ನ್ಯೂಯಾರ್ಕ್ ನಗರದ ನಿವೃತ್ತ ೪೪ ಸಬ್ವೇ ರೈಲು ಬೋಗಿಗಳನ್ನು ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿಸಿ ಕೃತಕ ಬಂಡೆಗಳನ್ನು ನಿರ್ಮಿಸಲಾಗಿದೆ. ಈ ಬೋಗಿಗಳು ಜಲಚರಗಳಿಗೆ ಸುರಕ್ಷಿತ ಆಶ್ರಯ ತಾಣವಾಗಿ ಮಾರ್ಪಟ್ಟು, ಸಮುದ್ರದೊಳಗೆ ಒಂದು ಅದ್ಭುತ ಮೀನುಗಳ ಸಾಮ್ರಾಜ್ಯವನ್ನೇ ಸೃಷ್ಟಿಸಿವೆ. ಇದು ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆಯ ಯಶಸ್ವಿ ಮಾದರಿಯಾಗಿದೆ.
ಹಳೆಯ ರೈಲುಗಳು ಈಗ ಉಪ್ಪುನೀರಿನ ಜಲಚರಗಳ ಮನೆ: ಸಮುದ್ರದೊಳಗೆ ನೂತನ 'ಮೀನುಗಳ ಸಾಮ್ರಾಜ್ಯ' ಸೃಷ್ಟಿ!
ಜೂನ್ 2008ರಲ್ಲಿ, ವರ್ಜೀನಿಯಾ ಕರಾವಳಿಯ ಚಿಂಕೋಟೀಗ್ ಎಂಬಲ್ಲಿಂದ ಸುಮಾರು 11 ಮೈಲಿ ದೂರದಲ್ಲಿರುವ 'ಬ್ಲ್ಯಾಕ್ಫಿಶ್ ಬ್ಯಾಂಕ್ ರೀಫ್' ಎಂಬ ಜಾಗದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಇಲ್ಲಿ ಒಂದು ನಿಗೂಢವಾದ ಮೀನಿನ ಸಾಮ್ರಾಜ್ಯವೇ ಕಂಡು ಬಂದಿದೆ. ಅಲ್ಲದೇ ಅಲ್ಲಿ ಸೃಷ್ಟಿಯಾದ ಜಲಚರಗಳ ಮನೆಗೆ ಜಗತ್ತೆ ಅಚ್ಚರಿಗೊಂಡಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಏನಿದು ಘಟನೆ?
ನ್ಯೂಯಾರ್ಕ್ ನಗರದಲ್ಲಿ ಬಳಸಿ ನಿವೃತ್ತಿಗೊಳಿಸಲಾಗಿದ್ದ ೪೪ ಸಬ್ವೇ ರೈಲು ಬೋಗಿಗಳನ್ನು ಉದ್ದೇಶಪೂರ್ವಕವಾಗಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿಸಲಾಯಿತು. ಪ್ರತಿಯೊಂದು ಸ್ಟೀಲ್ ಬೋಗಿಯೂ ಸುಮಾರು 50 ಅಡಿ ಉದ್ದವಿದ್ದು, 17ರಿಂದ 18 ಟನ್ ತೂಕ ಹೊಂದಿದ್ದವು. ಬೋಗಿಗಳನ್ನು ಸಮುದ್ರಕ್ಕೆ ಹಾಕುವ ಮುನ್ನ ಪರಿಸರ ಮಾಲಿನ್ಯ ತಡೆಯಲು ಅವುಗಳಲ್ಲಿದ್ದ ಗಾಜು, ಬಾಗಿಲು, ಗ್ರೀಸ್, ತೈಲ ಮತ್ತು ವೈರಿಂಗ್ಗಳನ್ನು ಸಂಪೂರ್ಣವಾಗಿ ತೆಗೆದು ಕೆಮಿಕಲ್ ವಾಶ್ ಮಾಡಲಾಗಿತ್ತು. ಇಂಥ ಭೊಗಿಗಳನ್ನು ಅಲ್ಲಿ ಮುಳುಗಿಸಲಾಯಿತು.
ಹಳೆಯ ರಚನೆಗಳ ಸೇರ್ಪಡೆ!
ಈ ಜಾಗದಲ್ಲಿ ಈಗಾಗಲೇ ಮುಳುಗಿಸಲಾಗಿದ್ದ ಹಳೆಯ ಹಡಗುಗಳು, ಕಾಂಕ್ರೀಟ್ ಪೈಪ್ಗಳು ಮತ್ತು ಸೇನಾ ವಾಹನಗಳ ಜೊತೆಗೆ ಈ ಬೋಗಿಗಳನ್ನು ಸೇರಿಸಿ ಕೃತಕ ಬಂಡೆಯನ್ನು ವಿಸ್ತರಿಸಲಾಯಿತು. ಸಮುದ್ರದ ತಳದ ಮರಳಿನಲ್ಲಿ ಮೀನುಗಳಿಗೆ ಮೊಟ್ಟೆಯಿಡಲು ಅಥವಾ ಆಶ್ರಯ ಪಡೆಯಲು ಜಾಗ ಇರುವುದಿಲ್ಲ. ಈ ಬೋಗಿಗಳು ಮೀನುಗಳಿಗೆ 'ಕೃತಕ ಬಂಡೆ' ಅಥವಾ ಸುರಕ್ಷಿತ ಆಶ್ರಯ ತಾಣವಾಗಿ ಕೆಲಸ ಮಾಡುತ್ತಿವೆ.
ಆಹಾರದ ಸರಪಳಿ ವೃದ್ಧಿ!
ಈ ಸ್ಟೀಲ್ ರಚನೆಗಳ ಮೇಲೆ ಮಸೆಲ್ಸ್, ಕರಾವಳಿ ಪಾಚಿ ಮತ್ತು ಹವಳಗಳು ಸುಲಭವಾಗಿ ಬೆಳೆಯುತ್ತವೆ. ಇದರಿಂದಾಗಿ ಸಾಮಾನ್ಯ ಮರಳು ಪ್ರದೇಶಕ್ಕಿಂತ ೪೦೦ ಪಟ್ಟು ಹೆಚ್ಚು ಜಲಚರ ಆಹಾರ ಇಲ್ಲಿ ಉತ್ಪತ್ತಿಯಾಗುತ್ತದೆ. ಬ್ಲ್ಯಾಕ್ ಸೀ ಬಾಸ್ ಮತ್ತು ಟಾಟಾಗ್ನಂತಹ ಪ್ರಮುಖ ಮೀನುಗಳು ಇಲ್ಲಿ ಹೆಚ್ಚಾಗಿ ಆಕರ್ಷಿತವಾಗುವುದರಿಂದ ಸ್ಥಳೀಯ ಕ್ರೀಡಾ ಮತ್ತು ವಾಣಿಜ್ಯ ಮೀನುಗಾರಿಕೆಗೆ ದೊಡ್ಡ ಲಾಭವಾಗಿದೆ. ಅಷ್ಟೇ ಅಲ್ಲ ಈ ಬೃಹತ್ ಯೋಜನೆಯಿಂದಾಗಿ ನ್ಯೂಯಾರ್ಕ್ನ ಸಾರಿಗೆ ಸಂಸ್ಥೆಗೆ (MTA) ಹಳೆಯ ಬೋಗಿಗಳನ್ನು ಸಾಂಪ್ರದಾಯಿಕವಾಗಿ ರಿಸೈಕಲ್ ಮಾಡುವ ೨೦ ಮಿಲಿಯನ್ ಡಾಲರ್ಗೂ ಅಧಿಕ ವೆಚ್ಚ ಉಳಿತಾಯವಾಯಿತು.
ಪರಿಸರ ಪ್ರೇಮಿಗಳ ಮೆಚ್ಚುಗೆ ಮತ್ತು ಯಶಸ್ವಿ ಪ್ರಯೋಗ!
ಆರಂಭದಲ್ಲಿ ಪರಿಸರವಾದಿಗಳು ಈ ಯೋಜನೆಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಸಮುದ್ರಕ್ಕೆ ಹಾಕಿದ ಕೆಲವೇ ತಿಂಗಳುಗಳಲ್ಲಿ ಈ ಸ್ಟೀಲ್ ಬೋಗಿಗಳ ಮೇಲೆ ಜಲಚರ ಸಸ್ಯಗಳು ಮತ್ತು ಹವಳಗಳು ದಟ್ಟವಾಗಿ ಬೆಳೆಯಲಾರಂಭಿಸಿದವು. ಇದು ಜಲಚರಗಳ ಸಂತಾನೋತ್ಪತ್ತಿಗೆ ಅತ್ಯಂತ ಯಶಸ್ವಿ ಮತ್ತು ಸುರಕ್ಷಿತ ಪ್ರಯೋಗ ಎಂದು ಸಾಬೀತಾಯಿತು. ಈ ಸಬ್ವೇ ಬೋಗಿಗಳು ಮತ್ತು ಸೇನಾ ವಾಹನಗಳು ಸಮುದ್ರದ ಅಡಿಯಲ್ಲಿ ಒಂದು ವಿಭಿನ್ನ ಪ್ರಪಂಚವನ್ನೇ ಸೃಷ್ಟಿಸಿವೆ. ಇದರಿಂದಾಗಿ ಇದು ಕೇವಲ ಮೀನುಗಾರರಿಗೆ ಮಾತ್ರವಲ್ಲದೆ, ಸಮುದ್ರದ ಆಳದ ಸೌಂದರ್ಯವನ್ನು ನೋಡಬಯಸುವ ಸ್ಕೂಬಾ ಡೈವರ್ಸ್ಗಳ ನೆಚ್ಚಿನ ಪ್ರವಾಸಿ ತಾಣವಾಗಿ ಬದಲಾಗಿದೆ.
ದೊಡ್ಡ ಪ್ರಮಾಣದ ಮಾದರಿ ಯೋಜನೆ!
ವರ್ಜೀನಿಯಾ ಮಾತ್ರವಲ್ಲದೆ ಅಮೆರಿಕದ ಇತರ ಪೂರ್ವ ಕರಾವಳಿ ರಾಜ್ಯಗಳಾದ ಡೆಲವೇರ್, ನ್ಯೂಜೆರ್ಸಿ ಮತ್ತು ಸೌತ್ ಕೆರೊಲಿನಾಗಳು ಸಹ ಈ ಯೋಜನೆಯಡಿ ಒಟ್ಟು ೨,೫೦೦ ಕ್ಕೂ ಹೆಚ್ಚು ನಿವೃತ್ತ ರೈಲು ಬೋಗಿಗಳನ್ನು ಸಮುದ್ರದಲ್ಲಿ ಮುಳುಗಿಸಿವೆ. ಇದು ಜಾಗತಿಕ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಸಾಧಿಸಿದ ಅತ್ಯಂತ ವಿಶಿಷ್ಟ ಮಾದರಿಯಾಗಿದೆ.







