ಟ್ರಿಪ್ ಎಂದು ಆ ಚಳಿಯ ಬೆಟ್ಟಕ್ಕೆ ಹೋಗೋಕೆ ಹೇಗೋ ಏನೋ ನನ್ನನ್ನು ಕನ್ವಿನ್ಸ್ ಮಾಡಿ ಕರೆದುಕೊಂಡು ಹೋಗಿದ್ದೆ. ಮುಂಗಾರು ಶುರುವಾಗಿತ್ತು, ರಸ್ತೆಗಳು ಮನೆ ಬಾಗಿಲನ್ನು ಸಾರಿಸಿದಂತಿತ್ತು. ಸುತ್ತಲೂ ಹಚ್ಚ ಹಸಿರ ಹೊದ್ದ ಪರಿಸರ, ಎಲೆಗಳಂಚಿನಿಂದ ಪನ್ನೀರನ್ನು ಸಿಂಪಡಿಸಿ ಸ್ವಾಗತಿಸಲು ಸಜ್ಜಾಗಿದ್ದ ಹನಿಗಳು ನಮಗಾಗಿ ಕಾದುಕುಳಿತಿತ್ತು. ಅಲ್ಲಿಂದ ಕಂಡದ್ದು ಭೂ ಲೋಕದ ಸ್ವರ್ಗ. ಮೋಡವೇ ಕೈಗೆ ಸಿಕ್ಕು ನನ್ನನಪ್ಪಿದಂತೆ.

ರೆಕ್ಕೆ ಬಂದಂತೆ ಹಾರಾಡ್ತಾ ಖುಷಿಯಲ್ಲಿ ತೇಲ್ತಾ, ಚಳಿಗೆ ಎರಡೂ ಕೈ ಚಾಚಿ ಮೈಯ್ಯೊಡ್ಡಿ ನಿಂತಿದ್ದೆ. ಮಳೆಯೂ ಅದಕ್ಕಂಟಿಕೊಂಡ ಚಳಿಯೂ, ಫ್ರೆಶ್ ವೆದರ್ ಫೀಲಿಂಗೂ ಪ್ಯಾರಾಚೂಟ್‌ನಲ್ಲಿ ಆಕಾಶದಲ್ಲಿ ಹಾರಿದಂತಹ ಅನುಭವ ಅದು. ಇಷ್ಟು ಖುಷಿಯಲ್ಲಿ ಆ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಇದ್ದದ್ದು ಅದೇ ಮೊದಲು. ನನ್ನ ನೋಡ್ತಾ ನೀನು ಕಣ್ತುಂಬಿಕೊಳ್ಳುತ್ತಿದ್ದೆ.

ನಿನ್ನೆದುರು ಹಾಗಿರ್ಬೇಕು ಅನ್ನೋದು ನಂಗೇನೂ ಅನ್ಸಿರ್ಲಿಲ್ಲ. ಆದರೆ ಆ ವಾತಾವರಣ ನನಗೇ ಗೊತ್ತಿಲ್ಲದಂತೆ ಆ ಸ್ಥಿತಿಗೆ ತಂದೊಡ್ಡಿತು. ಎಲ್ಲೋ ಮನಸ್ಸಿನ ಮೂಲೆಯಲ್ಲಿದ್ದ ಆ ಡೌಟ್, ಅಲ್ಲದೆ ನನ್ನ ಮನಸ್ಸಿನ ಮೂಲೆಯಲ್ಲೂ ನೀನು ಇದ್ದಿದ್ದರಿಂದ ಹಾಗಿದ್ನೋ ಏನೋ ಗೊತ್ತಿಲ್ಲ. ಮಧ್ಯಾಹ್ನದವರೆಗೂ ಹಕ್ಕಿಯಂತೆ ಹಾರಾಡ್ಕೊಂಡಿದ್ದೆ. ಇನ್ನೇನು ಹೊರಡಬೇಕಿತ್ತು. ಆದರೆ ಆ ಜಾಗ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಇನ್ನೊಂದು ಕಡೆ ಮನಸ್ಸಲ್ಲಿ ಢವ ಢವ.

ಹಾರ್ಟ್ ಬೀಟ್ ಜಾಸ್ತಿಯಾಗಿತ್ತು. ಕಡೆಗೆ ಕಾರ್ ಹತ್ತಿದ್ದಾಯ್ತು. ಬೆಟ್ಟದಿಂದ ಹೊರಟಿದ್ದೇ ತಡ ಅಲ್ಲಿಂದ ನಿನ್ನ ಮಾತಿನ ವರಸೆಯೇ ಬದಲಾಗಿತ್ತು. ಎಲ್ಲೋ ಏನೋ ಮಿಸ್ ಆಗ್ತಿದೆ ಅಂದ್ಕೊಳ್ಳುವಾಗಲೇ ನಿನ್ನ ಫ್ರೆಂಡ್ಸ್ ‘ನಿನ್ನ ಹಾರ್ಟ್ ಭದ್ರವಾಗಿಟ್ಕೊಳೋ’ ಅಂತ ನಿನ್ನ ರೇಗಿಸ್ತಿದ್ರು. ಅನುಮಾನ ಜಾಸ್ತಿಯೇ ಆಯ್ತು.

ಅಂಕು ಡೊಂಕಿನಂತಿದ್ದ ರಸ್ತೆ ತಿರುವುಗಳು. ಅದರ ಮಧ್ಯದಲ್ಲಿ ‘ಮುಂದೆ ಒಳ್ಳೆ ಜಾಗ ನೋಡಿ ಕಾರ್ ನಿಲ್ಸೋ’ ಎಂದು ನಿನ್ನ ಧ್ವನಿ ಕೇಳಿಸಿತು. ಕಿಟಕಿ ನೋಡ್ತಿದ್ದ ನಾನು ನಿನ್ನ ಮಾತುಗಳನ್ನು ಆಶ್ಚರ್ಯದಿಂದಲೇ ನೋಡಿದೆ.

ಆಗ ನಿನ್ನ ಫ್ರೆಂಡ್ಸ್ ಸಿಚುಯೇಷನ್‌ಗೆ ತಕ್ಕಂತೆ ಪ್ರೇಮಗೀತೆಗಳನ್ನು ನಿನ್ನ ನೋಡಿ ಹಾಡ್ತಿದ್ರು. ನಾನು ಗೊಂದಲದಲ್ಲೇ ನೋಡ್ತಿದ್ದಾಗ ಸಡನ್ ಆಗಿ ಕಾರು ತಿರುವಲ್ಲಿ ಸೈಡ್‌ನಲ್ಲಿ ನಿಂತಿತು. ಎಲ್ಲರೂ ಕಾರ್‌ನಿಂದ ಇಳಿದರು. ‘ನೀನೇನ್ ಮಾಡ್ತೀಯ ಒಳಗೆ ಕೂತು ಹೊರಗೆ ಬಾ’ ಎಂದು ನನ್ನ ಕರೆದೆ. ಮರು ಮಾತಾಡದೆ ನಾನೂ ಎದ್ದುಬಂದೆ. ಮುಂದೆ ಏನ್ ಮಾಡ್ಬೇಕು ಎಂದು ನನಗೆ ಗೊತ್ತಾಗದೆ ಇದ್ದಾಗ ರಸ್ತೆಯ ಪಕ್ಕಕ್ಕೆ ಹೋಗಿ ಕೆಳಗಿನ ಪಾತಾಳ ನೋಡ್ತಾ ನಿಂತಿದ್ದೆ. ಏನೋ ಒಂಥರಾ ಖುಷಿ. ಆಗ ನೀ ಬಂದೆ.

ಮಾತಾಡುತ್ತಾ ನಿಧಾನವಾಗಿ ನನ್ನ ಬಗ್ಗೆ, ನಿನ್ನ ಮನಸ್ಸಲ್ಲಿ ಅಡಗಿದ್ದ ಪ್ರತಿಯೊಂದು ವಿಚಾರವನ್ನು ಎಳೆ ಎಳೆಯಾಗಿ ನನ್ನ ಮುಂದೆ ಬಿತ್ತರಿಸುತ್ತಾ ಬಂದೆ. ನನ್ನ ಹಾರ್ಟ್ ಬೀಟ್ ಜಾಸ್ತಿ ಆಗುತ್ತಲೇ ಇತ್ತು. ನಿನ್ನ ಪ್ರೀತಿ ವಿಚಾರ ಮುಗಿದು, ಕೊನೆಗೆ ನನ್ನ ಅಭಿಪ್ರಾಯಕ್ಕೆ ಬಂದು ನಿಂತಿತು. ಪದಗಳು ಗಂಟಲಲ್ಲೇ ಸಿಕ್ಕಿಕೊಂಡಿತ್ತು. ಇಷ್ಟ-ಆದರೂ ಹೇಳಲು ಆಗ್ತಿಲ್ಲ. ಎಕ್ಸ್ಲಾಮೇಟರಿ(!) ಚಿಹ್ನೆಯಲ್ಲಿತ್ತು ನನ್ನ ಎಕ್ಸ್‌ಪ್ರೆಷನ್. ಕೊನೆಗೆ ಪೋಷಕರಿಗೆ ಈ ಬಗ್ಗೆ ಹೇಳಿ ಅವರು ಏನು ಹೇಳ್ತಾರೋ ಹಾಗೇ ಎಂದಾಗಿತ್ತು ನನ್ನ ಉತ್ತರ. 

ನೀನು ನನಗಾಗಿ ಆ ಟ್ರಿಪ್ ಇಟ್ಟಿದ್ದೆ ಎಂದು ಆಗಲೇ ಗೊತ್ತಾಗಿದ್ದು. ಕಾರ್ ಬಳಿ ಬಂದಾಗ ಕಾರ್‌ನ ಮುಂಭಾಗದಲ್ಲಿ ಕುಳಿತಿದ್ದ ಡೊಳ್ಳುಹೊಟ್ಟೆ ಗಣಪ ನಮ್ಮನ್ನೇ ನೋಡ್ತಿದ್ದ. ನೀನು ಅವನ ಬಳಿ ಹೋಗಿ ‘ತಪ್ಪು ತಿಳಿಯಬೇಡ ಗಣಪ, ನಿನಗಿಟ್ಟ ಈ ದಾಸವಾಳ ಹೂ ತೆಗೆದುಕೊಳ್ಳುತ್ತೇನೆ’ ಎಂದು ಅದನ್ನು ತಂದು, ಮಂಡಿಯೂರಿ ‘ದಾಸವಾಳ ನೀಡಿ ಪ್ರಪೋಸ್ ಮಾಡ್ತಿದ್ದೀನಿ ಅನ್ಕೋಬೇಡ. ದೇವರಿಗಿಟ್ಟ ಪ್ರಸಾದವನ್ನು ಪ್ರೀತಿ ನಿವೇದನೆಯನ್ನಿಟ್ಟು ನಿನ್ನ ಮುಡಿಗೆ ಮುಡಿಸುತ್ತಿದ್ದೇನೆ ಅಂದ್ಕೊಂಡು ಸ್ವೀಕರಿಸು’ ಎಂದು ಆ ಮುಳ್ಳಯ್ಯನಗಿರಿ ಬೆಟ್ಟದ ಚಳಿ, ಮಳೆಯ ಮಧ್ಯೆ ನನಗೆ ನಿನ್ನ ಪ್ರೀತಿಯನ್ನು ಅರ್ಪಿಸಿದೆ. ಆಗ ನೀನಾಡಿದ ಪ್ರತಿ ಮಾತು ಇಂದಿಗೂ ಕಿವಿಯಲ್ಲಿ ಗುನುಗುತ್ತಿದೆ.

ಅಂದು ನಾನು ನಿನ್ನ ಪ್ರೀತಿಗೆ ಶರಣಾಗಿದ್ದೆ, ಆದರೆ ಹೆತ್ತವರ ಅಭಿಪ್ರಾಯಕ್ಕೆ ಕಾದಿದ್ದೆ. ಅಂದಿನಿಂದ 5 ವರ್ಷ ನಮ್ಮಿಬ್ಬರ ಪ್ರೀತಿ ಗ್ರೀನ್ ಸಿಗ್ನಲ್ ರಸ್ತೆಯಲ್ಲೇ ಸಾಗಿತ್ತು. ಆದ್ರೆ ಕ್ಷುಲ್ಲಕ ಕಾರಣಗಳಿಂದ ನಮ್ಮಿಬ್ಬರಲ್ಲಿ ಮೂಡಿದ ಬಿರುಕು ದೊಡ್ಡದಾಗಿ ಸೂರ್ಯ ಚಂದ್ರರಂತಾಗಿದ್ದೇವೆ. ಆದ್ರೆ ಆ ದಾಸವಾಳ ಪ್ರೀತಿಯ ಗುಲಾಬಿ ಹೂವಾಗಿ ನಿನ್ನ ಮುದ್ದು ಮುಖದೊಂದಿಗೆ ನನ್ನ ಮನಸ್ಸಲ್ಲಿ ಅಚ್ಚಳಿಯದಂತೆ ನೆಲೆಸಿದೆ.

ಮುಂಗಾರು ಶುರುವಾಗಿದೆ, ಮುಳ್ಳಯ್ಯನ ಗಿರಿಯಲ್ಲಿ ಚಳಿ ಮಳೆ ತಬ್ಬಿಕೊಂಡಿದೆ. ನಿನ್ನ ನೆನಪು ಅಮರವಾಗಿದೆ. ಆದರೆ ಕ್ಷಮಿಸು, ಸಿಗಲಾರದಷ್ಟು ದೂರ ನಾನು ಬಂದುಬಿಟ್ಟಿದ್ದೇನೆ. 

- ಪಿಂಕಿ