ತರಕಾರಿ, ಹೂ, ಹಣ್ಣು, ದಿನಸಿ ಸಾಮಗ್ರಿಗಳು ಎಲ್ಲವನ್ನೂ ಪತಿಯೇ ಮನೆಗೆ ತಂದು ಹಾಕುತ್ತಾರೆ. ಶಾಪಿಂಗ್, ಬ್ಯೂಟಿ ಪಾರ್ಲರ್ ಎಲ್ಲಿಗೆ ಹೋಗೋದಿದ್ರೂ ಪತಿಯೇ ಕಾರಲ್ಲಿ ಡ್ರಾಪ್ ಮಾಡುತ್ತಾರೆ. ಬ್ಯಾಂಕ್‍ಗೆ ಹೋಗೋಕೂ ಪತಿ ಬೇಕು, ಮಕ್ಕಳ ಸ್ಕೂಲ್‍ನಲ್ಲಿ ಆಗಾಗ ಕರೆಯುವ ಪೇರೇಂಟ್ಸ್ –ಟೀಚರ್ಸ್ ಮೀಟಿಂಗ್‍ಗೂ ಪತಿಯೊಂದಿಗೇ ಹೋಗೋದು.ಕರೆಂಟ್ ಬಿಲ್, ವಾಟರ್ ಬಿಲ್, ನ್ಯೂಸ್‍ಪೇಪರ್ ಬಿಲ್ ಎಲ್ಲವನ್ನೂ ಪತಿಯೇ ಕಟ್ಟುತ್ತಾರೆ. ಆನ್‍ಲೈನ್‍ನಲ್ಲಿ ಏನಾದ್ರೂ ಆರ್ಡರ್ ಮಾಡೋದಾದ್ರೂ ಗಂಡನ ಹತ್ತಿರನೇ ಹೇಳೋದು.ಕೆಲವು ಗೃಹಿಣಿಯರನ್ನು ಮಾತನಾಡಿಸಿದ್ರೆ ಇಂಥ ಮಾತುಗಳು ಕೇಳಲು ಸಿಗುತ್ತವೆ. ಅಂದ ಹಾಗೇ ಈ ಮಾತುಗಳನ್ನು ಹೇಳುವಾಗ ಆಕೆಗೆ ಒಂದಿಷ್ಟೂ ಅಳುಕಿರುವುದಿಲ್ಲ.ಬದಲಿಗೆ ಪತಿ ತನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಹೆಮ್ಮೆಯ ಭಾವವಿರುತ್ತದೆ. ಆದರೆ, ಈ ರೀತಿ ಪ್ರತಿ ಕೆಲಸಕ್ಕೂ ಪತಿಯನ್ನು ಅವಲಂಬಿಸುವುದು ಒಳ್ಳೆಯದಾ? ಖಂಡಿತಾ ಒಳ್ಳೆಯದ್ದಲ್ಲ ಎನ್ನುತ್ತಾರೆ ರಿಲೇಷನ್‍ಶಿಪ್ ಎಕ್ಸ್ಫಟ್ರ್ಸ್.ಸಂಗಾತಿ ಮೇಲಿನ ಅತಿಯಾದ ಅವಲಂಬನೆ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆಯಿದೆ ಎಂಬುದು ಇವರ ಅನಿಸಿಕೆ. ಹಾಗಂತ ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ನೆರವು ನೀಡುವುದು ಕೂಡ ಆರೋಗ್ಯಕರ ಸಂಬಂಧವರ್ಧನೆಗೆ ಅಗತ್ಯ.ಆದರೆ, ಅತಿಯಾದರೆ ಅಮೃತವೂ ವಿಷವೆಂಬಂತೆ ಎಲ್ಲೆ ಮೀರಿದರೆ ಅವಲಂಬನೆ ಸಂಬಂಧವನ್ನು ಕೆಡಿಸುವ ಸಾಧ್ಯತೆಯಿದೆ. ಸಂಬಂಧದ ಆರೋಗ್ಯಕ್ಕೆ ಖಾಸಗಿತನಕ್ಕೆ ಒಂದಿಷ್ಟು ಅವಕಾಶ ನೀಡುವುದು ಕೂಡ ಅಗತ್ಯ. ಹಾಗಾದ್ರೆ ನೀವು ನಿಮ್ಮ ಸಂಗಾತಿ ಮೇಲೆ ಲೆಕ್ಕಕ್ಕಿಂತ ಹೆಚ್ಚೇ ಅವಲಂಬಿತರಾಗಿದ್ದೀರಿ ಎಂಬುದನ್ನು ತಿಳಿಯುವುದು ಹೇಗೆ? 

ಸೀರೆಲಿ ಹುಡುಗರ ನೋಡಲೇಬಾರದು ಏಕೆ?

ಒಬ್ಬಂಟಿಯಾಗಿ ಯಾವುದೇ ಕೆಲಸ ಮಾಡೋದು ಅಸಾಧ್ಯ: ಶಾಪಿಂಗ್‍ಗೆ ನೀವು ಒಬ್ಬರೇ ಹೋಗುತ್ತೀರಾ? ಪತಿಯಿಲ್ಲದೆ ಒಂಟಿಯಾಗಿ ಬ್ಯಾಂಕ್‍ಗೆ ಹೋಗಿ ಬರುತ್ತೀರಾ? ನಿಮ್ಮ ಉತ್ತರ ಇಲ್ಲವೆಂದಾದರೆ ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಏಕೆಂದರೆ ಇದು ಅತಿಯಾದ ಅವಲಂಬನೆಯ ಲಕ್ಷಣ. ಈ ರೀತಿ ಪ್ರತಿ ಕೆಲಸವನ್ನು ಸಂಗಾತಿ ಜೊತೆಗೂಡಿ ಮಾಡುವ ಅಭ್ಯಾಸವಿರುವ ವ್ಯಕ್ತಿಯು ಯಾವುದಾದರೂ ಪರಿಸ್ಥಿತಿಯನ್ನು ಒಬ್ಬಂಟಿಯಾಗಿ ಎದುರಿಸಬೇಕಾದ ಅನಿವಾರ್ಯತೆ ಬಂದಾಗ ಉದ್ವೇಗಕ್ಕೊಳಗಾಗುತ್ತಾರೆ.ಉದಾಹರಣೆಗೆ ಬರ್ತ್‍ಡೇ ಪಾರ್ಟಿಗೆ ಒಬ್ಬರೇ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ಅಲ್ಲಿ ನೆರೆದಿರುವ ಜನರನ್ನು ಹೇಗೆ ಎದುರಿಸುವುದು ಎಂಬ ಆತಂಕ ಅವರನ್ನು ಕಾಡುತ್ತದೆ.

ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿರುವುದು: ಪ್ರತಿ ನಿರ್ಧಾರಕ್ಕೂ ಸಂಗಾತಿಯನ್ನು ಅವಲಂಬಿಸುವ ಗುಣ ಹೊಂದಿರುವುದು ಇಲ್ಲವೆ ನಿಮ್ಮ ದೈನಂದಿನ ಬದುಕಿನ ಪ್ರತಿ ನಿರ್ಧಾರವೂ ಸಂಗಾತಿಯದ್ದೇ ಆಗಿರುವುದು.ಶಾಪಿಂಗ್‍ಗೆ ಹೋದಾಗ ಸಂಗಾತಿ ಹೇಳಿದ ಡ್ರೆಸ್‍ನ್ನೇ ಆಯ್ಕೆ ಮಾಡೋದು, ಹೋಟೆಲ್‍ನಲ್ಲಿ ಯಾವ ತಿಂಡಿ ಆರ್ಡರ್ ಮಾಡೋದು ಎಂಬುದನ್ನು ಕೂಡ ನಿರ್ಧರಿಸಲು ಸಾಧ್ಯವಾಗದೆ ಸಂಗಾತಿಯನ್ನು ಕೇಳುವ ಗುಣ ನಿಮ್ಮಲ್ಲಿದ್ದರೆ, ಇದು ಸಂಬಂಧದಲ್ಲಿ ಬಿರುಕು ಮೂಡಿಸುವ ಎಲ್ಲ ಸಾಧ್ಯತೆಗಳಿವೆ. ಹೇಗೆ ನಿಮ್ಮ ಪೋಷಕರು ನೀವು ಚಿಕ್ಕವರಿರುವಾಗ ಧರಿಸುವ ಬಟ್ಟೆಯಿಂದ ಹಿಡಿದು ನೀವು ಓದಬೇಕಾದ ಸ್ಕೂಲ್ ತನಕ ಎಲ್ಲವನ್ನೂ ನಿರ್ಧರಿಸುತ್ತಿದ್ದರೋ ಹಾಗೆಯೇ ಇಂದು ಎಲ್ಲ ವಿಚಾರಗಳನ್ನು ಸಂಗಾತಿಯೇ ನೋಡಿಕೊಳ್ಳಬೇಕು ಎಂದರೆ ನೀವು ವಯಸ್ಸಾದರೂ ಬುದ್ಧಿ ಬೆಳೆಯದ ಮಗು ಎಂದೇ ಹೇಳಬಹುದು. ನಿಮ್ಮ ಸಂಗಾತಿಯನ್ನು ಪೋಷಕರು ಅಥವಾ ಕೇರ್ ಟೇಕರ್ ರೀತಿಯಲ್ಲಿ ಟ್ರೀಟ್ ಮಾಡಿದರೆ ಸಂಬಂಧ ಹಳಸುವುದು ಪಕ್ಕಾ.  

'ಆ ಟೈಮ್' ನಲ್ಲಿ ಮಗು ಎದ್ದರೆ ಏನ್ಮಾಡ್ಬೇಕು?

ಸಂಗಾತಿಯನ್ನು ಆಧರಿಸಿ ಖುಷಿ, ದುಃಖ: ನಿಮ್ಮ ಖುಷಿ, ಸಂತೋಷ ಸಂಗಾತಿಯನ್ನು ಅವಲಂಬಿಸಿದೆಯಾ? ಅಂದರೆ ಸಂಗಾತಿ ಖುಷಿಯಲ್ಲಿದ್ದರೆ ಮಾತ್ರ ನೀವು ಖುಷಿಯಾಗಿರುವುದು. ಅಥವಾ ನಿಮ್ಮ ನೆಮ್ಮದಿ ಸಂಗಾತಿಯ ವರ್ತನೆಯನ್ನು ಅವಲಂಬಿಸಿರುವುದು.ಉದಾಹರಣೆಗೆ ಪತ್ನಿಗೆ ತಾನು ಧರಿಸಿರುವ ಹೊಸ ಡ್ರೆಸ್ ನೋಡಿ ಪತಿ ಹೊಗಳಿದರೆ ಖುಷಿಯಾಗುತ್ತದೆ ಇಲ್ಲವಾದರೆ ಇಡೀ ದಿನ ಮೂಡ್ ಆಪ್ ಆಗಿರುವುದು. ಇಂಥ ಗುಣ ನಿಮ್ಮಲ್ಲಿದ್ದರೆ ಇದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸುವುದು ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲದು.ನಿಮ್ಮ ಖುಷಿ, ಸಂತೋಷಗಳು ನಿಮ್ಮ ನಿಯಂತ್ರಣದಲ್ಲೇ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಇನ್ನೊಬ್ಬರಿಂದ ನಿಮ್ಮ ಖುಷಿಯನ್ನು ನಿರೀಕ್ಷಿಸಿದರೆ ಖಿನ್ನತೆಯಂತಹ ಮಾನಸಿಕ ವ್ಯಾಧಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ, ಎಚ್ಚರ. ಇನ್ನು ಸಂಗಾತಿಗೆ ನಿಮ್ಮ ಈ ವರ್ತನೆ ಕಿರಿಕಿರಿ ತರಬಹುದು.

ಪ್ರತಿ ಕೆಲಸಕ್ಕೂ ಸಂಗಾತಿ ಒಪ್ಪಿಗೆ ಅಗತ್ಯ: ನಿತ್ಯ ನೀವು ಮಾಡುವ ಪ್ರತಿ ಕೆಲಸಕ್ಕೂ ಸಂಗಾತಿಯ ಒಪ್ಪಿಗೆ ನಿರೀಕ್ಷಿಸುವುದು. ಉದಾಹರಣೆಗೆ ಬೆಳಗ್ಗೆ ಏನು ತಿಂಡಿ ಮಾಡಬೇಕು, ರಾತ್ರಿಗೆ ಏನು ಸಾಂಬಾರ್ ಮಾಡೋದು, ಯಾವ ತರಕಾರಿ ತರುವುದು...ಇಂಥ ಚಿಕ್ಕಪುಟ್ಟ ಕೆಲಸಗಳಿಗೂ ಪತಿ ಬಳಿ ಕೇಳುವ ಅಭ್ಯಾಸ ಪತ್ನಿಗಿದ್ದರೆ ಒಂದಲ್ಲ ಒಂದು ದಿನ ದಾಂಪತ್ಯದಲ್ಲಿ ಅಸಮಾಧಾನ ಸ್ಫೋಟಗೊಳ್ಳುವುದು ಖಚಿತ.

ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

ಸಂಗಾತಿಯ ಸ್ನೇಹಿತರೇ ನಿಮಗೂ ಸ್ನೇಹಿತರು: ಮದುವೆಯಾದ ಬಳಿಕ ಹಳೆಯ ಸ್ನೇಹಿತರನ್ನೆಲ್ಲ ಮರೆತು ಪತಿಯ ಸ್ನೇಹಿತರೊಂದಿಗೇ ಪಾರ್ಟಿ ಮಾಡುವ ಮಹಿಳೆ ನೀವಾಗಿದ್ದರೆ, ಆ ಸರ್ಕಲ್‍ನಿಂದ ಆದಷ್ಟು ಬೇಗ ಹೊರಬಂದು ನಿಮ್ಮದೇ ಒಂದು ಸ್ನೇಹಿತರ ಗುಂಪು ಕಟ್ಟಿಕೊಳ್ಳುವುದು ಅತ್ಯಗತ್ಯ.ಪ್ರಾರಂಭದಲ್ಲಿ ಪತಿಗೆ ನಿಮ್ಮ ಈ ವರ್ತನೆ ಖುಷಿಯೇ ತರಬಹುದು.ಆದರೆ, ಕ್ರಮೇಣ ಹೋದಕಡೆ, ಬಂದಕಡೆಯೆಲ್ಲ ನೀವು ಮೂಗು ತೂರಿಸುತ್ತಿದ್ದರೆ ಅವರಿಗೆ ಪ್ರೈವಸಿ ಕೊರತೆ ಕಾಡಬಹುದು.ಇದು ನಿಮ್ಮಿಬ್ಬರ ನಡುವೆ ವೈಮನಸ್ಸಿಗೆ ಕಾರಣವಾದರೂ ಅಚ್ಚರಿಯಿಲ್ಲ.