‘ಅತೀತ’ ನಾಟಕ ಎಪ್ಪತ್ತೈದನೇ ಪ್ರದರ್ಶನ ಮುಗಿಸಿ ಎಪ್ಪತ್ತಾರಕ್ಕೆ ಕಾಲಿಟ್ಟಿದೆ. ಈ ಭರ್ಜರಿ ಗೆಲುವಿಗೆ ಕಾರಣವೇನು?
ಅದು ಹೇಗಾಯ್ತೋ ನನಗೂ ಗೊತ್ತಿಲ್ಲ. ನಾನು ವೃತ್ತಿಯಿಂದ ಆದಾಯ ತೆರಿಗೆ ಸಲಹೆಗಾರ. ನಾಟಕ ನನ್ನ ಪ್ರವೃತ್ತಿ. ಆದರೂ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಅದೇ ಖುಷಿ. ಐವರು ರಂಗದ ಮೇಲೆ ಹಾಗೂ ಮೂವರು ಟೆಕ್ನಿಷಿಯನ್ಸ್ ಇರುವ ನಾಟಕವಿದು. ಇಡೀ ತಂಡವು ಇದಕ್ಕೆ ಸಹಕರಿಸಿದೆ. ಇದರಿಂದ ಯಾರಿಗೂ ಹೆಚ್ಚೇನು ಲಾಭವಿಲ್ಲ. ಕರೆದಲ್ಲಿ ಹೋಗಿ ಶೋ ಕೊಟ್ಟು ಬರೋದಷ್ಟೇ.

‘ಅತೀತ’ ನಾಟಕವನ್ನು ಯೂಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿದ್ದೀರಿ. ಅದರಿಂದ ನಾಟಕ ಪ್ರದರ್ಶನಕ್ಕೆ ಧಕ್ಕೆ ಆಯ್ತಾ? ನೋಡುಗರ ಸಂಖ್ಯೆ ಕಡಿಮೆ ಆಯ್ತಾ?
ಖಂಡಿತಾ ಇಲ್ಲ. ಇನ್ನೂ ಹೆಚ್ಚೆಚ್ಚು ರಶ್ ಆಗ್ತಿದೆ. ಆನ್ ಲೈನ್‌ನಲ್ಲಿ ನೋಡಿದವರೂ ಮತ್ತೆ ಬಂದು ನಾಟಕ ನೋಡ್ತಿದ್ದಾರೆ. ರಂಗದ ಮೇಲೆ ಅದರ ಅಳವಡಿಕೆ ಹೇಗಿರುತ್ತದೆ ಅನ್ನೋ ಕುತೂಹಲಕ್ಕಾಗಿ ಬರ‌್ತಿದ್ದಾರೆ. ಯೂಟ್ಯೂಬ್‌ನಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಪಾಂಡವಪುರದ ಛತ್ರದಲ್ಲಿ ಯೂಟ್ಯೂಬ್‌ನ  ವಿಡಿಯೋವನ್ನು ದೊಡ್ಡ ಸ್ಕ್ರೀನ್ ಮೂಲಕ ಪ್ರೊಜೆಕ್ಟ್ ಮಾಡಿ ಎಪ್ಪತ್ತಕ್ಕೂ ಹೆಚ್ಚು ಜನ ನೋಡಿದ್ದಾರಂತೆ. ಆಳ್ವಾಸ್ ಕಾಲೇಜಿನ ಜರ್ನಲಿಸಮ್ ಸ್ಟೂಡೆಂಟ್‌ಗಳಿಗೆ ಕ್ಲಾಸ್ ರೂಮ್‌ನಲ್ಲಿ ಶೋ ಅರೇಂಜ್ ಮಾಡಿದ್ದರಂತೆ. ಇತ್ತೀಚೆಗೆ ‘ಗತಿ’ ನಾಟಕವನ್ನೂ ಯೂಟ್ಯೂಬ್‌ನಲ್ಲಿ ಹಾಕಿದ್ದೀನಿ. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

‘ನಿಮಿತ್ತ’ ನಾಟಕ ನಿಂತಿದ್ದು ಯಾಕೆ?
‘ನಿಮಿತ್ತ’ ನನ್ನ ಮೊದಲ ನಾಟಕ. ಅದರಲ್ಲಿ ನಟಿಸಿದ್ದವರಲ್ಲಿ ಹೆಚ್ಚಿನವರು ಧಾರಾವಾಹಿ, ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿರ‌್ತಾರೆ. ಹಾಗಾಗಿ ಅದು ೧೮ ಪ್ರದರ್ಶನಗಳಾಗಿ  ನಿಂತಿದೆ. ಆದರೆ ಅದರ ನಂತರದ ನಾಟಕ ‘ಗತಿ’ಯಲ್ಲಿ ನಾನೂ ಮತ್ತು ದೀಪಾ ಇಬ್ಬರೇ ನಟಿಸಿದ್ದೇವೆ. ಇದು ೪೫ ಪ್ರದರ್ಶನಗಳನ್ನು ಕಂಡಿವೆ.

ಮೂರನೇ ಪುಸ್ತಕ ‘ದಹನ’ದೊಳಗೆ ಏನಿದೆ?
‘ನಂಗೇಲಿ’, ‘ಒಂದೆಲಗ’ ಹಾಗೂ ‘ದಹನ’ ಮೂರು ನೀಳ್ಗತೆಗಳನ್ನು ಹೊಂದಿದ ಕಥಾ ಸಂಕಲನ. ಮೊದಲನೆಯದು ಕೇರಳದಲ್ಲಿ ಐತಿಹಾಸಿಕ ಹಿನ್ನೆಲೆಯ ಕತೆಯನ್ನು ಒಳಗೊಂಡಿದೆ. ಎರಡನೆಯದು ಈಗಿನ ಸಮಾಜದ ಸಿಂಗಲ್ ಪೇರೆಂಟ್ ಸಂಸ್ಕೃತಿಯನ್ನೂ ಲಿವ್ ಇನ್ ಟುಗೆದರ್‌ನಲ್ಲಿ ಫಲಿತವಾಗುವ ‘ಜೀವ’ದ ಮುಂದಿನ ಸ್ಥಿತಿಗತಿಗಳನ್ನು ಹೊಂದಿದೆ. ಮೂರನೆಯದು ‘ದಹನ’. ಸಿದ್ಧರಾದರೆ ಸಾಲದು ಸಿದ್ದರಾಗಬೇಕು ಎಂಬುದರ ಸುತ್ತ ತಿರುಗುತ್ತದೆ. ನನ್ನ ಪುಸ್ತಕದ ಜತೆಗೆ ಅದೇ ವೇದಿಕೆಯಲ್ಲಿ ಕೃಷಿಕ ಮಹಿಳೆ ಸರಸ್ವತಿ ಗಂಗೊಳ್ಳಿ ಅವರ ‘ಕನಸು ಕನ್ನಡಿ’ ಕವಿತೆಗಳ ಪುಸ್ತಕವೂ ಬಿಡುಗಡೆ ಕಾಣುತ್ತಿದೆ.

ನಾಟಕಕಾರರಾದ ನೀವು ಕತೆಯನ್ನು ಬರೆಯಲು ಹೊರಟಿದ್ದೇಕೆ?
ನಾನು ನಾಟಕಕಾರನಾಗಿಯೇ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು. ನಾನು ಬರೆದ ಮೊದಲೆರಡು ನಾಟಕಗಳಾದ ‘ನಿಮಿತ್ತ’ ಹಾಗೂ ‘ಗತಿ’ಯನ್ನು ಪುಸ್ತಕ ರೂಪಕ್ಕೆ ತಂದಿದ್ದೆ. ಅದನ್ನು  ಬಳ್ಳಾರಿಯ ಸರಳಾದೇವಿ ಸ್ವಾಯುಕ್ತ ವಿದ್ಯಾಸಂಸ್ಥೆಯವರು ಪದವಿ ವಿದ್ಯಾರ್ಥಿಗಳಿಗೆ ೨ನೇ ಸೆಮಿಸ್ಟರ್‌ಗೆ ಕನ್ನಡದ ಪಠ್ಯವನ್ನಾಗಿಸಿದ್ದಾರೆ. ಒಂದಕ್ಕೆ ನಿಲ್ಲದೇ ಆನಂತರ ‘ನಾವಲ್ಲ’ ಕಥಾ ಸಂಕಲನ ಬರೆದೆ. ಅದಕ್ಕೆ ‘ಮಾಸ್ತಿ ಪುರಸ್ಕಾರ’ ಸಿಕ್ಕಿತು. ಈಗ ‘ದಹನ’. ಆದರೆ ನಾನು ನನ್ನ ಯಾವ ಸಾಹಿತ್ಯವನ್ನು  ಯಾವ ತತ್ವ-ವಾದಕ್ಕೂ ಸೀಮಿತಗೊಳಿಸಿಲ್ಲ.

ಇಷ್ಟೊಂದು ಪ್ರದರ್ಶನಗಳನ್ನು ಕಂಡಂತಹ ‘ಅತೀತ’ವನ್ನೂ ಸಹ ಪುಸ್ತಕ ರೂಪದಲ್ಲಿ ತರಲಿದ್ದೀರಾ?
ನಾನೀಗ ಇನ್ನೊಂದು ನಾಟಕವನ್ನೂ ಬರೆಯುತ್ತಿದ್ದೇನೆ.  ಅದು ಮುಗಿದ ನಂತರ ಅದರೊಟ್ಟಿಗೆ ಈ ‘ಅತೀತ’ವನ್ನು ಸೇರಿಸಿ ಪುಸ್ತಕವಾಗಿಸಲಿದ್ದೇನೆ. ‘ನಾವಲ್ಲ’ ಕೃತಿಯು ಈಗ ಆರನೇ ಮುದ್ರಣ ಕಂಡಿದೆ. ಓದುಗರು ಜಾಲ ತಾಣದ ಮೂಲಕ ನನಗೆ ಅವರ ವಿಳಾಸ ಕಳಿಸುತ್ತಾರೆ. ಪೇಟಿಯಮ್ ಮೂಲಕ ಹಣ ಸಂದಾಯವಾಗುತ್ತೆ. ಪುಸ್ತಕವು ಪೋಸ್ಟ್‌ನಲ್ಲಿ ಓದುಗರಿಗೆ ಮುಟ್ಟುತ್ತದೆ. ಕೊಳ್ಳಲು ಶಕ್ತರಲ್ಲದ ಆಸಕ್ತ ಓದುಗರು ಪತ್ರ ಬರೆದು ವಿಳಾಸ ಕಳಿಸುತ್ತಾರೆ. ಅವರಿಗೆಲ್ಲಾ ಉಚಿತವಾಗಿಯೂ ಪುಸ್ತಕ ಪೋಸ್ಟ್ ಮಾಡಿದ್ದಿದೆ. ಸೂಕ್ತ ಓದುಗರನ್ನು ತಲುಪಿದ್ದೇನೆ ಎಂಬ ಖುಷಿಯಿದೆ.