ಭಾರತದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಸಧ್ಯಕ್ಕೆ ವಿಶ್ವದ ಅತಿ ದೊಡ್ಡ ಇಬ್ಬರು ನಾಯಕರು. ವಿಶ್ವಕ್ಕೆ ವಿಶ್ವವೇ ಒಪ್ಪಿಕೊಳ್ಳುವ ಪವರ್‌ಫುಲ್ ಲೀಡರ್ಸ್. ಅವರಲ್ಲಿ ಒಬ್ಬರನ್ನಾದರೂ ಕಣ್ತುಂಬಿಕೊಂಡರೆ ಸಾಕೆಂದು ಬಹುತೇಕರು ಯೋಚಿಸುತ್ತಾರೆ.

ಮೋದಿ ಪ್ರವಾಸ ಹೋದಲ್ಲೆಲ್ಲ ಅಲ್ಲಿನ ಪ್ರಧಾನಿಗಳು ಮೋದಿಯೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ. ಅವರು ಮಾತಾಡುತ್ತಾರೆಂದರೆ ಲಕ್ಷಗಟ್ಟಲೆ ಜನ ಸೇರುತ್ತಾರೆ, ಇನ್ನುಳಿದಂತೆ ವಿಶ್ವಕ್ಕೆ ವಿಶ್ವವೇ ಟಿವಿ, ಫೋನ್‌ಗಳಲ್ಲಿ ಅವರ ಮಾತು ಕೇಳಲು ಉತ್ಸುಕವಾಗಿರುತ್ತದೆ. ಆದರೆ ಇಂಥ ನಾಯಕರನ್ನು ಭೇಟಿಯಾಗಿ ಸೆಲ್ಫೀ ತೆಗೆದುಕೊಳ್ಳಬೇಕೆಂದರೆ?ಭೇಟಿಯಾಗುವುದು ಬಿಡಿ, ಅದಕ್ಕೆ ಅದೆಷ್ಟು ತಿಂಗಳು ಮುಂಚೆ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕೋ... ಇಷ್ಟಕ್ಕೂ ಸೆಲ್ಫೀ ತೆಗೆದುಕೊಳ್ಳಲು ಯಾರೂ ಅಪಾಯಿಂಟ್‌ಮೆಂಟ್ ಕೊಡುವುದಿಲ್ಲವಲ್ಲ..  ಜೆಡ್ ಪ್ಲಸ್ ಸೆಕ್ಯೂರಿಟಿ ಹೊಂದಿರುವ ಮೋದಿಯ ಹತ್ತಿರ ಸುಳಿಯುವುದೂ ಕನಸಿನ ಮಾತೇ ಸರಿ. ಅಂಥದರಲ್ಲಿ ಆ ಒಂಬತ್ತನೇ ತರಗತಿಯ ಹುಡುಗ ಯಾವುದೇ ಅಳುಕಿಲ್ಲದೆ ಇಬ್ಬರು ದಿಗ್ಗಜರೊಂದಿಗೆ ಸೆಲ್ಫೀ ಕೋರಿ ಫೋನ್ ತೆಗೆದು ರೆಡಿಯಾದನಲ್ಲ... ಎಲ್ಲಿಂದ ಬಂತು ಈ ಧೈರ್ಯ?

ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

ಹೌಡಿ ಸಮಾವೇಶದಲ್ಲಿ ಸಾತ್ವಿಕ್ ಹೆಗಡೆ ಕೋರಿದ ಸೆಲ್ಫೀಗೆ ಇಬ್ಬರೂ ನಾಯಕರೂ ಖುಷಿಯಿಂದ ಹೋಗಿ ಪೋಸ್ ನೀಡಿದ್ದಾರೆ. ಇದೀಗ ಆ ಸೆಲ್ಫೀಯನ್ನು ಜಗತ್ತಿನಾದ್ಯಂತ ನೆಟ್ಟಿಗರು 'ಮೋಸ್ಟ್ ಪವರ್‌ಫುಲ್ ಸೆಲ್ಫೀ' ಎಂದು ಕೊಂಡಾಡುತ್ತಿದ್ದಾರೆ. ನಿಮಿಷವೊಂದು ಕಳೆವಷ್ಟರಲ್ಲಿ ಸಾತ್ವಿಕ್ ಹೆಗಡೆ ಎಲ್ಲರ ಮನೆ ಮಾತಾಗಿದ್ದಾನೆ. ಹೀರೋವಾಗಿದ್ದಾನೆ. ಮಾಧ್ಯಮಗಳೆಲ್ಲವೂ ಯಾರಪ್ಪಾ ಈ 13 ವರ್ಷದ ಪೋರ ಎಂದು ತಡಕಾಡಿ, ಅರೆ ನಮ್ಮ ಕರ್ನಾಟಕದವನು, ಶಿರಸಿಯವನು ಎಂದೆಲ್ಲ ಖುಷಿಯಿಂದ ಕೊಂಡಾಡತೊಡಗಿವೆ. 

ಸಾತ್ವಿಕ್‌ಗೆ ಲೈಫ್‌ನಲ್ಲಿ ಮರೆಯಲಾಗದ ಸೆಲ್ಫೀ ಸಿಕ್ಕ ಖುಷಿ ಒಂದೆಡೆಯಾದರೆ, ಹೀಗೆ ಅಮೆರಿಕ, ಭಾರತ ಸೇರಿದಂತೆ ಎಲ್ಲೆಡೆ ತನ್ನ ಹೆಸರು ಕೇಳಿಬರುತ್ತಿರುವ ಖುಷಿ ಮತ್ತೊಂದೆಡೆ. ಇವೆರಡೂ ಆತನಿಗೆ ಅನಿರೀಕ್ಷಿತವೇ. ಏಕೆಂದರೆ ಆತ ಹೌಡಿ ಮೋದಿಯಲ್ಲಿ ವಿಶ್ವನಾಯಕರೊಂದಿಗೆ ಸೆಲ್ಫೀ ತೆಗೆದುಕೊಳ್ಳಬೇಕೆಂದೇನು ಮುಂಚಿನಿಂದ ಯೋಜಿಸಿದ್ದಲ್ಲ, ಸುಮ್ಮನೆ ಇಬ್ಬರೂ ನಾಯಕರು ಕಣ್ಣೆದುರು ಬಂದಾಗ ಕೇಳೋದರಿಂದ ಕಳೆದುಕೊಳ್ಳುವುದೇನಿದೆ ಎಂದು ಆ ಕ್ಷಣದಲ್ಲಿ ತನಗನ್ನಿಸಿದಂತೆ ಮಾಡಿದ್ದಾನೆ. ಅವರಿಬ್ಬರೂ ಸೆಲ್ಫೀಗೆ ಬಂದು ನಿಂತದ್ದು ಸ್ವತಃ ಸಾತ್ವಿಕ್‌ಗೂ ಅಚ್ಚರಿಯೇ. ಆದರೂ ಇಲ್ಲಿ, ಈ ಪೋರನ ಧೈರ್ಯ ಮೆಚ್ಚಲೇಬೇಕು. ಏಕೆ ಗೊತ್ತಾ?

ಮೋದಿ-ಟ್ರಂಪ್ ಸ್ನೇಹವೆಷ್ಟು ಆಳವಿದೆ? ಎಲ್ಲಾ ಈ ಫೋಟೋಗಳೇ ವಿವರಿಸುತ್ತೆ!

ನಮ್ಮಲ್ಲಿ ರಾಷ್ಟ್ರಪತಿಗಳಿಂದ ಯಾವುದೋ ಸಾಧನೆಗೆ ಅವಾರ್ಡ್ ತೆಗೆದುಕೊಳ್ಳಬೇಕೆಂದರೆ, ಅವರಿಗೊಂದು ಥ್ಯಾಂಕ್ಸ್ ಹೇಳಿ ಬರುವುದನ್ನು ಕೂಡಾ ಹೇಗೆ ಹೇಳುವುದೆಂದು ತಿಂಗಳುಗಟ್ಟಲೆ ಪ್ರಾಕ್ಟೀಸ್ ಮಾಡುವ ದೊಡ್ಡವರೇ ಸಾಕಷ್ಟಿದ್ದಾರೆ. ಓದಿ ಎಷ್ಟೇ ಕ್ವಾಲಿಫಿಕೇಶನ್ ತೆಗೆದುಕೊಂಡಿದ್ದರೂ ಸಂದರ್ಶನಕ್ಕೆ ಹೋಗಬೇಕೆಂದರೆ ಕೈಕಾಲು ನಡುಗುತ್ತದೆ ಎನ್ನುವ ಯುವಕರ ಸಂಖ್ಯೆ ದೊಡ್ಡದೇ ಇದೆ. ಸಮಾಜದಲ್ಲಿ ದೊಡ್ಡವರೆನಿಸಿಕೊಂಡ ಸ್ಥಳೀಯ ರಾಜಕಾರಣಿಗಳ ಬಳಿ ಯಾವುದೋ ಕೆಲಸವಾಗಬೇಕೆಂದರೂ ಹೇಗಪ್ಪಾ ಅವರ ಬಳಿ ಮಾತನಾಡುವುದು ಎಂದೇ ವರ್ಷಗಟ್ಟಲೆ ಆ ಕೆಲಸ ಮುಂದೂಡಿ ಕಡೆಗೆ ಪೂರ್ತಿ ತಗ್ಗಿಬಗ್ಗಿ ಹೇಗೋ ಮಾತಾಡಿ ಬರುವ ಹಿರಿಯರಿದ್ದಾರೆ.

ಇನ್ನು ಮಕ್ಕಳಂತೂ ಅಪರಿಚಿತರ ಬಳಿ ಏನೊಂದು ಕೂಡಾ ಮಾತನಾಡಲು ನಾಚಿಕೊಂಡು ನಾಲಿಗೆ ಸುಳಿಯುತ್ತಾರೆ. ಅಂಥದರಲ್ಲಿ ನಿಲುಕದ ನಕ್ಷತ್ರವೆಂದೇ ಹಲವರೆಣಿಸುವ ಎರಡು ರಾಷ್ಟ್ರಗಳ ಅತ್ಯುನ್ನತ ಹುದ್ದೆಯಲ್ಲಿರುವ ನಾಯಕರನ್ನು ಮುಲಾಜಿಲ್ಲದೆ ಸೆಲ್ಫೀಗೆ ಬನ್ನಿ ಎಂದು ಕರೆಯುವುದು ಸುಲಭದ ಮಾತಲ್ಲ. ಈ ಘಟನೆಯ ಬಳಿಕ ಬಹುತೇಕ ತಂದೆತಾಯಿ ತಮ್ಮ ಮಕ್ಕಳಿಗೆ, ನೋಡು ಸಾತ್ವಿಕ್‌ನಂತೆ ಧೈರ್ಯವಾಗಿ ಮಾತನಾಡಿದರೆ ಬೇಕಾದ್ದು ಗಳಿಸಬಹುದು ಎಂದು ಹಿತವಚನವನ್ನೂ ಹೇಳುತ್ತಿದ್ದಾರೆ. ಆದರೆ, ಅಷ್ಟಕ್ಕೇ ಧೈರ್ಯ ಬರುತ್ತದೆಯೇ?

Video: ಸೆನೆಟರ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ಮೋದಿ: ಕಾರಣವೇನು?

ಇಂದು ಸ್ಪರ್ಧಾತ್ಮಕ ಯುಗವಾಗಿದ್ದು, ಸ್ಪರ್ಧೆ ಹೆಚ್ಚಿದಂತೆಲ್ಲ ಹೋಲಿಕೆ ಕೂಡಾ  ಹೆಚ್ಚುತ್ತಿದೆ.  ಯಾವ ಮಕ್ಕಳು ಯಶಸ್ಸು ಅಥವಾ ಸಂತೋಷ  ಗಳಿಸಿರುತ್ತಾರೋ ಅವರು ಉಳಿದ ಮಕ್ಕಳಿಗಿಂತ ಹೆಚ್ಚು  ಸ್ಟ್ರಾಂಗ್, ಹೆಚ್ಚು ಸ್ಮಾರ್ಟ್ ಹಾಗೂ ಹೆಚ್ಚು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತಿದೆ. ಇದೆಲ್ಲವೂ ಮಕ್ಕಳ ಮೇಲೆ ಹೇರುವ ಒತ್ತಡವಷ್ಟೇ.  ಏಕೆಂದರೆ ಯಾವ ಮಕ್ಕಳು ಕೂಡಾ ಸಕ್ಸಸ್ ಜೀನ್ ಅಥವಾ ಹ್ಯಾಪಿನೆಸ್ ಜೀನನ್ನು ಹುಟ್ಟುತ್ತಲೇ ಹೊತ್ತು ಬಂದಿರುವುದಿಲ್ಲ. ಈ ಸಂತೋಷ ಹಾಗೂ ಯಶಸ್ಸಿಗೆ ಹಲವಾರು ಸಂಗತಿಗಳು ಕಾರಣವಾಗಿರುತ್ತವೆ. ಅವುಗಳಲ್ಲೊಂದು ಧೈರ್ಯ. 

ಕೆಲವೊಮ್ಮೆ ಮುಗ್ಧತೆಗೆ ಧೈರ್ಯ ಜಾಸ್ತಿ. ಸಾತ್ವಿಕ್ ವಿಷಯದಲ್ಲಿ ಇದೂ ಕೆಲಸ ಮಾಡಿರಬಹುದು. ಆದರೆ, ಧೈರ್ಯಕ್ಕೆ ಬೇಕಾಗಿರುವ ಮತ್ತಷ್ಟು ಸಂಗತಿಗಳೆಂದರೆ ಜ್ಞಾನ, ತಿಳಿವಳಿಕೆ, ಪ್ರತಿಭೆ, ಜನರೊಂದಿಗೆ ಹೆಚ್ಚು ಬೆರೆವ ಅವಕಾಶ, ಪೋಷಕರ ನಡವಳಿಕೆ ಇತ್ಯಾದಿ. 

- ಬಹುತೇಕ ವಿಷಯಗಳಲ್ಲಿ ಉತ್ತಮ ಜ್ಞಾನವಿದ್ದಾಗ ಮಕ್ಕಳಲ್ಲಿ ಆ ಕುರಿತು ನಿಧಾನವಾಗಿ ಸರಿ ತಪ್ಪು ಯೋಚಿಸುವ ಶಕ್ತಿಯೂ ಬರುತ್ತದೆ. ಇದರಿಂದ ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳುವಂತಾಗುತ್ತಾರೆ. ಹೀಗೆ ಜ್ಞಾನದೊಂದಿಗೆ ಸ್ವಂತ ಅಭಿಪ್ರಾಯವೂ ಸೇರಿದಾಗ, ಅವರು ಎಲ್ಲಿ ಬೇಕಾದರೂ ಧೈರ್ಯವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಬಲ್ಲರು. ತಿಳಿದುಕೊಂಡವರ ಬಳಿ ಕೂಡಾ ಮಾತನಾಡಲು ಹೆದರುವುದಿಲ್ಲ. ಮಕ್ಕಳನ್ನು ಕೇವಲ ಶಾಲೆಯ ಪಠ್ಯಕ್ಕೆ ಸೀಮಿತಗೊಳಿಸದೆ, ನಮ್ಮ ಮಾತುಗಳಲ್ಲಿ, ಚರ್ಚೆಗಳಲ್ಲಿ ಅವರನ್ನೂ ಪಾಲುದಾರನಾಗಿಸಿಕೊಂಡಾಗ, ಅವರಿಗೆ ಎಲ್ಲ ವಿಷಯಗಳ ಕುರಿತು ಲೋಕಜ್ಞಾನ ನೀಡಿದಾಗ ಅವರ ಜ್ಞಾನ ಮಟ್ಟ ಹೆಚ್ಚುತ್ತದೆ. 

ಶತಮಾನದ ಸೆಲ್ಫಿ: ದಿಗ್ಗಜರ ನಡುವೆ ಪೋಸ್ ಕೊಟ್ಟ ಭಾರತೀಯ ಯುವಕ

- ಇನ್ನು ಎಲ್ಲಿ ಹೇಗಿರಬೇಕು, ಎಷ್ಟು ಮಾತಾಡಬೇಕು, ಎಲ್ಲಿ ಕೋಪ ತೋರಿಸಬೇಕು, ಎಲ್ಲಿ ವಿದೇಯನಾಗಿ ಮಾತನಾಡಬೇಕು ಮುಂತಾದವೆಲ್ಲ ತಿಳಿವಳಿಕೆಯ ಹಂತ. ಈ ತಿಳಿವಳಿಕೆಯನ್ನು ಪೋಷಕರು ತಿಳಿಸುವುದಷ್ಟೇ ಅಲ್ಲ, ಉದಾಹರಣೆಯಾಗಿ ನಿಲ್ಲಬೇಕು. ಪೋಷರಕನ್ನೇ ಹೀರೋವೆಂದು ಪರಿಗಣಿಸುವ ಮಕ್ಕಳು ಅವರ ಪ್ರತಿಯೊಂದು ನಡೆನುಡಿಯನ್ನೂ ಗಮನಿಸುತ್ತಿರುತ್ತಾರೆ ಎಂಬುದು ಸದಾ ಮನಸ್ಸಿನಲ್ಲಿರಬೇಕು. 

- ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಎಳೆಯ ಹಂತದಲ್ಲೇ ಆಗಬೇಕು. ಜೊತೆಗೆ ಅದನ್ನು ಬೆಳೆಸಲು ಸಂಪೂರ್ಣ ಸಹಕಾರ ಕೊಡಬೇಕು. ಉದಾಹರಣೆಗೆ ಮಗುವಿಗೆ ನೃತ್ಯದಲ್ಲಿ ಆಸಕ್ತಿ ಇದೆ ಎಂದರೆ ನೃತ್ಯ ಕಲಿಸುವುದು, ಸಂಗೀತ, ಯೋಗ, ಕ್ರೀಡೆ ಹೀಗೆ ಅವರ ಆಸಕ್ತಿಯ ವಿಷಯಗಳಲ್ಲಿ ಉತ್ತಮ ತರಬೇತಿ ಕೊಡುವುದರಿಂದ ಉತ್ತಮ ವೇದಿಕೆಗಳು ಲಭಿಸತೊಡಗುತ್ತವೆ. ಹೀಗೆ ವೇದಿಕೆಯಲ್ಲಿ ಎಲ್ಲರ ಮುಂದೆ ಪರ್ಫಾರ್ಮೆನ್ಸ್ ನೀಡಿದಂತೆಲ್ಲ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಜನರ ಮುಂದೆ ಮಾತನಾಡಲು, ಬೆರೆಯಲು ಅವರು ಹಿಂಜರಿಯುವುದಿಲ್ಲ, ಆತ್ಮವಿಶ್ವಾಸವಿದ್ದಾಗ ಧೈರ್ಯಕ್ಕೆ ಕೊರತೆಯಿರದು. ಸಾತ್ವಿಕ್ ಕೂಡಾ ಯೋಗಸಾಧನೆಯಿಂದಾಗಿಯೇ ಹೌಡಿ ಸಮಾವೇಶಕ್ಕೆ ಹೋಗಲು ಸಾಧ್ಯವಾಯಿತಲ್ಲವೇ? ನಂತರದಲ್ಲಿ ಆತ ಮಾಡಿದ್ದು ಸಿಕ್ಕ ಅವಕಾಶದ ಸದ್ಬಳಕೆಯಷ್ಟೇ. 

- ಈಗೀಗ ಹೇಗಾಗಿದೆ ಎಂದರೆ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಲು ಬಿಡಿ, ಮಕ್ಕಳೊಂದಿಗೆ ಕುಳಿತು ಮಾತನಾಡಲೇ ಪೋಷಕರಿಗೆ ಸಮಯವಿರುವುದಿಲ್ಲ. ಆದರೆ, ಮಕ್ಕಳಿಂದ ನೀವು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತೀರಾ ಎಂದಾದರೆ ಅವರಿಗೆ ನೀವು ಕೂಡಾ ಹೆಚ್ಚಿನ ಸಮಯ ಕೊಡಲೇಬೇಕು. ಅವರನ್ನು ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ, ಅಂಗಡಿಗಳಿಗೆ, ರಜೆಯಲ್ಲಿ ನೆಂಟರ ಮನೆಗೆ ಉಳಿಯಲು, ಪ್ರವಾಸಕ್ಕೆ ಎಂದೆಲ್ಲ ಕರೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ಅಷ್ಟೇ ಅಲ್ಲ, ಸುತ್ತಮುತ್ತಲಿನ ಮನೆಯವರನ್ನು ಮಾತನಾಡಿಸಲು ಹೇಳಿಕೊಡಬೇಕು. ಅವರ ಮಕ್ಕಳೊಂದಿಗೆ ಆಡಲು ಕಳುಹಿಸಬೇಕು. ಮಗು ಹೆಚ್ಚಾಗಿ ಮನೆಯಿಂದ ಹೊರಗೆ ಬೆಳೆದಷ್ಟೂ ಅವರಲ್ಲಿ ಸೋಷ್ಯಲ್ ಆ್ಯಂಕ್ಸೈಟಿ ಹುಟ್ಟಲಾರದು.

- ಇನ್ನು ಇವೆಲ್ಲದಕ್ಕಿಂತ ಹೆಚ್ಚಾಗಿ ಪೋಷಕರ ವರ್ತನೆ. ನೀವು ಎಷ್ಟು ಧೈರ್ಯವಂತರು, ಹೋದಲ್ಲಿ ಬಂದಲ್ಲಿ ಹೇಗೆ ವ್ಯವಹರಿಸುತ್ತೀರಿ, ಯಾರ ಬಳಿ ಹೇಗೆ ಮಾತನಾಡುತ್ತೀರಿ ಎಲ್ಲವನ್ನೂ ಮಕ್ಕಳು ಅನುಕರಿಸುತ್ತಾರೆ. ಹಾಗಾಗಿ, ಮಕ್ಕಳು ಹೇಗಿರಬೇಕೆಂದು ಬಯಸುತ್ತೀರೋ ಅದಕ್ಕೆ ತಕ್ಕ ನಿದರ್ಶನ ನೀವೇ ಆಗಿ. ಇವೆಲ್ಲವೂ ಮಕ್ಕಳನ್ನು ಧೈರ್ಯವಂತರಾಗಿಸುವಲ್ಲಿ ಕೆಲಸ ಮಾಡುತ್ತವೆ.