ಎಲ್ಲಿಯೋ ಕಳೆದು ಹೋಗುತ್ತಿದೆಯೇ ಯುವ ಜನಾಂಗ?

https://static.asianetnews.com/images/authors/b348a094-0bef-5801-a1f6-61e57071185f.jpg
First Published 13, Jun 2018, 7:19 PM IST
Problem with last generation
Highlights

ಐ-ಜೆನ್, ಜೆನ್ ಆಲ್ಫಾ ಅಂತೆಲ್ಲಾ ಕರೆಸಿಕೊಳ್ಳೋ ಈ ಪೀಳಿಗೆಗೆ ಇರೋ ಇನ್ನೊಂದು ಹೆಸರು 'ಲಾಸ್ಟ್ ಜನರೇಶನ್'. ನಿಜವಾಗಿಯೂ ಈ ಪೀಳಿಗೆ ಕಳೆದುಹೋಗಿದೆಯೇ? ಪ್ರತಿಯೊಬ್ಬರೂ ಈಗಿನ ಯುವ ಜನರಿಗೆ 'ಫ್ಲೈ ವಿತ್ ಯುವರ್ ವಿಂಗ್ಸ್ ವೈಡ್ ಓಪನ್' ಅಂತ ಹೇಳುತ್ತಾರೆ, ಆದರೆ ಯಾವ ಕಡೆಗೆ ಹಾರಬೇಕೆಂಬುದು ಅವರಿಗೆ ಗೊತ್ತಿದೆಯೇ? ಇದಕ್ಕೆ ತಂದೆ  ತಾಯಿ ಏನು ಮಾಡಬೇಕು? ಮನಃಶಾಸ್ತ್ರಜ್ಞರು ಏನು ಹೇಳುತ್ತಾರೆ?

- ತನ್ಮಯ ಪ್ರಕಾಶ್

'ಅಮ್ಮಾ ನಾನೇನ್ಮಾಡ್ಬೇಕು ನನಗೆ ಗೊತ್ತು.'
'ಅಯ್ಯೋ ಇದೇ ಟ್ರೆಂಡ್, ನಿನಗೆ ಗೊತ್ತಿಲ್ಲ.'
'Be practicle ಅಪ್ಪಾ, ನನ್ನ ಲೈಫ್ ನನ್ನ ಇಷ್ಟ'
ಇಂತಹ ಸಂಭಾಷಣೆಗಳು ಹದಿಹರೆಯದ ಮಕ್ಕಳಿರೋ ಮನೆಯಲ್ಲಿ ನಡೀತಾನೇ ಇರುತ್ತೇ. ಇಂತಹ ಮಾತುಗಳನ್ನ ಒಂದು ಸಾರಿಯಾದರೂ ಮಕ್ಕಳು ಅಪ್ಪ ಅಮ್ಮನಿಗೆ ಹೇಳಿರುತ್ತಾರೆ. ಈ ರೀತಿಯ ಡೈಲಾಗುಗಳು ಸರ್ವೇಸಾಮಾನ್ಯ ಆಗಿಬಿಟ್ಟಿವೆ. ಹಳೆಯ ಕಾಲದಲ್ಲಿ ತರುಣ, ತರುಣಿಯರು ಜಾಸ್ತಿ ಒತ್ತು ನೀಡುತಿದ್ದದ್ದು ಪ್ರೀತಿ, ಗೌರವ, ಮೌಲ್ಯಗಳಿಗೆ. ಆದರೆ ಈಗಿನ ಯುವ ಜನತೆ ಹೇಳಿಕೊಳ್ಳೋದು ನಾವು ಸ್ವಾತಂತ್ರರಾಗಿದ್ದೇವೆ, ಪ್ರಾಯೋಗಿಕರಾಗಿದ್ದೇವೆ ಹಾಗು ವೈಜ್ಞಾನಿಕರಾಗಿದ್ದೇವೆ ಅಂತ. ಪ್ರಶ್ನೆಯೇನೆಂದರೆ ನಿಜವಾಗಲೂ ಈಗಿನ ಯುವ ಸಮಾಜ ಹಾಗಿದೆಯೇ?

ನಮ್ಮ ಮನೆಯ ಪಕ್ಕದ ಮನೆಯಲ್ಲಿ ಒಬ್ಬ ಹುಡುಗನಿದ್ದ. ಅವನು ಹತ್ತನೇ  ತರಗತಿಯವರೆಗೂ ಬಹಳ ಚೆನ್ನಾಗಿ ಓದುತ್ತಿದ್ದ. ಹತ್ತನೇ ತರಗತಿಯಲ್ಲಿ ಬಹಳ ಒಳ್ಳೆಯ ಅಂಕವನ್ನೂ ಗಳಿಸಿದ್ದ. ಅಚಾನಕ್ಕಾಗಿ ಅದೇನಾಯಿತೆಂದು ಗೊತಿಲ್ಲ, ಪಿಯುಸಿಯಲ್ಲಿ ಫೇಲ್ ಆಗಿಬಿಟ್ಟ. ಪಾಪ ಹುಡುಗ ಬೇಜಾರಾಗಿ ಊಟ ನಿದ್ದೆ ಬಿಟ್ಟು ಕೂತಿರಬೇಕೇನೋ ಅಂತ ಅಂದುಕೊಂಡರೆ ಅದು ತಪ್ಪು. ಅವನು ಆರಾಮಾಗಿ ಊರು ಸುತ್ತಿಕೊಂಡಿದ್ದ. ಕೇಳಿದ್ರೆ, Be practicle, ಅದು ಬರಿ ಪರೀಕ್ಷೆ, ಅದರಲ್ಲಿ ಫೇಲ್ ಆದ್ರೆ ಏನಾಯ್ತು? ಮತ್ತೆ ಬರೆದರಾಯಿತು ಅನ್ನುತಿದ್ದ. ಬೇಜಾರಾಗುವ ವಿಷಯವೆಂದರೆ ನಂತರದ ದಿನಗಳಲ್ಲಿ ಬಹಳ ಸಪ್ಪಗೆ ಇದ್ದು, ಡಿಪ್ರೆಶನ್‌ಗೆ ಹೋಗಿಬಿಟ್ಟಿದ್ದ. ಸರಿಯಾಗಿ ಹೊಟ್ಟೆಗೆ ತಿನ್ನುತ್ತಿರಲಿಲ್ಲ. ಅದಕ್ಕೆ ಕಾರಣ ಪರೀಕ್ಷೆಯ ಫಲಿತಾಂಶವಲ್ಲ. ಅವನ ಜೊತೆ ಚ್ಟಿಛಿಝ್ಠ ಆದ ಅವನ ಪ್ರೇಯಸಿ.. 

ಇದು ಪ್ರಾಯೋಗಿಕತೆಯೇ?

ನನ್ನ ಸ್ನೇಹಿತನೊಬ್ಬ ಮೂರು-ನಾಲ್ಕು ದಿನಗಳಿಂದ ನಾಪತ್ತೆ ಆಗಿಬಿಟ್ಟಿದ್ದ. ಯಾಕೆ ಅವನು ಕಾಲೇಜಿಗೆ ಬರುತ್ತಿಲ್ಲವೆಂದು ಇನ್ನೊಬ್ಬ ಸ್ನೇಹಿತನ ಬಳಿ ಕೇಳಿದಾಗ, ಅವನಿಗೆ ಆ್ಯಕ್ಸಿಡೆಂಟ್ ಆಗಿದೆ ಎಂದು ತಿಳಿಯಿತು. ನಂತರ ಯೋಗಕ್ಷೇಮ ವಿಚಾರಿಸಲು ಅವನ ಮನೆಗೆ ತೆರಳಿದೆವು, ಆಗ ತಿಳಿದದ್ದೇನೆಂದರೆ, ಆ್ಯಕ್ಸಿಡೆಂಟ್‌ನಿಂದ ಏಟಾಗಿದ್ದು ಇವನ ಮೂಗಿಗಷ್ಟೇ. ಆದರೆ ಅವನ ಬೈಕ್ ಹಾಳಾಗಿದ್ದಿದ್ದರಿಂದ ಅವನು ಡಿಪ್ರೆಷನ್‌ಗೆ ಹೋಗಿದ್ದ. ಕಾಲೇಜಿಗೆ ಬರುತ್ತಿರಲಿಲ್ಲ.

ನನ್ನ ಗೆಳತಿಯೊಬ್ಬಳು ಅವಳ ಅಮ್ಮ ಅವಳಿಗೆ ಕುಂಕುಮ ಇಟ್ಟುಕೊಳ್ಳಲು ಹೇಳಿದಾಗ, ಹೂವು ಮುಡಿದುಕೊಳ್ಳಲು ಹೇಳಿದಾಗ ಅವರ ಅಮ್ಮನನ್ನು ಮೂಢನಂಬಿಕೆ ಎಂದಳು. ಆದರೆ ನಮ್ಮ ಪರೀಕ್ಷೆಯ ಸಮಯ ಬಂದಾಗ ದಿನ ಅರಳಿ ಮರಕ್ಕೆ ೨೧ ಸುತ್ತು ಹೊಡೆಯುತ್ತಿದ್ದಳು. ಇಂಥಾ ಸುಮಾರು ಕತೆಗಳಿವೆ. ಒಂದು ಹುಡುಗಿ ಮನೆಗೆ ತಡವಾಗಿ ಹೋದಾಗ ಅವಳ ತಂದೆ, 'ಯಾಕಮ್ಮಾ ಇಷ್ಟೊತ್ತು, ಗಂಟೆ ಹತ್ತಾಗಿದೆ' ಎಂದು ಪ್ರಶ್ನಿಸಿದರೆ, 'ಅಪ್ಪಾ ಐ ಯಾಮ್ ಇಂಡಿಪೆಂಡೆಂಟ್, ಏನ್ ಮಾಡಬೇಕು ಅಂತ ನನಗೆ ಗೊತ್ತು' ಎನ್ನುತ್ತಾಳೆ. ಆದರೆ ಅದೇ ಹುಡುಗಿ ಒಂದು ಕೂದಲ ಕ್ಲಿಪ್ ತೆಗೆದುಕೊಳ್ಳುವುದಕ್ಕೂ ತನ್ನ ಅಪ್ಪನ ಕಾಸನ್ನೇ ಬಳಸುತ್ತಿರುತ್ತಾಳೆ. ಇದಾವ ರೀತಿಯ ಸ್ವಾತಂತ್ರ್ಯ ಎಂಬ ಪ್ರಶ್ನೆಗೆ ಉತ್ತರವೇ ದೊರಕುತ್ತಿಲ್ಲ.

ಇದು ಬರೀ ಆ ಹುಡುಗಿಯ ಕತೆಯಲ್ಲಾ. ಪ್ರತಿಯೊಬ್ಬ ಹಾಗೂ ಪ್ರತಿಯೊಬ್ಬಳು ಹದಿಹರೆಯಾದವರದ್ದೂ ಇದೇ ಕತೆ. ನೈತಿಕತೆ, ಗೌರವ, ಕಾರ್ಯತತ್ಪರತೆಯನ್ನು ಮರೆಯುವುದಲ್ಲದೆ ಇಂದಿನವರು ಬಹಳ ಸೋಮಾರಿಗಳೂ ಕೂಡ. ಪ್ರತಿಯೊಂದಕ್ಕೂ ಸುಲಭದ ದಾರಿ ಹುಡುಕುವುದು. ಅಲ್ಲದೇ ಯಾವುದು ಸರಿ, ಯಾವುದು ತಪ್ಪು ಎಂಬುದು ಕೂಡ ಅರ್ಥವಾಗುತ್ತಿಲ್ಲ.

ಇದಕ್ಕೆಲ್ಲಾ ಏನು ಕಾರಣ? 

ಬರ್ಗರ್, ನೂಡಲ್ಸ್‌ಗಳು, ಎಲ್ಲೆಡೆಯ ಆಕರ್ಷಣೆಯಾಗಿದೆ. ಪಾಶ್ಚಿಮಾತ್ಯರ ಜೀವನ ಶೈಲಿ, ಹಾವ ಭಾವ, ಉಡುಪು ಒಟ್ಟಾರೆ ಅವರೇ ನಮ್ಮ ಆದರ್ಶ ವ್ಯಕ್ತಿಗಳೆಂಬಂತೆ ಅವರನ್ನು ಮತ್ತು ಅವರ ಕ್ರಿಯೆಗಳನ್ನು ಈಗಿನ ಯುವಕರು ಹಿಂಬಾಲಿಸುತ್ತಿದ್ದಾರೆ. ಎಲ್ಲರಿಗು ಐಫೋನ್ ಬೇಕು. ಅಷ್ಟೇ ಅಲ್ಲ ಆ ಫೋನನ್ನು ಖರೀದಿಸುವಾಗ ರಾಹುಕಾಲ ಆಗಿರಬಾರದು.  ಭಾರತದ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವು ಹೆಚ್ಚಾಗಿದೆ. ಒಂದು ಭಾರತೀಯ ಸಂಸ್ಕೃತಿಯ ಪರಿಪಾಲಕರಾಗಿರಬೇಕು ಅಥವಾ ಸಂಪೂರ್ಣವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಬೇಕು. ಅದನ್ನ ಬಿಟ್ಟು ನಾನು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆ. ಮೂರು ನಾಲ್ಕು ಹುಡುಗಿಯ ಜೊತೆ ಅಫೇರ್‌ನಲ್ಲಿ ಇರುತ್ತೇನೆ. ಆದರೆ ನನ್ನನ್ನು ಮದುವೆಯಾಗುವ ಹುಡುಗಿ ಮಾತ್ರ ಪತಿವ್ರತೆಯಾಗಿರಬೇಕೆಂದರೆ ಅದು ಹೇಗೆ ಸಾಧ್ಯ?

ಇಂಥದ್ದೊಂದು ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆ ಎಂದರೆ, ನನ್ನ ಸಂಬಂಧಿಯೊಬ್ಬಳು ಪಿಯುಸಿಯಲ್ಲಿ ವಿಜ್ಞಾನ ಓದಿ, ನಂತರ ಆರ್ಟ್ಸ್ ತೆಗೆದುಕೊಳ್ಳಬೇಕೆಂದಿದ್ದಳು. ಬಹಳ ಪ್ರತಿಭಾವಂತಳಾಗಿದ್ದಳು. ಆದರೆ ಅವರ ಮನೆಯಲ್ಲಿ ಒಪ್ಪಲಿಲ್ಲ, ಇಂಜಿನಿಯರಿಂಗ್ ಮಾಡು, ಆರ್ಟ್ಸ್ ಅಂತ ನಾಲಕ್ಕು ಜನರಿಗೆ ಹೇಳಿದ್ರೆ ಅವ್ರ ಏನ್ ಅಂದುಕೊಳ್ಳುವುದಿಲ್ಲ. ನಮ್ಮ ಸ್ನೇಹಿತರ ಹತ್ತಿರ ನೀನು ಆರ್ಟ್ಸ್ ತೆಗೆದುಕೊಂಡಿದ್ದೀಯ ಎಂದು ನಾವು ಹೇಗೆ ಹೇಳುವುದು ಎಂದರು.
ಇದಕ್ಕೆ ಕಾರಣ ಜನ ಏನಂದುಕೊಳ್ಳುವುದಿಲ್ಲ ಅನ್ನುವ ಮನೋಭಾವ. ಅವಳು ಅವಳ ಜೀವನ ಸಾಗಿಸಬೇಕಾ ಅಥವಾ ಸಮಾಜ ಹೇಳಿದಂತೆ ಜೀವನ ನಡೆಸಬೇಕಾ ಅನ್ನುವ ಪ್ರಶ್ನೆಯೂ ಇವತ್ತಿನ ಯುವಜನಾಂಗದ ಗೊಂದಲಕ್ಕೆ ಕಾರಣ.

ಸೈಕಾಲಜಿಸ್ಟ್ ಏನಂತಾರೆ?

ಈ ಕಾಲದ ತರುಣ, ತರುಣಿಯರ ಗೊಂದಲಕ್ಕೆ ಮನಃಶಾಸ್ತ್ರಜ್ಞರು ಹೇಳುವ ಮಾತು ಕುತೂಹಲಕಾರಿ. ಈ ಬಗ್ಗೆ ಡಾ. ಸ್ನೇಹಾ ಭಟ್ ಅವರನ್ನು ಕೇಳಿದಾಗ ಅವರು ಹೇಳಿದ್ದಿಷ್ಟು:
೧. ಇದಕ್ಕೆ ಕಾರಣ ಪಾಶ್ಚಿಮಾತ್ಯೀಕರಣ. ಇದು ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಸಮಯದಿಂದಲೂ ಆಗುತ್ತಲೇ ಇದೆ. ಈಗಿನ ಯುವಕರು ಪಾಶ್ಚಿಮಾತ್ಯೀಕರಣವನ್ನು ಅನುಸರಿಸುತ್ತಿಲ್ಲಾ, ಹಾಗೆಯೇ ಭಾರತೀಯ ಮೌಲ್ಯಗಳನ್ನೂ ಅನುಸರಿಸುತ್ತಿಲ್ಲಾ. mixec culture ಆಗಿಬಿಟ್ಟಿದೆ.

ಯುವಕರು ಪ್ರಾಯೋಗಿಕ ಹಾಗು ಸ್ವಾತಂತ್ರ್ಯ ಎಂದು ತಮ್ಮನ್ನು ತಾವು ಪರಿಗಣಿಸುತ್ತಾರೆ. ಆದರೆ ಜವಾಬ್ದಾರಿಯುತರಾಗಿದ್ದರೆ ಮಾತ್ರ ಹಾಗೆ ಇರಬಹುದು ಎಂಬುದು ತಿಳಿಯುತ್ತಿಲ್ಲ. 
2. ಹಳೆಯ ಕಾಲದಲ್ಲಿ ಎಲ್ಲ ಒಟ್ಟಿಗೆ ಒಂದೇ ಮನೆಯಲ್ಲಿ ಕೂಡಿ ಬಾಳುತಿದ್ದರು, ಆದರೆ ಈಗ ಒಂದು ಮನೆಯಲ್ಲಿ ಒಬ್ಬರು ಇರುವಂತಹ ಪರಿಸ್ಥಿತಿ ಬಂದುಬಿಟ್ಟಿದೆ. ಎಲ್ಲರೂ ಪ್ರತ್ಯೇಕತಾವಾದಿಗಳಾಗುತ್ತಿದ್ದಾರೆ. ದೂರದ ಬೆಟ್ಟ ನುಣ್ಣಗೆ ಎಂಬ ಮಾತಿನ ಹಾಗೆ, ಪಾಶ್ಚಿಮಾತ್ಯ ಜೀವನಶೈಲಿ, ನಡವಳಿಕೆ, ಗ್ಲಾಮರ್ ಮತ್ತು ಆ ಸಂಸ್ಕೃತಿಯೇ ಚೆಂದವೆಂದು ತಿಳಿದು, ಆ ಸಂಸ್ಕೃತಿಯನ್ನು ಪಾಲಿಸಲಾಗದೆ, ಈ ಸಂಸ್ಕೃತಿಯನ್ನು ಬಿಡಲಾಗದೆ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುತ್ತಿದ್ದಾರೆ. ಮತ್ತೊಬ್ಬ ಮನಃಶಾಸ್ತ್ರಜ್ಞೆ ಡಾ.ಗೀತಾ ಅಪ್ಪಚ್ಚು ಅಭಿಪ್ರಾಯ  ಹೀಗಿದೆ:

ಜೀವನ ಶೈಲಿ, ಮನುಷ್ಯನ ಯೋಚನಾಶಕ್ತಿಯ ಮೇಲೆ ಅವಲಂಬಿತವಾಗಿದೆ. ಈಗಿನ ಯುವಕರು ಸ್ವತಂತ್ರರಾಗಿರೋಕೆ ಮತ್ತೊಂದು ಕಾರಣ, ಅವರ ಹಿರಿಯರು ಅವರಿಗೇ ಆ ಸ್ವಾತಂತ್ರವನ್ನು ನೀಡಿರುವುದು. ಈಗಿನ ಕಾಲದವರು ಇರುವುದು ಹೀಗೆ ಎನ್ನುತ್ತಾ ಅವರಿಗೆ ಬೇಕಾದ ಸ್ವಾತಂತ್ರವನ್ನು ನೀಡುತ್ತಿದ್ದಾರೆ. ಅದನ್ನು ಯುವಕರು ಅವರಿಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಈಗಿನ ಜಗತ್ತಿನ ವೇಗ ಮತ್ತು ನಿಖರತೆ. ಸಮಾಜ ಬಹಳ ವೇಗವಾಗಿ ಸಾಗುತ್ತಿದ್ದು, ಯುವ ಜನರು ಆ ಮಟ್ಟಕ್ಕೆ ತಲುಪಬೇಕೆಂಬ ಸಲುವಾಗಿ ಅರ್ಥವಿಲ್ಲದೆ ಕುರುಡರಂತೆ ಓಡುತ್ತಿದ್ದಾರೆ.

ಉಪಸಂಹಾರ 
ಯಾವುದು ಸರಿ, ಯಾವುದು ತಪ್ಪು ಎನ್ನುವ ಅರಿವಾಗುತ್ತಿಲ್ಲ. ಭ್ರಮಾಲೋಕದಲ್ಲಿ ಇದ್ದಾರೆ. ನೋವೆಂದರೆ, ಅವರಿಗೆ ಯಾವ ದಾರಿಗೆ ಹೋಗಬೇಕು ಎಂಬುದನ್ನು ಸರಿಯಾಗಿ ತಿಳಿಸಲು ಯಾವ ಮಾರ್ಗದರ್ಶಿಗಳೂ ಇಲ್ಲದಂತಾಗಿದೆ. ಪ್ರತಿಯೊಬ್ಬರೂ ಈಗಿನ ಯುವ ಜನರಿಗೆ 'ಫ್ಲೈ ವಿತ್ ಯುವರ್ ವಿಂಗ್ಸ್ ವೈಡ್ ಓಪನ್' ಅಂತ  ಹೇಳುತ್ತಾರೆ, ಆದರೆ ಪ್ರಶ್ನೆ ಏನೆಂದರೆ, ಯಾವ ಕಡೆಗೆ ಹಾರಬೇಕೆಂಬುದು? ಅದು ಯಾರಿಗೂ ಅರ್ಥವಾಗುತ್ತಿಲ್ಲ. ಅರ್ಥ ಮಾಡಿಸುವವರೂ ಇಲ್ಲ. ಆದರೆ ತಮ್ಮ ಸ್ಪೀಡನ್ನು ಸ್ವಲ್ಪ ನಿಧಾನ ಮಾಡಿ ಧ್ಯಾನಿಸಿಕೊಂಡರೆ ಎಲ್ಲವೂ ತನ್ನಿಂತಾನೇ ಅರ್ಥವಾಗುತ್ತದೆ. ಉತ್ತರ ವೇಗದಲ್ಲಿಲ್ಲ, ಮೌನದಲ್ಲಿದೆ ಎಂಬುದನ್ನು ಯಾರು ಅರ್ಥಮಾಡಿಕೊಳ್ಳುತ್ತಾರೋ ಅವತ್ತು ಎಲ್ಲವೂ ಸರಿಹೋಗುತ್ತದೆ ಅನ್ನಿಸುತ್ತದೆ. ?
 

loader