ಕುಂದಾ ನಗರಿಯ ಕುಂದಾ ಗೊತ್ತು, ಚಟ್ನಿ ಗೊತ್ತಾ?

Recipe of Belgaum special Chatnis
Highlights

ಕುಂದಾ ನಗರಿ ಬೆಳಗಾವಿ ಕುಂದಾ ರುಚಿ ಗೊತ್ತು. ಆದರೆ, ರೊಟ್ಟಿ ತಿನ್ನೋ ಈ ಮಂದಿ ವಿಧ ವಿಧವಾಗಿ ಚಟ್ನಿಯನ್ನೂ ಮಾಡುತ್ತಾರೆ. ರಾಜ್ಯದ ಬೇರೆಡೆ ಮಾಡುವ ಚಟ್ನಿಯನ್ನೇ ಇಲ್ಲಿ ವಿಭಿನ್ನವಾಗಿ ಮಾಡುತ್ತಾರೆ. ಹೇಗೆ? ನಿಮಗಾಗಿ ವಿವಿಧ ಚಟ್ನಿಗಳು ರೆಸಿಪಿ ಇಲ್ಲಿದೆ.

 

- ಮಂಜುನಾಥ ಗದಗಿ

ಕುಂದಾನಗರಿ ಬೆಳಗಾವಿ ಬಗೆ ಬಗೆಯ ಚಟ್ನಿಗಳಿಗೆ ಪ್ರಸಿದ್ಧಿ. ರೊಟ್ಟಿ, ದೋಸೆ, ಇಡ್ಲಿ ಇಲ್ಲಿ ಹೆಚ್ಚಾಗಿ ಬಳಕೆಯಾಗುವ ಖಾದ್ಯ. ಇವೆಲ್ಲಕ್ಕೂ ನಾನಾ ಬಗೆಯ ಚಟ್ನಿಗಳೂ ಇಲ್ಲಿ ತಾಯಾರಾಗುತ್ತವೆ. ಒಂದಕ್ಕಿಂತ ಒಂದು ರುಚಿ ಎನ್ನಿಸಬಹುದಾದ ಇಲ್ಲಿನ ಚಟ್ನಿಗಳ ರೆಸಿಪಿ ಇಲ್ಲಿದೆ.

ಮೆಂತ್ಯೆ ಚಟ್ನಿ

ಬೇಕಾಗುವ ಸಾಮಗ್ರಿಗಳು
ಮೆಂತ್ಯೆ ಕಾಳು ಒಂದು ಬಟ್ಟಲು, 2-3 ಹಸಿ ಮೆಣಸಿನಕಾಯಿ, ಉಪ್ಪು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು 

ಮಾಡುವ ವಿಧಾನ
ಮೊದಲಿಗೆ ಮೆಂತ್ಯೆ ಕಾಳುಗಳನ್ನು ಅರ್ಧ ಗಂಟೆಗಳ ಕಾಲ ನೆನೆಹಾಕಬೇಕು. ನಂತರ ಹದವಾಗಿ ನೆನೆದ ಮೆಂತೆ ಕಾಳುಗಳನ್ನು ಮಿಕ್ಸಿಗೆ ಹಾಕಿ ಅದಕ್ಕೆ 2-3 ಮೆಣಸಿ ನಕಾಯಿ, ಉಪ್ಪು, ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿದರೆ ಮೆಂತ್ಯೆ ಚಟ್ನಿ ರೆಡಿ. ಒಗ್ಗರಣೆ ನೀಡಿ, ಕರಿಬೇವು, ಸಾಸಿವೆಯನ್ನು ಸೇರಿಸಿದರೆ ಸುವಾಸಿತ ಮೆಂತ್ಯೆ ಚಟ್ನಿ ಸಿದ್ಧ.

ಬೆಂಡೆಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು
10-12 ಬೆಂಡೆಕಾಯಿ, 4-5 ಎಸಳು ಬೆಳ್ಳುಳ್ಳಿ, ಸ್ಪಲ್ಪ ಬೆಲ್ಲ, ಉಪ್ಪು, ಒಂದು ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ, ಕರಿಬೇವು

ಮಾಡುವ ವಿಧಾನ
ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದುಕೊಂಡು, ಅವುಗಳು ಸ್ಪಲ್ಪ ಆರಲು ಬಿಡಬೇಕು. ಆಮೇಲೆ ಶುದ್ಧವಾದ ಬಟ್ಟೆಯಲ್ಲಿ ಮೇಲಿನ ಅಂಟು ಹೋಗುವ ಹಾಗೆ ಒರೆಸಿಕೊಳ್ಳಬೇಕು. ನಂತರ ಬೆಂಡೆಕಾಯಿನಲ್ಲಿನ ನೀರಿನ ಅಂಶ ಕಡಿಮೆ ಆಗೋವರೆಗೂ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ಬೆಂಡೆಕಾಯಿಯನ್ನು ಮಿಕ್ಸಿಗೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಈಗ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧ. ಇದು ರೊಟ್ಟಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಟೊಮೆಟೋ ಕಾಯಿ ಚಟ್ನಿ

ಬೇಕಾಗುವ ಸಾಮಗ್ರಿ
5-6 ಟೊಮೆಟೋ, ಶಿಂಗಾ, ಗುರೇಳ್ಳು, ಬೆಳ್ಳುಳ್ಳಿ, 2-3 ಹಸಿ ಮೆಣಸಿನಕಾಯಿ, ಉಪ್ಪು, ಬೆಲ್ಲ

ಮಾಡುವ ವಿಧಾನ
ಟೊಮೆಟೋ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿಗಳನ್ನು ಮೊದಲಿಗೆ ಹುರಿದುಕೊಳ್ಳಬೇಕು. ನಂತರ ಶೇಂಗಾ, ಗುರೆಳ್ಳು ಹುರಿದುಕೊಳ್ಳಬೇಕು. ಹುರಿದುಕೊಂಡ ಪದಾರ್ಥಗಳನ್ನು ಮಿಕ್ಸಿಗೆ ಹಾಕಿಕೊಂಡು ಉಪ್ಪು, ಬೆಲ್ಲದ ಜೊತೆಗೆ ಮಿಕ್ಸ್ ಮಾಡಿ. ಈಗ ರುಚಿಯಾದ ಟೊಮೆಟೋ ಕಾಯಿ ಚಟ್ನಿ ರೆಡಿ. ಇದನ್ನು ವಾರಗಳ ಕಾಲ ಇಟ್ಟರೂ ಕೆಡುವುದಿಲ್ಲ. ಇದಕ್ಕೆ ಬೇಕಿದ್ದರೆ ಒಗ್ಗರಣೆಯನ್ನೂ ಸೇರಿಸಿಕೊಳ್ಳಬಹುದು.

ಬದನೆಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು
ಎರಡು ಬದನೆಕಾಯಿ, 2-3 ಹಸಿ ಮೆಣಸಿನಕಾಯಿ, 5-6 ಎಸಳು ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಸ್ವಲ್ಪ ಜೀರಿಗೆ, ಕೊತ್ತಂಬರಿ

ಮಾಡುವ ವಿಧಾನ
ಮೊದಲಿಗೆ ಬದನೆಕಾಯಿಯನ್ನು ಕಪ್ಪಾಗೋವರೆಗೂ ಸುಡಬೇಕು. ಅನಂತರ ಬದನೆಕಾಯಿ ಮೇಲಿನ ಕಪ್ಪಗಿನ ಸಿಪ್ಪೆಯನ್ನು ತೆಗೆದು, ಅದನ್ನು ಮಿಕ್ಸಿಗೆ ಹಾಕಿಕೊಳ್ಳಬೇಕು. ನಂತರ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಬೆಲ್ಲ, ಸ್ವಲ್ಪ ಜೀರಿಗೆ, ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ ಈಗ ಬದನೆಕಾಯಿ ಚಟ್ನಿ ಸಿದ್ಧ

ಹೆಸರು ಬೇಳೆ ಚಟ್ನಿ

ಬೇಕಾಗುವ ಸಾಮಗ್ರಿಗಳು
ಒಂದು ಬಟ್ಟಲು ಹೆಸರು ಬೇಳೆ , 2-3 ಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು

ಮಾಡುವ ವಿಧಾನ
ಹೆಸರು ಬೇಳೆಯನ್ನು ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಂತರ ನೆನೆಸಿದ ಹೆಸರು ಬೇಳೆಯನ್ನು ಮಿಕ್ಸಿಗೆ ಹಾಕಿ ಅದಕ್ಕೆ ಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಂಡರೆ ಹೆಸರು ಬೇಳೆ ಚಟ್ನಿ ಸವಿಯಲು ಸಿದ್ಧ. ಅಲ್ಲದೇ ಮಿಕ್ಸಿಯಲ್ಲಿ ಕೇವಲ ಒಂದೆರಡು ರೌಂಡ್ ತಿರುಗಿಸಿ ಮಧ್ಯಮ ಗಾತ್ರದಲ್ಲಿ ಹೆಸರು  ಬೇಳೆಯನ್ನು ರುಬ್ಬಿಕೊಂಡು ಬಳಕೆ ಮಾಡಬಹುದು.

ಕಡಲೆಬೇಳೆ ಚಟ್ನಿ

ಬೇಕಾಗುವ ಸಾಮಗ್ರಿಗಳು
ಒಂದು ಬಟ್ಟಲು ಕಡಲೆಬೇಳೆ, 2-3 ಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು, ಕರಿಬೇವು, ಕೊತ್ತಂಬರಿಸೊಪ್ಪು

ಮಾಡುವ ವಿಧಾನ
ಕಡಲೆಬೇಳೆಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಂತರ ನೆನೆಸಿದ ಹೆಸರು ಬೇಳೆಯನ್ನು ಮಿಕ್ಸಿಗೆ ಹಾಕಿ ಅದಕ್ಕೆ ಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿ, ಕಡೆಯಲ್ಲಿ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಮಿಕ್ಸ್ ಮಾಡಿದರೆ ಕಡಲೆ ಬೇಳೆ ಚಟ್ನಿ ರೆಡಿ.

ಮಾವಿನಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು
ಒಂದು ಮಾವಿನಕಾಯಿ, ಕಡಲೆಬೇಳೆ, ಈರುಳ್ಳಿ, ಜೀರಗಿ, 2-3 ಹಸಿ ಮೆಣಸಿನಕಾಯಿ, ಉಪ್ಪು, ಕರಿಬೇವು 

ಮಾಡುವ ವಿಧಾನ
ಮೊದಲು ಅರ್ಧ ಗಂಟೆಗಳ ಕಾಲ ಕಡಲೆಬೇಳೆಯನ್ನು ನೆನೆ ಇಡಬೇಕು. ನಂತರ ಮಾವಿನ ಕಾಯಿಯನ್ನು ಸಣ್ಣಗೆ ಕತ್ತರಿಸಿಕೊಂಡು ಅದಾದ ನಂತರ ಕಡಲೆಬೇಳೆ, ಸಣ್ಣಗೆ ಹೆಚ್ಚಿದ ಮಾವಿನಕಾಯಿಗಳನ್ನು ಮಿಕ್ಸಿಯಲ್ಲಿ ಹಾಕಿ ಕೊಂಡು ಅದಕ್ಕೆ ಜೀರಿಗಿ, ಮೆಣಸಿನಕಾಯಿ, ಕರಿಬೇವು, ಉಪ್ಪು ಸ್ಪಲ್ಪ ನೀರು ಹಾಕಿಕೊಂಡು ರುಬ್ಬಿರಿ. ಇವಾಗ ಮಾವಿನ ಕಾಯಿ ಚಟ್ನಿ ಸವಿಯಲು ಸಿದ್ಧ. 

loader