ಹೆಚ್ಚೆಚ್ಚು ಓದಿ ಬರೆದು ಮಾಡುವವರು ಹೆಚ್ಚು ಹೊತ್ತು ಕುಳಿತಿರುವುದರಿಂದ ಅವರಿಗೆ ಹೃದ್ರೋಗದಂತಹ ಅನಾರೋಗ್ಯ ಹೆಚ್ಚಾಗಿ ಕಾಡಬಹುದು ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಇತ್ತೀಚಿನ ಅಧ್ಯಯನವೊಂದು ಇದಕ್ಕೆ ವಿರುದ್ಧವಾದ ಸಂಗತಿಯನ್ನು ಹೇಳುತ್ತಿದೆ.

ಅದರ ಪ್ರಕಾರ, ಹೆಚ್ಚು ವಿದ್ಯಾಭ್ಯಾಸ ಮಾಡಿದವರಿಗೆ ಹೃದ್ರೋಗಗಳು ಬರುವ ಸಾಧ್ಯತೆ ಕಡಿಮೆಯಂತೆ. ಸ್ಯಾನ್‌ಫ್ರಾನ್ಸಿಸ್ಕೋ ಯುಸಿ ಹಾಗೂ ಸ್ಟಾನ್‌ಫೋರ್ಡ್‌ ಯುನಿವರ್ಸಿಟಿಯವರು ನಡೆಸಿದ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದೆ.

ಪಿಎಲ್‌ಒಎಸ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಈ ಅಧ್ಯಯನದ ಬಗ್ಗೆ ಲೇಖನ ಪ್ರಕಟವಾಗಿದೆ. ಜನರು ಹೆಚ್ಚು ವಿದ್ಯಾಭ್ಯಾಸ ಮಾಡಿದ್ದರೆ ಅವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಅದರಿಂದ ಒಳ್ಳೆಯ ಸಂಬಳ ಬರುತ್ತದೆ. ಆಗ ಒಳ್ಳೆಯ ಆಹಾರ ಸೇವಿಸುತ್ತಾರೆ ಮತ್ತು ಆಗಾಗ ಹೆಲ್ತ್‌ ಚೆಕಪ್‌ ಮಾಡಿಸಿಕೊಳ್ಳುತ್ತಾರೆ.

ಹುಷಾರಿಲ್ಲದಿದ್ದರೆ ಬೇಗ ಡಾಕ್ಟರ್‌ ಬಳಿ ಹೋಗುತ್ತಾರೆ. ಜೊತೆಗೆ ದುಡ್ಡಿನ ಚಿಂತೆಯಿಲ್ಲದೆ ಇರುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಿರುತ್ತದೆ. ಇವೆಲ್ಲ ಅಂಶಗಳಿಂದಾಗಿ ಅವರಿಗೆ ಹೃದ್ರೋಗಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಲೇಖನದಲ್ಲಿ ಹೇಳಲಾಗಿದೆ.

1971ರಿಂದ 2012ರ ನಡುವೆ 75000 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರೆಲ್ಲ 1900ರಿಂದ 1950ರ ನಡುವೆ ಜನಿಸಿದವರು. ಇವರ ಆರೋಗ್ಯದ ದಾಖಲೆಗಳನ್ನು ಪರಿಶೀಲಿಸಿ ಮೇಲಿನ ನಿರ್ಧಾರಕ್ಕೆ ವೈದ್ಯಕೀಯ ಸಂಶೋಧಕರು ಬಂದಿದ್ದಾರೆ.