‘ಊಟಕ್ಕೆ ಉಪ್ಪಿನಕಾಯಿ ಇದ್ದರೇನೇ ಸ್ವಾದ’ ಅನ್ನೋದು ನಾಣ್ನುಡಿ. ಈ ಮಾತಿನಂತೆಯೇ ಬಿಸಿಲೂರು ಕಲಬುರಗಿ ಮಂದಿ ಊಟದ ಎಲೆ/ತಟ್ಟೆ ತುದಿಗೆ ಒಂದೆಡೆ ಉಪ್ಪು, ಇನ್ನೊಂದೆಡೆ ಉಪ್ಪಿನಕಾಯಿ ಇರಲೇಬೇಕು. ಊಟದ ಜೊತೆ ನೆಂಚಿಕೊಳ್ಳುವುದಕ್ಕೆ ಒಂದಿಷ್ಟು ಉಪ್ಪಿನಕಾಯಿ ಬೇಕು ಅನ್ನೋದರ ಜೊತೆಗೇ ಕಲಬುರಗಿ ಮಂದಿ ತಮ್ಮ ತಮ್ಮ ಸ್ವಾದಕ್ಕೆ ತಕ್ಕಂತೆ ತರಹೇವಾರಿ ಉಪ್ಪಿನಕಾಯಿ ತಯಾರಿಸುವಲ್ಲಿಯೂ ಎತ್ತಿದ ಕೈ.

ನಿಂಬೆ, ಹಾಗಲ, ಬದನೆ, ಟೊಮೆಟೋ, ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿ ಬಹುಕಾಲ ಸಂರಕ್ಷಿಸಿಡುವಲ್ಲಿಯೂ ಇವರು ಸಿದ್ಧಹಸ್ತರು. ಬೇಸಿಗೆ ಬಂತೆಂದರೆ ಸಾಕು, ಇಲ್ಲಿನ ಪ್ರತಿ ಮನೆಯಲ್ಲೂ ಗೃಹಿಣಿಯರು ಉಪ್ಪಿನಕಾಯಿ ತಯಾರಿಕೆಯಲ್ಲಿ ಮಗ್ನರಾಗಿರುತ್ತಾರೆ. ಮನೆಯಲ್ಲಿ ಸಿದ್ಧಪಡಿಸಿದ ಉಪ್ಪಿನಕಾಯಿ ಸ್ವಾದವೇ ಭಿನ್ನ. ಸಾಮಾನ್ಯವಾಗಿ ಬೇಸಿಗೆಯಲ್ಲೇ ಮಾವು, ನಿಂಬೆಯಂತಹ ಕಾಯಿಗಳು ಸಿಗೋದರಿಂದ ಇದೇ ಕಾಲ ಉಪ್ಪಿನಕಾಯಿಗೆ ಪ್ರಶಸ್ತ ಎನ್ನುವುದು ಇಲ್ಲಿನ ಗೃಹಿಣಿಯರ ನಂಬಿಕೆ.

ನಿಂಬೆಯೇ ಹೆಚ್ಚು
ನಿಂಬೆಕಾಯಿ ಉಪ್ಪಿನಕಾಯಿ ಇಲ್ಲಿ ತುಂಬ ಪ್ರಸಿದ್ಧಿ. ಇಲ್ಲಿರುವ ಬಿರು ಬಿಸಿಲಿಗೆ ಪಕ್ವವಾಗಿ ಬರುವ ನಿಂಬೆಕಾಯಿಗಳಿಂದಾಗಿಯೇ ಈ ಭಾಗದಲ್ಲಿನ ಜನ ಉಪ್ಪಿನಕಾಯಿ ಮಾಡುತ್ತಾರೆ. ಬೇಸಿಗೆಯಲ್ಲಿ ನಿಂಬು ಇಲ್ಲಿ ಹೆಚ್ಚಾಗಿ ಸಿಗುವುದರಿಂದ ಉಪ್ಪಿನಕಾಯಿ ಹಾಕುತ್ತಾರೆ. ನಿಂಬೆಯೇ ಹೆಚ್ಚಾದರೂ ಬದನೆ, ಟೊಮೆಟೋ, ಹಾಗಲಕಾಯಿ, ಮಾವಿನಕಾಯಿ ಉಪ್ಪಿನಕಾಯಿಗಳೂ ಇಲ್ಲಿ ತಯಾರಿಸ್ಪಡುತ್ತವೆ. ಕಲಬುರಗಿಯ ಮೀನಾಕ್ಷಿ ಅವಧಾನಿ ಮಣ್ಣೂರ, ಭಾಗ್ಯಲಕ್ಷ್ಮೀ ಅಕ್ಮಂಚಿಯವರು ತಾವು ಸಿದ್ಧಪಡಿಸುವ ಉಪ್ಪಿನಕಾಯಿಗಳ ವಿಶೇಷವನ್ನು ಹೀಗೆ ಹೇಳಿಕೊಳ್ಳುತ್ತಾರೆ ಕೇಳಿ. ಅವರ ಪ್ರಕಾರ ಉಪ್ಪಿನಕಾಯಿ ಸಿದ್ಧಪಡಿಸೋದು ಹೀಗಿದೆ ನೋಡಿ.

ನಿಂಬೆಕಾಯಿ ಉಪ್ಪಿನಕಾಯಿ
ಬಲಿತ 30 ನಿಂಬೆಕಾಯಿಗಳನ್ನು ತೊಳೆದು ಹೋಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು. ಇಂಗು, ಮೆಂತ್ಯೆ ಪುಡಿ ಹಾಗೂ ಖಾರದ ಪುಡಿ ಮಿಶ್ರಣವನ್ನು ಒಂದು 1 ಬಟ್ಟಲು ಮಾಡಿಟ್ಟುಕೊಂಡು ಅದಕ್ಕೆ ಅರ್ಧ ಕೆಜಿ ಸಕ್ಕರೆ, ಅಷ್ಟೇ ಪ್ರಮಾಣದಲ್ಲಿ ಉಪ್ಪು ಬೆರೆಸಬೇಕು. ನಿಂಬೆ ಹೋಳುಗಳನ್ನೆಲ್ಲ ಕುಕ್ಕರ್‌ಗೆ ಸುರಿಯಬೇಕು, ಮಾರುಕಟ್ಟೆಯಲ್ಲಿ ಲಭ್ಯವಿರುವ ಉಪ್ಪಿನಕಾಯಿ ಮಸಾಲಾ (ಕೆಪ್ರೆ ಇತ್ಯಾದಿ), ಇಂಗು, ಮೆಂತ್ಯೆ ಪುಡಿ, ಖಾರದಪುಡಿ ಮಿಶ್ರಣ, ಉಪ್ಪು ಎಲ್ಲವನ್ನು ಬೆರೆಸಿ ಚೆನ್ನಾಗಿ ಕಲುಕಿ 4 ಬಾರಿ ಶಿಳ್ಳೆ ಹೊಡೆಯುವವರೆಗೂ ಒಲೆಯ ಮೇಲಿಟ್ಟು ಕುದಿಸಬೇಕು. ನಂತರ ಕುಕ್ಕರ್ ರಿಲೀಸ್  ಆದ್ಮೇಲೆ ಅರ್ಧ ಕೆಜಿ ಸಕ್ಕರೆ ಬೆರೆಸಿ ಚೆನ್ನಾಗಿ ಕಲಿಸಿಡಬೇಕು. ನಾಲ್ಕು ದಿನದ ನಂತರ ಸ್ವಾದಿಷ್ಟ, ಮಸಾಲಾಯುಕ್ತ ನಿಂಬೆ ಉಪ್ಪಿನಕಾಯಿ ಬಳಕೆಗೆ ಸಿದ್ಧವಾಗಿರುತ್ತದೆ.

ಮಾವಿನಕಾಯಿ ಉಪ್ಪಿನಕಾಯಿ
ಚೆನ್ನಾಗಿ ಬಲಿತ 30 ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಅರ್ಧ ಕೆಜಿ ಉಪ್ಪು, ದೊಡ್ಡ ಬಟ್ಟಲು ಸಾಸಿವೆ ಪುಡಿ, ಉಪ್ಪಿನಕಾಯಿ ಮಸಾಲಾ, ಇಂಗು, ಮೆಂತ್ಯಪುಡಿ, ಖಾರದ ಪುಡಿ ಹಾಗೂ ಅರಿಶಿಣ ಪುಡಿ ಬೇಕು. ಮಾವಿನಕಾಯಿಯನ್ನು ಸಣ್ಣ  ಹೋಳುಗಳನ್ನಾಗಿ ಹೆಚ್ಚಿಟ್ಟುಕೊಂಡು ಮೇಲೆ ಹೇಳಿದ ಎಲ್ಲಾ ಪದಾರ್ಥಗಳ ಮಿಶ್ರಣ ಅದರಲ್ಲಿ ಹಾಕಿ ಚೆನ್ನಾಗಿ ಕಲಸಿ ಇಡಬೇಕು. ನಾಲ್ಕು ದಿನದ ನಂತರ ಬಳಕೆಗೆ ಪ್ರತ್ಯೇಕ ಜಾಡಿಯಲ್ಲಿ ಉಪ್ಪಿನಕಾಯಿ ತೆಗೆದು ಒಗ್ಗರಣೆ ಹಾಕಿ  ಸವಿಯಬಹುದು. ನಿಂಬೆಕಾಯಿ ಉಪ್ಪಿನಕಾಯಿ ತಯಾರಿಸುವಂತೆಯೇ ಇಲ್ಲಿಯೂ ಕುಕ್ಕರ್‌ನಲ್ಲಿ ಇವನ್ನೆಲ್ಲ ಹಾಕಿ ೪ ಬಾರಿ ಶಿಳ್ಳೆ ಹೊಡೆಸಿ ರುಚಿಗೆ ತಕ್ಕಂತೆ ಉಪ್ಪು- ಸಕ್ಕರೆ ಬೆರೆಸಿಯೂ ಸಿದ್ಧಪಡಿಸಬಹುದು.
 

ಹಾಗಲಕಾಯಿ ಉಪ್ಪಿನಕಾಯಿ
ಮೊದಲೇ ಕಹಿ ಇರುವ ಹಾಗಲಕಾಯಿ ಅದ್ಹೇಗೆ ಉಪ್ಪಿನಕಾಯಿ ಮಾಡುತ್ತಾರೆ ಅಂತೀರೇನು? ಅರ್ಧ ಕೆಜಿ ಹಾಗಲಕಾಯಿ ಗುಂಡಗಿನ ಹೋಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು. ಜೊತೆಗೆ 10, 12 ಹಸಿ ಮೆಣಸಿನಕಾಯಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. 1 ಬಟ್ಟಲಲ್ಲಿ ಒಗ್ಗರಣೆ ಇರಲಿ. ಸಾಸಿವೆ ಪುಡಿ, ಅರಿಶಿಣ, ಇಂಗು, ಮೆಂತ್ಯೆಪುಡಿ 1 ಬಟ್ಟಲು ಮಿಶ್ರಣವನ್ನ ಹಾಗಲಕಾಯಿ ಹೋಳುಗಳಲ್ಲಿ ಬೆರೆಸಿ ಕಲಕಿರಿ, 5 ನಿಂಬೆಕಾಯಿ ರಸವನ್ನು ಮಿಶ್ರಣಕ್ಕೆ ಸುರಿದು ಮತ್ತೆ ಚೆನ್ನಾಗಿ ಕಲಕಬೇಕು. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಒಗ್ಗರಣೆ ಹಾಕಿದರೆ ಸಾಕು, ಹಾಗಲಕಾಯಿ ಉಪ್ಪಿನಕಾಯಿ ಸಿದ್ಧ. ಫ್ರಿಡ್ಜ್‌ನಲ್ಲಿಟ್ಟು ಇದನ್ನು 1 ತಿಂಗಳ ಕಾಲ ಬಳಸಬಹುದು.

ಟೊಮೆಟೋ ಉಪ್ಪಿನಕಾಯಿ
ಅರ್ಧ ಕೆಜಿ ಟೊಮೆಟೋ ಉಪ್ಪಿನಕಾಯಿಗೆ ಮೆಂತ್ಯೆಪುಡಿ, ಸಾಸಿವೆ ಪುಡಿ, ಇಂಗು, ಖಾರದ 1 ಬಟ್ಟಲು ಮಿಶ್ರಣ, 1 ಬಟ್ಟಲು ಸಕ್ಕರೆ ಬೇಕು. ಟೊಮೆಟೋ ಚೆನ್ನಾಗಿ ಬೇಯಿಸಿ ಅದಕ್ಕೆ ಈ ಪದಾರ್ಥಗಳನ್ನೆಲ್ಲ ಬೆರೆಸಿ ತಿರುವಬೇಕು. ಅರ್ಧ ಬಟ್ಟಲು ಉಪ್ಪು ಬೆರೆಸಿದರೆ ಸಾಕು, ಟೊಮೆಟೋ ಉಪಿನಕಾಯಿ ಬಳಕೆಗೆ ಸಿದ್ಧ. ಮಾರುಕಟ್ಟೆಯಲ್ಲಿ ಸಿಗುವ ಸಾಸ್ ತರಹ ಇದನ್ನು ತುಸು ಖಟ್ಟಾ-ಮಿಟ್ಟಾ ರೀತಿಯಲ್ಲಿಯೂ ಸಿದ್ಧಪಡಿಸಬಹುದು. ರುಚಿಯಲ್ಲಿ ತುಸು ಹುಳಿ ಬೇಕಾದಲ್ಲಿ  ಉಪ್ಪು ಹೆಚ್ಚಿಗೆ ಬಳಸಬೇಕು, ಸಿಹಿ ಬೇಕಾದಲ್ಲಿ ಸಕ್ಕರೆ ಸ್ವಲ್ಪ ಹೆಚ್ಚು ಬೆರೆಸಿದರಾಯ್ತು.

 ಬದನೆಕಾಯಿ ಉಪ್ಪಿನಕಾಯಿ
ಅರ್ಧ ಕೆಜಿ ಬದನೆಕಾಯಿ ಉಪ್ಪಿನಕಾಯಿಗೆ ಮೆಂತ್ಯೆಪುಡಿ, ಇಂಗು, ಖಾರದ ಪುಡಿ, ಸಾಸವಿ ಪುಡಿ, ಉಪ್ಪಿರುವ 1 ಬಟ್ಟಲು ಮಿಶ್ರಣ ಬೇಕು. ಬದನೆಯನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ಈ ಮಿಶ್ರಣದ ಜೊತೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ 3 ನಿಂಬು ಬಳಸಿ ಅದರ ರಸವನ್ನು ಹಿಂಡಿಟ್ಟರೆ ಸಾಕು ಬದನೆ ಉಪ್ಪಿನಕಾಯಿ ರೆಡಿ. ಇದು 10 ದಿನಗಳ ತನಕ ಬಳಸಲು ಯೋಗ್ಯವಾಗಿರುತ್ತದೆ.  

-ಶೇಷಮೂರ್ತಿ ಅವಧಾನಿ