ಯಾಕೋ ಯಾವುದೂ ಮುಂಚಿನಂತೆ ಇಲ್ಲ.. ಹೆಜ್ಜೆಗೊಂದು ಬೇಸರ, ತಿಳಿಯದ ನಿರಾಶೆ, ಸಣ್ಣ ಹತಾಶೆ, ದೇಹವೂ ತನ್ನ ಮಾತು ಕೇಳುತ್ತಿಲ್ಲ, ಸುಮ್ಮ ಸುಮ್ಮನೇ ತಾನು ಒಂಟಿ ಅನ್ನೋ ಭಾವನೆ. ಎಲ್ಲವೂ ಚೆನ್ನಾಗಿಯೇ ಇದ್ದಾಗಲೂ ಯಾವಾಗ ಬೇಕಾದರೂ ಯಾರಿಗೆ ಬೇಕಾದರೂ ಅನ್ನಿಸಬಹುದಾದ ಭಾವಗಳು ಇವು. 

ಆದರೂ ಮಧ್ಯ ವಯಸ್ಸಿನಲ್ಲಿ ಈ ತರಹದ ಭಾವಗಳು ಬಂದು ನಾನು ನಿನಗೆ ಸ್ವಂತ ಎನ್ನುವಷ್ಟು ತಬ್ಬಿಕೊಂಡು ಬಿಡುತ್ತವೆ.  ಬಾಲ್ಯ ಯಾವ ಪರಿವೆಯೂ ಇಲ್ಲದೆ ಕಳೆದು, ಯೌವನ ಕೂಡ ಕಾಲವೆಂಬ ಚಕ್ರದೊಳಗೆ ಅತಿ ಬೇಗ ಸಾಗಿಬಿಡುತ್ತದೆ. ಮತ್ತೆ ನಮ್ಮದೇ ಸ್ವಂತವೆನ್ನುವ ಗೂಡಿನೊಳಗೆ ಬಾಳ ಸಂಗಾತಿಯೊಂದಿಗೆ ಜೀವನ, ಮಕ್ಕಳು ಅವರ ಆಟ-ಪಾಠ, ಲಾಲನೆ-ಪಾಲನೆ, ಇರಬಹುದಾದ ಇರಬೇಕಾದ ಸಣ್ಣ ಪುಟ್ಟ  ಸಮಸ್ಯೆಗಳು, ಅವುಗಳೊಂದಿಗಿನ ನಮ್ಮ ಹೋರಾಟ, ಹೀಗೆ ಒಂದಿಷ್ಟು ವರ್ಷಗಳು ನಮ್ಮನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತವೆ.

ಇದುವೇ ಮಧ್ಯಂತರ:

ಇದಾದ ನಂತರದ ಬರುವ ಹಂತವಿದೆಯಲ್ಲ ಅದನ್ನು ಮಧ್ಯಂತರ ಮಧ್ಯ ವಯಸ್ಸು ಅನ್ನಬಹುದು. ಬಾಳ ಸಂಗಾತಿ ಹೆಚ್ಚಾಗಿ ಗಂಡಸರು ತಮ್ಮ ವೃತಿಯಲ್ಲೋ, ವ್ಯವಹಾರ ಪ್ರಪಂಚದಲ್ಲೋ ಮುಳುಗಿ ಹೋಗಿರುತ್ತಾರೆ. ಮನೆಯ ಕಡೆ ಗಮನ, ಕೊಡುವ ಸಮಯ ಸಾಕಾಗುತ್ತಿಲ್ಲ ಅಂತ ಅನ್ನಿಸಿದರೂ ಅವರ ಲೋಕವೇ ಬೇರೆ. ಮುಂದಿನ, ಮಕ್ಕಳ, ಮನೆಯ, ಹೆಂಡತಿಯ, ಭವಿಷ್ಯದ ಬುನಾದಿಯನ್ನು ಬಲಪಡಿಸಲು ಬೇಕಾಗುವಂತಹ ಎಲ್ಲ ಅನುಕೂಲತೆಗಳನ್ನು ಮಾಡುವ ಪ್ರಪಂಚದೊಳಕ್ಕೆ ಅವರು ಬಿದ್ದು ಬಿಟ್ಟಿರುತ್ತಾರೆ.

ಬಾಳ ಸಂಗಾತಿಯ ಚಿಕ್ಕ ಪುಟ್ಟ ಭಾವನೆಗಳು, ನೋವುಗಳು, ಸಮಸ್ಯೆಗಳು, ಅವಶ್ಯಕತೆಯನ್ನು ಆತ ಅರಿಯಲಾರ, ಹಂಚಿಕೊಂಡ ನೋವುಗಳು ಸಮಸ್ಯೆಗಳು ಗಂಡನಿಗೆ ಹೆಚ್ಚಿನ ಬಾರಿ ಕಿರಿಕಿರಿ ಎನ್ನಿಸತೊಡಗುತ್ತದೆ. ಒಂದೊಮ್ಮೆ ಅವನು ದಿವ್ಯ ನಿರ್ಲಕ್ಷ್ಯ ವಹಿಸಬಹುದು ಅಥವಾ ತನ್ನ  ಸಂಗಾತಿ ಅಷ್ಟೊಂದು ಸಂತೃಪ್ತಳಲ್ಲವೆನ್ನುವಂತಹ ಕೊರಗೊಂದು ಅವನನ್ನೂ ಕಾಡಬಹುದು. ಇನ್ನು ಮಕ್ಕಳು... ಪ್ರತಿಯೊಂದಕ್ಕೂ ಅಮ್ಮ ಅಮ್ಮ ಎಂದು ತನ್ನನ್ನೇ ಅವಲಂಭಿಸುತ್ತಿದ್ದ ಮಕ್ಕಳು ಈಗ ಸ್ವತಂತ್ರವಾಗಿದ್ದಾರೆ.

ತಮ್ಮ ಆಯ್ಕೆಯನ್ನು ತಾವು ಮಾಡಿಕೊಳ್ಳಬಲ್ಲರು, ಚಿಕ್ಕ ಪುಟ್ಟ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳಬಲ್ಲರು, ಮುಂಚಿನಂತೆ ತನ್ನೊಂದಿಗೆ ವಿಷಯವನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ ಕಡಿಮೆ ಆಗುತ್ತಿದೆ. ಆ ಸ್ಥಾನವನ್ನು ಅವರ ಗೆಳೆಯ-ಗೆಳತಿಯರು ಆವರಿಸಿಕೊಂಡು ಬಿಟ್ಟಿದ್ದಾರೆ. ಮಕ್ಕಳು ಬೆಳೆದಂತೆ ಅವರು ಸ್ವತಂತ್ರರಾಗುತ್ತಾರೆ. ಆಗಬೇಕು ಕೂಡ ಅದು ಬುದ್ಧಿಗೆ ಗೊತ್ತಿದೆ, ಭಾವಕ್ಕೆ ಅರ್ಥವಾಗುತ್ತಿಲ್ಲ.

ಯಾವುದೋ ಏಕಾಂತ:

ಈ ಮಧ್ಯ ವಯಸ್ಸಿನಲ್ಲಿ ಎಂತಹದೋ ಚಡಪಡಿಕೆ, ಏನೋ ಏಕಾಂಗಿ ಭಾವ, ಅಲ್ಲಿಂದಲೇ ಸಣ್ಣ ಸಿಡಿಮಿಡಿಯೊಂದು ನಮ್ಮಲ್ಲಿ ಶುರುವಾಗಿ ಬಿಡುತ್ತದೆ. ಸಣ್ಣ ಅಸಹನೆ ಯಾರದ್ದೋ ಮೇಲೆ ಕೋಪ, ಯಾಕೋ ಬೇಜಾರು.., ಸಹಜವಾಗಿಯೇ ದೇಹದ ಕಾರ್ಯದಲ್ಲಿ ಏರುಪೇರಾಗುವ ಇಂತಹ ಸಮಯದಲ್ಲಿ ಇಂತಹ ಭಾವಗಳು ಸೇರಿ ದೇಹದ ಮೇಲೆ ದಾಳಿ ಮಾಡುತ್ತವೆ. ಪರಿಣಾಮ ಬಿಪಿ, ಹಾರ್ಮೋನ್‌ಗಳಲ್ಲಿ ಏರುಪೇರು, ಜೀರ್ಣ ಕ್ರಿಯೆಯಲ್ಲಿ ವ್ಯತ್ಯಾಸ, ತಿಳಿದು ತಿಳಿಯದ ಹಲವಾರು ತರಹದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಶುರುವಿಟ್ಟುಕೊಳ್ಳುತ್ತವೆ. ಅದೊಂತರ ದಿನ ನಿತ್ಯ ಮುಸುಕಿನೊಂದಿಗೆ ಗುದ್ದಾಟ.

ನಾವೇ ನಿಯಂತ್ರಕರು:

ಜೈವಿಕ ಕ್ರಿಯೆಯಿಂದ ದೇಹದ ಮೇಲಾಗುವ ಪರಿಣಾಮಗಳು ಸ್ವಾಭಾವಿಕ. ಆದರೆ ಮನಸಿನ ಮೇಲೆ ನಡೆಯಬಹುದಾದ ಮಾನಸಿಕ ದಾಳಿ ಇದೆಯಲ್ಲ ಅದನ್ನು ನಾವೇ ನಿಯಂತ್ರಿಸಬೇಕು. ಯಾವ ಭಾವವು ನಮ್ಮನ್ನು ಆಳಬೇಕು, ಯಾವುದು ಅಲ್ಲ ಎನ್ನುವುದನ್ನು ನಿರ್ಧರಿಸಬೇಕಾಗಿದ್ದು ನಾವು ಮಾತ್ರ. ಇದಕ್ಕೆ ಪರಿಹಾರ ಎನ್ನುವುದು ಯಾವುದೋ ದೊಡ್ಡ ದೊಡ್ಡ ಕಾರ್ಯಗಳಿಂದ ಆಗಬೇಕಿಲ್ಲ. ನಾವೇ ಮಾಡಿಕೊಳ್ಳುವಂತ ಸಣ್ಣ ಪುಟ್ಟ ಬದಲಾವಣೆಗಳಿಂದ ಖಂಡಿತ ಸಾಧ್ಯ.

ದಿನ ನಿತ್ಯದ ಅವಶ್ಯಕತೆ ಅನಿವಾರ್ಯತೆಗಳಿಗೆ ಒಗ್ಗಿ ಹೋಗಿರುವ ನಾವು ನಮಗೆ ಅಂತ ಒಂದಿಷ್ಟು ಸಮಯವನ್ನು ಎತ್ತಿಟ್ಟುಕೊಳ್ಳಬೇಕು. ‘ಹವ್ಯಾಸ’ ಎನ್ನುವ ಮೂರಕ್ಷರದ ಒಂದು  ಪದವಿದೆಯಲ್ಲ, ಅದು ನೋಡುವುದಕ್ಕೆ ಚಿಕ್ಕ ಪದ ಎನಿಸಿದರೂ ಇದರ ಪ್ರಾಮುಖ್ಯತೆ ದೊಡ್ಡದು. ಈಗ ಇಲ್ಲವೆಂದರೂ ನಮಗೆ ಚಿಕ್ಕಂದಿನಲ್ಲಿ ಓದು, ಬರಹ, ರಂಗೋಲಿ, ಹಾಡು, ಕೈತೋಟ ಹೀಗೆ ಏನೋ ಒಂದು ಹವ್ಯಾಸ ಇದ್ದೇ ಇರುತ್ತದೆ. ಅದನ್ನು ವೃದ್ಧಿಸಿಕೊಳ್ಳಬೇಕು. ಇದು ನಮ್ಮ ವ್ಯಕ್ತಿತ್ವಕ್ಕೆ ಮೌಲ್ಯ ತಂದುಕೊಡುತ್ತದೆ. ನಮ್ಮೆಡೆಗೆ ನಮಗೊಂದು ಗೌರವ ತಂದುಕೊಡುತ್ತದೆ. ಮನಸ್ಸು ಸಹಜ ಖುಷಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಸಂಭ್ರಮಕ್ಕೆ ನೂರು ದಾರಿಗಳಿವೆ:

ಎಲ್ಲರ ಎಲ್ಲದರ ಬಗೆಗೆ ಕಾಳಜಿ ತೆಗೆದುಕೊಳ್ಳುವಂತೆ ನಮ್ಮ ಬಗ್ಗೆಯೂ ಇರಲಿ ಕಾಳಜಿ ಒಂದಿಷ್ಟು. ಒಪ್ಪುವಂತಹ ಇಷ್ಟವಾಗುವಂತಹ ಹೊಸ ರೂಪದ ಬಟ್ಟೆಯನ್ನು ಹಾಕಿಕೊಳ್ಳುವುದಕ್ಕೆ ಯಾವ ರೀತಿಯ ಮುಜುಗರ ಬೇಡ, ಮುದುರಿದ ಕಾಟನ್  ಸೆರೆಗಿಗೊಂದಿಷ್ಟು ಐರನ್ ಬರಲಿ, ಕೂದಲ ಬಾಚುವಿಕೆಗೊಂದು ಒಪ್ಪ ಬರಲಿ, ಬೇರೆಯವರ ಕಾಳಜಿ ಮಾಡುವಷ್ಟೇ ಇರಲಿ ಅಕ್ಕರೆ ನಮ್ಮ ಬಗೆಗೂ. ಮುಖ್ಯವಾಗಿ ಹಿತಮಿತವಾದ ವ್ಯಾಯಾಮ ಆರೋಗ್ಯಪೂರ್ಣ ದೇಹ ಮತ್ತು ಮನಸಿಗೆ ಬೇಕೇ ಬೇಕು.

ಇದೆಲ್ಲಾ ತೋಚಿದ, ಉದಾಹರಣೆಗೆ ಹೇಳಿದ ದಾರಿಗಳು ಅಷ್ಟೇ. ನಮ್ಮ ಮನವೆಂಬ ಪ್ರಪಂಚದಲ್ಲಿ ನಾವು ಅಲೆದಾಡಿದಾಗ ನೂರು ದಾರಿಗಳು ತೆರೆದುಕೊಳ್ಳಬಹುದು, ನಮ್ಮ ಮನಸ್ಸನ್ನು ಕಿವಿಗೊಟ್ಟು ಆಲಿಸಿದಾಗ ಸಾವಿರ ಸಾಧ್ಯತೆಗಳು ನಮ್ಮ ಮುಂದೆ ಬಂದು ನಿಲ್ಲಬಹುದು. ನಾವು ಮಾಡಬೇಕಾದ್ದು ನಮ್ಮ ಮನಸ್ಸಿನೊಳಗೆ ಅಡಗಿ ಕುಳಿತಿರುವ ಅದಮ್ಯ ಶಕ್ತಿಯ ಉತ್ಸಾಹದ ತಿಳಿವು ಮಾತ್ರ. ಮತ್ಯಾಕೆ ತಡ, ಇರಲಿ ಯಾವುದೇ ವಯಸ್ಸು ಇರಲಿ ಮೊಗೆ ಮೊಗೆದಷ್ಟು ಹುಮ್ಮಸ್ಸು!