ಅಮ್ಮ ನಿನ್ನ ಎದೆಯಾಳದಲ್ಲಿ...

Mother Daughter Relationship
Highlights

ಲೇ ಅಮ್ಮ ಹೇಗಿದ್ದೀಯೆ? ಹೇಗಿದೆ ಹೊಸ ವಾತಾವರಣ?
ನೀನ್ ಬಿಡು ಎಲ್ಲಾ ಕಡೆನೂ ಬೇಗ ಹೊಂದಿಕೊಂಡುಬಿಡ್ತೀಯ. ಈಗ ಅಲ್ಲಾದ್ರೂ ಸ್ವಲ್ಪ ಆರಾಮಾಗಿರು ಮಾರಾಯ್ತಿ ಸೊಂಟಕ್ಕೆ ಸೆರಗು ಕಟ್ಕೊಂಡು ಅಡಿಗೆ ಮಾಡೋಕೆ ನಿಂತುಬಿಡ್ಬೇಡ. ಸ್ಸಾರಿ ಅಮ್ಮ ಅವತ್ತು ನೀನು ಫೋನ್ ಮಾಡಿದಾಗ ನಾನು ಸರಿಯಾಗಿ ಮಾತಾಡೋಕಾಗಲಿಲ್ಲ. ಅವತ್ತು ಏನಾಗಿತ್ತು ಗೊತ್ತಾ, ಈ ಅಪ್ಪ ಮಗಳು ಸೇರಿ ಹತ್ತು ಸಾವಿರ ಕೊಟ್ಟು ಅದ್ಯಾವುದೋ ಹೊಸ ಟೆಕ್ನಾಲಜಿಯ ಓವನ್ ತಂದಿದ್ರು. ನಾನು ಅದರಲ್ಲಿ ತರಕಾರಿ ಬೇಯಿಸೋಕೆ ಹೋಗಿ ಗೊತ್ತಾಗದೆ ಏನೇನೋ ಒತ್ತಿದ್ದೆ. ಕೊನೆಗೆ ಪಾತ್ರೆ ಎಲ್ಲಾ ಸೀದುಹೋಗಿ ಅಡುಗೆಮನೆ ಎಲ್ಲಾ  ಸುಟ್ಟವಾಸನೆ. ಈ ಅಪ್ಪ ಮಗಳಿಂದ ನಂಗೆ ಸಹಸ್ರನಾಮಾರ್ಚನೆ.

ಲೇ ಅಮ್ಮ ಹೇಗಿದ್ದೀಯೆ? ಹೇಗಿದೆ ಹೊಸ  ವಾತಾವರಣ?
ನೀನ್ ಬಿಡು ಎಲ್ಲಾ ಕಡೆನೂ ಬೇಗ ಹೊಂದಿಕೊಂಡುಬಿಡ್ತೀಯ. ಈಗ ಅಲ್ಲಾದ್ರೂ ಸ್ವಲ್ಪ ಆರಾಮಾಗಿರು ಮಾರಾಯ್ತಿ ಸೊಂಟಕ್ಕೆ ಸೆರಗು ಕಟ್ಕೊಂಡು ಅಡಿಗೆ ಮಾಡೋಕೆ ನಿಂತುಬಿಡ್ಬೇಡ. ಸ್ಸಾರಿ ಅಮ್ಮ ಅವತ್ತು ನೀನು ಫೋನ್ ಮಾಡಿದಾಗ ನಾನು ಸರಿಯಾಗಿ ಮಾತಾಡೋಕಾಗಲಿಲ್ಲ. ಅವತ್ತು ಏನಾಗಿತ್ತು ಗೊತ್ತಾ, ಈ ಅಪ್ಪ ಮಗಳು ಸೇರಿ ಹತ್ತು ಸಾವಿರ ಕೊಟ್ಟು ಅದ್ಯಾವುದೋ ಹೊಸ ಟೆಕ್ನಾಲಜಿಯ ಓವನ್ ತಂದಿದ್ರು. ನಾನು ಅದರಲ್ಲಿ ತರಕಾರಿ ಬೇಯಿಸೋಕೆ ಹೋಗಿ ಗೊತ್ತಾಗದೆ ಏನೇನೋ ಒತ್ತಿದ್ದೆ. ಕೊನೆಗೆ ಪಾತ್ರೆ ಎಲ್ಲಾ ಸೀದುಹೋಗಿ ಅಡುಗೆಮನೆ ಎಲ್ಲಾ  ಸುಟ್ಟವಾಸನೆ. ಈ ಅಪ್ಪ ಮಗಳಿಂದ ನಂಗೆ ಸಹಸ್ರನಾಮಾರ್ಚನೆ.

‘ನಿಮ್ ಓವನ್ ಸಹವಾಸಾನೇ ಬೇಡ ಕುಕ್ಕರ್'ನಲ್ಲೇ ಅಡಿಗೆ ಮಾಡ್ಕೋತೀನಿ ನಾನು’ ಅಂತ ನಾನೂ ಕೂಗಾಡಿದ್ದೆ. ನೀನು ಹೀಗೆ ಅಲ್ವಾ ನಮ್ಮನೆಗೆ  ಮೊದ್ಲು ಮುಂಚೆ ಕುಕ್ಕರ್ ತಂದಾಗ ತುಂಬ ನೀರು  ಹಾಕಿ ಅನ್ನ ಗಂಜಿಗಿಂತ ಅತ್ತತ್ತ ಆಗಿ ಅಪ್ಪನ ಹತ್ತಿರ  ಬೈಸಿಕೊಂಡಿದ್ದೆ ನೆನಪಿದೆಯಾ ನಿಂಗೆ? ನೀನು ನನ್ ಥರಾನೇ  ಈ ಕುಕ್ಕರ್ ಸಹವಾಸಾನೇ ಬೇಡ, ಪಾತ್ರೆಲೇ ಅಕ್ಕಿ  ಬೇಯಿಸ್ಕೊತೀನಿ ಅಂತ ಹೇಳಿದ್ದೆ. ನನ್ನನ್ನ ನಾನು ಕನ್ನಡಿಲೀ  ನೋಡ್ಕೊಂಡಾಗ ನಿನ್ನ ಪ್ರತಿಬಿಂಬನೇ ನಾನು ಅನ್ನಿಸುತ್ತೆ. ಆದರೂ ನಿಂಗೆ ನನ್ ಥರ ನಲವತ್ತೈದರಲ್ಲಿ ಕೂದಲು ಇನ್ನು ದಪ್ಪ ದಪ್ಪ ಕಪ್ಪು ಕಪ್ಪು ಇತ್ತು. ನನ್ನ ಕೂದಲಂತೂ ಕೊತ್ತಂಬರಿ  ಕಟ್ಟಿನ ಥರ ಆಗಿದೆ. ಎಷ್ಟು ದಿನ ಆಯ್ತಲ್ವಾ ನೀನು ನಂಗೆ ತಲೆಗೆ  ನೀರು ಹಾಕದೆ. ಪ್ರತಿ ಸಲವೂ ಎಣ್ಣೆ ಹಚ್ಚಿಕೊಂಡು ಬಚ್ಚಲಿನಲ್ಲಿ  ಸೀಗೆಕಾಯಿ ಶ್ಯಾಂಪೂ ಅಂತ ಹಣೆಪಟ್ಟಿ ಹೊತ್ತಿರೋ ಬಾಟಲನ್ನ  ಕೈಯಲ್ಲಿ ಹಿಡಿದುಕೊಂಡಾಗ ನೀನು ತುಂಬ ನೆನಪಾಗ್ತೀಯ ಕಣೇ ಅಮ್ಮ. ನಿನ್ನ ಒರಟು ಕೈ, ಹಂಡೆ ನೀರು, ಮತ್ತಿ ಸೊಪ್ಪು, ಸೀಗೆ ಪುಡಿ, ಕಣ್ಣುರಿ ಎಲ್ಲಾನೂ ಮತ್ತೆ ಬೇಕು ನಂಗೆ.

ಇನ್ನೊಂದು ವಿಷ್ಯ ಹೇಳೋದು ಮರೆತಿದ್ದೆ. ಹದಿನೈದು  ದಿನದ ಹಿಂದೆ ನನ್ನ ಕಾಲೇಜಿನ ಫ್ರೆಂಡು ನಿರ್ಮಲ ಸಿಕ್ಕಿದ್ಲು.  ಅದೇ  ಅಮ್ಮ ಆ ಪದ್ಮಮ್ಮನ ಮಗಳು. ನಾನು ಕಾಲೇಜಿನಲ್ಲಿದ್ದಾಗ  ಒಬ್ಬನ್ನ ಪ್ರೀತಿಸಿ ಅವನನ್ನೇ ಮದ್ವೆಯಾಗ್ಬೇಕು ಅಂತ ಹಟ  ಹಿಡಿದಿದ್ದೆನಲ್ಲ ಅವ್ನ ವಿಷ್ಯ ಹೇಳಿದ್ಲು. ಅವನ ಕುಡಿತ, ಮತ್ತೆ  ಜೂಜಿಗೆ ಊರೆಲ್ಲಾ ಸಾಲ ಮಾಡಿಕೊಂಡಿದ್ದನಂತೆ. ಕೆಲ್ಸದಿಂದ  ಕಿತ್ತುಹಾಕಿದ್ರಂತೆ. ಮನೆ ಪರಿಸ್ಥಿತಿ ತುಂಬಾ ಕೆಟ್ಟದಾಗಿ, ಐದು ವರ್ಷದ ಹಿಂದೆ ಅವನ ಹೆಂಡತಿ ಮಕ್ಕಳು ವಿಷ ತಗೊಂಡು ಆತ್ಮಹತ್ಯೆ ಮಾಡಿಕೊಂಡರಂತೆ. ಮದುವೆಗೆ ಮುಂಚೇನೆ ಅವನಿಗೆ ಈ ಎಲ್ಲಾ ಅಭ್ಯಾಸಗಳು ಇದ್ದವಂತೆ. ನಿರ್ಮಲನ  ದೊಡ್ಡಪ್ಪನ ಮಗಳು ಅವನ ಮನೇ ಹತ್ತಿರಾನೇ ಇದ್ದಿದ್ದಂತೆ. ಅವಳಿಂದ ಇವ್ಳಿಗೆ ಎಲ್ಲಾ ವಿಷ್ಯ ಗೊತ್ತಾಗಿದ್ದಂತೆ. ಆ ಜಾಗದಲ್ಲಿ  ನಾನಿದ್ದಿದ್ದರೆ ಅಂತ ನೆನೆಸಿಕೊಂಡರೇನೇ ಭಯ ಆಗುತ್ತಮ್ಮ.  ನೀನು ಗಲಾಟೆ, ಉಪವಾಸ, ಬೈದು, ಬುದ್ಧಿ ಹೇಳಿ  ಮಾಡಿರದಿದ್ದರೆ ನನ್ನ ಕತೆ ಏನಾಗುತ್ತಿತ್ತೋ. ಹೇಳೇ ಅಮ್ಮ  ನಿಂಗೆ ಹೀಗೆಲ್ಲಾ ಆಗುತ್ತೆ ಅಂತ ಮುಂಚೆನೇ ಗೊತ್ತಿತ್ತಾ? ಹೇಗೆ ನೀನು ಇಷ್ಟೊಂದು ಜಾಣೆ ಆದೆ?  ಮನೆಯವರು ಹೊಗಳೋ ನಾನು ಮಾಡೋ ಅಡುಗೆ, ಇಂಥಾ ಸೊಸೇನ ಪಡೆಯೋಕೆ ಪುಣ್ಯ ಮಾಡಿದ್ದೆ ಅನ್ನೋ ಅತ್ತೆಯ ಮಾತು, ಎಷ್ಟು ಚೆಂದ ರಂಗೋಲಿ ಹಾಕ್ತೀರಿ ಆಂಟಿ
ಅನ್ನೋ ಎದುರು ಮನೆ ನವವಿವಾಹಿತೆಯ ಮೆಚ್ಚುಗೆ, ಏನಮ್ಮಾ ಯಾವಾಗ ನೋಡಿದ್ರೂ ಏನಾದ್ರೂ ಕ್ಲೀನ್ ಮಾಡ್ತಿರ್ತೀಯ ಎಂಬ ಮಗಳ ಹುಸಿಮುನಿಸು, ತರಕಾರಿ ಅಂಗಡಿಯಿಂದ  ಬಂಗಾರದಂಗಡಿಯವರೆಗೂ ಮಾಡುವ ಚೌಕಾಶಿ,
ಸತ್ಯನಾರಾಯಣ ಪೂಜೆ, ಮಂಗಳಗೌರಿಗಳಲ್ಲಿ ಹಾಡುವ  ಹಾಡು, ಕಡೆಗೆ ಕಣ್ಣುಮುಚ್ಚಿದೊಡೆ ನಿದ್ರೆ ಬರುವಷ್ಟು ನೆಮ್ಮದಿ  ಎಲ್ಲವನ್ನೂ ನಿನ್ನಿಂದಲೇ ಪಡಕೊಂಡಿದ್ದು. ಆದರೆ ಒಂದು ಪೆನ್  ತೆಗೆದುಕೊಂಡು ವಾಪಸ್ ನೀಡುವಾಗ ಹೇಳುವ ಜುಜುಬಿ  ಥ್ಯಾಂಕ್ಸ್ ಕೂಡಾ ನಿನಗೆ ಹೇಳಲಾರದೆ ಹೋದೆ ನಾನು. ಒಳ್ಳೆ ಹೆಂಡತಿ, ಒಳ್ಳೆ ಸೊಸೆ, ಒಳ್ಳೆ ಅಮ್ಮನಾಗುವ ಭರದಲ್ಲಿ  ಒಳ್ಳೆ ಮಗಳಾಗುವುದೇ ಮರೆತುಬಿಟ್ಟೆನಲ್ಲಾ ಎಂಬ ನೋವಿದೆ  ನಂಗೆ.

ನೀ ಸಿಕ್ಕಾಗಲೆಲ್ಲಾ ನಂದು ನನ್ನ ಸಂಸಾರದ್ದೇ ಪುಂಗಿ. ನಿನ್ ಮನಸ್ಸಿನ ಪಿಸುಮಾತು ಕೇಳೋ ವ್ಯವಧಾನನೇ ಇರಲಿಲ್ಲ  ನಂಗೆ. ಹೆಣ್ಣು ಮಕ್ಕಳ ಹತ್ರ ಏನು ಬೇಕಾದರೂ  ಹೇಳಿಕೊಳ್ಳಬಹುದು, ಸ್ಪಂದಿಸುತ್ತಾರೆ ಅನ್ನೋ ಮಾತಿದೆ. ಆದರೆ ಆ ಹೆಣ್ಣುಮಕ್ಕಳ ಸಾಲಿನಲ್ಲಿ ನಾನು ನಿಲ್ಲಲಿಲ್ಲವೇನೋ  ಎಂಬ ದಿಗಿಲಿದೆ ನಂಗೆ. ಸಾಕು ಕಣೇ ಅಮ್ಮ, ಇನ್ನೊಂದು  ಏಳೆಂಟು ವರ್ಷ ಟೈಮ್ ಕೊಡು. ಮಗಳಿಗೆ ಮದುವೆ ಮಾಡಿ, ಬಾಣಂತನ ಮುಗಿಸಿ, ಯಜಮಾನರೊಂದಿಗೆ ಅಮರನಾಥ
ಯಾತ್ರೆಗೆ ಹೋಗಿ ಬಂದು ನಿನ್ ಜೊತೇನೆ ಬಂದು  ಇದ್ದುಬಿಡ್ತೀನಿ, ಆಡದಿರೋ ಮಾತುಗಳು, ಆಗಿರೋ ನಷ್ಟವನ್ನೆಲ್ಲಾ ತುಂಬಿಕೊಡೋ ಭರವಸೆ ಹೊತ್ತು. ಇವತ್ತು ಅಂದರೆ ನಿನ್ನ ವೈಕುಂಠ ಸಮಾರಾಧನೆಯ ದಿನ ನನ್ನ ಮಗಳಿಗೆ ಹದಿನೆಂಟು ತುಂಬ್ತಿದೆ. ಹೊರಗಡೆ ಬೀಳ್ತಿರೋ ಹನಿಮಳೆ ಈ ಪತ್ರನಾ ನೀನು ಅದಾಗಲೇ ಓದಿ ಮೇಲಿಂದ  ಹಾಕ್ತಿರೋ ಕಣ್ಣೀರು ಅಂತ ಭಾಸ ಆಗ್ತಿದೆ. ದಡ್ಡಿ ನೀನು, ಅಲ್ಲೂ ಅಳೋದನ್ನ ಕಡಿಮೆ ಮಾಡಿಲ್ವಾ?

ನಂಗೊತ್ತು ಈ ಪತ್ರವನ್ನ ನಿಂಗೆ ಕಳಿಸೋಕಾಗಲ್ಲ ಅಂತ. ಇದನ್ನ ನನ್ನ ಮಗಳಿಗೆ ಕೊಡ್ತೀನಿ. ನನ್ ಥರ ಮುಂದೊಂದು ದಿನ ಅವ್ಳ ಪರಿತಪಿಸಬಾರದು ಅನ್ನೋ ಹುಚ್ಚಾಸೆ ನಂಗೆ.  ರಾತ್ರಿ ಕನಸಲ್ಲಿ ಬಾರೇ ಅಮ್ಮ, ಇನ್ನೂ ಮಾತಾಡೋದಿದೆ. 

loader