ನಟಿ ಸಮೀರಾ ರೆಡ್ಡಿ ಮುಂಬೈ ಜೀವನ ತೊರೆದು ಗೋವಾದಲ್ಲಿ ಹಸಿರಿನಿಂದ ಕಂಗೊಳಿಸುವ ಸುಂದರ ತೋಟದ ಮನೆಯನ್ನು ನಿರ್ಮಿಸಿದ್ದಾರೆ. ಹಣ್ಣಿನ ಮರಗಳು, ಸಾವಯವ ಗೊಬ್ಬರ ಮತ್ತು 'ಫಾರ್ಮ್ ಟು ಟೇಬಲ್' ಪರಿಕಲ್ಪನೆಯೊಂದಿಗೆ ಅವರು ತಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ.
ಬಾಲಿವುಡ್, ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ, ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ವರದನಾಯಕ ಸಿನಿಮಾದಲ್ಲಿ ನಟಿಸಿದ್ದ ಸಮೀರಾ ರೆಡ್ಡಿ (Sameera Reddy) ಮುಂಬೈನ ಗಿಜಿಗುಡುವ ಸಿಟಿ ಜೀವನ ತೊರೆದು ಗೋವಾಕ್ಕೆ ವಾಸ ಬದಲಾಯಿಸಿದಾಗ, ಅವರು ಕೇವಲ ನಗರವನ್ನು ಮಾತ್ರ ಬದಲಾಯಿಸಲಿಲ್ಲ; ಬದಲಿಗೆ ತಮ್ಮ ಸಂಪೂರ್ಣ ಜೀವನಶೈಲಿಯನ್ನೇ ಬದಲಿಸಿಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ತಮ್ಮ Home Tour ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಬಂಗಲೆಯ ಸುತ್ತಲೂ ಇರುವ ಫಲವತ್ತಾದ, ಹಣ್ಣು-ಹಂಪಲುಗಳಿಂದ ಕಂಗೊಳಿಸುವ ಸುಂದರ ತೋಟದ ಹಸಿರನ್ನು ಅನಾವರಣಗೊಳಿಸಿದ್ದಾರೆ.
ಪ್ರಸ್ತುತ ತಾವು ಸದಾ ತೋಟಗಾರಿಕೆಯಲ್ಲೇ ನಿರತರಾಗಿರುವುದಾಗಿ ಹೇಳಿಕೊಳ್ಳುವ ಸಮೀರಾ ಅವರ ಮನೆಯ ಎತ್ತರದ ತೆಂಗಿನ ಮರಗಳು ಹಾಗೂ ಹಣ್ಣಿನ ಗಿಡಗಳಿಂದ ಆವೃತವಾಗಿದೆ. ಕೇವಲ ಸೌಂದರ್ಯಕ್ಕಷ್ಟೇ ಸೀಮಿತವಾಗದೆ, ದೈನಂದಿನ ಜೀವನಕ್ಕೆ ಉಪಯುಕ್ತವಾಗುವಂತೆ ಈ ತೋಟವನ್ನು ವಿನ್ಯಾಸಗೊಳಿಸಲಾಗಿದೆ. ದೊಡ್ಡ ಜಾಗವಿರಲಿ ಅಥವಾ ಸಣ್ಣ ಜಾಗವಿರಲಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅನುಸರಿಸಬಹುದಾದ ಹಲವು ಗಾರ್ಡನಿಂಗ್ ಐಡಿಯಾಗಳು (Garden Ideas) ಇಲ್ಲಿವೆ.
ಹಸಿರು ಹೊದಿಕೆಯಲ್ಲಿ ಕಂಗೊಳಿಸುವ ಮನೆ
ಸಮೀರಾ ರೆಡ್ಡಿ ಅವರ ಮನೆಯನ್ನು ನೋಡಿದ ತಕ್ಷಣವೇ ಕಣ್ಣಿಗೆ ತಂಪು ನೀಡುವ ಪ್ರಮುಖ ಅಂಶವೆಂದರೆ ಅಲ್ಲಿರುವ ದಟ್ಟವಾದ ಹಸಿರು. ಈ ಜಾಗದಲ್ಲಿ ಅಡಿಕೆ ಮರ, ಬಿದಿರು, ಬೇವಿನ ಮರ ಮತ್ತು ಚಿಕ್ಕುನಂತಹ ಸ್ಥಳೀಯ ಮತ್ತು ಉಷ್ಣವಲಯದ ಮರಗಳ ದಟ್ಟವಾದ ಪದರದಿಂದ ಸುತ್ತವರಿಯಲ್ಪಟ್ಟಿದೆ. ಕೇವಲ ಅಲಂಕಾರಿಕ ಹುಲ್ಲುಹಾಸು (Lawn) ಮಾಡುವ ಬದಲು, ಮನೆಯ ಸುತ್ತಲೂ ಎತ್ತರದ ಗಿಡ-ಮರಗಳ ಹಸಿರು ಚಾವಣಿಯನ್ನು (Green Canopy) ನಿರ್ಮಿಸಲಾಗಿದೆ. ಇದು ಮನೆಗೆ ಉತ್ತಮ ನೆರಳು, ಖಾಸಗಿತನವನ್ನು ನೀಡುವ ಜೊತೆಗೆ ಬೇಸಿಗೆಯ ಬಿಸಿಲಿನಲ್ಲೂ ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಕುಟುಂಬಕ್ಕೆ ಆಸರೆಯಾಗುವ ಹಣ್ಣಿನ ಮರಗಳು
ಇದು ಕೇವಲ ಕಣ್ಣಿಗೆ ಚೆಂದ ಕಾಣುವ ಅಲಂಕಾರಿಕ ತೋಟವಲ್ಲ. ಬಸವಳಿಯದೆ ನಿರಂತರವಾಗಿ ಇಳುವರಿ ನೀಡುವ ಗಿಡ-ಮರಗಳು ಇಲ್ಲವೆ. 18 ತೆಂಗಿನ ಮರಗಳು, ಗೋಡಂಬಿ, ಬಿಂಬ್ಲಿ (Bimbli), ದಿವಿ ಹಲಸು (Breadfruit), ಬಾಳೆ ಮತ್ತು ಎತ್ತರಕ್ಕೆ ಬೆಳೆದಿರುವ ಕರಿಬೇವು ಗಿಡಗಳು ಇಲ್ಲಿವೆ.
ಇದಕ್ಕಿಂತ ಹೆಚ್ಚಾಗಿ ಇಲ್ಲಿರುವ ಮಾವಿನ ಮರವೊಂದು ಒಂದೇ ಋತುವಿನಲ್ಲಿ ಬರೋಬ್ಬರಿ 350 ಮಾವಿನ ಹಣ್ಣುಗಳನ್ನು ನೀಡಿದೆ. ಅನುಭವಿ ತೋಟಗಾರರನ್ನೂ ಸಹ ಈ ಸಂಖ್ಯೆ ಆಶ್ಚರ್ಯಚಕಿತಗೊಳಿಸುತ್ತದೆ. ನಿಮ್ಮ ಬಳಿ ದೊಡ್ಡ ಹಣ್ಣಿನ ತೋಟ (Orchard) ಮಾಡಲು ಜಾಗವಿಲ್ಲದಿದ್ದರೂ, ನಿಮ್ಮ ದೈನಂದಿನ ಅಡುಗೆಗೆ ಬಳಕೆಯಾಗುವ ಕರಿಬೇವು ಅಥವಾ ಬಾಳೆ ಗಿಡಗಳನ್ನು ನೆಡುವ ಮೂಲಕ ಈ ಕಲ್ಪನೆಯನ್ನು ಅನುಸರಿಸಬಹುದು.
ಹಿತ್ತಲಿನಿಂದ ನೇರ ಅಡುಗೆ ಮನೆಗೆ - 'ಫಾರ್ಮ್ ಟು ಟೇಬಲ್' ಸಂಸ್ಕೃತಿ
ಈ ತೋಟದ ಪ್ರಮುಖ ಉದ್ದೇಶವೇ ಮನೆಯ ಅಗತ್ಯಗಳಿಗೆ ಬೇಕಾದ ಆಹಾರವನ್ನು ಪೂರೈಸುವುದು. ಹಣ್ಣುಗಳು, ಮನೆಮದ್ದಿನ ಸೊಪ್ಪುಗಳು ಹಾಗೂ ತಾಜಾ ತರಕಾರಿಗಳನ್ನು ಹಿತ್ತಲಿನಿಂದಲೇ ನೇರವಾಗಿ ಕೊಯ್ಯಲಾಗುತ್ತದೆ. ಹೀಗಾಗಿ ತೋಟದಿಂದ ಅಡುಗೆ ಮನೆಯ ತಟ್ಟೆಗೆ ತಲುಪುವ ಆಹಾರವು ಕೇವಲ ಕೆಲವೇ ಹೆಜ್ಜೆಗಳ ಅಂತರವನ್ನು ಮಾತ್ರ ಕ್ರಮಿಸುತ್ತದೆ.
ತಮ್ಮ ತೋಟ ತಮಗೆ ಪ್ರತಿಯಾಗಿ ಆಹಾರ ನೀಡುತ್ತದೆ ಎನ್ನುವ ಭಾವನೆಯೇ ಒಂದು ರೀತಿಯ ಅಪಾರ ನೆಮ್ಮದಿ ತರುತ್ತದೆ. ನಿಮ್ಮ ಬಳಿ ದೊಡ್ಡ ಅಂಗಳವಿಲ್ಲದಿದ್ದರೂ, ನಿಮ್ಮ ಮನೆಯ ಬಾಲ್ಕನಿಯಲ್ಲಿ ಸಣ್ಣ ಕುಂಡಗಳಲ್ಲಿ ಮೂಲಿಕೆಗಳು (Herbs), ಮೆಣಸಿನಕಾಯಿ ಹಾಗೂ ಟೊಮ್ಯಾಟೊ ಗಿಡಗಳನ್ನು ಬೆಳೆಸುವ ಮೂಲಕ ಈ ಪುಟ್ಟ ಸಂತೋಷವನ್ನು ನಿಮ್ಮ ಅಡುಗೆ ಮನೆಗೂ ತರಬಹುದು.
ಯಾವುದೂ ತ್ಯಾಜ್ಯವಲ್ಲ - ಸಾವಯವ ಕಾಂಪೋಸ್ಟಿಂಗ್
ಸಮೀರಾ ರೆಡ್ಡಿ ಅವರ ತೋಟಗಾರಿಕೆಯಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಮತ್ತೊಂದು ಉತ್ತಮ ಅಭ್ಯಾಸವೆಂದರೆ 'ಕಾಂಪೋಸ್ಟಿಂಗ್' (Compost/ಸಾವಯವ ಗೊಬ್ಬರ). ಅಡುಗೆ ಮನೆ ಮತ್ತು ತೋಟದ ಹಸಿತ್ಯಾಜ್ಯವನ್ನು ಎಸೆಯುವ ಬದಲು, ಅದನ್ನು ಸಾವಯವ ಗೊಬ್ಬರವಾಗಿಸಿ, ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ಗಿಡಗಳಿಗೆ ಪೋಷಕಾಂಶ ನೀಡಲು ಮರಳಿ ಮಣ್ಣಿಗೇ ಸೇರಿಸಲಾಗುತ್ತದೆ.
ಈ ಸರಳ ಚಕ್ರವು ತೋಟವನ್ನು ಹೆಚ್ಚು ಆರೋಗ್ಯಕರವಾಗಿಸುತ್ತದೆ ಮತ್ತು ಕಸದ ಬುಟ್ಟಿಗೆ ಹೋಗುವ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದಕ್ಕೆ ದೊಡ್ಡ ಜಾಗದ ಅಗತ್ಯವಿಲ್ಲ, ನಿಮ್ಮ ಟೆರೇಸ್ ಅಥವಾ ಬಾಲ್ಕನಿಯಲ್ಲಿ ಸಣ್ಣ ಬಿನ್ ಅಥವಾ ಕುಂಡದ ಮೂಲಕವೇ ಈ ಕಾಂಪೋಸ್ಟಿಂಗ್ ಅನ್ನು ಸುಲಭವಾಗಿ ಮಾಡಬಹುದು.






