ಮಕ್ಕಳಿಗೆ ತರಕಾರಿ ತಿನ್ನಿಸುವುದು ಅಷ್ಟು ಸುಲಭದ ಕೆಲಸವಲ್ಲ. ತರಕಾರಿ ಎಂದಾಕ್ಷಣ ಮುಖ ಸಿಂಡರಿಸುವ ಮಕ್ಕಳಿಗೆ ಹೊಸ ಹೊಸ ರೀತಿಯಲ್ಲಿ ಊಟ ಮಾಡಿಸುವುದು ಪೋಷಕರಿಗೆ ಪ್ರತಿದಿನದ ಸವಾಲು. ಆದರೆ ಇಲ್ಲೊಬ್ಬ ತಾಯಿ ಮಾಡಿದ ಪ್ರಯೋಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ.

ಮಕ್ಕಳಿಗೆ ತರಕಾರಿ ತಿನ್ನಿಸುವುದು ಅಷ್ಟು ಸುಲಭದ ಕೆಲಸವಲ್ಲ. ತರಕಾರಿ ಎಂದಾಕ್ಷಣ ಮುಖ ಸಿಂಡರಿಸುವ ಮಕ್ಕಳಿಗೆ ಹೊಸ ಹೊಸ ರೀತಿಯಲ್ಲಿ ಊಟ ಮಾಡಿಸುವುದು ಪೋಷಕರಿಗೆ ಪ್ರತಿದಿನದ ಸವಾಲು. ಆದರೆ ಇಲ್ಲೊಬ್ಬ ತಾಯಿ ಮಾಡಿದ ಪ್ರಯೋಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಬಾಟಲ್ ಗಾರ್ಡ್‌ (ಸೋರೆಕಾಯಿ) ಬಳಸಿ ಚಪ್ಪಲಿ ಆಕಾರದ ಪಕೋಡಾ ತಯಾರಿಸಿ ಮಕ್ಕಳಿಗೆ ಬಡಿಸಿರುವ ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಅಥವಾ ಜ್ಯೂಸ್ ಮಾಡಲು ಬಳಸುವ ಸೋರೆಕಾಯಿಯನ್ನು ಈ ತಾಯಿ ವಿಭಿನ್ನ ರೀತಿಯಲ್ಲಿ ಬಳಸಿದ್ದಾರೆ. ಸೋರೆಕಾಯಿಗೆ ಚಪ್ಪಲಿ ಆಕಾರ ನೀಡಿ, ಅದನ್ನು ಪಕೋಡಾ ರೀತಿಯಲ್ಲಿ ಕರಿದು ಮಕ್ಕಳ ಮುಂದೆ ಇಟ್ಟಿದ್ದಾರೆ. ನೋಡಲು ನಿಜಕ್ಕೂ ಚಿಕ್ಕ ಚಿಕ್ಕ ಚಪ್ಪಲಿಗಳಂತೆಯೇ ಕಾಣುತ್ತಿರುವ ಈ ಸ್ನ್ಯಾಕ್ ನೆಟ್ಟಿಗರ ಗಮನ ಸೆಳೆದಿದೆ.

ಸೋರೆಕಾಯಿಯಿಂದ ಚಪ್ಪಲಿ ಪಕೋಡಾ!

ಫೇಸ್‌ಬುಕ್ ಬಳಕೆದಾರರಾದ ಹೇತಲ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಈ ವಿಭಿನ್ನ ಅಡುಗೆ ಪ್ರಯೋಗವನ್ನು ತೋರಿಸಲಾಗಿದೆ. ಮೊದಲು ಸೋರೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನಂತರ ಚಪ್ಪಲಿ ಆಕಾರದ ಪೇಪರ್ ಕಟ್‌ಔಟ್‌ ಅನ್ನು ಸೋರೆಕಾಯಿ ತುಂಡಿನ ಮೇಲೆ ಇಟ್ಟು ಅದೇ ಆಕಾರದಲ್ಲಿ ಕತ್ತರಿಸಲಾಗುತ್ತದೆ. ಬಳಿಕ ಟೂತ್‌ಪಿಕ್‌ ಮತ್ತು ಸೋರೆಕಾಯಿ ಸಿಪ್ಪೆಯ ಸಣ್ಣ ಪಟ್ಟಿಗಳನ್ನು ಬಳಸಿ ಚಪ್ಪಲಿಯ ಪಟ್ಟಿಯನ್ನೂ ತಯಾರಿಸಲಾಗಿದೆ.

ಬೇಸನ್ ಹಿಟ್ಟಿನಲ್ಲಿ ಅದ್ದಿ ಡೀಪ್ ಫ್ರೈ

ಚಪ್ಪಲಿ ಆಕಾರಕ್ಕೆ ಸಿದ್ಧಪಡಿಸಿದ ಸೋರೆಕಾಯಿ ತುಂಡುಗಳನ್ನು ಬಳಿಕ ಬೇಸನ್ ಹಿಟ್ಟಿನ ಮಿಶ್ರಣಕ್ಕೆ ಅದ್ದಲಾಗುತ್ತದೆ. ಬೇಸನ್‌ಗೆ ಮಸಾಲೆ ಮತ್ತು ನೀರು ಸೇರಿಸಿ ಪಕೋಡಾ ಬ್ಯಾಟರ್ ತಯಾರಿಸಲಾಗುತ್ತದೆ. ನಂತರ ಸೋರೆಕಾಯಿ ಚಪ್ಪಲಿಗಳನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಲಾಗುತ್ತದೆ. ಕರಿದ ಬಳಿಕ ಪ್ಲೇಟ್‌ನಲ್ಲಿ ಜೋಡಿಸಿ ಕೆಚಪ್‌ನೊಂದಿಗೆ ಸರ್ವ್ ಮಾಡಲಾಗಿದೆ. ನೋಡಲು ಚಿಕ್ಕ ಚಿಕ್ಕ ಚಪ್ಪಲಿಗಳಂತಿರುವ ಈ ಪಕೋಡಾಗಳು ಮಕ್ಕಳನ್ನು ಸೆಳೆಯುವಂತಿವೆ.

ಮಕ್ಕಳಿಗೆ ತರಕಾರಿ ತಿನ್ನಿಸಲು ಹೊಸ ಟ್ರಿಕ್!

ಮಕ್ಕಳು ಸೋರೆಕಾಯಿಯಂತಹ ತರಕಾರಿಗಳನ್ನು ತಿನ್ನಲು ಹಿಂದೇಟು ಹಾಕಿದರೆ, ಅವುಗಳನ್ನು ಆಕರ್ಷಕ ಆಕಾರದಲ್ಲಿ ನೀಡುವ ಮೂಲಕ ತಿನ್ನಿಸುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.

ಸಾಮಾನ್ಯವಾಗಿ ತರಕಾರಿ ತಿನ್ನಲು ಇಷ್ಟಪಡದ ಮಕ್ಕಳಿಗೂ ಇಂತಹ ಕ್ರಿಯೇಟಿವ್ ಫುಡ್ ಇಷ್ಟವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ತಾಯಿಯ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು “ಚಪ್ಪಲಿ ಆಕಾರದಲ್ಲಿ ಆಹಾರ ಯಾಕೆ?” ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ಮಕ್ಕಳಿಗೆ ಸೋರೆಕಾಯಿ ತಿನ್ನಿಸಲು ಇದು ಒಳ್ಳೆಯ ಐಡಿಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ, “ಚಪ್ಪಲಿ ತಿನ್ನುವ ಆಸೆ ಇನ್ನೂ ಹೆಚ್ಚಾಗಿದೆ ಅನಿಸುತ್ತದೆ!” ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಸರಳವಾದ ಸೋರೆಕಾಯಿಯನ್ನು ವಿಭಿನ್ನ ರೀತಿಯಲ್ಲಿ ಸಿದ್ಧಪಡಿಸಿ ಮಕ್ಕಳಿಗೆ ಇಷ್ಟವಾಗುವಂತೆ ಮಾಡಿದ ಈ ‘ಚಪ್ಪಲಿ ಪಕೋಡಾ’ ಐಡಿಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.