮೇಯರ್ ಅಂತೆ’. ಕೆಲವೇ ಕ್ಷಣಗಳಲ್ಲಿ ಫೋನ್ ಬಂತು. ಪಕ್ಷದ ನಾಯಕರು, ‘ಶಿವಮೊಗ್ಗ ನಗರಪಾಲಿಕೆಗೆ ನೀವೇ ಮೇಯರ್’ ಎಂದರು. ಪರಿಶಿಷ್ಟ ಜಾತಿ ಮಹಿಳೆ ವರ್ಗದಲ್ಲಿ ಗೆದ್ದವರು ಲತಾ ಗಣೇಶ್ ಮಾತ್ರ.

ಪತ್ನಿಯ ಸಾಧನೆಗೆ ಪತಿಯ ಸಾಥ್

ದಿನ ಕಳೆಯಿತು. ಯಾಕೋ ಸರ್ಕಾರ ಮೇಯರ್ ಚುನಾವಣೆ ಘೋಷಿಸಲಿಲ್ಲ. ಆದರೆ ಕುಮಾರಣ್ಣ ಸುಮ್ಮನೆ ಕೂರಲಿಲ್ಲ. ಇರುವ ಸಮಯದಲ್ಲಿ ಜನರ ನಡುವೆ ಹೇಗಿರಬೇಕು, ಮೇಯರ್ ಹುದ್ದೆ ಎಂದರೇನು ಎಂದೆಲ್ಲ ತರಬೇತಿ ಕೊಡತೊಡಗಿದರು. ನಿತ್ಯ ಒಬ್ಬಿಬ್ಬರನ್ನು ಭೇಟಿ ಮಾಡತೊಡಗಿದರು. ಚರ್ಚೆ ನಡೆಸಿದರು. ತಮಗೆ ಹೀಗೆ ಮಾತಾಡಲು ಬರುತ್ತದೆಯೇ ಎಂದು ಲತಾ ಗಣೇಶ್ ಅವರೇ ಆಶ್ಚರ್ಯಪಡುವಷ್ಟು ನಿಧಾನವಾಗಿ ಬದಲಾಗುತ್ತಿದ್ದರು. ತನ್ನ ಪತ್ನಿಯ ಸಾಧನೆ, ಬೆಳವಣಿಗೆ ಕಂಡು ಪತಿ ಗಣೇಶ್ ಜೊತೆಯಾಗಿ ನಿಂತರು. 

ನನ್ನ ಹೆಂಡತಿಯ ಈ ಸಾಧನೆ ಬಗ್ಗೆ ಎಂದಿಗೂ ನಿರೀಕ್ಷೆ ಇರಲಿಲ್ಲ. ಯಾಕೆ ಬಂತೋ ಇದೆಲ್ಲ ಅನಿಸಿದ್ದೂ ಉಂಟು. ಆದರೆ ಈಗ ಅಂತಹ ಭಾವನೆ ಏನಿಲ್ಲ. ಮೂರು ತಿಂಗಳ ಅವಧಿ ನಮಗೆ ದೊಡ್ಡ ಅವಕಾಶ ಕೊಟ್ಟಿತು. ಈ ಅವಧಿಯಲ್ಲಿ ಅವರಿಗೆ ಸಾಕಷ್ಟು ತರಬೇತಿ ನೀಡಿದ್ದೇವೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. - ಗಣೇಶ್ ಲತಾ ಪತಿ ಆಟೋಡ್ರೈವರ್ 

ಮೇಯರ್ ಆಗಿದ್ದು ಹೀಗೆ ?  

ಮೇಯರ್ ಆದ ಮೇಲೆ ಅವರನ್ನು ಕರೆದುಕೊಂಡು ಹೋಗಲು ಅಲ್ಲಿ ಪತಿಯ ಆಟೋ ಇರಲಿಲ್ಲ. ಬದಲಾಗಿ ನಗರಸಭೆಯ ಕಾರು ಸಿದ್ಧವಾಗಿತ್ತು. ಮೊದಲ ಬಾರಿಗೆ ತಮ್ಮ ಹಕ್ಕಿನ ಕಾರಿನಲ್ಲಿ ಕೂತು ಮೇಯರ್ ಲತಾ ಗಣೇಶ್ ತಮ್ಮ ಮನೆಯತ್ತ ಹೊರಟರು. ಗಾಡಿಕೊಪ್ಪದ ಹತ್ತಿರ ಬಂದಾಗ ಇನ್ನೊಮ್ಮೆ ತಮ್ಮ ಕೈ ಚಿವುಟಿ ನೋಡಿಕೊಂಡರು. ಮನಸ್ಸಿನಲ್ಲಿ ಏನೇನೋ ಯೋಚನೆಗಳು, ಆಲೋಚನೆಗಳು. ಈ ಊರಿಗೆ ಏನೆಲ್ಲ ಮಾಡಬಹುದೆಂಬ ಕನಸುಗಳ ಚಿತ್ತಾರಗಳು.

 

 

Follow Us:
Download App:
  • android
  • ios